ಶತಮಾನದ ಹೊಸ್ತಿಲಲ್ಲಿ ಬಂಟ್ವಾಳದ ಮಾರಿ ಬೊಳ್ಳ
ಅದು ಆಗಸ್ಟ್ ಆರರ ಮಧ್ಯ ರಾತ್ರೆಯ ಸಮಯ; ಏನಕೇನ ಜಾಗಟೆಯ ಸದ್ದು. ಗಾಢ ನಿದ್ದೆಗೆ ಜಾರಿದ್ದ ಪೇಟೆಯ ಜನ ಎದ್ದು ಬಾಗಿಲು ಓರೆ ಮಾಡಿದಾಗ ಹಿರಿಯರೊಬ್ಬರು ಕೈಯಲ್ಲಿ ಜಾಗಟೆ ಹಿಡಿದು, ಭೀಕರ ನೆರೆಯ ಕುರಿತು ಎಚ್ಚರಿಕೆ ನೀಡುತ್ತಿದ್ದಾರೆ. ಹೌದು, ಚಿನ್ನದ ಪೇಟೆ, ಭತ್ತದ ಕಣಜವೆಂದೇ ಪ್ರಸಿದ್ದವಾಗಿದ್ದ ಬಂಟ್ವಾಳವನ್ನು ದಿನಾಂಕ 07.08.1923 ಮಂಗಳವಾರ, ಇನ್ನಿಲ್ಲದಂತೆ ಪುಡಿಗಟ್ಟಿದ ಮಾರಿ ಬೊಳ್ಳ ಅಟ್ಟಹಾಸ ಗೈದ ದಿನವದು. ಕಾರ್ಮೋಡಗಳು ಕರಗಿ ಧರೆಗೆ ಅಪ್ಪಳಿಸಿ ಬೆಚ್ಚಿ ಬೀಳಿಸಿದ ದುರ್ದಿನವದು. ತನ್ನದೆಲ್ಲವನ್ನೂ ನೇತ್ರಾವತಿಗೆ ಆಹುತಿ ಕೊಟ್ಟ ಬಂಟ್ವಾಳ ತಾನು ಬೆತ್ತಲಾಗಿ ಕರಗಿಹೋದ ಕಾಲವದು.
ಅಂದಹಾಗೆ, ಯಾರೂ ನಿರೀಕ್ಷಿಸದೇ ಇದ್ದ ಬೊಳ್ಳ, ಯಾಕೆಂದರೆ ವರ್ಷಾವಧಿಯಲ್ಲಿ ಬರುವ ಸಾಮಾನ್ಯ ನೆರೆ ಅದಾಗಲೇ ಜುಲಾಯಿ ತಿಂಗಳಲ್ಲಿ ಬಂದು ಹೋಗಿಯಾಗಿತ್ತು, ಜನ ಹಾಯಾಗಿದ್ದರು, ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿದ್ದರು. ತಕ್ಷಣ ಎರಗಿದ ಈ ಮಾರಿ ಬಲೆಯಂತಿದ್ದ ನೆರೆ ಬಂಟ್ವಾಳವನ್ನು ಅಮುಕುತ್ತಾ ಬಂತು. ಆಗಸ್ಟ್ 6ರಂದು ಏರಲು ಆರಂಭವಾದ ನೆರೆ ದಿನಾಂಕ 7ರ ಬೆಳಿಗ್ಗೆ ಅಪಾಯದ ಮಟ್ಟವನ್ನು ತಲುಪಿ ಇನ್ನೇನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 7ರ ಅವಧಿಗೆ ಇಡೀ ಬಂಟ್ವಾಳವನ್ನೇ ತನ್ನ ತೆಕ್ಕೆಗೆ ತಗೆದು ಕೊಂಡಿತು. ಪ್ರಾಕೃತಿಕವಾಗಿ ತಗ್ಗು ಪ್ರದೇಶಗಳಲ್ಲಿ ಒಂದಾದ ಬಂಟ್ವಾಳ ನಾಲ್ಕು ದಿಕ್ಕುಗಳಿಂದಲೂ ನೆರೆ ನೀರಿನಿಂದ ಆವರಿಸಲ್ಪಟ್ಟು ದ್ವೀಪದಂತಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಹೊರತಾಗಿ ಎಲ್ಲೆಲ್ಲೂ ನೆರೆ ದಾಂಗುಡಿ ಇಡುತ್ತಿತ್ತು. ಕರುಳೇ ಕಿತ್ತುಬರುವಂತಿರುವ ಸಾಕು ಪ್ರಾಣಿಗಳ ಚೀರಾಟ, ಧರೆಗೆ ಕುಸಿಯುತ್ತಿರುವ ಕಟ್ಟಡಗಳ ಬೀಭತ್ಸ ದೃಶ್ಯ, ಮಹಿಳೆಯರ ಮಕ್ಕಳ ಕರುಳು ಹಿಚುಕುವ ರೋದನ.
ಬಂಟ್ವಾಳಿಗರಿಗೆ ಚಿರ ಪರಿಚಿತನಾದ ಡೊಂಬೆಲ್ಲ ಅನ್ನುವ ಮಂದ ಬುದ್ಧಿಯ ವ್ಯಕ್ತಿಯೊಬ್ಬ ಬೊಳ್ಳದಿಂದ ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ತನ್ನ ಮನೆಯ ಮುಳಿ ಹುಲ್ಲಿನ ಛಾವಣಿಯನ್ನು ಏರಿ ಕುಳಿತಿದ್ದಾನೆ, ಕ್ಷಣ ಮಾತ್ರದಲ್ಲಿ ಮನೆ ಕುಸಿದು ಛಾವಣಿ ಮಾತ್ರ ತೇಲುತ್ತಾ ದೂರ ಬಲುದೂರವಾಗಿ ಕಾಣದಾಯಿತಂತೆ. ಡೊಂಬೆಲ್ಲ ನೀರು ಪಾಲಾದನೆಂಬ ಮರುಕ. ಅದೃಷ್ಟವಶಾತ್ ಡೊಂಬೆಲ್ಲ ಕೂತಿದ್ದ ಆ ಛಾವಣಿ ಮರವೊಂದಕ್ಕೆ ಡಿಕ್ಕಿಹೊಡೆದು ನಿಂತಾಗ ತಾನು ಮರವೇರಿ ಜೀವ ಉಳಿಸಿಕೊಂಡನಂತೆ. 3 ದಿನಗಳ ನಂತರ ಆತ ಪೇಟೆಯಲ್ಲಿ ಪ್ರತ್ಯಕ್ಷನಾದಾಗ ಎಲ್ಲರಿಗೂ ವಿಸ್ಮಯ! ಜತೆಯಲ್ಲಿ ಸಂತೋಷ ಕೂಡ.
ಅಪಾಯದ ಮಟ್ಟವನ್ನು ಬಿಟ್ಟುಕೊಡಲು ಐದು ದಿನಗಳ ಅವಧಿಯನ್ನು ತೆಗೆದುಕೊಂಡ ಈ ಮಾರಿ ನೆರೆ ಇಡೀ ಬಂಟ್ವಾಳದ ಜೀವನಾಡಿಯನ್ನೇ ಕತ್ತರಿಸಿ ಹಾಕಿತ್ತು. ನೆರೆಯ ಪ್ರಮಾಣವನ್ನು ಸಾಕ್ಷೀಕರಿಸುವ ಶಿಲಾ ಫಲಕವೊಂದನ್ನು ಪಾಣೆಮಂಗಳೂರಿನ ಮೂರು ಮಾರ್ಗದ ಸಮೀಪವಿರುವ ಪ್ರಸ್ತುತ ಅಯ್ಯಂಗಾರ್ ಬೇಕರಿಯ ಕಟ್ಟಡದಲ್ಲಿ ಈಗಲೂ ಕಾಣಬಹುದಾಗಿದೆ. ಅದರಲ್ಲಿ '*ತಾ 7.8.23 ಕುಜವಾರ ಇ ಕಲ್ಲಿನ ತನಕ ನೆರೆ ಬಂದಿದೆ'* ಎಂದು ಬರೆಯಲಾಗಿದೆ. ಇದೇ ರೀತಿ, ಬಂಟ್ವಾಳದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ ಕಟ್ಟಡದ ಮೇಲ್ಛಾವಣಿಯ ಪಕ್ಕದಲ್ಲಿ ನೆರೆಯ ಮಟ್ಟವನ್ನು ಗುರುತಿಸುವ ಸಂಕೇತವೋ ಎನ್ನುವಂತೆ 7.8.1923 ಎಂದು ಬರೆಯಲಾಗಿದೆ ಎಂದು ತಿಳಿದು ಬರುತ್ತದೆ.
‘ಅನುಭವದ ಬುತ್ತಿಯಿಂದ: ವೆಂಕಟರಮಣ ದೇವಳದ ಈಗಿನ ಪ್ರಧಾನ ಅರ್ಚಕರ ಅಜ್ಜ ವೇದಮೂರ್ತಿ ಸೀತಾರಾಮ ಭಟ್ಟರ ಪೂಜೆಯ ಪರ್ಯಾಯದ ಸಂದರ್ಭವದು. ನೇತ್ರಾವತಿಯ ಬೊಳ್ಳ ದೇವಾಲಯದ ಮುಂಭಾಗದ ಅಂಬಲವನ್ನು ಪ್ರವೇಶಿಸಿತ್ತು. ಬೆಳಿಗ್ಗೆ ಆರು ಗಂಟೆಯ ಸಮಯ ಸೀತಾರಾಮ ಭಟ್ಡರ ಹೊರತಾಗಿ ಮಿಕ್ಕ ದೇವಳದ ಚಾಕರಿಯವರು ತಮ್ಮ ತಮ್ಮ ಮನೆಗಳ ರಕ್ಷಣೆಗೆ ತೊಡಗಿದ್ದರೇ ಹೊರತು ದೇವಳಕ್ಕೆ ಬಂದಿರಲಿಲ್ಲ. ಸೀತಾರಾಮ ಭಟ್ಟರು ಬಂದವರೇ ಅಂಬಲಕ್ಕೆ ಬಂದು ನೇತ್ರಾವತಿಯನ್ನು ಶಾಂತಳಾಗುವಂತೆ ಪ್ರಾರ್ಥಿಸಿ ಗಂಗಾ ಪೂಜೆ ಮಾಡಿ ಗರ್ಭಗುಡಿಯನ್ನು ಪ್ರವೇಶಿಸಿ ಅಮೃತಪಡಿ ಹೊರತಾಗಿ ತೆಂಗಿನ ಕಾಯನ್ನು ಮಾತ್ತ ಒಡೆದು ಸಮರ್ಪಿಸುವಷ್ಟರಲ್ಲಿ ನೇತ್ರಾವತಿಯು ಗರ್ಭಗೃಹದ ನಾಲ್ಕನೇ ಮೆಟ್ಟಲಿಗೆ ನಾಲಿಗೆ ಚಾಚಿದಾಗ ದಿಕ್ಕು ತೋಚದಾದ ಭಟ್ಟರು ಉದ್ವೇಗಭರಿತರಾಗಿ, ಭಗವಂತ ನಿನ್ನ ಜತೆಯಲ್ಲೇ ನಾನೂ ಜಲಸಮಾಧಿಯಾಗುತ್ತೇನೆ ಎಂದು ಹೇಳಿ ತನ್ನ ಹಾಗೂ ಭಗವಂತನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾದರಂತೆ. ಅಷ್ಟರಲ್ಲಿ ನಿಧಾನ ಗತಿಯಲ್ಲಿ ಇಳಿಯಲು ಆರಂಭಿಸಿದ ನೆರೆ ದೇವಾಲಯವನ್ನು ಬಿಟ್ಟುಕೊಟ್ಟಿತಂತೆ. 'ಶರಣರ ಭಕ್ತಿಗೆ ಮರುಗಿ ಕಣ್ಣುಬಿಟ್ಟ ವಟಪುರೇಶ' ಎಂಬುದಾಗಿ ಇಂದಿಗೂ ಭಕ್ತ ವೃಂದ ನೆನಪಿಸಿಕೊಳ್ಳುತ್ತಾರೆ.
ದೈಹಿಕ ಶಿಕ್ಷಕ ಶ್ರೀ ಪುಂಡಲೀಕ ಬಾಳಿಗರು ತಮ್ಮ ಹಿರಿಯರ ಅನುಭವಗಳನ್ನು ಹಂಚಿಕೊಂಡದ್ದು ಹೀಗೆ- “ನೆರೆಯಿಂದ ರಕ್ಷಣೆ ಪಡೆಯುವುದಕ್ಕಾಗಿ ಎಷ್ಟೋ ಮಂದಿ ತಮ್ಮತಮ್ಮ ಮನೆಗಳ ಮಾಳಿಗೆಯಲ್ಲಿ ಕುಳಿತಿದ್ದರು. ಕೆಳಗಿನ ಪೇಟೆಯ ಮುಸಲ್ಮಾನರ ದೊಡ್ಡ ದೋಣಿಗಳು ಮಾಳಿಗೆಗಳಲ್ಲಿ ಆಶ್ರಯ ಪಡೆದವರನ್ನು ದೋಣಿಯಲ್ಲಿ ಬೇರೆಡೆಗೆ ಸಾಗಿಸಲು ಶ್ರಮಿಸುತ್ತಿದ್ದರು. ನಮ್ಮ ಮನೆಯ ಮಾಳಿಗೆಯ ಮೇಲಿನ ಕೂಗಾಟ ಕೇಳಿ ದೋಣಿಯಲ್ಲಿ ನಮ್ಮ ಪೂರ್ವಿಕರ ಕುಟುಂಬವನ್ನು ಸಾಗಿಸುತ್ತಿದ್ದಂತೆ ಭೀಕರವಾದ ಶಬ್ದ ಕೇಳಿ ತಿರುಗಿ ನೋಡಿದಾಗ ತಮ್ಮ ಜೀವನ ಸೌಧವೇ ಕುಸಿದು ಬಿದ್ದಂತೆ ತಾವು ನೆಲೆನಿಂತ ಮನೆ ಧರಾಶಾಯಿ ಆಯಿತು. ಹೀಗೆ ಹಿರಿಯ ತಲೆಮಾರಿನವರು ಕಟ್ಟಿಟ್ಟ ಹಲವಾರು ಅನುಭವಗಳು ಬಂಟ್ವಾಳದ ಇಂದಿನ ತಲೆಮಾರಿನವರಲ್ಲಿ ಅನುರಣಿಸುತ್ತಿದೆ.
ಇದರ ಜತೆಯಲ್ಲೇ ಹೇಳಬಹುದಾದರೆ, ನೇತ್ರಾವತಿ ನದಿಯ ನೀರು ಹರಿದು ಬಂಟ್ವಾಳ ಮತ್ತು ಪಾಣೆಮಂಗಳೂರು ಪೇಟೆಯ ಪರಿಸರವು ಜಲಾವೃತವಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಂಗಳೂರಿನ ಅಂದಿನ ಕಲೆಕ್ಟರ್ ಆಗಿದ್ದ ಜಿ. ಡಬ್ಲ್ಯೂ. ವೆಲ್ಸ್ ಅವರು 'ಜಮಾಬಂದಿ' ಜರಗಿಸಲು ಸಿಬ್ಬಂದಿಗಳೊಂದಿಗೆ ಬಂಟ್ವಾಳಕ್ಕೆ ತೆರಳಿದ್ದರಂತೆ. ನೆರೆ ನೀರಿನ ಪ್ರವಾಹದಿಂದಾಗಿ ಟ್ರಾವೆಲರ್ಸ್ ಬಂಗಲೆಯಲ್ಲಿ ಆಶ್ರಯ ಪಡೆದಿದ್ದರು. ಅವರೆಲ್ಲರನ್ನು ರಕ್ಷಿಸಲು ಮಂಗಳೂರು ಪೋರ್ಟ್ ಟ್ರಸ್ಟಿನಿಂದ ಒಂದು ಲಾಂಚನ್ನು ಬಂಟ್ವಾಳಕ್ಕೆ ಕಳುಹಿಸಲಾಯಿತಂತೆ.
ಗಮನಿಸಲೇ ಬೇಕಾದ ಅಂಶವೆಂದರೆ, ನಿರ್ದಿಷ್ಟವಾಗಿ ಅಲ್ಲದಿದ್ದರೂ ನೇತ್ರಾವತಿ ನದಿಯ ಇತಿಹಾಸವನ್ನು ಪರಿಶೀಲಿಸಿದರೆ, ಸುಮಾರು ಐವತ್ತು ವರ್ಷಗಳಿಗೊಮ್ಮೆ 'ಮಾರಿ ಬೊಳ್ಳ' ಬರುವುದು ವಾಡಿಕೆ ಎಂಬುದು ಹಿರಿಯರ ಮಾತು. ಮೊಗರನಾಡು ದೇವಳದ ದಾಖಲೆಯಂತೆ ಕ್ರಿ.ಶ. 19ನೇ ಶತಮಾನದಲ್ಲಿ, ಅಂದರೆ 1819, 1876 ಮಾರಿ ಬೊಳ್ಳ ಬಂದ ಮಾಹಿತಿ ಇದೆ. ಉಪಕಾರಿಗಳಿವರು: ಯಾವುದೇ ಜಾತಿ ಮತ ಧರ್ಮ ಸ್ತ್ರೀ ಪುರುಷರೆನ್ನದೆ ಸಮನ್ವಯತೆಯಿಂದ ನಿರಾಶ್ರಿತರಿಗೆ ರಕ್ಷಣಾ ತಾಣವಾಗಿ ಒದಗಿ ಬಂದದ್ದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವೆಂಕಟರಮಣ ದೇವಳ ಹಾಗೂ ಸೀತಾರಾಮ ದೇವಸ್ಥಾನ. ಅಗ್ರಾರದಿಂದ ಗುರು ದೀಕ್ಷೆ ಪಡೆದವರಲ್ಲಿ ಪ್ರಪ್ರಥಮರಾದ ಜಕ್ರಿಬೆಟ್ಟಿನ ವಂದನೀಯ ಗುರು ಕೈತಾನ್ ಫ್ರಾನ್ಸಿಸ್ಕೊ ಸುವಾರಿಸ್ ಇವರು ಬೈಂದೂರಿನಿಂದ ಅನಾರೋಗ್ಯ ನಿಮಿತ್ತ ತನ್ನ ಜಕ್ರಿಬೆಟ್ಟಿನ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಬಂಟ್ವಾಳಕ್ಕೆ ಎರಗಿದ ನೆರೆಯಲ್ಲಿ ತನ್ನ ಸ್ವಂತ ಮನೆಯೂ ಕೊಚ್ಚಿ ಹೋದಾಗ ಧೃತಿಗೆಡದೆ ತನ್ನ ತಮ್ಮ ಫೆಲಿಕ್ಸ್ ಸುವಾರಿಸ್ ಅವರೊಂದಿಗೆ ದೋಣಿಯಲ್ಲಿ ಪ್ರಯಾಣಿಸಿ ಬಂಟ್ವಾಳ ಹಾಗೂ ಜಕ್ರಿಬೆಟ್ಟು ಹಾಗೆಯೇ ಫರ್ಲಾದ ಅದೆಷ್ಟೋ ನಿರಾಶ್ರಿತರನ್ನು ಜೀವದ ಹಂಗು ತೊರೆದು ರಕ್ಷಿಸುವಲ್ಲಿ ಶ್ರಮಿಸಿದರು.
ಅಗ್ರಾರ್ ಚರ್ಚ್ ಹಾಗೂ ಬಂಟ್ವಾಳಿಗರೊಂದಿಗೆ ಸಂಬಂಧ ಬೆಸೆದ ಮಹಾ ನೆರೆ: ಅಗ್ರಾರಿನ ವಂದನೀಯ ಗುರು ರೆಜಿನಾಲ್ಡ್ ಪಿಂಟೋ ಅವರು ಅದೆಷ್ಟೋ ಮಂದಿ ನಿರಾಶ್ರಿತರಿಗೆ ಅಗ್ರಾರ್ ಇಗರ್ಜಿಯಲ್ಲಿ ಆಶ್ರಯವನ್ನು ನೀಡಿ ರಕ್ಷಿಸಿದರು. ಯಾವುದೇ ಜಾತಿ ಮತ ಭೇದವಿಲ್ಲದೆ ಪ್ರೀತಿ ವಾತ್ಸಲ್ಯವನ್ನು ತೋರಿ ಇಡೀ ಚರ್ಚನ್ನು ಗಂಜಿ ಕೇಂದ್ರವಾಗಿಸಿ ಸಲಹಿದರು. ಅಂದಿನ ದುಃಸ್ಥಿತಿ ಎಷ್ಟಿತ್ತೆಂದರೆ ಗುರು ರೆಜಿನಾಲ್ಡ್ ಪಿಂಟೋ ಅವರು ಎಲ್ಲೆಲ್ಲಿಂದಲೋ ಅಕ್ಕಿ ಸಂಗ್ರಹಿಸಿ ಮಳೆಗಾಲದಲ್ಲಿ ತಿಂಗಳುಗಟ್ಟಳೆ ನಿರಾಶ್ರಿತರನ್ನು ಸಾಕಿ ಸಲಹಿದರು. ಪಣೆಕಲ ಅರಮನೆಯವರು ಈ ಸಂದರ್ಭದಲ್ಲಿ 800 ಮುಡಿ ಅಕ್ಕಿಯನ್ನು ನಿರಾಶ್ರಿತರಿಗಾಗಿ ಚರ್ಚಿಗೆ ದಾನವಾಗಿ ನೀಡಿ ಸಹಕರಿಸಿದ್ದರು. ಮದರಾಸ್ ಗವರ್ನರ್ ರಿಂದ ನಿರಾಶ್ರಿತರ ಖರ್ಚಿಗೆಂದು ರೂ. 1000 ಮಾತ್ರ ಸಿಕ್ಕಿತ್ತು. ಇಂತಹ ಕಷ್ಟಕರ ಸಂದರ್ಭದಲ್ಲಿ ತಮಗೆ ಆಶ್ರಯವನ್ನು ನೀಡಿ ಹಸಿವನ್ನು ನೀಗಿಸಿದ ಗುರುಗಳ ಮೇಲೆ ಎಷ್ಟರ ಮಟ್ಟಿಗೆ ಗೌರವ ಹಾಗೂ ಅಭಿಮಾನವಿತ್ತೆಂದರೆ, ಅವರು ಇಲ್ಲಿಂದ ವರ್ಗವಾಗಿ ಹೋಗುವಾಗ ಬಂಟ್ವಾಳದ ಗೌಡ ಸಾರಸ್ವತ ಬಾಂಧವರು ಅವರನ್ನು ಬ್ಯಾಂಡು ವಾದ್ಯಗಳೊಂದಿಗೆ ಬಂಟ್ವಾಳದವರೆಗೆ ಕರೆತಂದು ಬಂಗಾರದ ಚಿಕ್ಕ ಶಿಲುಬೆಯೊಂದನ್ನು ನೀಡಿ ಕೃತಜ್ಞತೆಯೊಂದಿಗೆ ಕಳುಹಿಸಿಕೊಟ್ಟಿದ್ದರೆಂದು ಹಿರಿಯ ತಲೆಮಾರಿನವರು ಈಗಲೂ ಸ್ಮರಿಸಿಕೊಳ್ಳುತ್ತಾರೆ.
ಕಾರ್ಕಳದ ಗೌಡ ಸಾರಸ್ವತ ಸಮಾಜ ಬಾಂಧವರು ಬಟ್ಟೆಬರೆ, ಆಹಾರ ಹಾಗೂ ಅವಶ್ಯಕ ದೈನಂದಿನ ಸಾಮಗ್ರಿಗಳನ್ನು ನೀಡಿ ಉಪಕರಿಸಿದ್ದರು ಎಂಬುದಾಗಿ ತಿಳಿದುಬರುತ್ತದೆ. ಇಂತಹದ್ದೇ ಇನ್ನೊಂದು ಮಹಾನೆರೆ 1974ರ ಜುಲಾಯಿ 25 26 ರಂದು ಬಂದಾಗ ಬಂಟ್ವಾಳ ಪೇಟೆಯಲ್ಲಿದ್ದ ಒಂದೇ ಒಂದು ಕ್ರೈಸ್ತ ಮನೆಯಾದ ಶ್ರೀ ಅಲ್ಫಾನ್ಸ್'ಡಿಸೋಜ ಹಾಗೂ ಮನೆಯವರನ್ನು ಬಂಟ್ವಾಳದ ಗೌಡ ಸಾರಸ್ವತ ಬಾಂಧವರು ಕರೆತಂದು ಆಶ್ರಯವನ್ನು ನೀಡಿ ಫ್ರೀತಿಯಿಂದ ಉಪಚರಿಸಿದ್ದರೆಂದು ತಿಳಿದುಬರುತ್ತದೆ.
ನೆರೆಯಿಂದಾದ ಪರಿಣಾಮ: ಸುಮಾರು ಐವತ್ತು ಲಕ್ಷ ರೂಪಾಯಗಳಷ್ಟು ನಷ್ಟ, ಹತ್ತು ಸಾವಿರ ಮನೆಗಳ ನಾಶ, ಐವತ್ತು ಸಾವಿರ ಜನ ನಿರಾಶ್ರಿತರಾದದ್ದಲ್ಲದೆ ಮೂವತ್ತೆರಡು ಸಾವಿರ ಅಕ್ಕಿ ಮುಡಿ ನೀರಲ್ಲಿ ತೇಲಿ ಹೋದವು. ಅಳಿದುಳಿದ ಬೆರಳೆಣಿಕೆಯಷ್ಟು ಮನೆಗಳಲ್ಲಿ ಕೆಸರು ತುಂಬಿಕೊಂಡು ಪೇಟೆ ಸ್ಮಶಾನ ಮೌನಕ್ಕೆ ಜಾರಿತ್ತು. ಮರಮಟ್ಟುಗಳ ರಾಶಿ, ಸಾಕು ಪ್ರಾಣಿಗಳ ಮೃತ ದೇಹ, ಬಂಡಸಾಲೆಯಲ್ಲಿ ಪೇರಿಸಿಟ್ಟಿದ್ದ ಸಾಮಾನುಗಳು ಕೊಳೆತು ಯಾತನಾಮಯ ದುರ್ಗಂಧ ಬೀರುತ್ತಿತ್ತು. ಒಟ್ಟಿನಲ್ಲಿ ಕರುಳು ಕಿತ್ತು ಬರುವ ಬೀಭತ್ಸ ದೃಶ್ಯಾವಳಿಗಳು.
1923ರಲ್ಲಿ ಶ್ರೀ ವೆಂಕಟರಮಣ ದೇವಳದಲ್ಲಿ ಸಹಸ್ರ ಕುಂಭಾಭಿಷೇಕ ಮಾಡುವರೇ ತಯಾರಿ ನಡೆಸಲಾಗಿತ್ತು. ದುರದೃಷ್ಟವಶಾತ್ ಮಾರಿ ಬೊಳ್ಳಕ್ಕೆ ಒಂದು ಸಾವಿರ ಮಣ್ಣಿನ ಕುಂಭಗಳೂ ಕೊಚ್ಚಿ ಹೋದುವು. ನೆರೆಯ ಪರಿಣಾಮವಾಗಿ, ಬಂಟ್ವಾಳದಲ್ಲಿದ್ದ ಕೋರ್ಟ್, ಜೈಲು, ಪೊಲೀಸ್ ಠಾಣೆ ಇತ್ಯಾದಿಗಳು 1933ರಲ್ಲಿ ಬಿ.ಸಿ ರೋಡಿಗೆ ಸ್ಥಳಾಂತರಗೊಂಡವು. 1914ರಲ್ಲಿ 288 ಮೀಟರ್ ಉದ್ದಕ್ಕೆ ರಚನೆಗೊಂಡಿದ್ದ ಪಾಣೆಮಂಗಳೂರು ನೂತನ ಸೇತುವೆಯ, ಬಳಗದ ಗುಡ್ಡೆಯ ಸಮೀಪವಿರುವ ಆರಂಭದ ಇಬ್ಬದಿಯ ಮಣ್ಣು 1923ರ ನೆರೆಗೆ ಕೊಚ್ಚಿಹೋಗಿ ಸಂಪರ್ಕ ಸ್ಥಗಿತಗೊಂಡಿತ್ತು. ಇದರ ಹಿನ್ನೆಲೆಯಲ್ಲಿ ಸ್ಥಳೀಯ ಉಕ್ಕನ್ನು ಬಳಸಿ ಸೇತುವೆಯ ಉದ್ದವನ್ನು 346 ಮೀಟರಿಗೆ ಮತ್ತೆ ವಿಸ್ತರಿಸಿ ಸಂಪರ್ಕವನ್ನು ಕಲ್ಪಿಸಲಾಯಿತು.
ಇದೇ ಮಾರಿ ಬೊಳ್ಳಕ್ಕೆ ಕಡೇಶ್ವಾಲ್ಯ ದೇವಳದ ಬ್ರಹ್ಮರಥ ಪ್ರವಾಹಕ್ಕೆ ತೇಲಿ ಬಂದು ಇದೇ ಸೇತುವೆಗೆ ಡಿಕ್ಕಿ ಹೊಡೆದು ಸೇತುವೆ ಹಾನಿಗೊಂಡಿತ್ತೆಂದೂ ಜನರು ಆಡಿಕೊಳ್ಳುವ ಮಾತಾಗಿದೆ. ಆಶ್ಚರ್ಯವೆಂದರೆ, ಒಂದು ಸಂದರ್ಭದಲ್ಲಿ, ನೆರೆಗೆ ಹೆದರಿ ಪರವೂರಿನ ಹುಡುಗಿಯರನ್ನು ಬಂಟ್ವಾಳದ ಹುಡುಗರಿಗೆ ಮದುವೆ ಮಾಡಿಕೊಡಲೂ ಹಿಂಜರಿಯುತ್ತಿದ್ದರೆಂದು ತಿಳಿದುಬರುತ್ತದೆ.
ನೆರೆಯ ಕುರಿತು ಹೀಗೊಂದು ವಿಚಾರವೂ ಇದೆ: ಇದು ಅವಧೂತ ಭಗವಾನ್ ನಿತ್ಯಾನಂದ ಎಂಬ ಪುಸ್ತಕದಲ್ಲಿ ದೊರೆಯುತ್ತದೆ. ಈ ಭಾಗಕ್ಕೆ ನಿತ್ಯಾನಂದ ಭಗವಾನರು ಹೋಗಿದ್ದ ಸಂದರ್ಭ, ಅವರಿಗೆ ಉಪಟಳಗಳು ಉಂಟಾದವು. ಗಂಗೆಯನ್ನು ಅವರು ಪ್ರಾರ್ಥಿಸಿದಾಗ ಒಮ್ಮಿಂದೊಮ್ಮೆಲೇ ಮೋಡ ಕವಿದು ಧಾರಾಕಾರ ಮಳೆ ಸುರಿಯಲಾರಂಭಿಸಿತು. ನೇತ್ರಾವತಿ ಪ್ರಳಯ ನರ್ತನ ಮಾಡುತ್ತಾ ಉಕ್ಕುತ್ತಾ ಮನೆ, ಅಂಗಡಿ, ಹೊಲಗಳು ನಾಶವಾದವು. ಹಸು, ನಾಯಿ, ಮರ, ಮನುಷ್ಯರು ಪ್ರವಾಹದಲ್ಲಿ ಕೊಚ್ಚಿ ಹೋಗತೊಡಗಿದಾಗ ಭಗವಾನ್ ನಿತ್ಯಾನಂದರು ಮರದ ಮೇಲೆ ಅಂತರಮುಖಿಯಾಗಿ ಕುಳಿತಿದ್ದರು. ಜನರು ನಿತ್ಯಾನಂದರ ಬಳಿ ಬಂದಾಗ " ನೇತ್ರಾವತಿಗೆ ನಮಸ್ಕರಿಸಿ ಕುಂಕುಮಾರ್ಚನೆ ಮಾಡಿ ಆಕೆಯನ್ನು ಪ್ರಾರ್ಥಿಸಿರಿ" ಎಂದರು. ಹಾಗೆಯೇ ಪೂಜೆ ಮಾಡಿದಾಗ ನೀರು ಇಳಿದು ಹಿಂದೆ ಸರಿಯಿತು. ಬಂಟವಾಳ ಶಾಂತವಾಯಿತು. 'ಅವಧೂತ ಭಗವಾನ್ ನಿತ್ಯಾನಂದ' ಎಂಬ ಪುಸ್ತಕದಲ್ಲಿ ಸ್ವಾಮಿ ವಿಜಯಾನಂದ, ಬೇವಿನಕೊಪ್ಪ ಎಂಬವರು ಈ ವಿಚಾರವನ್ನು ಉಲ್ಲೇಖಿಸಿದ್ದಾರೆ. ಬಂಟ್ವಾಳವನ್ನು ಇನ್ನಿಲ್ಲದಂತೆ ನುಂಗಿಹಾಕಿದ ಮಾರಿ ಬೊಳ್ಳಕ್ಕೆ ಶತಮಾನದ ಸಂದರ್ಭ.(7.8.1923-7.8.2023).
ಲೇಖನಃ ಪ್ರೊ| ರಾಜಮಣಿ ರಾಮಕುಂಜ
ಸಹಕಾರಃ ಶ್ರೀನಿವಾಸ ಬಾಳಿಗ.
ಸಾಂದರ್ಭಿಕ ಚಿತ್ರ ಕೃಪೆ: ಇಂತರ್ನೆಟ್ ತಾಣ