ವರ್ಣಮಾಲಾಕ್ಷರ ಲಹರಿ: ಚಂಡಮಾರುತ ಪ್ರಕೋಪ

ವರ್ಣಮಾಲಾಕ್ಷರ ಲಹರಿ: ಚಂಡಮಾರುತ ಪ್ರಕೋಪ

ಸುಮಾರು 2013 ರ ಆರಂಭದಲ್ಲಿ ಒಂದು ದಿನ ಸಂಜೆ ಹೀಗೆ ಏನೊ ಓದುತ್ತಾ, ಬರೆಯುತ್ತಾ ಕುಳಿತಿದ್ದೆ - ಒಂದೆ ಸಮನೆ ಸುರಿಯುತ್ತಿದ್ದ ತಣ್ಣಗಿನ ಮಳೆಯ ಸದ್ದಿನ ಜತೆಗಿನ ನೀರವ ಮೌನದ ನಡುವೆ. ಆ ಮಳೆ ಎರಡು ದಿನದಿಂದ ಚಂಡಿ ಹಿಡಿದವರಂತೆ ಹೊಡೆಯುತ್ತಲೆ ಇತ್ತು - ಯಾವುದೊ ತೈಪೂನ್ / ಚಂಡಮಾರುತದ ಫಲಿತವಾಗಿದ್ದ ಕಾರಣ. ಆ ಗಳಿಗೆಯಲ್ಲಿ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಏನೊ ಕಾರಣಕ್ಕೆ ವೀಕ್ಷಿಸುತ್ತಿದ್ದೆ. ಅದೇನು ವಯಸಿನ ಫಲವೊ ಅಥವಾ ಮರೆಗುಳಿತನವೊ - ಆಗಾಗ ಕನ್ನಡ ಸ್ವರ ಮತ್ತು ವ್ಯಂಜನಾಕ್ಷರಗಳ ಅನುಕ್ರಮಣಿಕೆಯಲ್ಲಿ ಗೊಂದಲ ಮೂಡಿ ಸಂಶಯ ಹುಟ್ಟಿಬಿಡುವುದರಿಂದ, ಅನುಮಾನವಾದಾಗೆಲ್ಲ ಈ ಪುಟ ತೆರೆದು ನೋಡುವ ಅಭ್ಯಾಸ. ಆ ದಿನವೂ ಅದೇ ಕಾಯಕದಲ್ಲಿ ನಿರತನಾಗಿದ್ದೆ. ಆಗ ಇದ್ದಕ್ಕಿದ್ದಂತೆ ಅರೆ ತೆರೆದ ಕಿಟಕಿಯ ಸಂದಿನಿಂದ ಎರಚಲಾಗಿ ಹನಿಗಳ ಜೊಂಪೆಯೊಂದು ಆ ಹೊತ್ತಿನ ಗಾಳಿಯ ರಭಸಕ್ಕೊ ಏನೊ - ತೂರಿ ಒಳಬಂದು ಕೈಲಿ ಹಿಡಿದ ಪುಸ್ತಕವನ್ನೆಲ್ಲ ಒಂದೆ ಏಟಿಗೆ ಒದ್ದೆಯಾಗಿಸಿಬಿಟ್ಟಿತು. ಆಗ ತೆರೆದಿದ್ದ ಪುಟದಲ್ಲಿದ್ದ ವರ್ಣಮಾಲೆಯ ಅಕ್ಷರಗಳು ಒದ್ದೆಯಾಗಿ ಕಲಸಿಹೋಗಿ, ಹಾಳೆ ಪೂರ್ತಿ ಮುದುರಿ ನಶಿಸತೊಡಗಿದಾಗ ಕನಿಷ್ಠ ಮುಂದಿನ ಸಾರಿಯ ಬಳಕೆಗೆ ಇರಲಿ ಎಂದುಕೊಂಡು, ಆ ಅಕ್ಷರಗಳನ್ನೆಲ್ಲ ಅದೇ ಕ್ರಮದಲ್ಲಿ ನಕಲು ಮಾಡಿಡತೊಡಗಿದೆ (ಸಿಂಗಪುರದಲ್ಲಿ ಬೇಕೆಂದಾಗ ಕನ್ನಡ ಪುಸ್ತಕ ಸಿಗಬೇಕಲ್ಲ ? ಸದ್ಯಕ್ಕೆ ಒಂದು ತಾತ್ಕಾಲಿಕ ಪ್ರತಿಯಾದರು ಇರಲಿ ಅನ್ನುವ ಕಾರಣಕ್ಕೆ!). 

ಹೀಗೆ ಕಾಗದವೊಂದರ ಮೇಲೆ ಅಕ್ಷರ ಬರೆಯುತ್ತಿದ್ದ ಹಾಗೆ ಒಂದು ಆಲೋಚನೆ ಬಂತು.  ಬರಿ ಖಾಲಿ ಅಕ್ಷರ ಬರೆದುಕೊಳ್ಳುವ ಬದಲು ಅದನ್ನೆ ಕವನದ ರೂಪದಲ್ಲಿ ಬರೆಯಲು ಯಾಕೆ ಯತ್ನಿಸಬಾರದು ? ಎಂದು. ಸರಿ, ಯಾವ ವಿಷಯದ ಮೇಲೆ ಬರೆಯುವುದು ? ಅರೆ! ಈ ಬಗೆಯ ವಿನಾಶಕಾರಣನಾದ ಈ ಮಳೆಗಾಳಿ ಸಹಿತದ ಚಂಡಮಾರುತದ ಕುರಿತೆ ಯಾಕೆ ಸಾಲು ಪೋಣಿಸಬಾರದು? ಹೀಗೆ ಆರಂಭವಾದ ಲಹರಿಯ ಸಾಲುಗಳು ಮೂಡುತ್ತ ಹೋದಂತೆ ಸುಮಾರಾಗಿ ಪದ್ಯದ ರೂಪ ಪಡೆದುಕೊಂಡವಾದರು ಅದರಲ್ಲಿ ವರ್ಣಮಾಲೆಗನುಸಾರ ರಚಿಸಿದ್ದೆನ್ನುವ ಕಾರಣ ಬಿಟ್ಟರೆ ಮತ್ತೇನು ವಿಶೇಷತೆ ತೋರಲಿಲ್ಲ. ಅಲ್ಲದೆ ಕೆಲವು ಅಕ್ಷರಗಳಲ್ಲಿ ತಿಣುಕಾಡಬೇಕಾಗಿ ಬಂದದ್ದರಿಂದ ಅವು ತುಸು ಸಡಿಲ ರೂಪ ತಾಳಿದವೇನೊ ಅನ್ನುವ ಅನಿಸಿಕೆಯೂ ಮೂಡಿತ್ತು. ಕೆಲವು ಅಪರೂಪದ ಬಳಕೆಯ ಪದಗಳನ್ನು ನಿಘಂಟಿನಲ್ಲಿ ಪರಿಶೀಲಿಸಿ ಹಾಕಿದಂತೆ ನೆನಪಿದ್ದರು, ಆ ಪದಗಳ ಅರ್ಥ ಈಗ ಮನದಲ್ಲಿ ನೆನಪಾಗಿ ಶಾಶ್ವತವಾಗಿ ಉಳಿದಂತೆ ಕಾಣುತ್ತಿಲ್ಲ. ಅದೆಂತೆ ಇದ್ದರು ವರ್ಣಮಾಲೆಯನ್ನು ಸಾಲಾಗಿ ಪೋಣಿಸಿದ ಸಮಾಧಾನದೊಂದಿಗೆ ಎತ್ತಿಟ್ಟು ಮೇಲೆದ್ದಿದ್ದೆ. 

ಇಂದು ಯಾವುದೊ ಕಾರಣಕ್ಕೆ ಅದನ್ನ ಮತ್ತೆ ನೋಡುವ 'ಅಕಸ್ಮಾತ್' ಅವಕಾಶವಾದಾಗ - ಸಂಪದದಲ್ಲಿ ಹಾಕಲೆ ಎನ್ನುವ ಅನಿಸಿಕೆ ಬಂತು. 'ಎಳ್ಳೊ ಜೊಳ್ಳೊ - ಕನ್ನಡ ವರ್ಣಾಕ್ಷರಗಳ ಸಾಲಂಕೃತ ವಧು ತಾನೆ?' ಅಂದುಕೊಂಡು ಪ್ರಕಟಿಸಲು ಹೊರಟೆಬಿಟ್ಟೆ - ಅದೀಗ ನಿಮ್ಮ ಮುಂದೆ :-)

ವರ್ಣಮಾಲಾಕ್ಷರ ಲಹರಿ:

ಚಂಡಮಾರುತ ಪ್ರಕೋಪ 
___________________________

ಅ - ಅಕ್ಷರದ ಲಕ್ಷ್ಯ ಕರೆದಾಕ್ಷಿ ಸೆರೆ 
ಆ - ಆವರಿಸಿದ ಮಬ್ಬು ಕಣ್ತೆರೆಸಿರೆ 
ಇ - ಇಬ್ಬನಿ ಕವಿದ ಮೋರೆ ಸವರಿ 
ಈ - ಈಜಿ ಮಳೆ ನೀರಿನ ತುಂತುರಿ
ಉ - ಉಬ್ಬರವಿಳಿತದ ಕಡಲ ಕೆರಳಿಸಿ 
ಊ - ಊರಿನಗಲದುದ್ದಕ್ಕು ಕಂಗೆಡಿಸಿ 
ಎ - ಎದುರಿಗೆ ಸಿಕ್ಕ ಮರಗಿಡ ತರಗಲೆ 
ಏ - ಏರಿಳಿತದಲೇ ತೂಗಾಡಿಸಿ ಅಲೆ 
ಐ - ಐರಾವತವೇರಿ ಬಂದ ದೇವೇಂದ್ರ 
ಒ - ಒಕ್ಕಲಿಹ ದನ ಕರು ತರು ನಿಕರ 
ಓ - ಓಡಾಡುವಂತೆ ಜನ ಮನ ಗಣ 
ಔ - ಔನ್ನತ್ಯದಿಂದಿಳಿದು ಅದುರಿಸಿದಂತೆ 
ಅಂ - ಅಂಗಣದಲಿ ಕೊಚ್ಚೆ ರೊಚ್ಚೆ ರಾಡಿಸಿ 
ಅಃ - ಅಃಹ್ರಸ್ವ ಸ್ವರದಲಿ ನಿಸರ್ಗ ವಿಕೋಪ!
ಕ - ಕನ್ನಡಿಸಿ ಮನ ಕಂಗಾಲಾದರೂ ದಿನ 
ಖ - ಖಡಾಖಂಡಿತ ನಿರ್ಲಕ್ಷಿಸದ ಗಾನ 
ಗ - ಗಗನದತ್ತ ನಿಟ್ಟುಸಿರಲಿ ನಿಟ್ಟಿಸಿ ಮನ
ಘ - ಘನತೆಯಿಂದ ಘೋರ ದಣಿಸಿದ ಮೋಡ 
ಙ - ಙವನ ದನಿ ಕರಣವನು ಅಡಗಿಸಿ ಗಾಢ 
ಚ - ಚಳಿಗಾಳಿ ಸಂಚರಿಸಿ ಸಿಡಿಸಿ ಚಳುಕು 
ಛ - ಛತ್ರಿಯಿರದ ಮಳೆ ಪಯಣಿಗನಂತೆ
ಜ - ಜಡಿ ಚಂಡಿ ಮಳೆಗೂ ಜಗ್ಗದೆ ಕುಗ್ಗದೆ 
ಝ - ಝರಿ ತೊರೆ ಹಾತೊರೆದು ಭೋರ್ಗರೆದು 
ಞ - ಞಕಾರ ಕಾರ್ಯ ಕಾರಣಗಳ ಸಿಗಿದು 
ಟ - ಟಗರು ಕೊಂಬಿನ ಹಾಗೆ ಗುದ್ದೆ ಸನ್ನದ್ದು
ಠ - ಠಕ್ಕತನದಲಿ ಹೀರುವ ಭುವಿ ಸದ್ದು 
ಡ - ಡಮರುವಿನಂತೆ ಸಿಡಿಲು ಗುಡುಗಿನ ಗುದ್ದು 
ಢ - ಢಕ್ಕೆಯಾಗಿ ಕಿವಿಯಲಿ ಸಿಡಿಮದ್ದು 
ಣ - ಣಮೋಕಾರದಲಿ ಕುಸಿದು ಬೇಡಲು ಬಿಡದೆ 
ತ - ತಪನೆಯಲಿ ನಿರತವಾಗಿರಲು ಕೊಡದೆ 
ಥ - ಥಳಿಸಿ ಕುಪ್ಪಳಿಸಿ ಪತನಕಿಳಿಸಿ
ದ - ದಯೆ ದಾಕ್ಷಿಣ್ಯ ಕರುಣೆಗಳ ಸರಿಸಿ 
ಧ - ಧನಾಮಿಷ ಧರ್ಮಾಮಿಷಗಳಿಗು ಒಲಿಯದೆ 
ನ - ನಮನ ಕಾಮನ ಕವನಗಳಿಗೂ ಸಿಗದೆ
ಪ - ಪತರುಗುಟ್ಟಿಸಿ ಅಟ್ಟಾಡಿಸಿ ಆಳೆತ್ತರ ನೆಗೆದು 
ಫ - ಫಲಾಹಾರ ತಾಂಬೂಲಾಹಾರ ಸೆಳೆ ತೆಗೆದು 
ಬ - ಬರಬಾರದ ತರಬಾರದ ಹೊಲಸನೆಲ್ಲ ತಿರಿದು 
ಭ - ಭಗಿನಿ ಅಭಾಗಿನಿ ಭಗವಂತರ ತಾರತಮ್ಯವೆಣಿಸದೆ
ಮ - ಮಳೆಗೆ ಮಳೆಯಾಗಿ ಇಳೆಗೆ ತೊಳೆಯಾಗಿ ಇಳಿದು 
ಯ - ಯಮನರಮನೆಯ ಕಾವಲ ಕೂಸಿನ ತೆರದಿ 
ರ - ರಕ್ಕಸಾಕಾರದಲಿ ಬಿಕ್ಕಿ ಬಿಕ್ಕಿ ಹೆಕ್ಕುತ ಭರದಿ 
ಲ - ಲತೆ ಲಲಿತೆ ಲತಾಂಗಿನಿ ಅಳಿಸಿ ಗುನುಗುನುಗಿಸುತೆ 
ವ - ವಸತಿ ವರೆಸಿ ಧರೆಗಿಳಿಸಿ ಧಿಕ್ಕರಿಸಿ 
ಶ - ಶಯನಕಿಳಿಸಿ ಶಾಶ್ವತ ನಿದಿರೆಯೆಡೆ ಗಮಿಸಿ 
ಷ - ಷಟ್ಕರ್ಮ ನಿರತ ಬ್ರಾಹ್ಮಣರ ಭಂಗಿಸಿ 
ಸ - ಸರಸದಲಿ ನಿರತ ರತಿ ಸಖರ ಅಪ್ಪಿ ಆಲಂಗಿಸಿ 
ಹ - ಹರುಷ ಸಂಭ್ರಮ ಸಡಗರದ ಸಮಾರಂಭ ಒತ್ತರಿಸಿ 
ಳ - ಳಕಾರ ಳಾಂತ ಶಬ್ದಗಳ ಸಮೇತ ನುಂಗಿ ನೀರ್ಕುಡಿದು 
ಕ್ಷ - ಕ್ಷತ್ರೀಯ ಕ್ಷಾತ್ರ ತೇಜಾವಶೇಷ ಕುಡಿದ ಚಂಡಮಾರುತ ಪ್ರಕೋಪ!

-----------------------------------------------------------------------
ನಾಗೇಶ ಮೈಸೂರು
-----------------------------------------------------------------------
 

Comments

Submitted by nageshamysore Sun, 07/26/2015 - 20:09

In reply to by lpitnal

ಇಟ್ನಾಳರೆ ನಮಸ್ಕಾರ ಮತ್ತು ತಮ್ಮ ಎಂದಿನ ಪ್ರೀತಿಯ ಅಭಿಮಾನಪೂರ್ವಕ ಪ್ರತಿಕ್ರಿಯೆಗೆ ಹೃತ್ಪೂರ್ವಕ ನಮನಗಳು. ಕನ್ನಡದ ಅಕ್ಷರಗಳ ಮಮತೆ, ಅಭಿಮಾನ ನನ್ನೆಲ್ಲ ಬರಹಗಳಿಗು ಪ್ರೇರಣೆ ಹಾಗೂ ಶ್ರೀ ರಕ್ಷೆ ಎನ್ನುವುದರಲ್ಲಿ ಎರಡು ಮಾತಿಲ್ಲವೆನ್ನುವುದು ನಿಜವೆ.
ಅಂದಹಾಗೆ ನೀವು ಉದ್ದರಿಸಿದ 'ಳಕಾರಾಂತ' ಸಾಲುಗಳದು ಒಂದು ಹಿನ್ನಲೆಯಿದೆ. ಬರೆಯುವಾಗ 'ಳ'ಕಾರದಿಂದ ಆರಂಭವಾಗುವ ಯಾವುದೆ ಸರಿಯಾದ ಶಬ್ದ ಹೊಳೆಯಲಿಲ್ಲ. ಯಾವುದಾದರು ಳಕಾರವನ್ನೊಳಗೊಂಡ ಪದ ಹಾಕುವುದೊ ಅಥವಾ 'ಳ'ಕಾರದಿಂದ ಆರಂಭವಾಗುವ ಸೂಕ್ತ ಪದಕ್ಕೆ ತಡಕುವುದೊ ಎನ್ನುವ ಜಿಜ್ಞಾಸೆಯಲ್ಲಿದ್ದಾಗ ತಟ್ಟನೆ ಆ ಒದ್ದೆಯಾದ ಕಾಗದವೆ ಉತ್ತರ ಕೊಟ್ಟುಬಿಟ್ಟಿತು - ಆ ಮಳೆ ನೀರು ಸರಿಯಾಗಿ 'ಳ' ಅಕ್ಷರದ ಸುತ್ತಮುತ್ತ ಸ್ವಲ್ಪ ಹೆಚ್ಚಾಗಿಯೆ ಬಿದ್ದು ಅದರ ಜತೆಗಿನ ಕೆಲವು ಅಕ್ಷರಗಳ ಸಮೇತ ನುಂಗಿ ಹಾಕಿ ಕಾಗದವನ್ನೆ ತೂತು ಮಾಡಿಬಿಟ್ಟಿತ್ತು. ಅದನ್ನೆ ಬಳಸಿ 'ಳಕಾರಾಂತ ಳಾಂತ' ಶಬ್ದಗಳ ಸಮೇತ ನುಂಗಿ ನೀರ್ಕುಡಿದು' ಎಂದಾಗಿಸಿಬಿಟ್ಟೆ.

Submitted by H A Patil Sun, 07/26/2015 - 18:31

ನಾಗೇಶ ಮೈಸೂರುರವರಿಗೆರ ವಂದನೆಗಳು
ವರ್ಣಮಾಲಾಕ್ಷರ ಲಹರಿ ಸೊಗಸಾಗಿ ಮೂಡಿ ಬಂದಿದೆ ನಿಮ್ಮ ಕವನ ಕಟ್ಟುವ ಶೈಲಿ ಅದ್ಬುತ ಸೊಗಸಾದ ಕವನ ನೀಡಿದ್ದೀರಿ ದನ್ಯವಾದಗಳು.

Submitted by nageshamysore Sun, 07/26/2015 - 20:15

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ತಮ್ಮ ನಲ್ಮೆಯ ಪ್ರತಿಕ್ರಿಯೆಗೆ ಹೃದಯ ತುಂಬಿದ ನಮನಗಳು. ನಿಮ್ಮಂತಹ ಹಿರಿಯರು ತೋರಿದ ಹಾದಿಯಲ್ಲಿ ಅಷ್ಟಿಷ್ಟು ಅನುಕರಿಸಿಯೊ, ಅನುಸರಿಸಿಯೊ ಗೀಚಿದ ಸಾಲುಗಳಿಗು ಪ್ರೋತ್ಸಾಹಿಸಿ ಉತ್ತೇಜನ ನೀಡುವ ನಿಮ್ಮಾಭಿಮಾನ ಮತ್ತು ಹೃದಯ ವೈಶಾಲ್ಯತೆಗೆ ನನ್ನ ಅಭಿನಂದನೆಗಳು ಸಹ...! ಎಲ್ಲಕ್ಕಿಂತ ಹೆಚ್ಚಾಗಿ ಈ ರೀತಿಯಲ್ಲಾದರು ಮತ್ತೊಮ್ಮೆ ವರ್ಣಮಾಲೆಯ ಸುತ್ತ ಎಡತಾಕುವಂತಾದ ಖುಷಿ ನನಗೆ...:-)

Submitted by nageshamysore Tue, 07/28/2015 - 18:34

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಾನು ಪೋಣಿಸಿದ ಈ ಹಾರ 'ಆ ಭಗವಂತನಿಗೆ ಪ್ರೀತಿ' ಎನ್ನುತ್ತಿದ್ದೀರ ಹೇಗೆ ? (ಸುಮ್ಮನೆ ತಮಾಷೆಗೆ ಹೇಳುತ್ತಿದ್ದೇನೆ) :-)

ಈಗ ಡಿಜಿಟಲ್ ರೂಪದಲ್ಲಿ ಪ್ರಕಟಿಸಿಬಿಟ್ಟಿರುವುದರಿಂದ ಬರಹವಂತು ಭೌತಿಕವಾಗಿ 'ಅಕ್ಷರ' ಪಟ್ಟ ಏರಿಕೊಂಡಂತಾಗಿದೆ. ಆದರೆ ಮೌಲಿಕವಾಗಿ ಅದು ಕ್ಷರವೊ, ಅಕ್ಷರವೊ ಎನ್ನುವುದನ್ನು ಆ ಭಗವಂತನೆ ನಿರ್ಧರಿಸಬೇಕೇನೊ ! :-):-)

Submitted by nageshamysore Sat, 08/01/2015 - 12:04

ಕಣ್ತಪ್ಪಿನಿಂದ ಋ ಮತ್ತು ೠ ಸಾಲುಗಳು ಬಿಟ್ಟು ಹೋಗಿದ್ದವು. ಅವನ್ನು ಈ ಕೆಳಗೆ ಸೇರಿಸಿದ್ದೇನೆ.

ಋ - ಋತುಮಾನ ಲಯ ದಿಕ್ಕೆಡಿಸಿ
ೠ - 'ೠ'ಕಾರದಪರೂಪಮೆ ಸಮೀಕರಿಸಿ