ವಾಣಿ ಜಯರಾಂ ಅವರ ಹಿನ್ನೆಲೆ ಗಾಯನದಲ್ಲಿ...
ಸವಿ ನೆನಪುಗಳು ಬೇಕು ಸವಿಯಲೀ ಬದುಕು. ವಾಣಿ ಜಯರಾಂ ಅವರ ಹಿನ್ನೆಲೆ ಗಾಯನದಲ್ಲಿ… ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ… ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ - ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ? ಅಥವಾ ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ? ಅಥವಾ ಸಾಹಿತ್ಯ ಧ್ವನಿ ವಾದ್ಯಗಳ ಮಿಲನದ ಪ್ರಕ್ರಿಯೆಯೇ ಸಂಗೀತವೇ? ಅಥವಾ ಧ್ವನಿಯ ಸ್ವರ ಲಯ ತಾಳಗಳ ರೂಪವೇ ಸಂಗೀತ ಸೃಷ್ಟಿಸುತ್ತದೆಯೇ?
ಅದರ ನಿಜವಾದ ಅರ್ಥ ಏನೇ ಇರಲಿ ಮನುಷ್ಯ ಜೀವಿಯ ಬದುಕಿನಲ್ಲಿ ಅತಿಹೆಚ್ಚು ಆಕರ್ಷಕ ಧ್ವನಿ ಎಂದರೆ ಅದು ಸಾಮಾನ್ಯವಾಗಿ ಹಾಡುಗಳು ಎಂದು ಕರೆಯಲ್ಪಡುವ ಧ್ವನಿ ತರಂಗಗಳು. ಬಹುಶಃ ಹುಟ್ಟಿದ ಮಗುವಿನಿಂದ ವೃದ್ದರವರೆಗೆ ಒಂದಲ್ಲ ಒಂದು ರೀತಿಯ ಹಾಡುಗಳ ಮೋಹ ಅವರ ಮನಸ್ಸುಗಳ ಮೇಲೆ ಪ್ರಭಾವ ಬೀರುವುದನ್ನು ಕಾಣಬಹುದು. ಕೇವಲ ಭಾರತ ದೇಶ ಮಾತ್ರವಲ್ಲ ಇಡೀ ಸೃಷ್ಟಿಯ ಮನುಷ್ಯ ಪ್ರಾಣಿಯ ಎಲ್ಲರಿಗೂ ಇದು ಅನ್ವಯಿಸುತ್ತದೆ. ಭಾಷೆಗಳನ್ನು ಮೀರಿ ಅನೇಕ ವೈವಿಧ್ಯಮಯ ಪ್ರಕಾರಗಳಲ್ಲಿ ಇದು ಅಸ್ತಿತ್ವದಲ್ಲಿದೆ.
ಜನಪದವೇ ಇರಲಿ, ಪಾಶ್ಚಿಮಾತ್ಯವೇ ಇರಲಿ, ಮಧ್ಯಪ್ರಾಚ್ಯದ ಅಥವಾ ಆಫ್ರಿಕಾದ ಸಂಗೀತವೇ ಇರಲಿ ಒಟ್ಟಿನಲ್ಲಿ ಹಾಡುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ಎಲ್ಲಾ ಕಾಲಮಾನಗಳನ್ನು ಮೀರಿ ಬೆಳೆದಿದೆ. ಆಧುನಿಕತೆ ಮತ್ತು ತಂತ್ರಜ್ಞಾನ ಬೆಳೆದಂತೆ ಮುಖ್ಯವಾಗಿ ಸಿನಿಮಾ ರಂಗದ ಅಭಿವೃದ್ಧಿಯೊಂದಿಗೆ ಈ ಕ್ಷಣದಲ್ಲಿ ಹಾಡುಗಳು ಉತ್ತುಂಗಕ್ಕೇರಿದೆ. ಸಂಕೀರ್ಣ ಬದುಕಿನ ಜಂಜಡಗಳಿಂದ ನರಳುತ್ತಿರುವ ಮನುಷ್ಯ ಮನರಂಜನೆ ಅಥವಾ ಮನಸ್ಸುಗಳ ಪುನಶ್ಚೇತನಕ್ಕಾಗಿ ಸಂಗೀತದ ಮೊರೆ ಹೋಗುವುದು ಸಾಮಾನ್ಯವಾಗಿ ನಾವು ಗಮನಿಸಿದ್ದೇವೆ ಮತ್ತು ಅನುಭವಿಸಿದ್ದೇವೆ.
ಸಪ್ತ ಸ್ವರಗಳ ಸಹಾಯದಿಂದ ನವರಸಗಳನ್ನು ಹೊಮ್ಮಿಸುವ ಸಂಗೀತ ನಮ್ಮ ಭಾವನೆಗಳೊಂದಿಗೆ ಅಲೆಅಲೆಯಾಗಿ ತೇಲುತ್ತಾ ಸಾಗುವ ಪರಿ ಅನನ್ಯ. ಎಷ್ಟೋ ಪ್ರೇಮಿಗಳಿಗೆ, ಎಷೋ ವಿರಹಿಗಳಿಗೆ, ಎಷ್ಟೋ ನೋವುಂಡವರಿಗೆ, ಎಷ್ಟೋ ಕನಸುಗಾರರಿಗೆ, ಎಷ್ಟೋ ನಿರಾಶಾವಾದಿಗಳಿಗೆ, ಎಷ್ಟೋ ಹೃದಯಹೀನರಿಗೆ ತಮ್ಮ ಒಂದು ಹಾಡಿನ ಮೂಲಕ ಆ ಕ್ಷಣ ಒಂದು ಪ್ರತಿಕ್ರಿಯೆಯಾದ ವಾಣಿ ಜಯರಾಂ ಅವರ ಧ್ವನಿ ಹಾಡುವುದನ್ನು ನಿಲ್ಲಿಸಿದೆ. ಭಾವನೆಗಳು ಅಕ್ಷರ ರೂಪದ ಸಾಹಿತ್ಯವಾಗಿ ಮೂಡಿದ ಮೇಲೆ ಆ ಅಕ್ಷರಗಳು ಮತ್ತೆ ಭಾವನೆಗಳಾಗಿ ಹಾಡಿನ ಮೂಲಕ ಪರಿವರ್ತನೆ ಹೊಂದಿ ಕೆಲವೊಮ್ಮೆ ಮತ್ತೆ ಅಕ್ಷರಗಳಾಗಿ ಮತ್ತೆ ಭಾವನೆಗಳಾಗುವ ಸರಪಳಿಯ ಕೊಂಡಿಯೊಂದು ಕಳಚಿದೆ.
ಕೆಲವು ಅಪರೂಪದ ಸ್ವಾಭಾವಿಕ ಪ್ರತಿಭೆಗಳು ಎಲ್ಲಾ ಕ್ಷೇತ್ರಗಳಲ್ಲೂ ಉದಯಿಸಿವೆ. ಹೆಚ್ಚು ಶ್ರಮವಿಲ್ಲದೆ, ( ಅವರ ಪ್ರತಿಭೆಯ ಕಾರಣದಿಂದಾಗಿ ) ಆದರೆ ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವದಿಂದ ತುಂಬಾ ಸರಳವಾಗಿ ಆ ಪ್ರತಿಭೆಯನ್ನು ದುಡಿಸಿಕೊಂಡಿದ್ದಾರೆ. ಸುಖದ ಅನುಭವ ನಮಗೆ ಆಗಬೇಕಾದರೆ ಕಷ್ಟದ ಅರಿವು ಸಹ ಇರಲೇಬೇಕು ಎಂಬ ಸಮಧಾನದೊಂದಿಗೆ… ಬದುಕಿನ ಪಯಣದಲ್ಲಿ ಅನೇಕರಿಗೆ ಲಲಿತ ಕಲೆಗಳು ಸ್ಪೂರ್ತಿ ಪ್ರೇರಣೆ ಪ್ರಭಾವವನ್ನು ಹೊಂದುವ ಬಗೆಯನ್ನು ನೆನೆಯುತ್ತಾ...
ಹಾಗೆಯೇ ಸಿನಿಮಾ ನಿರ್ದೇಶನ ವಿಭಾಗದಲ್ಲಿ ನಿಜವಾದ ಮೌಲ್ಯಗಳ ಪಳೆಯುಳಿಕೆಯಂತಿದ್ದ ತೆಲುಗು ಸಿನಿಮಾ ನಿರ್ದೇಶಕ ಕೆ. ವಿಶ್ವನಾಥ್ ಸಹ ಕೆಲವೇ ದಿನಗಳ ಹಿಂದೆ ಮರೆಯಾದರು. ಕಥೆಗಳ ಆಯ್ಕೆ ಮತ್ತು ನಿರೂಪಣೆಯಲ್ಲಿ ಆ ವಿಷಯದ ಆಳವನ್ನು ವೀಕ್ಷಕರಿಗೆ ಒಂದು ಸುಂದರ ಕೃತಿಯಂತೆ ಮನವರಿಕೆ ಮಾಡಿಕೊಡುವಲ್ಲಿ ಅತ್ಯಂತ ಕ್ರಿಯಾತ್ಮಕ ಮತ್ತು ಶ್ರದ್ಧಾವಂತ ನಿರ್ದೇಶಕರಾಗಿದ್ದರು ಕೆ. ವಿಶ್ವನಾಥ್. ಅವರನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸುತ್ತಾ… ನಮ್ಮೆಲ್ಲರ ಬದುಕಿನ, ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ..
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ