ವಾರ್ಷಿಕೋತ್ಸವ!

ವಾರ್ಷಿಕೋತ್ಸವ!

ಬರಹ

ಸಖೀ,
ಅಂದು ವರುಷಗಳ ಹಿಂದೆ, ಇಂದಿನ ದಿನ,
ಅಳುಕು, ಅನುಮಾನ, ಅಂಜಿಕೆ, ನಾಚಿಕೆಗಳಿಂದ
ತಲೆ ತಗ್ಗಿಸಿಕೊಂಡು, ನನ್ನ ಹಸ್ತದಲಿ,
ತನ್ನ ಬೆವರುತ್ತಿದ್ದ ಹಸ್ತವನ್ನಿಟ್ಟು,
ನನ್ನ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು,
ನಡೆದ್ದಿದ್ದ ನನ್ನಾಕೆಯೊಂದಿಗೆ ಸಪ್ತಪದಿ
ತುಳಿದುದರ, ಆ ಮದುರ ಕ್ಷಣಗಳ ನೆನಪು,
ಈ ಶುಭದಿನದಂದು ಮರುಕಳಿಸುವಾಗ;
ನಡುವಿನೀ ದಿನಗಳಲಿ ಕಂಡು ಬಂದ
ಸರಸ - ವಿರಸಗಳ ಮರುಳಾಟ,
ಸಿಹಿ - ಕಹಿ ಅನುಭವಗಳ ತಿಕ್ಕಾಟ,
ಸಿಡುಕು - ಬಿಗುಮಾನಗಳ,
ದುಡುಕು - ದುಮ್ಮಾನಗಳ
ಕಾರ್ಮೋಡಗಳು, ಬಾಳ ಆಗಸದಲಿ,
ಕವಿದು ಆಡಿದ ಕಣ್ಣು - ಮುಚ್ಚಾಲೆಯಾಟ,
ಆಗಾಗ ಬಂದು ಮರೆಯಾದ ಅನುಮಾನ,
ನಿಸ್ಸಹಾಯಕತೆಗಳು ತಂದ ಸಂಕಟ,
ಇವೆಲ್ಲ ಎಷ್ಟೊಂದು ಗೌಣ?!
ಇಂದು ಮಿಂದು, ಮಡಿಯುಟ್ಟು,
ಕಂಪ ಸೂಸುವ ಮೈಸೂರು ಮಲ್ಲಿಗೆಯ
ಮುಡಿಗೇರಿಸಿಕೊಂಡು, ನನ್ನ ಬಳಿಸಾರಿ,
ನಮಿಸಿ, ನಂತರ ಬಿಸಿಯಪ್ಪುಗೆಯಲಿ,
ನನ್ನಾಕೆ ನೀಡಿದ ಸಿಹಿಮುತ್ತಿನಿಂದ,
ನನ್ನನ್ನು ನಾನೇ ಮರೆತಾಗ,
ನಾನಂದುಕೊಂಡೆ ಸಖೀ,
ಈ ನಾಡಲ್ಲೆಲ್ಲಾ ನಾನೇ ಜಾಣ,
ಅಲ್ಲವೇ, ಈ ಜಗವೊಂದು
ಒಲವಿನ ಸುಂದರ ತಾಣ?
*-*-*-*-*-*-**-*-*-*