ವೈದ್ಯಕೀಯ ಶಿಕ್ಷಣದ ಸವಾಲು

ವೈದ್ಯಕೀಯ ಶಿಕ್ಷಣದ ಸವಾಲು

ಯುದ್ಧಪೀಡಿತ ಯೂಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕೆಂದು ಹೋದವರೇ. ಭಾರತದ ಬಹುತೇಕ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯೂಕ್ರೇನ್ ನಂತಹ ಪುಟ್ಟ ಪುಟ್ಟ ರಾಷ್ಟ್ರಗಳಿಗೆ ತೆರಳುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟದಲ್ಲಿ ಇಲ್ಲಿನ ವೈದ್ಯಕೀಯ ಶಿಕ್ಷಣದ ಕೊರತೆಗಳು ಢಾಳಾಗಿ ಕಂಡು ಬಂದಿವೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ‘ಯುವ ಜನರು ವೈದ್ಯಕೀಯ ಶಿಕ್ಷಣಕ್ಕಾಗಿ ಸಣ್ಣ ಸಣ್ಣ ದೇಶಗಳಿಗೆ ಹೋಗುವ ಬದಲು ಸ್ವದೇಶದಲ್ಲಿ ವ್ಯಾಸಂಗ ಮಾಡುವುದು ಒಳಿತು. ಈ ನಿಟ್ಟಿನಲ್ಲಿ ಖಾಸಗಿ ವಲಯದವರೂ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಬೇಕು ಮತ್ತು ರಾಜ್ಯ ಸರಕಾರಗಳು ಕೂಡ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಹೀಗಾದಾಗ ಭಾರತದಿಂದಲೇ ಹೆಚ್ಚು ವೈದ್ಯಕೀಯ ಪದವೀಧರರು ಹೊರಹೊಮ್ಮುತ್ತಾರೆ’ ಎಂದಿದ್ದಾರೆ. ಮೂಲ ಸೌಕರ್ಯಗಳ ವಿಸ್ತರಣೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಿಸುವುದು ಅಗತ್ಯವೇ; ಆದರೆ ಕೊರತೆಗಳನ್ನು ನಿವಾರಿಸಿ, ವೈದ್ಯಕೀಯ ಶಿಕ್ಷಣ ಜನಸಾಮಾನ್ಯರಿಗೂ ಕೈಗೆಟಕುವಂತೆ ಮಾಡುವುದು ಅತಿಮುಖ್ಯ.

ಸರ್ಕಾರಿ ಹಾಗೂ ಖಾಸಗಿ ಸೇರಿ ದೇಶದಲ್ಲಿ ಎಂಬಿಬಿಎಸ್ ಶಿಕ್ಷಣ ನೀಡಲು ೫೯೫ ಸಂಸ್ಥೆಗಳಿದ್ದು, ಅಂದಾಜು ೮೩ ಸಾವಿರ ಸೀಟುಗಳಿವೆ. ಕರ್ನಾಟಕದಲ್ಲಿ ೧೯ ಸರ್ಕಾರಿ, ೩೦ ಖಾಸಗಿ ಮತ್ತು ೧೨ ಡೀಮ್ಡ್ ವಿವಿಗಳಿವೆ. ಇವುಗಳಲ್ಲಿ ೨,೯೦೦ ಸರ್ಕಾರಿ, ೬,೫೯೫ ಖಾಸಗಿ ಸೇರಿ ಒಟ್ಟು ೯,೩೪೫ ಎಂಬಿಬಿಎಸ್ ಸೀಟುಗಳಿವೆ. ದೇಶದಲ್ಲಿ ಲಭ್ಯವಿರುವ ಅಂದಾಜು ೮೩ ಸಾವಿರ ಸೀಟುಗಳಿಗೆ ೧೫-೧೬ ಲಕ್ಷ ಆಕಾಂಕ್ಷಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ! ಅದೇ ರೀತಿ ಕರ್ನಾಟಕದ ೯,೩೪೫ ಸೀಟುಗಳಿಗೆ ದಾಖಲಾಗಲು ೧ ಲಕ್ಷಕ್ಕಿಂತ ಹೆಚ್ಚಿನ ಆಕಾಂಕ್ಷಿಗಳಿರುತ್ತಾರೆ. ಇಷ್ಟು ಸ್ಪರ್ಧಾತ್ಮಕತೆಯಲ್ಲಿ ಉನ್ನತ ರಾಂಕಿಂಗ್ ಪಡೆದವರಿಗೆ ಮಾತ್ರವೇ ಸರ್ಕಾರಿ ಕಾಲೇಜುಗಳಲ್ಲಿ ಸೀಟು ಸಿಗುತ್ತವೆ. ಖಾಸಗಿ ಕಾಲೇಜುಗಳಲ್ಲಿ ಮ್ಯಾನೇಜ್ ಮೆಂಟ್ ಕೋಟಾದಡಿ ಪ್ರವೇಶ ಪಡೆದು, ಎಂಬಿಬಿಎಸ್ ಮುಗಿಸಲು ೫೦-೬೦ ಲಕ್ಷ ರೂ. ಕೆಲವೊಮ್ಮೆ ಇದಕ್ಕಿಂತಲೂ ಅಧಿಕ ಮೊತ್ತ ಖರ್ಚಾಗುತ್ತದೆ. ಮಧ್ಯಮ ವರ್ಗದವರಿಗೆ ಇಷ್ಟು ವೆಚ್ಚ ಮಾಡಿ, ವ್ಯಾಸಂಗ ಕೈಗೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿಯೇ, ಕಡಿಮೆ ಶುಲ್ಕವಿರುವ ಸಣ್ಣ ರಾಷ್ಟ್ರಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಾರೆ. ಆದರೆ ಯೂಕ್ರೇನ್ ನಂತಹ ಭಯಾನಕ ಬಿಕ್ಕಟ್ಟು ಎದುರಾದಾಗ ಅಥವಾ ಇತರ ಆಪತ್ತುಗಳು ಸಂಭವಿಸಿದಾಗ ವಿದ್ಯಾರ್ಥಿಗಳ ಭವಿಷ್ಯವೇ ಡೋಲಾಯಮಾನವಾಗುತ್ತದೆ. ಕೆಲ ದೇಶಗಳಲ್ಲಿ ಎಂಬಿಬಿಎಸ್ ಪೂರೈಸಿದರೂ ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ಪ್ರತ್ಯೇಕ ಪರೀಕ್ಷೆ ಉತ್ತೀರ್ಣರಾಗಬೇಕು. ಇದಕ್ಕೆ ಪರಿಹಾರವಾಗಿ, ಇಲ್ಲಿನ ವ್ಯವಸ್ಥೆಯಲ್ಲಿಯೇ ಅಮೂಲಾಗ್ರ ಸುಧಾರಣೆಯಾಗಬೇಕು. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣ ಕೈಗೆಟಕುವಂತಾಗಬೇಕು. ರಾಜ್ಯ ಸರ್ಕಾರಗಳು ಈ ಬಗ್ಗೆ ಸ್ವಲ್ಪ ಕಾಳಜಿ ತೋರಿದ್ದಲ್ಲಿ ಮಹತ್ವದ ಪರಿವರ್ತನೆ ತರುವುದು ಅಸಾಧ್ಯವೇನಲ್ಲ. ಹಾಗೆಯೇ, ವಿದ್ಯಾರ್ಥಿಗಳು ಕೂಡ ಭಾರತದಲ್ಲೇ ವ್ಯಾಸಂಗ ಮಾಡಲು ಮನಸ್ಸು ಮಾಡಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ. ೨೮-೦೨-೨೦೨೨ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

Comments

Submitted by venkatesh Tue, 03/01/2022 - 17:30

ನಮ್ಮ ದೇಶದಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಗುಣಮಟ್ಟ ಸರಿಯಿಲ್ಲ ; ಅದಕ್ಕೆ ಬೇರೆದೇಶಗಳಿಗೆ ಹೋಗುತ್ತಿದ್ದೇವೆ.' 
 
ಈ  ಕೆಟ್ಟ ಅನಾರೋಗ್ಯಕರ  ಮಾನಸಿಕ ಸ್ಥಿತಿ ಒಮ್ಮೆಲೇ ನಿಲ್ಲಬೇಕು ! ಈಗ ನಮ್ಮದೇಶದಲ್ಲಿ ಬೇಕಾದಷ್ಟು ಶಿಕ್ಷಣ ಸಂಸ್ಥೆಗಳು ಚೆನ್ನಾಗಿ ಕೆಲಸಮಾಡುತ್ತಿವೆ. ಡಾ ಪದವಿಯನಂತರ ಖಡ್ಡಾಯವಾಗಿ ಹಳ್ಳಿಗೆಳಿಗೆ ಹೋಗಿ ಅಲ್ಲಿನ ಜನರ ಮಧ್ಯೆ ಬೆರೆತು, ಅವರಿಗೆ ವೈದ್ಯಕೀಯ ನೆರವು ನೀಡಬೇಕು, ಮತ್ತು ಉಳಿದ ಯುವ ವೈದ್ಯರಿಗೆ ಈ ದಾರಿಯಲ್ಲಿ ಮುಂದುವರೆಯಲು ಪ್ರೋತ್ಸಾಹಿಸಬೇಕು. 
 
ಸಾವಿರಗಟ್ಟಲೆ ವಿದ್ಯಾರ್ಥಿಗಳು ಭಾರತವನ್ನು ಬಿಟ್ಟು ಬೇರೆ  ದೇಶಗಳಲ್ಲಿ, ಈಗ ಉಕ್ರೇನ್ ದೇಶದಲ್ಲಿ  ವೈದ್ಯಕೀಯ ವಿದ್ಯೆಯನ್ನು  ಕಲಿಯುತ್ತಿರುವುದು ಬೇಸರವನ್ನು ತರುವಂತಹ ವಿಷಯವಾಗಿದೆ. ಇತ್ತೀಚಿಗೆ ನ್ಯೂಸ್ ನಲ್ಲಿ ಬಿತ್ತರಿಸಿದ ತರಹ, ಸುಮಾರು ೨೧ ಮೆಡಿಕಲ್ ಕಾಲೇಜ್ ಗಳನ್ನು ಸ್ಥಾಪಿಸಲು ತಮಿಳುನಾಡಿಗೆ ಪರವಾನಗಿ ಕೊಟ್ಟಿರುತ್ತಾರೆ. ಅಂಕಿ ಅಂಶಗಳ ಪ್ರಕಾರ ಸಾಕಷ್ಟು ಮೆಡಿಕಲ್ ಪ್ರಶಿಕ್ಷಿತ ಜನರು ದೇಶದಲ್ಲಿ ಸಿಗುತ್ತಾರೆ. ನಮ್ಮಲ್ಲಿ ಇದುವರೆವಿಗೂ ಇಂಜಿನಿಯರಿಂಗ್, ನಂತರ ಮೆಡಿಕಲ್  ಕೋರ್ಸಿನ  ಹುಚ್ಚು  ಪೋಷಕರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಮಾಡಿದೆ.  ಯಾಕೆಂದರೆ ಎರಡರಲ್ಲೂ ಚೆನ್ನಾಗಿ ಹಣಮಾಡಬಹುದೆಂದು. ಇನ್ನು ಹಲವಾರು ಖಾಸಗಿ ಕಾಲೇಜುಗಳು ಡೊನೇಶನ್ ಪಡೆದು ಸೀಟ್ ಕೊಡುತ್ತಿದ್ದಾರೆ. ಇದರ ಅರ್ಥ, ಮೆರಿಟ್ ಗಳಿಸದೆ, ಹಣದ ಆಧಾರದಮೇಲೆ  ಸಾಧಾರಣ ಮೆರಿಟ್ ಛಾತ್ರರು ಸೀಟ್  ಪಡೆದು, ಹೇಗೋ ಪರೀಕ್ಷೆ ಪಾಸ್ ಮಾಡಿ ಡಾಕ್ತರಾಗುತ್ತಾರೆ. ಅವರಿಂದ ಸರಿಯಾದ ಮೆಡಿಕಲ್ ಸೇವೆ ನಿರೀಕ್ಷಿಸುವುದಾದರೂ ಹೇಗೆ ?  ಅವರೆಂದಿಗೂ ಸೇವಾಮನೋಭಾವ ಎನ್ನುವ ಪದವನ್ನು ಕೇಳಿರುವುದಿಲ್ಲ. ಪೋಷಕರೂ ಇಷ್ಟೊಂದು ಖರ್ಚುಮಾಡಿ ಓದಿಸಿದ್ದೇವೆ. ಕೊಟ್ಟ ಹಣ ವಾಪಸ್ ಆದರೂ ಬರದಿದ್ದರೆ ಹೇಗೆ ? ಎನ್ನುವ ಧೋರಣೆಯ ರೀತಿಯಲ್ಲೇ ಮಾತಾಡುತ್ತಾರೆ. ಇದು ಆರೋಗ್ಯಕರವಾದ ಬೆಳವಣಿಯಲ್ಲ.
 
ನಮ್ಮ ದೇಶದ ಹಲವಾರು ಶ್ರೇಷ್ಠ ವೈದ್ಯರು, (ದಿವಂಗತ ಡಾ ಮೋದಿ) ಡಾ. ದೇವಿಪ್ರಸಾದ್ ಶೆಟ್ಟಿಯಂಥವರು, ಡಾ. ಹೆಗಡೆಯವರು, (ದಿವಂಗತ) ಡಾ. ಸುಶೀಲ ನಯ್ಯರ್ (ದಿವಂಗತ)  ಡಾ. ಬಿ. ಕೆ. ನಾರಾಯಣರಾವ್,  ಮೊದಲಾದವರು, ರೋಗಿಗಳ ಸೇವೆಯನ್ನು ಮಾಡುವುದೇ ಅವರ ಜೀವನದ ಧ್ಯೇಯ, ಕರ್ತವ್ಯವೆಂದು ತಿಳಿದು ಕೆಲಸಮಾಡುತ್ತಿದ್ದರು (ದ್ದಾರೆ ಸಹಿತ)  ಅಂತಹ ಮನೋಭಾವವನ್ನು ನಾವು ತಂದೆ-ತಾಯಿಗಳಾದವರು ಅವರ ಮನಸ್ಸಿನಲ್ಲಿ ಬಿತ್ತಬೇಕು. 'ಲೆಕ್ಕವಿಲ್ಲದಷ್ಟು ಡಾಕ್ಟರುಗಳಿದ್ದಾಗ್ಯೂ ಹಳ್ಳಿಗಳಲ್ಲಿ ಒಬ್ಬ ಸರಿಯಾದ ವೈದ್ಯರು ಸಿಗುವುದು ಕಷ್ಟ. ಹಳ್ಳಿಗಳಲ್ಲಿ ಹೋಗಿ ಸೇವೆಯನ್ನು ಮಾಡಲು ಒಬ್ಬರೂ ಹೋಗುವುದಿಲ್ಲ'.  ಕಲಿತುಬಂದ ಎಲ್ಲರಿಗೂ ಪಟ್ಟಣದಲ್ಲಿ ದೊಡ್ಡ ಕ್ಲಿನಿಕ್ ಮಾಡಿ, ಚೆನ್ನಾಗಿ ಹಣ ಗಳಿಸುವುದೇ ತಮ್ಮ ಪರಮೋಚ್ಚ ಗುರಿ ಎಂದು ಭಾವಿಸಿ ಮೆರೆಯುವುದನ್ನು ತಪ್ಪಿಸಬೇಕು. ಗಾಂಧೀಜಿವರು ಹೇಳಿದಂತೆ, 'ಯಾವ ವ್ಯವಸ್ಥೆ  ಸರಿಯಾಗಿ ನಡೆಯುತ್ತಿಲ್ಲವೋ ಅದನ್ನು ದೂಷಿಸುವ ಬದಲು ಆ  ಅವ್ಯವಸ್ಥೆಯ ಒಳಗೆ ನುಗ್ಗಿ ಅದನ್ನು ಸರಿಪಡಿಸುವುದೇ ಸರಿಯಾದ ಮಾರ್ಗ'. ಗಾಂಧೀಜಿಯವರು ತಾವೊಬ್ಬರೇ ಯಾರ ನೆರವೂ ಪಡೆಯದೇ,  ನಮ್ಮ ಜೀವನ ಪೂರ್ತಿ ಜೀವನದ ಹತ್ತಾರು ಅವ್ಯವಸ್ಥಿತ ಸಂಘಟನೆಗಳಲ್ಲಿ ಸಕ್ರಿಯವಾಗಿ ನುಗ್ಗಿ ಅವನ್ನೆಲ್ಲ ಸರಿಪಡಿಸುವಲ್ಲಿ ಸಿದ್ಧಿಪಡೆದರು. ದಕ್ಷಿಣ ಆಫ್ರಿಕಾದಿಂದ, ಭಾರತದಲ್ಲಿನ ಎಷ್ಟೋ ಕಡೆ (ಅಹ್ಮದಾಬಾದ್ ಮಿಲ್, ಚಂಪಾರಣ್ಯ,ಬ್ರಿಟಿಷರ ಕೆಟ್ಟ ಕಾನೂನುಗಳ ವಿರುದ್ಧ ಹೊಡೆದಾಟ ಇತ್ಯಾದಿ, ಇತ್ಯಾದಿ) 
Submitted by venkatesh Wed, 03/02/2022 - 08:25

ಕೃತಜ್ಞತೆಯ ಮಾತಾಡದ ಭಾರತೀಯರಿಗೆ ಏನೆಂದು ಹೇಳೋಣ; ದೇವರೇ ಇವರಿಗೆ ಒಳ್ಳೆಯ ಬುದ್ಧಿಕೊಡು  !  ?

ನಮ್ಮವರೇ ಆದ  ನೂರಾರು ವಿದ್ಯಾರ್ಥಿಗಳು ಕೇವಲ ಮೆಡಿಕಲ್ ತಿಳಿವು ಕಲಿಯಲು ಉಕ್ರೇನ್ ದೇಶ ಕ್ಕೆ ಹೋದಾಗ ಅವರಿಗೆ ಸಹಾಯಮಾಡಿದ ದೇಶಕ್ಕೆ, ಒಂದು ಕೃತಜ್ಞತೆಯ ಮಾತಾದರೂ ಹೇಳುವುದು ಬೇಡವೇ ?

'ಈ ಸಂಕಟದ ಸಮಯದಲ್ಲಿ ಅವರಿಗೆ ದೇವರು ಸಹಾಯಮಾಡಲಿ ; ಬೇಗ ಮೊದಲಿನ ಪರಿಸ್ಥಿತಿಗೆ ಬರಲಿ. ಶಾಂತಿ ನೆಮ್ಮದಿ ಮೇಳೈಸಲಿ. ರಷ್ಯಾ ದೇಶಗಳ ಮಧ್ಯೆ ಸುಮಧುರ ಬಾಂಧವ್ಯ ಬೇಗ  ಏರ್ಪಡಲಿ',  ಎಂದು ಕೇಳಿಕೊಳ್ಳುವ ಸೂಕ್ಷ್ಮ-ಪ್ರಜ್ಞೆ ನಮ್ಮ ಭಾರತೀಯ ಸಂಜಾತರ ಮನಸ್ಸಿನಲ್ಲಿ ಮೂಡದೇ ಹೋಯಿತಲ್ಲಾ !  ಯಾರಾದರೂ ಇಂತಹ ಸೂಕ್ಷಗಳನ್ನು ಹೇಳಿಕೊಡಬೇಕೇನು ?