ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ

ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ

ಬರಹ

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ "ಕ್ಲಾಸಿಕಲ್" ಭಾಷೆ ಕುರಿತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಯೇ ನಡೆದಿದೆ. UNESCO(ಯುನೆಸ್ಕೊ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ) ಬಹಳ ವರ್ಷಗಳ ಹಿಂದೆಯೇ ಭಾರತದ ಅತ್ಯಂತ ಪ್ರಾಚೀನ ಭಾಷೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿರುವ ಸಂಸ್ಕೃತವನ್ನು ಒಳಗೊಂಡಂತೆ ಕ್ಲಾಸಿಕಲ್ ಗ್ರೀಕ್, ಲ್ಯಾಟಿನ್ ಮತ್ತು ಕ್ಲಾಸಿಕಲ್ ಪರ್ಶಿಯನ್ (ಇಂಡೋ-ಯುರೋಪಿಯನ್ ಭಾಷೆಗಳು) ಕ್ಲಾಸಿಕಲ್ ಚೈನೀಸ್ (ಸೈನೊ-ಟಿಬೆಟಿಯನ್ ಭಾಷೆ) ಭಾಷೆಗಳನ್ನು "ಕ್ಲಾಸಿಕಲ್" ಭಾಷೆಗಳೆಂದು ಗುರುತಿಸಿತ್ತು. ನಮ್ಮ ದೇಶದಲ್ಲಿ ಈ ಶಾಸ್ರೀಯ ಭಾಷೆ ಎಂಬುದರ ಕುರಿತು ಚರ್ಚೆ ನಡೆಯಲಾರಂಭಿಸಿದ್ದು ನಮ್ಮ ನೆರೆಯ ಭಾಷೆ, ದ್ರಾವಿಡ ಭಾಷೆಗಳಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಯೆಂದು ಹೇಳಲಾಗುವ ತಮಿಳನ್ನು ಭಾರತ ಸರಕಾರ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿದ ನಂತರವೇ. 2004 ನೇ ಇಸವಿ ಅಕ್ಟೋಬರ್ 12 ರಂದು ಕೇಂದ್ರ ಸರಕಾರ ಈ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ತಮಿಳನ್ನು ಅಧಿಕೃತವಾಗಿ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿತು. ಆನಂತರವಷ್ಟೇ ಕರ್ನಾಟಕದಲ್ಲಿ ಕ್ಲಾಸಿಕಲ್ ಭಾಷೆಯ ಕುರಿತು ಚರ್ಚೆ ನಡೆಯಲಾರಂಭಿಸಿದ್ದು. ಒಂದು ವೇಳೆ ತಮಿಳಿಗೆ ಕ್ಲಾಸಿಕಲ್ ಭಾಷೆ ಸ್ಥಾನಮಾನ ಸಿಗದಿದ್ದಲ್ಲಿ ಈ ಚರ್ಚೆಯೇ ಹುಟ್ಟುತ್ತಿರಲಿಲ್ಲವೇನೋ. ಅಂದು ಆರಂಭವಾದ ಚರ್ಚೆ ಇಲ್ಲಿಯವರೆಗೂ ಮುಂದುವರಿಯುತ್ತಲೇ ಬಂದಿದೆ.

ಇನ್ನು ಯುನೆಸ್ಕೊ ಕ್ಲಾಸಿಕಲ್ ಭಾಷೆಗಳೆಂದು ಮಾನ್ಯ ಮಾಡಿರುವ ಭಾಷೆಗಳ ಪಟ್ಟಿಯಲ್ಲಿರುವ ಪಾಲಿಯಲ್ಲಿ ಬುದ್ಧ ತನ್ನ ಬೋಧನೆಯನ್ನು ನೀಡಿದ, ಅಂದು ಜನಸಾಮಾನ್ಯರ ಆಡು ಭಾಷೆಯಾಗಿದ್ದ ಪಾಲಿಯಾಗಲಿ, ಆಡಳಿತಾತ್ಮಕವಾಗಿ ಅಸ್ತಿತ್ವದಲ್ಲಿದ್ದ ಪ್ರಾಕೃತವಾಗಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಯುನೆಸ್ಕೋ ಮಾನದಂಡಗಳು, ಭಾಷಿಕ ಕಾರಣಗಳೇನೇ ಇದ್ದರೂ, ಪಾಲಿ ಹಾಗೂ ಪ್ರಾಕೃತ ಕ್ಲಾಸಿಕಲ್ ಸ್ಥಾನಮಾನಕ್ಕೆ ಸಂಸ್ಕೃತದಷ್ಟೇ ಅರ್ಹವಾದುವು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಯೇ ಪಾಲಿ ಪ್ರಾಕೃತ ಭಾಷೆಗಳು ಅತ್ಯಂತ ಪ್ರಾಚೀನ ಭಾರತೀಯ ಭಾಷೆಗಳಲ್ಲಿ ಪ್ರಮುಖವಾದವುಗಳಾದ ಕಾರಣ ಭಾರತದಲ್ಲಿಯೂ ಕೂಡ ಅವು ಕ್ಲಾಸಿಕಲ್ ಸ್ಥಾನಮಾನ ಪಡೆಯಬೇಕಿತ್ತು. ಆದರೆ ಭಾರತ ಸರಕಾರ ಕ್ಲಾಸಿಲ್ ಭಾಷೆಗಳೆಂದು ಘೋಷಿಸಲು ನಿಗದಿಪಡಿಸಿರುವ ಕಾರಣಗಳಿಂದಾಗಿ ಇದು ಸಾಧ್ಯವಾಗಲಾರದು. ಇನ್ನು ಯುನೆಸ್ಕೊ ಕ್ಲಾಸಿಕಲ್ ಭಾಷಾ ಪಟ್ಟಿಯಲ್ಲಿರುವ ಭಾಷೆಗಳಾವೂ ಇಂದು ಜೀವಂತವಾಗಿಲ್ಲ ಅಂದರೆ ಪಾರಿಭಾಷಿಕವಾಗಿ ಹೇಳುವುದಾದರೆ, ಮೃತ ಭಾಷೆಗಳಾಗಿವೆ. ಹಾಗೂ ಇಂದು ಬಳಕೆಯಲ್ಲಿರುವ ಅರೇಬಿಕ್ ಹಾಗೂ ಚೈನೀಸ್ ಗೂ, ಕ್ಲಾಸಿಕಲ್ ಅರೇಬಿಕ್ ಹಾಗೂ ಕ್ಲಾಸಿಕಲ್ ಚೈನೀಸ್ ಗೂ ಭಾರೀ ವ್ಯತ್ಯಾಸವೇ ಇದೆ. ಹಾಗಾಗಿ ಕ್ಲಾಸಿಕಲ್ ಭಾಷೆಗಳು ಎಂದರೆ ಪ್ರಾಚೀನ ಭಾಷೆಗಳು ಮಾತ್ರವಲ್ಲ, ಮೃತ ಭಾಷೆಗಳೂ ಕೂಡ ಆಗಿವೆ. ಅಂದಮೇಲೆ, ಭಾರತ ಸರಕಾರ ಕ್ಲಾಸಿಕಲ್ ಭಾಷೆಗಳೆಂದು ಘೋಷಿಸಿರುವ ತಮಿಳು ಹಾಗೂ ಸಂಸ್ಕೃತಗಳಲ್ಲಿ ಸಂಸ್ಕೃತ ಮೃತ ಭಾಷೆಯೆನಿಸಿದ್ದರೂ ತಮಿಳು ಜೀವಂತವಾಗಿಯೇ ಇದೆ.

ಆದರೆ, ಭಾರತ ಸರಕಾರ ಒಂದು ಭಾಷೆಯನ್ನು ಕ್ಲಾಸಿಕಲ್ ಭಾಷೆ ಎಂದು ಮಾನ್ಯ ಮಾಡುವುದಕ್ಕೆ ನಿಗದಿಪಡಿಸಿರುವ ಚಹರೆಗಳ ಪ್ರಕಾರ, 'ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯ ಪ್ರಸ್ತುತ ಭಾಷೆ ಮತ್ತು ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಅಥವಾ ಅದರಿಂದ ಬೆಳವಣಿಗೆ ಹೊಂದಿದ ಭಾಷೆಗಳಿಗಿಂತ ಬೇರೆಯದು ಎನಿಸುವ ಹಾಗೇ ಇರಬೇಕು'(ಉದಾಹರಣೆ: ಲ್ಯಾಟಿನ್ ಗಿಂತ ರೋಮನ್, ಸಂಸ್ಕೃತ-ಪಾಲಿಗಿಂತ ಪ್ರಾಕೃತ ಮತ್ತು ಆಧುನಿಕ ಇಂಡೋ-ಆರ್ಯನ್ ಭಾಷೆಗಳು ಭಿನ್ನವಾಗಿರುವ ಹಾಗೆ). ಈ ಕಾರಣದಿಂದಾಗಿ ಕ್ಲಾಸಿಕಲ್ ಭಾಷೆಯ ಸ್ಥಾನಮಾನಕ್ಕೆ ತಮಿಳು ಅರ್ಹತೆ ಪಡೆದುಕೊಂಡಿದೆ. ಕನ್ನಡ ಕೂಡ ಇದಕ್ಕೆ ಹೊರತಾಗಿಲ್ಲವೆನ್ನುವುದು ಬೇರೆ ವಾದ.

"ಕ್ಲಾಸಿಕಲ್" ಭಾಷೆ ಎಂದರೇನು ?

ಈ ಕ್ಲಾಸಿಕಲ್ ಪದಕ್ಕೆ ಸಂವಾದಿಯಾಗಿ ಪ್ರಸ್ತುತ ಕನ್ನಡದಲ್ಲಿ ಬಳಕೆಯಲ್ಲಿರುವ ಪದ "ಶಾಸ್ತ್ರೀಯ". ಆದರೆ, ಈ ಪದದ ಕುರಿತು ವಿದ್ವಾಂಸರಲ್ಲಿ ಒಮ್ಮತಾಭಿಪ್ರಾಯವಿಲ್ಲ. ಕೆಲವು ವಿದ್ವಾಂಸರು ಶಾಸ್ತ್ರಗಳ ಮೂಲಕ ಅಧ್ಯಯನ ಮಾಡುವಂತಹದ್ದನ್ನು "ಶಾಸ್ತ್ರೀಯ" ಎಂದು ಕರೆಯಬಹುದು. ಆದರೆ, ಭಾಷೆಯೆಂಬುದು ಹಾಗೆ ಶಾಸ್ತ್ರಗಳಿಂದ ರಚಿಸಲ್ಪಟ್ಟಿಲ್ಲ. ಭಾಷೆಯ ಕುರಿತು ಅಧ್ಯಯನ ನಡೆಸುವ ಶಾಸ್ತ್ರವನ್ನು "ಭಾಷಾಶಾಸ್ತ್ರ" ಎಂದು ಕರೆಯಬಹುದೇ ಹೊರತು, ಭಾಷೆಯೆಂಬುದು ಹಾಗೆ ಪೂರ್ವ ರಚಿತ ಶಾಸ್ತ್ರಗಳಿಂದಾಗಲಿ, ಪಠ್ಯಗಳಿಂದಾಗಲಿ ಹುಟ್ಟಿದ್ದಲ್ಲ ಎಂದು ತಕರಾರೆತ್ತಿದ್ದಾರೆ. ಅಲ್ಲದೇ, "ಶಾಸ್ತ್ರೀಯ" ಎನ್ನುವ ಪದ ಇಂಗ್ಲೀಷ್ನ "ಕ್ಲಾಸಿಕಲ್" ಪದ ನೀಡುವ ಅರ್ಥವನ್ನೇನೂ ನೀಡುವುದಿಲ್ಲ. ಹಾಗಾಗಿ "ಅಭಿಜಾತ" ಎನ್ನುವ ಪದ ಹೆಚ್ಚು ಸೂಕ್ತ ಎಂದು ವಾದಿಸಿದ್ದಾರೆ. ಆದರೂ ಸದ್ಯ ಪ್ರಚಲಿತವಾಗಿರುವ ಪದ "ಶಾಸ್ತ್ರೀಯ". ಕನ್ನಡಿಗರಿಗಿಂತ ಹೆಚ್ಚು ಭಾಷಾಭಿಮಾನವನ್ನು ಹೊಂದಿರುವ ಭಾಷೆಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವ ತಮಿಳರು "ಕ್ಲಾಸಿಕಲ್" ಪದಕ್ಕೆ ಸಂವಾದಿಯಾಗಿ ಚೆಮ್ಮೊಳಿ(ಚೆಮ್ಮೈ-ಶ್ರೇಷ್ಟ, ಮಾಲಿ-ಭಾಷೆ) ಪದವನ್ನು ಉಳಿಸಿಕೊಂಡಿದ್ದಾರೆ. ಹಾಗೇಯೇ ಶಾಸ್ತ್ರೀಯ ತಮಿಳು ಉನ್ನತ ಅಧ್ಯಯನ ಕೇಂದ್ರ ಹೊರತರುತ್ತಿರುವ ವಾರ್ತಾ ಪತ್ರಿಕೆಗೂ "ಚೆಮ್ಮೊಳಿ" ಎನ್ನುವ ಹೆಸರನ್ನೇ ನೀಡಿದ್ದಾರೆ. ಕನ್ನಡದಲ್ಲಿ "ಚೆಮ್ಮೊಳಿ" ಪದಕ್ಕೆ ಸಂವಾದಿಯಾಗಿ "ಚೆನ್ನುಡಿ" ಎನ್ನುವ ಪದ ಇದ್ದು, ಅದು ಕೂಡ ತಮಿಳಿನಲ್ಲಿರುವ ಹಾಗೆಯೇ ಚೆಂದದ ಮಡಿ, ಸುಂದರವಾದ ನುಡಿ, ಶ್ರೇಷ್ಠವಾದ ನುಡಿ ಎಂಬ ಅರ್ಥವನ್ನೇ ಹೊಂದಿರುವುದನ್ನು ಗಮನಿಸಬಹುದು. "ಶಾಸ್ತ್ರೀಯ ಭಾಷೆ" ಕುರಿತ ಚರ್ಚೆಗೆ ಮುನ್ನುಡಿ ಇನ್ನು ಈ ಶಾಸ್ತ್ರೀಯ ಭಾಷೆ ಕುರಿತು ಇಷ್ಟೋಂದು ಚರ್ಚೆ ಆರಂಭವಾದದ್ದಾದರೂ ಹೇಗೆ? ಎನ್ನುವ ಕುತೂಹಲ ಎಲ್ಲರಲ್ಲೂ ಮೂಡುತ್ತದೆ. ಅದಕ್ಕೆ ಕಾರಣ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬರ್ಕಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ತಮಿಳು ಮತ್ತು ಸಂಸ್ಕೃತ ಪ್ರಾಧ್ಯಾಪಕರಾಗಿರುವ ಜಾರ್ಜ್ ಎಲ್.ಹಾರ್ಟ್ ಎಂಟು ವರ್ಷಗಳ ಹಿಂದೆಯೇ ಅಂದರೆ, 2000ನೇ ಇಸವಿ ಏಪ್ರಿಲ್ನಲ್ಲಿ ತಮಿಳು ಭಾಷೆ ಶಾಸ್ತ್ರೀಯ ಸ್ಥಾನಮಾನಕ್ಕೆ ಹೇಗೆ ಅರ್ಹ ಎನ್ನುವ ಕುರಿತು ಅಂತರ್ಜಾಲದಲ್ಲಿ ಒಂದು ಲೇಖನ ಪ್ರಕಟಿಸಿದ್ದರು. ಆ ಲೇಖನದಲ್ಲಿ ತಮಿಳು ಭಾಷೆಯ ಪ್ರಾಚೀನತೆ ಕುರಿತು ವಿಸ್ತೃತವಾಗಿ ಚರ್ಚಿಸಿದ್ದ ಅವರು ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದರು. ಅದೇ ಇಂದು ತಮಿಳು ಶಾಸ್ತ್ರೀಯ ಸ್ಥಾನಮಾನ ಗಿಟ್ಟಿಸಲು ಕಾರಣವಾಯಿತು ಎಂದು ಸ್ಥೂಲವಾಗಿ ಹೇಳಬಹುದು. ಆದರೆ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಪರಿಗಣಿಸಬೇಕೆನ್ನುವ ಒತ್ತಾಯ ಬಹಳ ಹಿಂದೆಯೇ ಆರಂಭವಾಯಿತು. ಅದೂ ಶತಮಾನದ ಹಿಂದೆ ಬ್ರಿಟೀಶ್ ಆಡಳಿತವಿದ್ದಾಗಲೇ ಪರುತ್ತಿಮಲ್ ಕಲೈಂಗ್ನರ್ ಎಂಬ ವಿದ್ವಾಂಸರು 1887 ರಷ್ಟು ಹಿಂದೆಯೇ ಬ್ರಿಟೀಶ್ ಸರಕಾರದ ಮೇಲೆ ಈ ಒತ್ತಾಯವನ್ನು ತಂದಿದ್ದರು. ಅಂದಿನಿಂದ ಇಲ್ಲಿಯವರೆಗೆ ಕಾಲಕಾಲಕ್ಕೆ ಅಂದಂದಿನ ತಮಿಳುನಾಡು ಸರಕಾರಗಳು ಎಡಬಿಡದೆ ಕೇಂದ್ರ ಸರಕಾರಗಳ ಮೇಲೆ ಒತ್ತಡ ಹೇರುತ್ತಲೇ ಬಂದವು. ಆದರೆ, ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತದ್ದು 2004ನೇ ಇಸವಿ ಅಕ್ಟೋಬರ್ 12ನೇ ತಾರೀಖಿನಂದು. ಕನ್ನಡಕ್ಕೆ ಎಂದಾದರೂ ಇಂತಹ ಪರಿಕಲ್ಪನೆ ಮೂಡಿತ್ತೇ? ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತದ್ದರ ಹಿಂದೆ ಯಾವುದೇ ಹಿತಾಸಕ್ತಿಗಳು ಕೆಲಸ ಮಾಡಿದ್ದರೂ, ತಮಿಳರ ಭಾಷಾಭಿಮಾನ, ಭಾಷೆಯೊಂದಿಗೆ ತಮ್ಮ ಸಂಸ್ಕೃತಿಯೊಂದಿಗೆ ತಮ್ಮನ್ನು ತಾವು ಗುರುಸಿಕೊಳ್ಳುವ ರೀತಿ ಮೆಚ್ಚುವಂತಹದ್ದು.