ರೈತರ ಸಾಲ ಮನ್ನಾ: ಸರ್ಕಾರ ಹೊಸ ಸೂಕ್ಷ್ಮತೆಯೆಡೆಗೆ?

ರೈತರ ಸಾಲ ಮನ್ನಾ: ಸರ್ಕಾರ ಹೊಸ ಸೂಕ್ಷ್ಮತೆಯೆಡೆಗೆ?

ಬರಹ

ರೈತರ ಸಾಲ ಮನ್ನಾ: ಸರ್ಕಾರ ಹೊಸ ಸೂಕ್ಷ್ಮತೆಯೆಡೆಗೆ?

ಚುನಾವಣಾ ಮುಂಗಡ ಪತ್ರವೋ, ಮತ್ತೆಂತಹುದೋ; ಕೇಂದ್ರ ಸರ್ಕಾರ ಈ ಮುಂಗಡ ಪತ್ರದಲ್ಲಿ ಎಲ್ಲ ಸಣ್ಣ ಹಾಗೂ ಅತಿ ಸಣ್ಣ ರೈತರ, ಈ ಆರ್ಥಿಕ ವರ್ಷದ ಕೊನೆಯವರೆಗೆ ಬಾಕಿಯಿರುವ ಎಲ್ಲ ರೀತಿಯ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದಾಗಿ ಪ್ರಕಟಿಸಿದೆ. ಜೊತೆಗೆ ಇತರ ರೈತರು ತಮ್ಮ ಸಾಲ ಬಾಕಿಯ ಶೇ.75ರಷ್ಟನ್ನು ಪಾವತಿ ಮಾಡಿದಲ್ಲಿ ಮಿಕ್ಕದ್ದನ್ನು ಮನ್ನಾ ಮಾಡುವುದಾಗಿಯೂ ಭರವಸೆ ನೀಡಿದೆ. ಇದಕ್ಕೆಲ್ಲ ಅಗತ್ಯವಾದ ಅರವತ್ತೈದು ಸಾವಿರ ಕೋಟಿ ರೂಪಾಯಿಗಳಿಗೆ ಈ ಮುಂಗಡ ಪತ್ರದಲ್ಲಿ ಅವಕಾಶ ಕಲ್ಪಿಸಿಲ್ಲವಾದರೂ, ಈ ಸಾಲ ಮನ್ನಾ ಯೋಜನೆ ಪೂರ್ಣಗೊಳ್ಳುವ ಜೂನ್ ಅಂತ್ಯದ ವೇಳೆಗೆ ಈ ಹಣದ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ಅರ್ಥಮಂತ್ರಿ ಹೇಳಿದ್ದಾರೆ. ಆದರೆ, ಪಿ.ಚಿದಂಬರಂ ಅವರ ಈ ಭರವಸೆಯನ್ನು ಗಮನಕ್ಕೇ ತೆಗೆದುಕೊಳ್ಳದ ಕೆಲವು ಉದ್ಯಮಪತಿಗಳು, ಅರ್ಥಶಾಸ್ತ್ರಜ್ಞರು ಹಾಗೂ ಪತ್ರಕರ್ತರು ಈ ಬಗ್ಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ ಹಾಗೂ ಕೊಂಕು ಮಾತುಗಳನ್ನು ಆಡುತ್ತಲೇ ಇದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಹಲವಾರು ರಾಜ್ಯಗಳಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಅನೇಕ ಅಧ್ಯಯನಗಳು ನಡೆದು, ಅವುಗಳ ಶಿಫಾರ್ಸಿನ ಪ್ರಕಾರ ಸರ್ಕಾರಗಳು ಅನೇಕ ಪರಿಹಾರ ಕ್ರಮಗಳನ್ನು ಕೈಗೊಂಡವು. ಇತ್ತೀಚೆಗೆ ಮಹಾರಾಷ್ಟ್ರದ ವಿದರ್ಭದಲ್ಲಿ ಇಂತಹ ಆತ್ಮಹತ್ಯೆಗಳು ದಾರುಣ ಹಂತ ತಲುಪಿದಾಗ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿಗಳ ಮಾರ್ಗದರ್ಶನದಲ್ಲಿ ವಿದರ್ಭ ಪ್ಯಾಕೇಜ್ ಹೆಸರಿನಲ್ಲಿ ಒಂದು ಪ್ರಮಾಣದ ಸಾಲ ಮನ್ನಾ, ಬೀಜ ಮತ್ತು ಗೊಬ್ಬರಗಳ ವಿತರಣೆಯ ಹಾಗೂ ಮರುಸಾಲದ ವ್ಯವಸ್ಥೆಯನ್ನೊಳಗೊಂಡ ಬೃಹತ್ ರಾಷ್ಟ್ರೀಯ ಪರಿಹಾರ ಕಾರ್ಯಕ್ರಮವನ್ನು ಜಾರಿಗೊಳಿಸಿತು. ಆದರೂ ಆತ್ಮಹತ್ಯೆಗಳು ನಿಲ್ಲದೇ ಹೋದವು. ಹೀಗಾಗಿ ದಿಕ್ಕೆಟ್ಟ ಸರ್ಕಾರ ಐದು ಎಕರೆಗಳಿಗೂ ಕಡಿಮೆ ಭೂಮಿ ಹೊಂದಿರುವ ರೈತರ ಎಲ್ಲ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ, ಒಟ್ಟಾರೆ ನಾಲ್ಕು ಕೋಟಿ ರೈತರು ಸಾಲದ ಬಂಧನದಿಂದ ಬಿಡುಗಡೆ ಹೊಂದುತ್ತಾರೆಂದು ಅಂದಾಜು ಮಾಡಲಾಗಿದೆ. ಬಡ ರೈತರ ಆತ್ಮಹತ್ಯಾತ್ಮಕ ಸಂಕಷ್ಟವನ್ನು ಪರಿಹರಿಸಲು ಸದ್ಯಕ್ಕೆ ಇದು ಮೊದಲ ಮತ್ತು ಅನಿವಾರ್ಯ ಕ್ರಮವೂ ಆಗಿತ್ತು ಎಂಬುದನ್ನು ರಾಷ್ಟ್ರದ ಸಮಗ್ರ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡ ಯಾರೂ ಅಲ್ಲಗೆಳೆಯಲಾರರು.

ಆದರೆ ಈ ನಿರ್ಧಾರವನ್ನು ರಾಜಕೀಯ ನೆಲೆಯಲ್ಲಷ್ಟೇ ಗ್ರಹಿಸಿ ಕಟುವಾಗಿ ಟೀಕಿಸುವ, ನಮ್ಮ ಆರ್ಥಿಕತೆಯ ಉದಾರೀಕರಣದ ಸಂಭ್ರಮದಲ್ಲಿರುವ ಅರ್ಥಶಾಸ್ತ್ರಿಗಳಿಗೆ, ಉದ್ಯಮಪತಿಗಳಿಗೆ ಹಾಗೂ ರಾಜಕಾರಣಿಗಳಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಅರ್ಥಮಂತ್ರಿಗಳು ಈ ಸಾಲ ಮನ್ನಾದ ಹೊರೆಯನ್ನು ಬ್ಯಾಂಕುಗಳ ಮೇಲಾಗಲೀ, ಮುಂದಿನ ಸರ್ಕಾರದ ಮೇಲಾಗಲೀ ಹಾಕುವುದಿಲ್ಲ; ಈ ಯೋಜನೆ ಅನುಷ್ಠಾನಗೊಳ್ಳುವ ವೇಳೆಗೆ ಇದಕ್ಕೆ ಅಗತ್ಯವಾದ ಹಣಕಾಸಿನ ದಾರಿಗಳನ್ನು ಸೂಚಿಸಲಾಗುವುದು ಎಂದು ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ, ನಮ್ಮ ಮಾಧ್ಯಮಗಳ ಆಯಕಟ್ಟಿನ ಜಾಗಗಳಲ್ಲಿ ಇರಿಸಲ್ಪಟ್ಟಿರುವ ಕೆಲವು ಉದ್ಯಮಪತಿಗಳ ವಕ್ತಾರರಂತಿರುವ ಅರ್ಥಶಾಸ್ತ್ರಜ್ಞರು, ಆ ದಾರಿಗಳನ್ನು ಈಗಲೇ ಪ್ರಕಟಿಸುವಂತೆ ಆಗ್ರಹಿಸುತ್ತಿದ್ದಾರೆ. ನಮ್ಮ ಮಾಧ್ಯಮಗಳ ಕುಚೇಷ್ಟೆಯ ಸಾಮಥ್ರ್ಯವನ್ನು ಚೆನ್ನಾಗಿ ಬಲ್ಲ ಚಿದಂಬರಂ ಸದ್ಯಕ್ಕೆ ಇದನ್ನು ಹೊರಗೆಡಹಲಾರೆ ಎಂದು ಹೇಳಿದರೂ; ತಮ್ಮ ಮಾಧ್ಯಮಕ್ಕೆ 'ಸ್ಕೂಪ್' ಪಡೆಯಲಾಗದ ಉದ್ಯಮಪರವಾದ ಈ ಮಾಧ್ಯಮ ಏಜೆಂಟರು, ಅವರನ್ನು ಆರ್ಥಿಕ ಅಶಿಸ್ತಿನ ಆರೋಪಕ್ಕೆ ಸಿಲುಕಿಸುವ ಒತ್ತಡ ತಂತ್ರಕ್ಕೂ ಕೈ ಹಾಕಿದ್ದಾರೆ. ಇದರಿಂದ ಜಿಗುಪ್ಸೆಗೊಂಡ ಅರ್ಥಮಂತ್ರಿ ಸಿ.ಎನ್.ಎನ್ - ಐ.ಬಿ.ಎನ್ ಟಿ.ವಿ.ವಾಹಿನಿಯ ಸಂದರ್ಶನದಿಂದ ಅರ್ಧಕ್ಕೇ ಎದ್ದು ಹೋದಾಗ, ಅವರನ್ನು ಸಮಾಧಾನಿಸಿ ಮತ್ತೆ ಕರೆದು ತರಬೇಕಾದ ಪ್ರಸಂಗವೂ ಉಂಟಾಗಿದೆ.

ಮುಕ್ತ ಸ್ಪರ್ಧೆ, ಖಾಸಗೀಕರಣ ಮತ್ತು ಉದಾರೀಕರಣಗಳ ಲಾಭ ಹಾಗೂ ಪ್ರಯೋಜನಗಳಿಂದ ಕೊಬ್ಬಿ ಹೋಗಿರುವ ನಮ್ಮ ಮಾಧ್ಯಮ ಮತ್ತು ಉದ್ಯಮಪತಿಗಳಿಗೆ ಮಾರಣಾಂತಿಕ ಸಂಕಷ್ಟದಲ್ಲಿರುವ ರೈತರಿಗಾಗಿ ಪ್ರಕಟಿಸಿರುವ ೬೦ ಸಾವಿರ ಕೋಟಿ ರೂಪಾಯಿಗಳ ಪರಿಹಾರ, ಸುಮಾರು ಏಳೂವರೆ ಲಕ್ಷ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಮುಂಗಡ ಪತ್ರದಲ್ಲಿ ಒಂದು ದೊಡ್ಡ ಅಸಮತೋಲನದ ಅಂಶವಾಗಿ ಕಂಡಿದೆ! ಇವರು ದೂಷಿಸುವ ಆ ಹಳೆಯ 'ಸಮಾಜವಾದಿ ಆರ್ಥಿಕತೆ' (ಅದು ನಿಜವಾಗಿಯೂ ಸಮಾಜವಾದಿ ಅರ್ಥಿಕತೆಯೇ ಎಂಬುದು ಬೇರೆ ಪ್ರಶ್ನೆ) ಎಷ್ಟು ಸಾವಿರ ಕೋಟಿ ರೂಪಾಯಿಗಳ ಕೈಗಾರಿಕಾ ಸಾಲಗಳನ್ನು ಮತ್ತು ಎಷ್ಟು ಸಾವಿರ ಕೋಟಿ ರೂಪಾಯಿಗಳ ಬ್ಯಾಂಕ್ ದುರಾಡಳಿತದ ಲೆಕ್ಕ ವ್ಯತ್ಯಯಗಳನ್ನು ಇವರಿಗಾಗಿ ಮನ್ನಾ ಮಾಡಿದೆ ಎಂಬುದನ್ನು ಲೆಕ್ಕ ಹಾಕಲಿ. ಹಾಗೇ ಇತ್ತೀಚಿನ ಜಾಗತೀಕರಣದ ಅವಧಿಯ ವಿಶ್ವ ಬ್ಯಾಂಕ್ ಪ್ರಣೀತ ಆರ್ಥಿಕತೆಯ ಭಾಗವಾಗಿ ಯಾವ ಯಾವ ಉದ್ಯಮಗಳಿಗೆ ಎಷ್ಟು ಸಾವಿರ ಕೋಟಿ ರೂಪಾಯಿಗಳ ತೆರಿಗೆ ಮನ್ನಾ ಮಾಡಿದೆ ಮತ್ತು ಇತರೆ ಸರ್ಕಾರಿ ಸವಲತ್ತು - ರಿಯಾಯತಿಗಳನ್ನು ನೀಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಲಿ. ಭಾರತದ ಮೇಲ್ವರ್ಗ ಹಾಗೂ ಯಾವಾಗಲೂ ಅವರ ಚೇಲಾಗಳಂತೆ ವರ್ತಿಸುವ ಬುದ್ಧಿಜೀವಿ ವರ್ಗ ಜನಸಾಮಾನ್ಯರ ಕಷ್ಟ ನಷ್ಟಗಳೊಂದಿಗೆ ಎಂದೋ ಸಂಪರ್ಕ ಕಡಿದುಕೊಂಡಿದೆ ಎಂದು ಈ ದೇಶದ ಹಿಂದುಳಿದಿರುವಿಕೆ ಬಗ್ಗೆ ಅಧ್ಯಯನ ಮಾಡಿದ್ದ ಅರವತ್ತರ ದಶಕದ ಅಮೆರಿಕಾದ ರಾಯಭಾರಿ ಹಾಗೂ ಅರ್ಥಶಾಸ್ತ್ರಜ್ಞ ಗುನ್ನರ್ ಮಿರ್ಡಾಲ್ ಹೇಳಿದ್ದರು. ಇದಕ್ಕೂ ಮುನ್ನ ಸಮಾಜವಾದಿ ಚಿಂತಕ ಡಾ. ರಾಮಮನೋಹರ ಲೋಹಿಯಾ ಲಕ್ಷಾಂತರ ಜನ ಹಸಿವಿನಿಂದ ಸಾಯಲು ಕಾರಣವಾದ ಬಂಗಾಳದ ಕ್ಷಾಮದ ಬಗ್ಗೆ ಸಂವೇದನಾಶೀಲವಾದ ಒಂದು ಅಭಿವ್ಯಕ್ತಿಯೂ ಸಾಧ್ಯವಾಗದ ಭಾರತದ ಬುದ್ಧಿಜೀವಿಗಳ 'ಜಡತೆ'ಯನ್ನು ಛೇಡಿಸಿದ್ದರು.

ಇಷ್ಟು ವರ್ಷಗಳ ನಂತರವೂ ಈ ಪರಿಸ್ಥಿತಿ ಬದಲಾಗಿಲ್ಲ. ಇವರೆಲ್ಲರಿಗೆ ತಾವು ನಂಬಿಕೊಂಡಿರುವ ವಿವಿಧ ಶಾಸ್ತ್ರಗಳ ಸೂತ್ರಬದ್ಧತೆಯೇ ದೊಡ್ಡದಾಗಿದೆ. ರಾಷ್ಟ್ರದ ಅರ್ಥಮಂತ್ರಿಯನ್ನು ನಂಬದ ಇವರು, ಇವರು ಸ್ವತಃ ತಾವೇ ರಾಷ್ಟ್ರದ ಆರ್ಥಿಕ ಯಜಮಾನಿಕೆಯನ್ನು ವಹಿಸಿಕೊಳ್ಳುವ ತವಕದಲ್ಲಿದ್ದಾರೆ. ಇದು ಸ್ವತಃ ಚಿದಂಬರಂ ಹಾಗೂ ಅವರ ಗೆಳೆಯರು ಮನಮೋಹನ ಸಿಂಗರ ನಾಯಕತ್ವದಲ್ಲಿ ಆರಂಭಿಸಿದ ಆರ್ಥಿಕ ಉದಾರೀಕರಣದ ರಾಜಕೀಯ ಫಲ. ಇದು, ಜನತೆಯ ಪ್ರತಿನಿಧಿಗಳಾದ ರಾಜಕಾರಣಿಗಳನ್ನೇ ರಾಜಕಾರಣದಿಂದ ಹೊರದೂಡಿ, ರಾಷ್ಟ್ರಾಡಳಿತವನ್ನು ಉದ್ಯಮಪತಿಗಳಿಗೆ ವಹಿಸಿಕೊಡಲು ತುದಿಗಾಲಿನಲ್ಲಿ ನಿಂತಿರುವ ವಿಶೇಷಜ್ಞರೆಂಬ ಹೊಸ ಆರ್ಥಿಕತೆಯ ದಲ್ಲಾಳಿಗಳ ಹುನ್ನಾರ. ರಾಜಕಾರಣಿಗಳಾದರೋ ಐದು ವರ್ಷಗಳಿಗೊಮ್ಮೆಯಾದರೂ ಜನತಾ ಶಕ್ತಿಯನ್ನು ಎದುರಿಸುವ ಪ್ರಜಾಸತ್ತಾತ್ಮಕ ಅನುಭವದಿಂದಾಗಿ ಸ್ವಲ್ಪ ಹೃದಯ ಉಳಿಸಿಕೊಂಡವರಂತೆ 'ಮಾನವೀಯ ಮುಖ'ದ ಉದಾರೀಕರಣ, 'ಆಂ ಆದ್ಮಿ'ಯ (ಶ್ರೀಸಾಮಾನ್ಯನ) ಸರ್ಕಾರ ಮತ್ತು 'ಆವೃತ' (ಎಲ್ಲರನ್ನೊಳಗೊಂಡ - inclusive) ಅಭಿವೃದ್ಧಿಯ ಮಾತುಗಳನ್ನಾಡುವ ಒತ್ತಾಯಗಳಿಗೆ ಸಿಲುಕಿದ್ದರೆ, ಈ ದಲ್ಲಾಳಿ - ವಿಶೇಷಜ್ಞರಿಗೆ ಹೃದಯವಂತಿಕೆಗೆ ಆಸ್ಪದವಿರುವಂತಹ ಅಂತಹ ಒತ್ತಾಯಗಳೇನೂ ಇಲ್ಲವಲ್ಲ!

ಸಾಲ ಮನ್ನಾವನ್ನು ವಿರೋಧಿಸುವವರ ವಾದಗಳು ಹಲವಾರು ನೆಲೆಗಳಲ್ಲಿವೆ. ಈ ಸಾಲ ಮನ್ನಾದಿಂದ ಬ್ಯಾಂಕುಗಳ ಆರ್ಥಿಕ ಸ್ಥಿತಿ ಅಸ್ತವ್ಯಸ್ತಗೊಳ್ಳುತ್ತದೆ; ಗ್ರಾಮೀಣ ಸಹಕಾರಿ ಬ್ಯಾಂಕುಗಳು ಕುಸಿದು ಬೀಳುತ್ತವೆ ಎನ್ನುತ್ತಾರೆ ಈ ಪರಿಣತರು. ಇದೊಂದು ರೀತಿಯ ಬೌದ್ಧಿಕ ಭಯೋತ್ಪಾದನೆ. ಅರ್ಥಮಂತ್ರಿಗಳು ಬ್ಯಾಂಕುಗಳಿಗೆ ಹಣಕಾಸಿನ ಪರಿಹಾರ ಒದಗಿಸುವುದಾಗಿ ಹೇಳುತ್ತಿದ್ದರೂ, ಈ ಆತಂಕಗಳನ್ನು ಸೃಷ್ಟಿಸುತ್ತಿರುವುದಾದರೂ ಏಕೆ? ಆರ್ಥಿಕ ಉದಾರೀಕರಣದ ಮುಕ್ತ ಅವಕಾಶಗಳ 'ಪ್ರಯೋಜನ' ಪಡೆದು ನಡೆದ ಈ ಹಿಂದಿನ ಅನೇಕ ಷೇರುಪೇಟೆ ಹಗರಣಗಳಲ್ಲಿ ಯಾವ ಯಾವ ಬ್ಯಾಂಕುಗಳು ಎಷ್ಟೆಷ್ಟು ಸಾವಿರ ಕೋಟಿ ರೂಪಾಯಿಗಳನ್ನು ಕಳೆದುಕೊಂಡವು ಮತ್ತು ಯಾವ ಯಾವ ಸ್ಥಳೀಯ ಬ್ಯಾಂಕುಗಳು ಮುಳುಗಿ ಹೋದವು ಎಂಬುದು ಇವರಿಗೆ ನೆನಪಿದೆಯೇ? ಇನ್ನು ಸರ್ಕಾರ ಬ್ಯಾಂಕುಗಳಿಗೆ ಪರಿಹಾರ ಹಣ ಒದಗಿಸುವವರೆಗೆ, ಅವು ಆ ಪಾಲಿನ ಬಡ್ಡಿಯನ್ನು ಕಳೆದುಕೊಳ್ಳುತ್ತವೆ ಎನ್ನುವವರನ್ನು ನಿಜವಾಗಿಯೇ ಬಡ್ಡಿ ಮಕ್ಕಳೆಂದೇ ಎಂದು ಕರೆಯಬೇಕಾಗುತ್ತದೆ! ಏಕೆಂದರೆ, ಇಷ್ಟು ಸೂಕ್ಷ್ಮವಾಗಿ ಲೆಕ್ಕಹಾಕಿ ಮಾತನಾಡುವವರ ಯಜಮಾನರುಗಳು ಈವರೆಗಿನ ವಿವಿಧ ಸರ್ಕಾರಗಳ ಉದ್ಯಮಗಳ ಪರವಾದ ವಿವಿಧ ನೀತಿ ಧೋರಣೆಗಳ ಕಾರಣದಿಂದಾಗಿ ಎಷ್ಟು ಕೋಟಿ ರೂಪಾಯಿಗಳ ಬಡ್ಡಿಯನ್ನು ನುಂಗಿದ್ದಾರೆ ಎಂದು ಲೆಕ್ಕ ಹಾಕಿ ತಿಳಿಸಲು ಅವರಿಗೇ ಸೂಚಿಸುವುದು ಒಳಿತು! ಹಾಗೇ ಇವರೆಲ್ಲರ ಇಂತಹ ಸೂಕ್ಷ್ಮ ಚಿಂತನೆಯ ಬೆಂಬಲಿಗರಾದ ಹೊಸ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳು ಈ ವರ್ಷ ಪ್ರಕಟಿಸಿರುವ ವರಮಾನ ತೆರಿಗೆ ರಿಯಾಯತಿಗಳಿಂದ ಸರ್ಕಾರದ ಆದಾಯಕ್ಕೆ ಎಷ್ಟು ಖೋತಾ ಆಗಲಿದೆ ಎಂಬುದನ್ನೂ ಅವರು ಲೆಕ್ಕ ಹಾಕಿ ಹೇಳಲಿ.

ಇವೆಲ್ಲವೂ ಹಣಕಾಸಿನ ಲೆಕ್ಕಾಚಾರಗಳನ್ನಾಧರಿಸಿದ ವಾದಗಳಾದರೆ; ನೈತಿಕತೆಯ, ನ್ಯಾಯದ ಆಧಾರದಲ್ಲಿ ಕೆಲವರು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಈ ಸಾಲ ಮನ್ನಾ ಇನ್ನು ಮುಂದೆ ಪಡೆಯಲಿರುವ ಸಾಲಗಳನ್ನೂ ಮರುಪಾವತಿ ಮಾಡದಿರುವಂತಹ ಅನೈತಿಕತೆಯನ್ನು ರೈತರಲ್ಲಿ ಸೃಷ್ಟಿಸುತ್ತದೆ ಎಂಬುದು ಕೆಲವರ ವಾದ. ಇದು ಈವರೆಗೆ ರೈತರು ಸಾಲ ಮರುಪಾವತಿ ಮಾಡಿಯೇ ಇಲ್ಲವೆಂದು ಭಾವಿಸಿ ಸಾಯುತ್ತಿರುವವರ ಮಧ್ಯೆ ನೈತಿಕತೆಯ ಪಾಠ ಆರಂಭಿಸುವ ಮೂರ್ಖರ ಕ್ರೂರ ವಾದ ಮಾತ್ರ ಎಂದು ಹೇಳಬೇಕಾಗುತ್ತದೆ. ಇನ್ನು ಈಗಾಗಲೇ ಸಾಲ ಕಟ್ಟಿರುವವರಿಗೆ ಇದು ಅನ್ಯಾಯ ಮಾಡಿದಂತಲ್ಲವೇ ಎಂಬುದು ಕೆಲವರ ಪ್ರಶ್ನೆ. ಹಾಗೆ ಕೇಳುವವರು ಅಂತಹ ರೈತರ ಪಾವತಿಯನ್ನು ಅವರಿಗೇ ಹಿಂದಿರುಗಿಸುವಂತೆ ಸರ್ಕಾರವನ್ನು ಆಗ್ರಹಿಸುವುದು ಮಾತ್ರ ಸರಿಯಾದ ನ್ಯಾಯದ ಪ್ರಶ್ನೆಯಾದೀತು ಎಂದು ತಿಳಿದರೆ ಒಳಿತೇನೋ! ಇಲ್ಲಿ ಇಡೀ ಪ್ರಶ್ನೆ ಸಾಲ ಮರುಪಾವತಿ ಮಾಡಲಾಗದವರನ್ನು ಸಂಕಷ್ಟದಿಂದ ಪಾರುಮಾಡುವುದಕ್ಕೆ ಸಂಬಂಧಿಸಿದೆಯೇ ಹೊರತು, ಮರುಪಾವತಿ ಮಾಡಿದವರಿಗೆ ಸಂಬಂಧಿಸಿಲ್ಲ. ಈ ಗೊಂದಲ ಇಲ್ಲಿ ಅನವಶ್ಯಕ.

ಇಂತಹ ಗೊಂದಲಗಳಿಗೆ ಸಿಕ್ಕಿ ಹಾಕಿಕೊಂಡವರಲ್ಲಿ ಅಥವಾ ಹುಟ್ಟಿಸುತ್ತಿರುವವರಲ್ಲಿ ಬರ್ಧನ್ರಂತಹ ಕೆಲವು ಕಮ್ಯುನಿಸ್ಟರೂ ಸೇರಿಕೊಂಡಿರುವುದೂ ಒಂದು ವಿಪರ್ಯಾಸವೇ ಸರಿ. ಇವರಿಗೆ, ಕಾಂಗ್ರೆಸ್ ಮುಂದಿನ ಚುನಾವಣೆಗಳಲ್ಲಿ ಇದರ ರಾಜಕೀಯ ಲಾಭ ಪಡೆದು ತಮ್ಮ ನಿಯಂತ್ರಣಕ್ಕೆ ಎಲ್ಲಿ ಸಿಗದ ಹಾಗೆ ಹೋದೀತೋ ಎಂಬ ಆತಂಕವಿದ್ದಂತೆ ಕಾಣುತ್ತದೆ! ಇದು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಇದ್ದಕ್ಕಿದ್ದ ಹಾಗೆ ತಮ್ಮ ಕ್ರಿಕೆಟ್ ಸಾಮ್ರಾಜ್ಯದ ಹಣದ ಮಂಪರಿನಿಂದ; ಮರೆತೇ ಹೋದಂತಿರುವ ತಮ್ಮ ಕೃಷಿ ಮಂತ್ರಿತ್ವಕ್ಕೆ ಎಚ್ಚೆತ್ತುಕೊಂಡಂತೆ, ಈ ಸಾಲ ಮನ್ನಾ ತಮ್ಮ ರಾಜಕೀಯ ವಿಜಯವೆಂದು ಸಾರುವ ಪತ್ರಿಕಾ ಜಾಹೀರಾತುಗಳನ್ನು ನೀಡುತ್ತಿರುವುದರಷ್ಟೇ ನಾಚಿಕೆಗೇಡಿನ ಸಂಗತಿ. ಇನ್ನು ನಮ್ಮ ದೇವೇಗೌಡರಂತೂ, ಈ ಸಾಲ ಮನ್ನಾ ಯೋಜನೆ ತಮ್ಮ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಕಟಿಸಿದ (ಇದಕ್ಕಿನ್ನೂ ಏಕೋ ಯಡಿಯೂರಪ್ಪನವರ ಆಕ್ಷೇಪಣೆ ವ್ಯಕ್ತವಾಗಿಲ್ಲ!) ಯೋಜನೆಯ ಅನುಕರಣೆ ಎಂದು ಟೀಕಿಸಿದ್ದಾರೆ. ಅನುಕರಣೆ ಒಳ್ಳೆಯ ಉದ್ದೇಶಕ್ಕೇ ಆದರೆ ಟೀಕೆ ಯಾಕೋ? ಅವರ ಪ್ರಕಾರ ಎಲ್ಲ ರೈತರಿಗೂ ಈ ಪ್ರಯೋಜನ ಒದಗಿಸಬೇಕಿತ್ತಂತೆ! ನಮ್ಮ ರೈತ ರಾಜಕಾರಣದ ಸೋಲಿನ ಮೂಲ ಇಲ್ಲಿದೆ. ರೈತ ಎಂಬುದು ಒಂದು ಸಾರಾ ಸಗಟು ವರ್ಗ; ಅದರಲ್ಲಿ ಸಣ್ಣ, ಮಧ್ಯಮ, ದೊಡ್ಡ ರೈತ ಎಂಬುದಿಲ್ಲ ಎಂಬ ಹುಸಿ ಘೋಷಣೆ ರೈತ ರಾಜಕಾರಣದ ವಿಶ್ವಾಸಾರ್ಹತೆಯನ್ನೇ ನಾಶ ಮಾಡಿದೆಯಲ್ಲದೆ, ಅದಕ್ಕೊಂದು ತಾತ್ವಿಕ ಹಾಗೂ ಕಾರ್ಯಕ್ರಮ ಸ್ಪಷ್ಟತೆಯೇ ಇಲ್ಲದಂತೆ ಮಾಡಿದೆ.

ಇಂತಹ ಹುಸಿ ಘೋಷಣೆಯನ್ನು ಇಪ್ಪತ್ತು ವರ್ಷಗಳ ಹಿಂದೆ ಪ್ರೊ|| ನಂಜುಂಡಸ್ವಾಮಿಯವರ ನೇತೃತ್ವದ ರೈತ ಸಂಘವೂ ಮಾಡುತ್ತಾ, ತಾತ್ವಿಕ ಹಾಗೂ ಕಾರ್ಯಕ್ರಮ ನೆಲೆಗಳೆರಡರಲ್ಲೂ ದುಂಡಾವರ್ತಿ ನಡೆಸಿತ್ತು. ಹಾಗಾಗಿಯೇ ಈಗ ದೇವೇಗೌಡರು ಸೂಚಿಸುತ್ತಿರುವಂತಹ ಸಾರಾ ಸಗಟು ನೆಲೆಯ ಬಡ್ಡಿ ಮನ್ನಾ ಯೋಜನೆಯನ್ನು ಆಗ ರಾಜ್ಯಮಟ್ಟದಲ್ಲಿ ಪ್ರಕಟಿಸಿದಾಗ, ಹೆಚ್ಚಾಗಿ ಅದರ ಪ್ರಯೋಜನ ಪಡೆದವರು ಚಳುವಳಿಯ ನಾಯಕರೂ ಆಗಿದ್ದ ದೊಡ್ಡ ರೈತರೇ ಎಂದು ಸಂಘದ ಕಾರ್ಯಕರ್ತರು ಹೇಳಿದ್ದನ್ನು ನಾನು ಕೇಳಿದ್ದೇನೆ. ಸಾಲ ಕಟ್ಟಬೇಡಿ ಎಂದು ರೈತರನ್ನು ಹುರಿದುಂಬಿಸುತ್ತಿದ್ದ ಈ ನಾಯಕರಲ್ಲಿ ಹಲವರು ಬಡ್ಡಿ ಮನ್ನಾ ಘೋಷಿತವಾದೊಡನೆ, ಸದ್ದಿಲ್ಲದೆ ತಂತಮ್ಮ ಸಾಲಗಳನ್ನು ತೀರಿಸಿಕೊಂಡರು. ತೀರಿಸಲಾಗದ ಸಣ್ಣ ರೈತರು ಸರ್ಕಾರಿ ಜಫ್ತಿಯಂತಹ ದೌರ್ಜನ್ಯಗಳಿಗೆ ಒಳಗಾದರು. ಇದರಿಂದ ಹೇಗೂ ಚಳುವಳಿಗೆ ಹೊಸ ತೀವ್ರತೆ ದಕ್ಕಿತಷ್ಟೇ! ಬಹುಮುಖ ಆರ್ಥಿಕ ಚಟುವಟಿಕೆಗಳನ್ನುಳ್ಳ ದೊಡ್ಡ ರೈತರು ಬಹುಪಾಲು ಗೈರು ರೈತರೇ ಆಗಿರುತ್ತಾರೆ. ನಗರಜೀವಿಗಳಾದ ಇವರು ಕೆಲವೊಮ್ಮೆ ಬೇಜಾರು ಕಳೆದುಕೊಳ್ಳಲೆಂದೋ, ವಿಹಾರಾರ್ಥವಾಗಿಯೋ ಇತರೆ ಆದಾಯಗಳ ಹೂಡಿಕೆಯಾಗಿ ಕೃಷಿಯನ್ನು ತಮ್ಮ ಕುಟುಂಬದ ಇತರರ ಹೆಸರಲ್ಲಿ, ಬೇರೆಯವರಿಂದ ಮಾಡಿಸುತ್ತಿರುತ್ತಾರೆ. ಇಂತಹ ಅನುಕೂಲಸ್ಥ ರೈತರು ಸಾಮಾಜಿಕವಾಗಿ ಎಂದೂ ಬಡ ರೈತರೊಂದಿಗೆ ಗುರುತಿಸಿಕೊಳ್ಳದಿದ್ದರೂ, ರೈತರ ಹೆಸರಲ್ಲಿ ಲಾಭ ಪಡೆಯುವಲ್ಲಿ ಮಾತ್ರ ತಮ್ಮ ವ್ಯಾವಹಾರಿಕತೆಯಿಂದಾಗಿ ಎಲ್ಲರಿಗಿಂತ ಮುಂದಿರುತ್ತಾರೆ. ಇದನ್ನು ಚಿದಂಬಂರಂ ತಮ್ಮ ಔಚಿತ್ಯಪೂರ್ಣ ವಿಂಗಡಣೆಯ ಮೂಲಕ ಸ್ವಲ್ಪ ಮಟ್ಟಿಗೆ ತಪ್ಪಿಸಿದ್ದಾರಾದರೂ, ನಗರ ಕೇಂದ್ರಿತ ಗೈರು ರೈತರನ್ನೂ - ಅವರು ಎಷ್ಟೇ ಸಣ್ಣ ರೈತರಾದರೂ - ಈ ಸಾಲ ಮನ್ನಾದ ವ್ಯಾಪ್ತಿಯ ಹೊರಗಿಡುವ ಉಪಾಯವೊಂದನ್ನು ಅಳವಡಿಸಿದ್ದರೆ, ಈ ಯೋಜನೆ ಇನ್ನಷ್ಟು ವಿಶ್ವಾಸಾರ್ಹವೆನ್ನಿಸಿಕೊಳ್ಳುತ್ತಿತ್ತು.

ಅದೇನೇ ಇರಲಿ, ಕೇಂದ್ರ ಸರ್ಕಾರ ೬೦ ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾದ ಜೊತೆಗೆ ರೈತರಿಗೆ ಮುಂದಿನ ವರ್ಷ ಎರಡು ಲಕ್ಷ ಎಂಭತ್ತು ಸಾವಿರ ಕೋಟಿ ರೂಪಾಯಿಗಳ ಸಾಲ ವಿತರಣೆಯ ಭರವಸೆಯನ್ನೂ ನೀಡಿದೆ. ಇದಕ್ಕೆಲ್ಲ ಮುಖ್ಯ ಕಾರಣ, ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಕಳೆದ ನಾಲ್ಕೈದು ವರ್ಷಗಳಲ್ಲಿ ತೋರಿದ ಎರಡಂಕಿ ಆಸುಪಾಸಿನ ಏರುಗತಿಯ ಬೆಳವಣಿಗೆ ದರ, ಈ ವರ್ಷ ತೀವ್ರ ಇಳಿತಾಯದ ಅಪಾಯದ ಮುನ್ಸೂಚನೆ ನೀಡಿರುವುದು. ಈ ಅಪಾಯದ ಮೂಲ ಇರುವುದು, ಕೃಷಿ ವಲಯದ ಬೆಳವಣಿಗೆಯ ದರ ಶೇ.ಮೂರಕ್ಕೂ ಕಡಿಮೆಯಾಗಿರುವುದರಲ್ಲಿ. ಕೈಗಾರಿಕಾ (ಉತ್ಪಾದನಾ) ವಲಯ ಕೂಡಾ ಆರ್ಥಿಕ ಬೆಳವಣಿಗೆ ದರದಲ್ಲ್ಲಿ ಈಗ ಸೇವಾ ವಲಯಕ್ಕೆ ತನ್ನ ಅಗ್ರ ಸ್ಥಾನವನ್ನು ಬಿಟ್ಟುಕೊಟ್ಟು, ನಮ್ಮ ಇಡೀ ಅರ್ಥ ವ್ಯವಸ್ಥೆಯನ್ನೇ ಒಂದು ಅಮೂರ್ತ ಅಸಮತೋಲನದೆಡೆಗೆ ಕೊಂಡೊಯ್ಯುತ್ತಿರುವುದು ಇನ್ನೂ ದೊಡ್ಡ ಅಪಾಯದ ಸೂಚನೆಯಾಗಿದೆ. ಉದಾರೀಕರಣದ ಮೂಲಕ ವಿಶ್ವ ಆರ್ಥಿಕತೆಯೊಡನೆ, ವಿಶೇಷವಾಗಿ ಅಮೆರಿಕಾದ ಆರ್ಥಿಕತೆಯೊಡನೆ ತನ್ನನ್ನು ಜೋಡಿಸಿಕೊಂಡ ಭಾರತದ ಅರ್ಥ ವ್ಯವಸ್ಥೆ, ಅಮೆರಿಕಾದಲ್ಲಿ ಈಗ ಆರಂಭವಾಗಿರುವ ಆರ್ಥಿಕ ಹಿಂಜರಿತದಿಂದ ಮುಂದೆ ಅನೇಕ ಆಘಾತಗಳನ್ನು ಎದುರಿಸುವ ಸೂಚನೆಗಳು, ಉದಾಹರಣೆಗೆ ಇತ್ತೀಚಿನ ನಮ್ಮ ಷೇರು ಪೇಟೆಯ ಆಘಾತಕಾರಿ ಪ್ರಮಾಣದ ಕುಸಿತದ ಪರೋಕ್ಷ ರೂಪದಲ್ಲಿ, ಈಗಾಗಲೇ ಕಂಡುಬರುತ್ತಿವೆ.

ಈ ಎಲ್ಲ ಅಪಾಯಗಳ ಹಿನ್ನೆಲೆಯಲ್ಲಿ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿರುವ ಕೃಷಿ ವಲಯದ ಪುನರುಜ್ಜೀವನ ಭಾರತದ ಆರ್ಥಿಕ ಸ್ಥಿರತೆಯ ದೃಷ್ಟಿಯಿಂದ ಮಾತ್ರವಲ್ಲ; ಅದರ ರಾಜಕೀಯ ಸ್ಥಿರತೆಯ ಮತ್ತು ಅದರ ಸಾಂಸ್ಕೃತಿಕ ಬೇರುಗಳ ಸಂರಕ್ಷಣೆಯ ದೃಷ್ಟಿಗಳಿಂದಲೂ ಅತ್ಯಗತ್ಯ ಹಾಗೂ ಅನಿವಾರ್ಯವಾದ ಕ್ರಮವಾಗಿದೆ. ತನ್ನ ರಾಜಕೀಯ ಲಾಭದ ದೃಷ್ಟಿಯಿಂದಲೇ ಆಗಲಿ, ಈ ಅರಿವಿಗೆ ಪರೋಕ್ಷವಾಗಿಯಾದರೂ ತನ್ನನ್ನು ತೆರೆದುಕೊಂಡಿರುವ ಈ ಕಾಂಗ್ರೆಸ್ ನೇತೃತ್ವದ ಸರ್ಕಾರ ನಿಜವಾಗಿಯೂ ಅಭಿನಂದನೆಗೆ ಅರ್ಹವಾಗಿದೆ. ಆದರೆ, ಇದು ದೊಡ್ಡ ಎಚ್ಚರಿಕೆಯ ಆರಂಭದ ಕ್ರಮ ಮಾತ್ರವಾಗಿದ್ದು; ನಮ್ಮ ಕೃಷಿ ವಲಯವನ್ನೇ ಆಧುನಿಕ ತಾಂತ್ರಿಕತೆಯ ಜಂಜಾಟದಿಂದ ಮುಕ್ತಗೊಳಿಸಿ, ಅದರ ಇಡೀ ಆಯೋಜನೆಯನ್ನು ಹೆಚ್ಚಾಗಿ ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸಿ, ಅದನ್ನು ಒಂದು ವಿಕೇಂದ್ರಿತ ಹಾಗೂ ದೇಸಿ ವ್ಯವಸ್ಥೆಯಾನ್ನಾಗಿ ರೂಪಿಸುವುದಾದರೆ ಮಾತ್ರ ಈ ಎಚ್ಚರಿಕೆ ಹಾಗೂ ಈ ಕ್ರಮ ಅರ್ಥಪೂರ್ಣವೆನಿಸಿಕೊಳ್ಳಬಹುದು.

ಆದರೆ, ಈ ಸಾಧ್ಯತೆಯೇ ಉದಾರೀಕರಣ (ಈ ಪದವೇ ಎಷ್ಟು ದಾರಿ ತಪ್ಪಿಸುವಂತಹುದಾಗಿದೆ!) ವಾದಿಗಳಾದ ಹೊಸ ಉದ್ಯಮಪತಿಗಳು ತಂತ್ರಜ್ಞರು, ಆಡಳಿತಗಾರರು ಹಾಗೂ ಅರ್ಥಶಾಸ್ತ್ರಜ್ಞರ ಕೂಟದಂತಿರುವ ನಮ್ಮ ಹೊಸ ಕಾರ್ಪೋರೇಟ್ ವಲಯದ ಕಿವಿಗೆ ಅಪಾಯದ ಕರೆಗಂಟೆ ರೂಪದಲ್ಲಿ ಕೇಳಿಸಲಾರಂಭಿಸಿದೆ! ಅವರ ಘೋಷಿತ ಅಭಿವೃದ್ಧಿ ಮಾದರಿ ನಮ್ಮ ಕೃಷಿ ನೆಲೆಗಳಾದ ಹಳ್ಳಿಗಳ ದರಿದ್ರೀಕರಣದ ಮೂಲಕ ನಗರೀಕರಣವನ್ನು ಸಾಧಿಸುವುದೇ ಆಗಿದೆ. ಈ ನಗರೀಕರಣದ ಬೆಡಗಿಗೆ ಬಹುವಾಗಿ ಕಾರಣಕರ್ತವಾಗಿರುವ ಸೇವಾ ವಲಯದ ಹೆಗ್ಗುರುತಾದ ದಲ್ಲಾಳಿಕೋರತನವು ಅದರ ಹಲವು ನಾಜೂಕಾದ ಪದರಗಳಲ್ಲಿ ಅಂತರ್ಗತವಾಗಿದೆ. ಹಿಂದೆಂದೂ ಯಾವ ವ್ಯಾಪಾರದಲ್ಲೂ ಕಾಣದಿದ್ದಂತಹ ಈ ಅಪಾರ ಲಾಭಕೋರತನದ ರುಚಿ ಕಳೆದ ಹತ್ತು ವರ್ಷಗಳಲ್ಲಿ ಇವರ ಹಲ್ಲುಗಳಿಗೆ ಇಳಿದಿದೆ. ಆದರೆ ಅವರು ತಮ್ಮ ದಲ್ಲಾಳಿತನಕ್ಕಾಗಿ ಹೊಸದಾಗಿ ರೂಪಿಸಿಕೊಂಡಿರುವ ವೇದಿಕೆಯಂತಿರುವ ವಿಶೇಷ ಆರ್ಥಿಕ ವಲಯಗಳಿಗೆ ರೈತರಿಂದ ದೊಡ್ಡ ಪ್ರಮಾಣದ ಪ್ರತಿರೋಧ ವ್ಯಕ್ತವಾಗುತ್ತಿರುವುದನ್ನು ಅವರು ಆತಂಕದಿಂದ ನೋಡುತ್ತಿದ್ದಾರೆ. ಇದನ್ನು ಮಟ್ಟ ಹಾಕುವ ಬದಲಾಗಿ ಸರ್ಕಾರ ಈ ಪ್ರತಿರೋಧಕ್ಕೆ ಕ್ರಮೇಣ ಮಣಿಯುತ್ತಿರುವಂತೆ ತೋರುತ್ತಿರುವುದು ಈ ನವ ಬಂಡವಾಳಶಾಹಿಗಳಲ್ಲಿ ಸರ್ಕಾರದ ಉದಾರೀಕರಣದ ಬಗೆಗೇ ಅನುಮಾನ ಹುಟ್ಟಿಸುತ್ತಿರುವಂತಿದೆ. ಹಾಗಾಗಿಯೇ, ರೈತರ ಸಾಲ ಮನ್ನಾ ಬಗ್ಗೆ ಇವರಿಂದ ಇಷ್ಟೊಂದು ಹುಯ್ಲು! ಜನ - ಅಂದರೆ ಜನಸಂಘಟನೆಗಳು - ಕೊನೆಗೂ - ಚುನಾವಣಾ ವೇಳೆಗಾದರೂ, ಹೊಸ ಸತ್ಯವೊಂದರೆಡೆಗೆ ಸರ್ಕಾರದ ಕಣ್ಣು ತೆರೆಸಿರುವಂತಿದೆ. ಸರ್ಕಾರವೀಗ ಈ ಹೊಸ ಸಂದರ್ಭದಲ್ಲಿ ತನ್ನ ಮೇಲೇ ಸವಾರಿಗೆ ಸಿದ್ಧವಾಗುತ್ತಿರುವಂತೆ ತೋರುತ್ತಿರುವ ಕಾರ್ಪೋರೇಟ್ ಅಧಿಪತಿಗಳನ್ನು ಹಾಗೂ ಅವರ ವಕ್ತಾರರನ್ನು ಹೇಗೆ ನಿರ್ವಹಿಸುವುದೋ ಕಾದು ನೋಡಬೇಕು.

ಅಂದಹಾಗೆ: ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾಲಯದಿಂದ ತಮ್ಮ ಅಪೂರ್ವ ಸಾಹಿತ್ಯ ಸಾಧನೆಗಾಗಿ ಗೌರವ ಡಾಕ್ಟೊರೇಟ್ ಪಡೆದ ಸಂಭ್ರಮದಲ್ಲಿ, ತಮಗೆ ಸಾಹಿತ್ಯದಲ್ಲಿ ವಿಮರ್ಶೆಯ ಪೇಟೆಂಟ್ ಪಡೆದವರಿಂದ ಅನ್ಯಾಯವಾಗಿದ್ದರೂ, ಆ ಅನ್ಯಾಯವನ್ನು ಈ ಗೌರವ ಡಾಕ್ಟೊರೇಟ್ ತುಂಬಿಕೊಟ್ಟಿದೆ ಎಂದು ಹೆಮ್ಮೆ ಪಟ್ಟುಕೊಂಡಿದ್ದಾರೆ.

ಆದರೆ ಸಾಹಿತ್ಯ ವಿಮರ್ಶೆಯ ಕೆಲವು ಪೇಟೆಂಟ್ವಾಲಾಗಳಿಗೆ ಬರಗೂರರ ಈ ಹೆಮ್ಮೆಯ ಹೇಳಿಕೆ; ಸಾಹಿತ್ಯದಲ್ಲಿ ವಿಮರ್ಶೆಯ ಪೇಟೆಂಟ್ ಪಡೆದವರಿಂದ ಆಗುವ ಅನ್ಯಾಯವನ್ನು, ಸಾಹಿತ್ಯದಲ್ಲಿ ಜಾತಿ ರಾಜಕಾರಣದ ಪೇಟೆಂಟ್ ಪಡೆದುಕೊಂಡು ತುಂಬಿಸಿಕೊಳ್ಳಬಹುದಾಗಿದೆ ಎಂಬುದಾಗಿ ಕೇಳಿಸಿತಂತೆ!