ವಿಶ್ವ ಪಾರಂಪರಿಕ ಪಟ್ಟಿಗೂ ರಾಜ್ಯ ಸರ್ಕಾರದ ಕೊಕ್ಕೆ !
ದೇಶದ ವನ್ಯ ಸಂಪತ್ತು ಹೇರಳವಾಗಿರುವ ಪಶ್ಚಿಮ ಘಟ್ಟ ನಮ್ಮ ರಾಜ್ಯದಲ್ಲಿ ಹಾದು ಹೋಗಿದೆ. ಇದು ನಮಗೆಲ್ಲಾ ಹೆಮ್ಮೆ ಪಡುವ ವಿಷಯ. ಇದು ಕೇಂದ್ರ ಸರ್ಕಾರದ ಪ್ರಯತ್ನದಿಂದ ಅಂತೂ ವಿಶ್ವ ಪಾರಂಪರಿಕ ಪಟ್ಟಿಗೆ ಈ ವರ್ಷ ಸೇರಿದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೂ ಕೊಕ್ಕೆ ಹಾಕುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಎಲ್ಲರಿಗೂ ತಿಳಿದಿರುವಂತೆ ವಿಶ್ವ ಪರಂಪರಿಕ ಪಟ್ಟಿಗೆ (ಯುನೆಸ್ಕೋ ನಿರ್ಧಾರ) ಸೇರಿಸುವುದು ಸುಲಭದ ಮಾತೇನಲ್ಲ. ಈ ಹಿಂದೆ ಹಂಪಿಯನ್ನು ಈ ಪಟ್ಟಿಗೆ ಸೇರಿಸಲು ಸಹ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹರ ಸಾಹಸ ಮಾಡಿದ್ದವು. ಆದರೆ ಈ ಬಾರಿ ಅಪಾರ ವನ್ಯ ಸಂಪತ್ತು ಮತ್ತು ಜೀವರಾಶಿ ಹೊಂದಿರುವ ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದ್ದಾಗ್ಯೂ ಸಹ ರಾಜ್ಯದ ಮಂತ್ರಿಗಳು (ಮುಖ್ಯಮಂತ್ರಿ ಸದಾನಂದಗೌಡ ಸೇರಿ) ಇದನ್ನು ವಿರೋಧಿಸಿರುವುದು ದುರ್ದೈವದ ವಿಚಾರ. ಇವರು ನೀಡುತ್ತಿರುವ ಕಾರಣ ವಿಚಿತ್ರವಾಗಿದೆ. "ಅಲ್ಲಿ ಅಭಿವೃದ್ಧಿ ಮಾಡಲು ತೊಂದರೆ ಆಗುತ್ತೆ" ಇದಕ್ಕೆ ಏನು ಹೇಳುತ್ತೀರಿ.
ಇವರ ಸರ್ಕಾರದ ಅಭಿವೃದ್ಧಿಯನ್ನು ಕಳೆದ ನಾಲ್ಕು ವರ್ಷದಿಂದಲು ನೋಡುತ್ತಲೇ ಇದ್ದೇವೆ. ಬೆಂಗಳೂರಿನಂತಾ ನಗರದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಡಾಂಬರು ಹಾಕಿದರೆ ಹಳ್ಳಿಗಳ ಕಡೆ ನಾಲ್ಕು ವರ್ಷಕ್ಕೆ ಒಮ್ಮೆಯೂ ರಸ್ತೆ ಸುಧಾರಣೆ ನಡೆಯುವುದಿಲ್ಲ. ಕೆಲವು ಫುಟ್ಪಾತ್ಗಳು ಫಳಫಳ ಹೊಳೆದರೆ ಕೆಲವು ಬಾಯಿ ತೆರೆದುಕೊಂಡು ಕುಳಿತಿವೆ. ಇಂತಹ ಅಭಿವೃದ್ಧಿ ಶೂರರು ಪಶ್ಚಿಮ ಘಟ್ಟದ ಕಾಡನ್ನು, ಅಥವಾ ಅಲ್ಲಿನ ಹಳ್ಳಿಗಳನ್ನು ಅದೇನು ಅಭಿವೃದ್ಧಿ ಮಾಡುತ್ತಾರೆ ? ಇಷ್ಟು ದಿನ ಅದೇನು ಕಡಿದು ಕಟ್ಟೆ ಹಾಕಿದ್ದಾರೆ ?
ಎಲ್ಲಾ ಕಡೆ ನಗರೀಕರಣವಾಗುತ್ತಿರುವಾಗ ಉಳಿದಿರುವ ಪಶ್ಚಿಮ ಘಟ್ಟವನ್ನೂ ಕಡಿದು ನಿರ್ನಾಮ ಮಾಡಬೇಕಾ ? ಅಥವಾ ಅದನ್ನು ಉಳಿಸಲು ಮನಸ್ಸು ಮಾಡಬೇಕಾ ಎಂಬ ಕನಿಷ್ಟ ಜ್ಞಾನವೂ ನಮ್ಮ ಮಂತ್ರಿಗಳಿಗೆ ಇಲ್ಲ. ಅಥವಾ ದಾಂಡೇಲಿ, ಮಡಿಕೇರಿ, ಚಿಕ್ಕಮಗಳೂರು ಗಳೆಡೆಯಲ್ಲೆಲ್ಲಾ ಕಾಡಿನೊಳಗೆ ಹಬ್ಬಿರುವ ರೆಸಾರ್ಟ್ ಕಬಂಧ ಬಾಹು ವಿಧಾನಸೌಧವನ್ನೂ ಹಿಡಿದಿಟ್ಟಿದಿಯಾ ? ಬಂಡಿಪುರ ಅರಣ್ಯದೊಳಗೆ ರಾತ್ರಿ ಸಂಚಾರವನ್ನು ನಿಷೇಧಿಸಿ ಜನರ ಮೆಚ್ಚುಗೆ ಪಡೆದ ಸರ್ಕಾರ ಈ ವಿಷಯದಲ್ಲಿ ಮಾತ್ರ ಎಡವುತ್ತಿರುವುದೇಕೆ ? ಇವರು ಇರುವ ನಗರ ಹಳ್ಳಿಗಳನ್ನು ಅಭಿವೃದ್ಧಿ ಮಾಡಿಕೊಂಡು ಸರ್ಕಾರವನ್ನು ಸರಿಯಾಗಿ ನಡೆಸಿದರೆ ಅದೇ ದೊಡ್ಡ ಉಪಕಾರವಾದೀತು.
Comments
ಉ: ವಿಶ್ವ ಪಾರಂಪರಿಕ ಪಟ್ಟಿಗೂ ರಾಜ್ಯ ಸರ್ಕಾರದ ಕೊಕ್ಕೆ !