ವನ್ಯರಾಣಿಯ ಮೈಸಿರ

ವನ್ಯರಾಣಿಯ ಮೈಸಿರ

ಕವನ

ವನ್ಯರಾಣಿಯ ಶ್ವೇತ ಮಹಲಿದು

ಮೂಕ ವಿಸ್ಮಯ ಮಾಡಿದೆ

ಕನ್ಯೆಯಿವಳನು ನೋಡಿ ನಾಚಿದ

ಪೂರ್ಣ ಚಂದ್ರನು ಗಗನದೆ ||

 

ಸುತ್ತ ಹಸಿರಿನ ಚೆಲುವು ಮೆರೆದಿದೆ

ಮಧ್ಯೆ ಚೆಲ್ಲಿದೆ ಹೊಂಬೆಳಗು

ಮತ್ತು ಏರಿದೆ ಶಶಿಯ ಮನದಲಿ

ರಾಣಿ ಕಾಣುತ ಒಳಗೊಳಗೆ

 

ಪಾರಿಜಾತದ ಸುಮದ ಐಸಿರಿ

ದಟ್ಟ ಕಾನನದೊಳಗಡೆ

ಜಾರಿ ಬಂದನು ಪೂರ್ಣ ಚಂದ್ರನು

ಶ್ವೇತ ಮಹಲಿನ ಭುವಿಯಡೆ||

 

ಶ್ವೇತ ಮಹಲಲಿ ದೀಪ ಸಾರದ

ಮಂದ ಬೆಳಕಲಿ ಚೆಲುವೆಯು

ಸ್ವರ್ಣಧಾರಿಪ  ವರ್ಣ ಭೂಷಿತ

ಚಿತ್ತ ಚಂಚಲ ಚೋರಿಯು ||

 

ಇಳೆಯ ಬಾಲೆಯ ಮೈಯ ಸೊಬಗಿಗೆ

ಬಾನ ಚಂದಿರ ಸೋತನು

ಇನಿಯನಾಗುವ ಮನದ ಬಯಕೆಯ

ಪೇಳಿ ಅವಳಲಿ ಮಿಂದನು ||

-ಶ್ರೀ ಈರಪ್ಪ ಬಿಜಲಿ 

 

ಚಿತ್ರ್