ರೀ ..ನಿಮ್ಮನೇಲಿ ಬೊಂಬೆ ಇಟ್ಟಿದ್ದೀರಾ?....

ರೀ ..ನಿಮ್ಮನೇಲಿ ಬೊಂಬೆ ಇಟ್ಟಿದ್ದೀರಾ?....

 
ಹೊಸ ಲಂಗ -ಜಂಪರ್ ತೊಟ್ಟು, ಹೂವಿನ ಜಡೆ ಹೆಣೆಸಿಕೊಂಡು ಕುಚ್ಚು ಹಾಕಿಸಿಕೊಂಡು  ಬಣ್ಣ ಬಣ್ಣದ ಬಳೆ, ಮಣಿ ಸರ ತೊಟ್ಟು ಕೈಯಲ್ಲಿ ಅಕ್ಷತೆಯ ಡಬ್ಬಿ ಹಿಡಿದು ನಾನು, ನನ್ನ ತಂಗಿ, ಗೆಳೆಯ-ಗೆಳತಿಯರ ಒಂದು ಮಕ್ಕಳ ಹಿಂಡು  'ರೀ, ಬೊಂಬೆ ಇಟ್ಟಿದ್ದೀರಾ ? ' ಅಂತ  ಕೇಳ್ತಾ, ಹೆಚ್ಚು-ಕಡಿಮೆ ಕಿರುಚ್ತಾ ಹೊರಟ್ವಿ ಅಂದ್ರೆ ಎಲ್ರ ಮನೇಲೂ ಬೊಂಬೆ ಬಾಗಿನ ರೆಡಿ ಆಗಿಯೇಬಿಟ್ಟಿರೋದು!! ಅದೇನು ಸಡಗರ, ಸಂಭ್ರಮ !!.. ಕಡಿಮೆ ಅಂದ್ರೆ ೧೦೦-೧೨೦ ಮನೆಗಳಿಗೆ ಬೊಂಬೆ ನೋಡೋಕ್ಕೆ ಸುತ್ತುತ್ತಾ ಇರ್ತಿದ್ವಿ. ಪ್ರತಿ ಮನೆಯಲ್ಲೂ ವಿಧ ವಿಧದ ಕರಿದ ತಿಂಡಿಗಳು, ಬೊಂಬೆ ನೋಡಕ್ಕೆ ಮಕ್ಳು ಬರ್ತಾರೆ ಅಂತಲೇ 'ಚರ್ಪು' ತಯಾರಿಸಿ ಇಟ್ಟಿರುತ್ತಿದ್ರು. ನಾವೂ ಅಷ್ಟೇ .., ಎಲ್ಲರ ಮನೆಯಲ್ಲೂ ಬೇರೆ ಬೇರೆ ದೇವರನಾಮಗಳನ್ನು ಹೇಳಿ  ಚರ್ಪು ಕೊಡುವವರೆಗೆ ನಾಚಿಕೆಯಿಲ್ಲದೆ ಕಾಯ್ತಾ ನಿಂತಿರುತ್ತಿದ್ದೆವು!!.. ಕೊಬ್ಬರಿ -ಸಕ್ಕರೆ, ಶಂಕರಪೋಳಿ, ವಿವಿಧ ಲಡ್ಡುಗಳು, ಕೋಡುಬಳೆ-ಚಕ್ಕುಲಿ, ಕಡಲೆಕಾಳು ಉಸುಳಿ, ಹಣ್ಣುಗಳ ರಸಾಯನ ಒಂದೇ ಎರಡೇ ...ಹೂಂ.. ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ .. ಲೆಕ್ಕವೇ ಇಲ್ಲದಷ್ಟು ತಿಂಡಿಗಳು!! .. ತುಂಬಾ ಸಂಪ್ರದಾಯಸ್ಥರು ಮಾತ್ರ ಒಳಗಡೆಯೇ ಬಿಡುತ್ತಿರಲಿಲ್ಲ, ಮಡಿ-ಮೈಲಿಗೆ ಹಾಳು ಮಾಡುತ್ತಾರೆ ಎಂದು.
 
ನವರಾತ್ರಿಯ  ಪಾಡ್ಯದಿಂದ ವಿಜಯ ದಶಮಿವರೆಗೆ ವಿಧ ವಿಧದ ಗೊಂಬೆ ಪ್ರತಿಷ್ಠಾಪನೆ, ಪೂಜೆಯಿಂದ ನಮ್ಮ ಸಂಪ್ರದಾಯ, ಧಾರ್ಮಿಕ ಆಚರಣೆ ಎಷ್ಟೊಂದು ವಿಷಯಗಳು ತಿಳ್ಕೊಳ್ತಾ ಇದ್ವಿ, ರಾಮಾಯಣ-ಮಹಾಭಾರತಗಳಂತ ಪುರಾಣಗಳ ವಿಷಯಗಳು, ಮೈಸೂರು ಮಹಾರಾಜರ, ವಿಜಯನಗರ ಅರಸರ ಐತಿಹಾಸಿಕ ಬೊಂಬೆ ಥೀಮ್ ಗಳು ನಮಗೆ ಬಹಳಷ್ಟು  ಜ್ಞಾನವನ್ನು ತಲೆಗೆ ತುಂಬುತಾ ಇದ್ದವು. ಒಮ್ಮೆ 'ಕರ್ಣ'ನ ಕಥೆ ಕೇಳ್ತಾ ಒಬ್ಬರ ಮನೆಯಲ್ಲಿ ಅಳ್ತಾ ಕೂತಿದ್ದೆ. ಕರ್ಣನ ಸ್ವಾಮಿ ನಿಷ್ಠೆ, ಸ್ನೇಹಪರತೆ ಮನಸಿನಲ್ಲಿ ಅಚ್ಚೊತ್ತಿ ಈಗಲೂ ನನ್ನ ಜೀವನದಲ್ಲಿ ಸ್ವಚ್ಛ ಸ್ನೇಹಕ್ಕೆ ಮೊದಲ ಸ್ಥಾನ ! ಇತ್ತೀಚೆಗೆ ಏನೇನೋ ಹೊಸ ವಿಷಯಗಳ ಮೇಲೆ ಬೊಂಬೆ ಇಡ್ತಾರಪ್ಪ ..ಕ್ರಿಕೆಟ್, ಜಾಗತಿಕ ತಾಪಮಾನ, ಸೋಲಾರ್ ಶಕ್ತಿಯ ಬಳಕೆ, ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೆಟ್ ಹೀಗೇ ... ಇನ್ನೊಂದು ಮುಖ್ಯ ವಿಷಯವೆಂದ್ರೆ ನಾವು ಅಷ್ಟು ಓಡಾಟದಿಂದ ಧೈರ್ಯವಾಗಿ ಹೊಸಬರ ಹತ್ತಿರ ಮಾತಾಡುವ, ಚಿಕ್ಕ-ಪುಟ್ಟ ಸಮಸ್ಯೆ ಎದುರಿಸುವ ಶಕ್ತಿ, 'ಮಾನವರೆಲ್ಲಾ ಒಂದೇ' ಅನ್ನುವ ಸತ್ಯದ ಅರಿವನ್ನು ಬಾಲ್ಯದಲ್ಲೇ ಪಡೆದಿದ್ದೆವು. ನಮ್ಮ ನಮ್ಮಲ್ಲೇ ಗಲಾಟೆ ಮಾಡ್ಕೊಂಡ್ರೆ,  ಜಗಳ ಬಿಡಿಸೋಕ್ಕೆ ದಾರಿಹೋಕರು ಯಾರಾದ್ರೂ  ಬರೋವ್ರು.. ಪ್ರೀತಿಯಿಂದ ತಿಳಿಹೇಳಿ ತಿದ್ದುವ ಕೆಲಸ ಮಾಡ್ತಾ  ಇದ್ರು.  ಆಗಿನ ಒಳ್ಳೆಯ ಸಮಾಜಕ್ಕೆ ನಾವೆಷ್ಟು ಋಣಿಯಾಗಿದ್ದರೂ ಸಾಲದೆನಿಸುತ್ತೆ. ಈಗಿನವರಿಗೆ ಅದೆಲ್ಲಾ ಬೇಡ!!.. ನಾವಾಗ ಆಂಟಿ-ಅಂಕಲ್ ಅಂತಿರಲಿಲ್ಲ, ಅತ್ತೆ ಮಾವ ಅಂತಲೇ ಕರೀತಿದ್ದೆವು (ಹಿರಿಯರ ತಾಕೀತು!!) ಎಲ್ಲಾ ಕಡೆ ಸುತ್ತಿ ದಾರಿ ತಪ್ಪಿದರೆ ಯಾರಾದರೂ ತಂದು ಮನೆಗೆ ಸುರಕ್ಷಿತವಾಗಿ ತಲುಪಿಸಿ ಹೋಗೋವ್ರು... ಎಷ್ಟು ಚೆನ್ನ ಆ ದಿನಗಳು!! ...
 
 
ಈಗ ???.....
 
PC : Google