ವಾಸ್ತವ !

ವಾಸ್ತವ !

ಒಮ್ಮೆದಂಪತಿಗಳು ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹಡಗು ಮುಳುಗುತ್ತಿದೆ. ಎಲ್ಲರೂ ಲೈಫ್ ಬೋಟ್‌ಗೆ ಹೋಗುತ್ತಿದ್ದಾರೆ, ಲೈಫ್‌ಬೋಟ್‌ನಲ್ಲಿ ಒಬ್ಬರಿಗೇ ಮಾತ್ರ ಜಾಗ ಇದೆ, ಹಡಗಿನಲ್ಲಿ ದಂಪತಿಗಳು ಮಾತ್ರ ಉಳಿದಿದ್ದಾರೆ, ಗಂಡ ಮತ್ತು ಹೆಂಡತಿ ಇಬ್ಬರಲ್ಲಿ ಯಾರಾದರೂ ಒಬ್ಬರು ಮಾತ್ರ ಲೈಫ್‌ಬೋಟ್‌ಗೆ ಹೋಗಬಹುದು. ಇಬ್ಬರೂ ಯೋಚಿಸುತ್ತಿದ್ದಾರೆ. ಗಂಡ ತನ್ನ ಹೆಂಡತಿಯನ್ನು ಮುಳುಗುವ ಹಡಗಿನಲ್ಲಿ ಬಿಟ್ಟು ಲೈಫ್ ಬೋಟ್‌ಗೆ ಹಾರಿದನು. ಹೆಂಡತಿ ಹಿಂದಿನಿಂದ ಕೂಗುತ್ತಾ ಏನೋ ಹೇಳುತ್ತಿದ್ದಾಳೆ.  

ತರಗತಿಯಲ್ಲಿದ್ದ ವಿಧ್ಯಾರ್ಥಿಗಳಿಗೆ ಈ ಕಥೆ ಹೇಳುತ್ತಿದ್ದ ಟೀಚರ್ ಇಲ್ಲಿಗೆ ಕಥೆ ಹೇಳುವುದನ್ನು ನಿಲ್ಲಿಸಿದರು ಮತ್ತು ಆ ಹಡಗಿನಲ್ಲಿ ಉಳಿದ ಪತ್ನಿ ತನ್ನ ಪತಿಯೊಂದಿಗೆ ಕೂಗಿ ಕೂಗಿ ಏನು  ಹೇಳುತ್ತಿರಬಹುದು? ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಆಗ ಒಬ್ಬ ವಿದ್ಯಾರ್ಥಿ ಹೇಳಿದನು, "ನೀನು ಎಂತಹ ಮೂರ್ಖ, ನಾನು ನಿನ್ನನ್ನು ಕುರುಡಾಗಿ ನಂಬಿದ್ದೆನು ನನ್ನನ್ನು ಒಂಟಿಯಾಗಿ ಬಿಟ್ಟು ನೀನು ಹೋಗುತ್ತಿರುವೆಯಲ್ಲಾ" 

ಒಬ್ಬ ವಿದ್ಯಾರ್ಥಿ ಮೌನವಾಗಿ ಕುಳಿತಿದ್ದ, ಟೀಚರ್ ಅವನಿಗೆ ನೀನು ಏನು ಹೇಳುತ್ತೀಯ? ಎಂದು ಕೇಳಿದರು. ಅವನು "ನಮ್ಮ ಮಗುವಿಗೆ ಯಾವುದೇ ತೊಂದರೆ ಬರದ ಹಾಗೆ ಚೆನ್ನಾಗಿ ನೋಡಿಕೊಳ್ಳಿ" ಎಂದಿರಬಹುದು.  ಟೀಚರ್ ಗೆ ಆಶ್ಚರ್ಯ, ಈ ಕಥೆ ನಿನಗೆ ಮೊದಲೇ ಗೊತ್ತಿತ್ತಾ ಎಂದು ಕೇಳಿದರು. ಆಗ ಅವನು ತಲೆ ಅಲ್ಲಾಡಿಸಿದ, ಇಲ್ಲ, ಈ ಕಥೆ ನನಗೆ ಗೊತ್ತಿಲ್ಲ, ನನ್ನ ತಾಯಿ ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದಾಗ ನನ್ನ ತಂದೆಗೆ ಹೇಳುತ್ತಿದ್ದರು, ನಮ್ಮ ಮಗುವನ್ನು ಹುಷಾರಾಗಿ ನೋಡಿಕೊಳ್ಳಿ... ಈ ವೇಳೆ ಶಿಕ್ಷಕರ ಕಣ್ಣಲ್ಲಿ ನೀರು ತುಂಬಿತ್ತು. ಈ ಕಥೆಯಲ್ಲಿ ಹೆಂಡತಿಯೂ ಅದನ್ನೇ ಹೇಳುತ್ತಾಳೆ.

ಈಗ ಮತ್ತೆ ಈ ಕಥೆಗೆ ಬಂದರೆ ಗಂಡ ಮನೆ ತಲುಪಿ ಮಗಳನ್ನು ಅತಿ ಆಸ್ಥೆಯಿಂದ ಕಾಪಾಡುತ್ತಾನೆ, ಚೆನ್ನಾಗಿ ಓದಿಸಿ, ಮದುವೆ ಮಾಡಿ ಮಗಳಿಗೆ ಒಳ್ಳೆಯ ಜೀವನ ಕೊಟ್ಟು ಒಂದು ದಿನ ಕಣ್ಣು ಮುಚ್ಚುತ್ತಾನೆ. ಒಂದು ದಿನ ಅವಳು ತನ್ನ ತಂದೆಯ ಸಾಮಾನುಗಳನ್ನು ಕೂಡಿಹಾಕಿ ಅಟ್ಟಕ್ಕೆ ಹಾಕಬೇಕು ಎಂದು ತಂದೆಯ ವಸ್ತುಗಳನ್ನು ಪ್ಯಾಕ್ ಮಾಡುತ್ತಿದ್ದಾಳೆ.  ಆಗ ಅಲ್ಲಿ ತಂದೆಯ ದಿನಚರಿ ಪುಸ್ತಕ (dairy) ಸಿಕ್ಕಿತು ಮತ್ತು ಕುತೂಹಲದಿಂದ ಅದನ್ನು ತೆಗೆದು ಓದಿದಾಗ ಅದರಲ್ಲಿ ಅವನು ಈ ರೀತಿ ಬರೆದಿದ್ದನು, ಅಂದು ನಿನ್ನೊಂದಿಗೆ ಹಡಗಿನಲ್ಲಿ ಮತ್ತು ನೀರಿನ ಅಡಿಯಲ್ಲಿ ಮುಳುಗಲು ಮತ್ತು ಶಾಶ್ವತವಾಗಿ ನಿನ್ನೊಂದಿಗೆ ಇರಲು ಬಯಸಿದ್ದೆ, ಆದರೆ ನಮ್ಮ ಮಗಳನ್ನು ಯಾರು ನೋಡಿಕೊಳ್ಳುತ್ತಾರೆ,? ನಿನ್ನನ್ನು ಬದುಕಿಸಬೇಕೆಂದುಕೊಂಡರೆ, ನೀನು ಮಾರಣಾಂತಿಕ ಕಾಯಿಲೆಯ ಕೊನೆಯ ಹಂತದಲ್ಲಿದ್ದೀಯ ಮತ್ತು ಸಾವಿನ ಅಂಚಿನಲ್ಲಿದ್ದಿ, ಹೀಗಿದ್ದಾಗ ನಮ್ಮ ಮಗಳನ್ನು. ನೋಡಿಕೊಳ್ಳುವವರು ಯಾರು? ಇದೆಲ್ಲಾ ಯೋಚಿಸಿಯೇ ನಾನು ಲೈಫ್ ಬೋಟ್‌ಗೆ ಹಾರಿದೆ, ನಾನು ಹೆಚ್ಚು ಯೋಚಿಸಿದರೆ ನಾನು ಇನ್ನಷ್ಟು ದುರ್ಬಲನಾಗುತ್ತೇನೆ ಎಂದು ನನಗೆ ಅನಿಸಿತು. ನನ್ನ ಹೃದಯದಲ್ಲಿ ಎಷ್ಟು ನೋವಿರುವುದೆಂದು ನಿನ್ನ ಹೊರತು ಬೇರೆ ಯಾರಿಗೂ ಅರ್ಥವಾಗುವುದಿಲ್ಲ ಎಂದು ಡೈರಿಯಲ್ಲಿ ಬರೆದುಕೊಂಡಿದ್ದನು

ಇದಿಷ್ಟೂ.... ಕಥೆ..!!

ಮೇಲ್ನೋಟಕ್ಕೆ ಏನನ್ನಾದರೂ ನೋಡಿ ನಾವು ಇನ್ನೊಬ್ಬ ವ್ಯಕ್ತಿಯ ಬಗ್ಗೆ ನಿರ್ಣಯಿಸಬಾರದು, ಅವರ ಜೀವನದಲ್ಲಿ ನಮಗೆ ತಿಳಿದಿಲ್ಲದ ಅನೇಕ ಆಳಗಳು ಇರಬಹುದು. ಯಾವುದೇ ಮನುಷ್ಯನನ್ನು ದೂಷಿಸಲು, ಅನುಮಾನಿಸಲು, ಅವಮಾನಿಸಲು ಎಂದಿಗೂ ಆತುರಪಡಬೇಡಿ.

-ಸಂಪಿಗೆ ವಾಸು

(ಸಂಗ್ರಹ) - ಪ್ರದೀಪ್ ಪೈ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ