ರೈತರ ತಾಳ್ಮೆಗೆ ಮಿತಿ ಇಲ್ಲವೇ?

ರೈತರ ತಾಳ್ಮೆಗೆ ಮಿತಿ ಇಲ್ಲವೇ?

ಕೃಷಿ ವಲಯ ಮತ್ತು ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರದ ಭರವಸೆಗಳು ಸಮರ್ಪಕವಾಗಿ ಈಡೇರಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಬಗೆಯ ಸಮಸ್ಯೆಗಳು ಜೀವಂತವಾಗಿಯೇ ಇರುತ್ತವೆ ಎಂಬುದು ವಿಪರ್ಯಾಸ. ರಾಜ್ಯದಲ್ಲಿ ಇತ್ತೀಚೆಗೆ ವಕ್ಫ್ ಗಲಾಟೆ ತೀವ್ರಗೊಂಡು, ರೈತರ ಜಮೀನಿನ ಪಹಣಿಗಳಲ್ಲಿ ‘ವಕ್ಫ್’ ಎಂದು ನಮೂದಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ರೈತರಿಗೆ ನೀಡಲಾಗುವ ನೋಟೀಸನ್ನು ವಾಪಸ್ ಪಡೆಯಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದ್ದರೂ, ಈ ಸಮಸ್ಯೆ ಇನ್ನೂ ಪೂರ್ತಿ ಪರಿಹಾರಗೊಂಡಿಲ್ಲ. ಹೀಗೆ ಬಗರ್ ಹುಕುಂ ಸಮಸ್ಯೆಯೂ ದೀರ್ಘಾವಧಿಯಿಂದ ಜೀವಂತವಾಗಿದ್ದು, ರೈತರು ಹಕ್ಕುಪತ್ರಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ತಾಲೂಕು ಮಟ್ಟದಲ್ಲಿ ಈ ಸಮಿತಿಗೆ ಆಯಾ ಕ್ಷೇತ್ರದ ಶಾಸಕರೇ ಅಧ್ಯಕ್ಷರು. ಆದರೂ ಕಾಲಕಾಲಕ್ಕೆ ಸಭೆ ನಡೆಸಿ, ರೈತರಿಗೆ ನ್ಯಾಯ ಒದಗಿಸುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಕೆಲವು ಕಡೆಯಂತೂ ಸಮಿತಿಯ ಸಭೆ ದೀರ್ಘಾವಧಿಯಿಂದ ನಡೆದಿಲ್ಲ ಎಂಬ ದೂರುಗಳೂ ಇವೆ. ರಾಜ್ಯದಲ್ಲಿ ಒಟ್ಟಾರೆ ೧೪ ಲಕ್ಷ ರೈತರು ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಸಲ್ಲಿಕೆಯಾಗಿ ಒಂದೂವರೆ ವರ್ಷ ಕಳೆದಿದ್ದರೂ ಅರ್ಹ-ಅನರ್ಹ ಎಂದು ವಿಂಗಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. 

ಬಗರ್ ಹುಕುಂ ವಿಷಯದಲ್ಲಿ ಅಧಿಕಾರಿಗಳತ್ತ ಬೊಟ್ಟು ಮಾಡಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅರ್ಜಿಗಳ ವಿಲೇವಾರಿಗೆ ಗಡುವು ವಿಧಿಸಿದ್ದಾರೆ. ‘ಬಗರ್ ಹುಕುಂ ಅರ್ಜಿಗಳನ್ನು ತಹಶೀಲ್ದಾರರು ಅರ್ಹ-ಅನರ್ಹ ಎಂದು ವಿಂಗಡಿಸಿ ನವೆಂಬರ್ ೨೫ರ ಒಳಗೆ ಶೋಕಾಸ್ ನೋಟೀಸ್ ನೀಡಲಾಗುವುದು’ ಎಂದು ಎಚ್ಚರಿಸಿದ್ದಾರೆ. ಬಗರ್ ಹುಕುಂ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ತಹಶೀಲ್ದಾರರು ಅಸಡ್ಡೆ ತೋರುತ್ತಿರುವುದಕ್ಕೆ ಅಸಮಧಾನವನ್ನೂ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಹೀಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ, ‘ಬೇಗ ಕೆಲಸ ಮಾಡಿ’ ಎಂದು ತಾಕೀತು ಮಾಡಿದ ಹಲವು ನಿದರ್ಶನಗಳಿವೆ. ಆಡಳಿತ ವ್ಯವಸ್ಥೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಕೆಲವು ದಿನಗಳ ಕಾಲ ಎಚ್ಚೆತ್ತುಕೊಂಡಂತೆ ನಟಿಸಿ, ಮತ್ತೆ ಮೊದಲಿನ ಜಡತ್ವಕ್ಕೆ ಅಂಟಿಕೊಳ್ಳುತ್ತಾರೆ ಎಂಬುದು ಕಹಿ ವಾಸ್ತವ.

ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂಸಾಗುವಳಿ ಚೀಟಿ ನೀಡಬೇಕು ಎಂದು ಕಂದಾಯ ಸಚಿವರು ಸೂಚಿಸಿರುವುದು ಸ್ವಾಗತಾರ್ಹ. ಆಪ್ ಸಹಕರಿಸುತ್ತಿಲ್ಲ. ನೆಟ್ ವರ್ಕ್ ಸಿಗುತ್ತಿಲ್ಲ ಎಂಬ ನೆಪವೊಡ್ಡಿ ಈ ಅರ್ಜಿಗಳನ್ನು ನೆನೆಗುದಿಗೆ ಇಡಲಾಗಿದೆ. ರೈತರ ತಾಳ್ಮೆಯನ್ನು ಪರೀಕ್ಷಿಸಬಾರದು. ಅವರ ಸಂಕಷ್ಟವನ್ನು ಅರ್ಥಮಾಡಿಕೊಂಡು ಸಮಸ್ಯೆಯನ್ನು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಿ, ಹಕ್ಕುಪತ್ರಗಳನ್ನು ವಿತರಿಸಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ, ನಿಜವಾದ ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರರು ಹೆಚ್ಚು ಕಾಳಜಿ ತೋರಬೇಕು. ಮುಖ್ಯವಾಗಿ, ಶಾಸಕರು ಆಸಕ್ತಿ ವಹಿಸಿ ತಮ್ಮ ಕ್ಷೇತ್ರದ ಬಡ ರೈತರಿಗೆ ನ್ಯಾಯ ಒದಗಿಸಲು ಮುಂದಾಗಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೬-೧೧-೨೦೨೪

 ಚಿತ್ರ ಕೃಪೆ: ಅಂತರ್ಜಾಲ ತಾಣ