ಶ್ರಾವಣ ಮಾಸದ ತೋರಣದಲಡಗಿದೆ ಹಬ್ಬಗಳ ಸಾಲು…

‘ಶ್ರಾವಣ ಮಾಸ’ ದ ಆಗಮನದೊಂದಿಗೆ ಸಾಲು ಸಾಲು ಹಬ್ಬಗಳ ಭರಾಟೆ. ಎಷ್ಟೇ ಕಷ್ಟವಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ವೈಶಿಷ್ಠ್ಯತೆಯೇ ವಿಭಿನ್ನ, ವಿಶೇಷ. ಭಾರತೀಯರ ರಕ್ತದಲ್ಲಿ ಅದು ಹಾಸುಹೊಕ್ಕಾಗಿದೆ. ಈ ಹಬ್ಬಗಳ ಆಚರಣೆ ಪೀಳಿಗೆಯಿಂದ ಪೀಳಿಗೆಗೆ ಸಾಗುವ ಉದ್ದೇಶವೂ ಆಚರಣೆಯ ಹಿಂದೆ ಇರಬಹುದು. ಸತ್ಯ ಮತ್ತು ಸತ್ವ ಎರಡೂ ಅಡಗಿದೆ ಹಬ್ಬದೊಳಗಡೆ, ಅಲ್ಲಿ ನಂಬಿಕೆ, ವಿಶ್ವಾಸ, ಬಾಂಧವ್ಯ, ಬೆಸುಗೆಯ ಬೇರುಗಳಿವೆ ಬೇರುಗಳಿಗೆ ಪೆಟ್ಟಾಗದಂತೆ, ಗಾಯಗಳಾಗದಂತೆ ನಮ್ಮ ಆಚರಣೆಗಳಿರಬೇಕು. ಹೆಂಗಳೆಯರಿಗೂ ಹಬ್ಬಗಳಿಗೂ ಅವಿನಾಭಾವ ಸಂಬಂಧ ಬೆಸೆದಿದೆ ಎಂದರೂ ತಪ್ಪಾಗಲಾರದು. ಕುಟುಂಬ ಕ್ಷೇಮ, ಹಿರಿ ಕಿರಿಯರ ಆರೋಗ್ಯ, ಕೈಹಿಡಿದವನ ಆಯುಷ್ಯವೃದ್ಧಿ, ಪ್ರಕೃತಿಯ ಆರಾಧನೆ, ಸೋದರ-ಸೋದರಿ ಸಂಬಂಧ ಹೀಗೆ ಹತ್ತು ಹಲವು ಪೂಜೆಗಳ ತಯಾರಿಯಲ್ಲಿ ಸಿಂಹಪಾಲು ಮಹಿಳೆಯರದು.
ಈಗ ಹೇಳಹೊರಟಿರುವುದು ‘ನಾಗರಪಂಚಮಿ’ ಯ ಬಗ್ಗೆ. ಬಂದೇ ಬಿಟ್ಟಿತಲ್ಲ? ಪ್ರಸಕ್ತ ಸನ್ನಿವೇಶದಲ್ಲಿ ಕಳೆದ ವರ್ಷದಂತಲ್ಲ. ಎಲ್ಲರೊಂದಿಗೆ ಆಚರಿಸಬಹುದು. ಅವರವರ ಮನೆಯಲ್ಲಿ ಸಹ ಲೋಪವಾಗದಂತೆ ಆಚರಿಸಬಹುದು. ಶ್ರಾವಣಮಾಸ ಶುಕ್ಲಪಕ್ಷ ಪಂಚಮಿಯ ದಿನ ನಾಗದೇವತೆಯ ಪೂಜೆ. ನಾಗನ ಹುತ್ತಕ್ಕೆ ಹಾಲು ಎರೆಯುವುದು, ಬೆಳ್ಳಿಯ ಆಭರಣಗಳನ್ನು ನಾಗದೇವರಿಗೆ ಅರ್ಪಿಸುವುದು ಇದೆಲ್ಲ ಭಕ್ತರ ನಂಬಿಕೆಗೆ ಬಿಟ್ಟ ವಿಷಯ.
ಈ ಹಬ್ಬದ ಆಚರಣೆಯ ಹಿಂದಿನ ಪುರಾಣ ವಿಷಯಗಳನ್ನು ನಾನಾ ರೀತಿಯಲ್ಲಿ ನಾವು ಓದಬಹುದು. ಯಮುನಾ ತೀರದಲ್ಲಿ ಕೃಷ್ಣ ಚೆಂಡಿನಾಟವನ್ನು ತನ್ನ ಗೆಳೆಯರನ್ನೆಲ್ಲ ಸೇರಿಸಿಕೊಂಡು ಆಡುವ ಸಮಯದಲ್ಲಿ ಚೆಂಡು ನದಿಗೆ ಬಿತ್ತು. ಹುಡುಕುತ್ತಾ ಹೋದ ಕೃಷ್ಣ ಸಹ ಬಿದ್ದ. ಕಾಳಿಂಗ ಸರ್ಪದ ಜೊತೆ ಕಾಳಗವಾಡಿ ಮಣಿಸಿದ ಬಾಲಕ ಕೃಷ್ಣ ಇದೇ ದಿನದಂದು ಆದ ಕಾರಣ ನಾಗರಪಂಚಮಿ ಎಂದು ತಿಳಿದು ಬರುತ್ತದೆ.
ಇನ್ನೊಂದೆಡೆ ಸ್ಕಂದಪುರಾಣದಲ್ಲಿ ಕಂಡಂತೆ ದೇವಶರ್ಮನೆಂಬವನಿಗೆ ೮ ಗಂಡು ಮಕ್ಕಳು, ಓರ್ವಳೇ ಹೆಣ್ಣು ಮಗಳು. ಗರುಡನಿಂದ ಪೆಟ್ಟು ತಿಂದ ನಾಗರಹಾವೊಂದು ಇದೇ ಹೆಣ್ಣು ಮಗಳ ಉಪಚಾರದಿಂದ ಚೇತರಿಸಿಕೊಳ್ಳುತ್ತದೆ. ಉಪಕಾರ ಸ್ಮರಣೆಗಾಗಿ ದಿನಾ ಒಂದು ತೊಲೆ ಬಂಗಾರ ನೀಡುತ್ತದೆ. ಇದನ್ನು ಕಂಡ ಸಹೋದರನೊಬ್ಬ ಆ ಸರ್ಪವನ್ನು ಕೊಲ್ಲಲು ಪ್ರಯತ್ನಿಸಿದಾಗ ಆ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲುತ್ತದೆ. ನಿತ್ಯವೂ ಹಾಲು ನೀಡುತ್ತಿದ್ದ ಆ ಕುವರಿ ದುಃಖಿಸಿ, ಅಣ್ಣಂದಿರನ್ನು ಮರಳಿಕೊಡು , ಇಲ್ಲದಿದ್ದರೆ ಶಿರವನ್ನೇ ತುಂಡರಿಸುವೆ ಹೇಳುವಳು. ಆಗ ಶ್ರೀ ಮನ್ನಾರಾಯಣನು ವಾಸುಕಿಗೆ ಹೇಳಿ ಎಲ್ಲಾ ಸಹೋದರರನ್ನು ಬದುಕಿಸುತ್ತಾನೆ. ಸಂತೋಷಗೊಂಡ ಕನ್ನಿಕೆ ಕುಣಿದಾಡುತ್ತಾಳೆ. ಈ ಅಣ್ಣ-ತಂಗಿ ಪ್ರೀತಿ, ಅಣ್ಣಂದಿರು ಮರಳಿ ಬಂದ ದಿನವೇ ನಾಗರಪಂಚಮಿ ಆಚರಣೆಯಾಯಿತಂತೆ.
ಜನಮೇಜಯ ಅರಸ ತನ್ನ ತಂದೆ ಪರೀಕ್ಷಿತನ ಸಾವಿಗೆ ಕಾರಣವಾದ ಸರ್ಪಗಳ ಸಂತತಿಯ ಸರ್ವನಾಶಕ್ಕಾಗಿ ಸರ್ಪಯಜ್ಞ ಮಾಡಿದನಂತೆ. ಸರ್ಪಗಳ ಬಂಧುವಾದ ಆಸ್ತಿಕ ಋಷಿಯು ರಾಜನಲ್ಲಿಗೆ ಬಂದು ಬಹುವಿಧವಾಗಿ ಯಜ್ಞ ನಿಲ್ಲಿಸೆಂದು ಕೇಳಿಕೊಂಡನಂತೆ. ಪ್ರಾಣಿ ಹಿಂಸೆ ಮಹಾಪಾಪ ಮಾಡದಿರು, ಇದರಿಂದ ಲೋಕಕ್ಷೇಮ ಖಂಡಿತಾ ಇಲ್ಲ ಎಂದು ಹೇಳಿದಾಗ ಯಾಗ ನಿಲ್ಲಿಸಿದ ಪ್ರಪಂಚವನ್ನು ರಕ್ಷಿಸಿದ ದಿನ.
ವೈಜ್ಞಾನಿಕವಾಗಿ ನಾವು ನೋಡಿದರೆ ಈ ಶ್ರಾವಣಮಾಸದಲ್ಲಿ ತುಂಬಾ ಮಳೆ. ನೀರು ಎಲ್ಲಾ ಕಡೆ ಆವರಿಸಿ ಬಿಲದೊಳಗಿನ ಹಾವು, ಕಪ್ಪೆ ಮುಂತಾದವುಗಳು ಹೊರಬಂದು ಮನುಷ್ಯರಿಗೆ ಭಯದ ವಾತಾವರಣವನ್ನು ಸೃಷ್ಟಿ ಮಾಡುತ್ತವೆ. ರೈತಾಪಿ ಜನರಿಗೆ, ಕೃಷಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅಪಾಯ ದೂರಮಾಡಲು ಈ ನಾಗರಪಂಚಮಿಯನ್ನು ಆಚರಿಸುವುದು ರೂಢಿಗೆ ಬಂತು.
ಜೀವಜಗತ್ತು ಎಂದಮೇಲೆ ಎಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕು. ಜಗದ ನಿಯಮವದು. ಇಲಿಗಳ ನಾಶ ಹಾವುಗಳ ಹರಿದಾಟ, ಇದ್ದಕಡೆ ಬರಲು ಆರಂಭವಾಯಿತು. ಜಗತ್ತಿನ ಸಕಲ ಕಾರ್ಯಕ್ಕೂ ಜೀವಿಗಳ ಅವಶ್ಯಕತೆಯಿದೆ. ಈ ದಿನ ಭೂಮಿಯನ್ನು ಅಗತೆ(ಅಗೆಯ) ಮಾಡಬಾರದು ಎಂಬ ಪ್ರತೀತಿ ಇದೆ. ಸಿಂಧೂ ಸಂಸ್ಕೃತಿ ಯ ಉತ್ಕನನ ಸಮಯದಲ್ಲಿ ಹಲವಾರು ನಾಗಚಿತ್ರಗಳು ನಾಗಕಲ್ಲುಗಳು ಪುರಾವೆ ಸಿಕ್ಕಿದೆಯಂತೆ. ಪುರಾತನ ಸಂಸ್ಕೃತಿಯಲ್ಲಿ ಸಹ ಕಾಣಬಹುದು. ಶಿಲಾಯುಗದ ಕಾಲದಿಂದಲೂ ಈ ಹಬ್ಬದ ಬಗ್ಗೆ ಕುರುಹುಗಳಿವೆಯಂತೆ.
ಅಣ್ಣ ತಂಗಿ ಹಬ್ಬವೆಂದೇ ಪ್ರತೀತಿ. ಹೆಚ್ಚಿನ ಎಲ್ಲಾ ದೇವಾಲಯಗಳಲ್ಲಿ ನಾಗನಕಲ್ಲುಗಳಿವೆ .ಕೆಲವು ಕಡೆ ನಾಗನಕಟ್ಟೆಗಳಿವೆ. ಎಲ್ಲಾ ಕಡೆ ಹಾಲೆರೆಯುವ ಸಂಪ್ರದಾಯವಿದೆ. ವಿಶೇಷ ಪೂಜೆ ನಡೆಯುತ್ತದೆ. ಹೆಣ್ಣು ಮಗಳು ತವರುಮನೆಗೆ ಬಂದು ಹಬ್ಬದ ಸಂಭ್ರಮವನ್ನು ಸಹೋದರರ ಜೊತೆ ಆಚರಿಸುವಳು. ಪರಸ್ಪರ ಉಡುಗೊರೆಗಳನ್ನು ನೀಡಿ ಸಂತಸಪಡುವರು. ಸಿಹಿ ಖಾದ್ಯಗಳನ್ನು ಮಾಡುವರು. ಹಬ್ಬಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿ ಸಂಸ್ಕೃತಿಯ ಪ್ರತೀಕಗಳಾಗಿವೆ.
ಜೀವಂತ ನಾಗನಿಗೆ ಹಾಲೆರೆದರು ಎಂಬ ವಿಷಯಗಳನ್ನು ಕೇಳಿದೆ. ಆದರೆ ಸತ್ಯವೆಷ್ಟೋ ನನಗರಿಯದು. ಯಾಕೆಂದರೆ ಹಾವುಗಳು ಹಾಲನ್ನು ಕುಡಿಯಲಾರವೆಂದು ಕೇಳಿದ್ದೇನೆ, ಪ್ರತ್ಯಕ್ಷ ನೋಡಿಲ್ಲ. ಕಲ್ಲಿನ ನಾಗಬಿಂಬಗಳಿಗೆ, ಹುತ್ತಕ್ಕೆ ಹಾಲು ಎರೆಯುವುದು ಸಾಮಾನ್ಯ ವಾಡಿಕೆ.
ಚರ್ಮರೋಗಗಳು ಬಾರದಂತೆ ನಾಗನ ಪೂಜೆ ಮಾಡಿ ರಕ್ಷಿಸು, ನಿವಾರಿಸೆಂದು ಪ್ರಾರ್ಥಿಸುತ್ತಾರೆ. ಕೆಲವೆಡೆ ತಂಬಿಲವನ್ನು ಮಾಡುವುದಿದೆ. ಸಂತಾನದೋಷವಿದ್ದರೆ ನಾಗಸೇವೆ ಮಾಡುವುದಿದೆ. ನಾಗರಾಜನಿಗೆ ಪೂಜನೀಯ ಸ್ಥಾನ ನಮ್ಮಲ್ಲಿದೆ. ಎಲ್ಲವೂ ನಂಬಿಕೆಯ ತಳಹದಿಯಲ್ಲಡಗಿದೆ. ಬ್ರಹ್ಮಾಂಡಕ್ಕೇ ಆಧಾರ ಶೇಷನೆಂಬ ಪ್ರತೀತಿಯಿದೆ.
ಅನಂತ, ವಾಸುಕಿ, ಶೇಷಶಯನ, ಶಂಖಪಾಲ ಬೇರೆ ಬೇರೆ ಹೆಸರುಗಳಿಂದಲೂ ಕರೆಯಲಾಗುತ್ತಿದೆ. ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ನಾಗರಾಜನ ಕೃಪೆಗಾಗಿ, ನಾಗದೋಷ ಪರಿಹಾರಕ್ಕಾಗಿ, ಕಂಕಣ ಭಾಗ್ಯಕ್ಕಾಗಿ ಆಶ್ಲೇಷಾ ಬಲಿ ಮಾಡುತ್ತಾರೆ. ನಾಗಶ್ಲೋಕವನ್ನು ನಿತ್ಯವೂ ಪಠಿಸಿದರೆ ಭಯವಿಲ್ಲವಂತೆ. ಮುಖ್ಯವಾಗಿ ಭೂಮಂಡಲವನ್ನು ಹೊತ್ತ ಆದಿಶೇಷನಿಗೊಂದು ಕೃತಜ್ಞತಾ ಸಮರ್ಪಣೆಯ ದಿನವಿದು. ಬನ್ನಿ ಬಂಧುಗಳೇ ಒಟ್ಟಾಗಿ ಸೇರೋಣ, ಹಬ್ಬದ ಸಂಭ್ರಮವನ್ನು ಎಲ್ಲರೊಂದಾಗಿ ಸೇರಿ ಇದ್ದುದರಲ್ಲಿಯೇ ಆಚರಿಸೋಣ. ಕವಿದ ಕಾರ್ಮೋಡ ದೂರವಾಗಲೆಂದು ಹಾರೈಸೋಣ.
ಸಂಗ್ರಹ ಬರಹ: ರತ್ನಾ ಕೆ ಭಟ್,ತಲಂಜೇರಿ
(ಪುರಾಣ ಆಕರ: ಮಹಾಭಾರತ ಪುರಾಣ ಕಥೆಗಳು)
ಚಿತ್ರ ಕೃಪೆ: ಇಂಟರ್ನೆಟ್ ತಾಣ