ವಿಧಿಗೇಕೆ ಕೋಪ?

ವಿಧಿಗೇಕೆ ಕೋಪ?

ಕವನ

ತಂದೆಯ ಅಗಲಿಕೆ ತಂದಿತು ಸಂಕಟ

ಹರಿಸಿತು ಬಳಗದಿ ಕಣ್ಣೀರಾ

ಉದರದ ಪೋಷಣೆ ತಾಯಿಯ ಹೆಗಲಿಗೆ

ಬಡತನದಲ್ಲಿದೆ ಸಂಸಾರ

 

ಅನುದಿನ ಮೊಗ್ಗನು ಆರಿಸಿ ತರುವಳು

ಮಲ್ಲಿಗೆ ಮಾಲೆಯ ಹೆಣೆಯುವಳು

ಪಟ್ಟಣಕೊಯ್ಯುತ ಮಾರಲು ಮಾಲೆಯ

ಕಂದನ ಕರದಲಿ ನೀಡುವಳು

 

ದೇವರ ಪೂಜೆಗೆ, ನಾರಿಯ ತುರುಬಿಗೆ

ಉದಯದಿ ಹೂವನು ಬಯಸುವರು

ಕೊಳ್ಳುವ ಮಂದಿಯು ಬೆಳಗಿನ ವೇಳೆಗೆ

ಉತ್ಸುಕರಾಗಿಯೆ ಕೊಳ್ಳುವರು

 

ಚಳಿಯಲಿ ಬೆಚ್ಚಗೆ ಹೊದಿಕೆಯ ಒಳಗಡೆ

ನಿದ್ರೆಯಲಿರುತಿರೆ ಎಳೆ ಕಂದ

ಅಮ್ಮನು ಕರೆದಿರೆ ಅರೆಬರೆ ಎಚ್ಚರ

ಹೊರಟನು ತಕ್ಷಣ ಮನೆಯಿಂದ

 

ಕುಳಿತಿಹ ಕಡೆಯಲೆ ನಿದ್ರೆಗೆ ಜಾರಿದ

ನೋಡಲು ಬರುತಿದೆ ಅನುಕಂಪ

ಓದುವ ವಯಸಿನ ಬಾಲನ ಬಾಳಲಿ

ಆ ವಿಧಿಗೇತಕೆ ಈ ಕೋಪ?

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್