ವರದಿ: ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ, ಕೃಷಿ ಬರವಣಿಗೆ - ಚರ್ಚೆ

ವರದಿ: ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ, ಕೃಷಿ ಬರವಣಿಗೆ - ಚರ್ಚೆ

ಬರಹ

ಹೊಸ ವಿಷಯಗಳನ್ನು ಅದರಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗಿನ ವಿಚಾರಗಳನ್ನು ಜನರಿಗೆ ತಲುಪಿಸಲು ನಮ್ಮಲ್ಲಿ ಅನೇಕ ಮಂದಿ ಪ್ರಯತ್ನಿಸುತ್ತಿದ್ದೇವೆ. ನಾನೇ ಬರೆದ ವಿಷಯಗಳನ್ನು ಮತ್ತೆ ಓದಿದಾಗ ಅದನ್ನು ಇನ್ನೂ ಸುಲಭವಾಗಿ ಬರೆಯಬಹುದಿತ್ತು,  ಅಥವಾ ಇದನ್ನು ಇನ್ನೂ ಸರಳವಾಗಿ ಬರೀಲಿಕ್ಕೆ ಪ್ರಯತ್ನಿಸಬಹುದಾ ಅಂತ ಅನ್ನಿಸ್ತಿರುತ್ತೆ. ಕೆಲವು ಸಲ ನಮ್ಮಲ್ಲಿ ಅನೇಕರು ಇದು ಕಷ್ಟ ಎಂದು ಬೇರೇನೋ ವಿಷಯದ ಬರವಣಿಗೆಯ ಕಡೆ ಹೆಚ್ಚಿನ ಗಮನ ಕೊಟ್ಟು ವೈಜ್ಞಾನಿಕ ಬರವಣಿಗೆಯಿಂದ ದೂರ ಉಳಿಯೋದು ಇದೆ.

ನೆನ್ನೆ ಭಾನುವಾರ ಸಂಪದ, ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ ಜೊತೆಗೂಡಿ ಆಯೋಜಿಸಿದ್ದ "ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ, ಕೃಷಿ ಬರವಣಿಗೆ" ಕುರಿತ ಚರ್ಚಾವೇದಿಕೆಯಲ್ಲಿ, ವರ್ಷಾನು ವರ್ಷಗಳಿಂದ ಪತ್ರಿಕೆಗಳು, ಪುಸ್ತಕಗಳು, ದೂರದರ್ಶನ ಇತ್ಯಾದಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರೋ ಅನೇಕರಿಂದ ಅನೇಕ ವಿಷಯ ಮತ್ತು ವಿಚಾರಗಳ ವಿನಿಮಯ ಮಾಡಿಕೊಂಡೆವು. ನಮ್ಮೆಲ್ಲರ ನೆಚ್ಚಿನ ವೈಜ್ಞಾನಿಕ ಬರಹಗಾರ ನಾಗೇಶ್ ಹೆಗ್ಡೆ, ಕನ್ನಡಪ್ರಭದ ರವಿ ಕೆ ಹೆಗ್ಡೆ, ಉದಯವಾಣಿಯ ಎನ್.ಎ.ಎಮ್ ಇಸ್ಮಾಯಿಲ್ (ಬರೆವ ಬದುಕಿನ ತಲ್ಲಣ) ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಲ್ಲದೆ, ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಿದರು. ಪತ್ರಕರ್ತ ಚಾಮರಾಜ ಸವಡಿ ಕೂಡ ಭಾಗವಹಿಸಿದ್ದರು. ಚರ್ಚೆಯ ಒಂದು ಕಿರು ನೋಟ ಇಲ್ಲಿದೆ.

ಮೊದಲಾರ್ಧದಲ್ಲಿ, ಇಸ್ಮಾಯಿಲರು ಮತ್ತು ಸಂಪದ ಟೆಕ್ ಟೀಮ್ ನ ಗೆಳೆಯರು ಪ್ರಾರಂಭಿಸಿದ ಚರ್ಚೆ, ತಂತ್ರಜ್ಞಾನದ ಬಳಕೆ ಮತ್ತು ಅದರ ಬರವಣಿಗೆಗೆ ಇರುವ ತೊಡಕುಗಳನ್ನ ಅರ್ಥ ಮಾಡಿಕೊಳ್ಳಲಿಕ್ಕೆ ಪ್ರಯತ್ನಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಬರೆಯುವಾಗ ಹೊಸ ಕನ್ನಡ ಪದಗಳನ್ನು ಹುಟ್ಟು ಹಾಕಬೇಕೇ? ಕೆಲವು ಆಂಗ್ಲ ಪದಗಳನ್ನು ಹಾಗೇ ಉಪಯೋಗಿಸಬೇಕೇ? ನಮ್ಮಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿರುವ ಅನೇಕ ಘಟಾನು ಘಟಿಗಳಿದ್ದರೂ ಅವರು ಏಕೆ ಅವರ ಅನುಭವಗಳನ್ನಾಗಲಿ, ಸಾಮಾನ್ಯ ಜ್ಞಾನವನ್ನಾಗಲಿ ಎಲ್ಲರೊಂದಿಗೆ ಹಂಚಿಕೊಳ್ಳುವುದಿಲ್ಲ, ಅದರಲ್ಲೂ ಕನ್ನಡದಲ್ಲಿ ಬರೆಯಲು ಅವರಿಗೇಕೆ ಹಿಂಜರಿಕೆ ಇತ್ಯಾದಿಗಳ ಸುತ್ತ ಮಾತುಕತೆ ಮುಂದುವರೆಯಿತು. 

 

img_3602

 

ಊಟದ ನಂತರ ನಮ್ಮನ್ನೆಲ್ಲ ಸೇರಿದ ನಾಗೇಶ್ ಹೆಗ್ಡೆ ಮತ್ತು ರವಿ ಹೆಗ್ಡೆಯವರು ನಮ್ಮೆಲ್ಲರ ಚರ್ಚೆಗೆ ಚುರುಕು ಮುಟ್ಟಿಸಿದರು. ನಮ್ಮ ಸುತ್ತಮುತ್ತಲಿರುವ ತಂತ್ರಜ್ಞಾನ, ಹೇಗೆ ಅದನ್ನು ಉತ್ತಮವಾಗಿ ಉಪಯೋಗಿಸಿ ಕೊಳ್ಳಬಹುದು, ಕನ್ನಡದಲ್ಲಿ ಏಕೆ ಕೃಷಿ, ವಿಜ್ಞಾನ ತಂತ್ರಜ್ಞಾನದ ಬಗ್ಗೆ ಬರೆಯಬೇಕು? ಹೀಗೆ ಅನೇಕ ಪ್ರಶ್ನೆಗಳು ಅವಕ್ಕೆ ಉತ್ತರಗಳೂ ಹರಿದಾಡಲಾರಂಭಿಸಿದವು. ಬ್ಲಾಗ್ ಮಾಡಿದರೆ ಸಾಕೆ? ನಾವು ಟೆಕ್ನಾಲಜಿಯನ್ನು ಉಪಯೋಗಿಸ ಬಲ್ಲವರಿಗೆ ತಲುಪಿಸಲಿಕ್ಕೆ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ, ಪಾರಂಪರಿಕ ಮಾಧ್ಯಮಗಳನ್ನು ನಾವು ಹೇಗೆ ಬಳಸಿಕೊಳ್ಳಬಹುದು, ದೂರದರ್ಶನ ಮತ್ತು ರೇಡಿಯೋ ಬಳಕೆ ಹೇಗೆ ಮತ್ತು ಏಕೆ ಸಹಕಾರಿ ಎನ್ನುವುದನ್ನು ರವಿ ಹೆಗ್ಡೆ ಮತ್ತು ನಾಗೇಶ್ ಹೆಗ್ಡೆ ಸುಂದರವಾಗಿ ವಿವರಿಸಿ ಹೇಳಿದರು. ಸರ್ಕಾರವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಬರವಣಿಗೆ ಕಡೆ ಗಮನವೀಯುವಂತೆ ಮಾಡೋದು ಮತ್ತು ಅವನ್ನು ಪ್ರಾಯೋಗಿಕವಾಗಿ ಅಳವಡಿಕೊಳ್ಳೋದರ ಬಗ್ಗೆ ಕೂಡ ನಾಗೇಶ್ ಹೆಗ್ಡೆ ಮಾತಾಡಿದರು.

 

img_3614

 

 ಲಭ್ಯವಿರುವ ತಂತ್ರಜ್ಞಾನದ ಚರ್ಚೆಯ ಜೊತೆಗೆ ಜನರಿಗೆ ಮಾಹಿತಿ ಹಕ್ಕು ಬಗೆಗಿನ ವಿಚಾರವನ್ನು ತಲುಪಿಸಲಿಕ್ಕೆ ಸಂಪದ ತಯಾರಗುತ್ತಿರುವುದರ ಬಗ್ಗೆ ಮತ್ತು RTIBangalore.info ಬಗ್ಗೆಯೂ ಇಲ್ಲಿ ವಿವರಿಸಲಾಯಿತು.

ಹೊಸ ವೈಜ್ಞಾನಿಕ, ತಂತ್ರಜ್ಞಾನ ಕುರಿತ ಬರಹಗಾರರಿಗೆ ಇಂತಹ ಚರ್ಚೆಗಳು ಅತಿ ಅವಶ್ಯ, ನಾವೆಲ್ಲ ಇಂತಹ ಚರ್ಚೆಗಳನ್ನು ನಗರಗಳಿಂದಾಚೆಗೂ ವಿಸ್ತರಿಸಿ ಇನ್ನೂ ಅನೇಕರನ್ನು ಬರವಣಿಗೆಗೆ ಇಳಿಸಬೇಕು ಎಂದು ನಾಗೇಶ್ ಹೆಗ್ಡೆ ಮತ್ತು ರವಿ ಹೆಗ್ಡೆ ಹೇಳಿದರು.

ಚರ್ಚೆಯ ಮಧ್ಯದಲ್ಲಿ ಕಂಡುಬಂದ ಮತ್ತು ಈ ಲೇಖನದಲ್ಲಿ ಸೆರೆ ಹಿಡಿಯಲಾಗದ ರಸ ನಿಮಿಷಗಳನ್ನು ಮತ್ತೊಂದು ಲೇಖನದಲ್ಲಿ ನೀವು ಕಾಣಬಹುದು.