ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ...

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ...

ಬರಹ

 

ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ
ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು
ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾಗ, ಆತನಿಗೆ
ದೈವಸಾಕ್ಷಾತ್ಕಾರವಾದಾಗ ಅನುಭವಿಸುವ ರೋಮಾಂಚನದಂತಹುದು. ಓಟಗಾರನೊಬ್ಬ ಒಂದೊಂದೇ
ಮೈಲುಗಲ್ಲುಗಳನ್ನು ದಾಟುತ್ತಾ ಸಂಭ್ರಮ ಪಟ್ಟರೂ ಸಹ ಕಡೆಯ ಗಮ್ಯವನ್ನು ಮುಟ್ಟಿ ನಿಂತಾಗ
ಆಗುವ ಸಮಾಧಾನದಂತಹುದು. ಇದನ್ನು ನಾವು ಆ ದಿನ ಅನುಭವಿಸಿದೆವು ಎಂಬುದಕ್ಕೆ ನಮ್ಮ
ಕಣ್ಣುಗಳಲ್ಲಿ ಅಪರೂಪಕ್ಕೆಂಬಂತೆ ಹರಿದ ಕಂಬನಿಗಳೇ ಸಾಕ್ಷಿ. ನಗೆ ನಗಾರಿಯ
ವಾರ್ಷಿಕೋತ್ಸವಕ್ಕೆಂದು ಜಗತ್ತಿನಲ್ಲೇ ಅತ್ಯಂತ ರಹಸ್ಯಮಯವಾದ ಸ್ಥಳದಲ್ಲಿ ಆಯೋಜಿಸಿದ್ದ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಾಗರವನ್ನು ಕಂಡು ಸಾಮ್ರಾಟರು ಹರ್ಷೋದ್ಘಾರದಿಂದ
ಕಂಬನಿ ಮಿಡಿದರು. ವೇದಿಕೆಯ ಮೇಲಿನ ಗಣ್ಯರೇ ಹೀಗೆ ಕಂಬನಿ ಮಿಡಿದದ್ದನ್ನು ಕಂಡು
ಗೊಂದಲಕ್ಕೊಳಗಾದ ಮಹಾಜನತೆಯು ತಾವೂ ಎರಡು ಸೆಕಂಡು ಮೌನವನ್ನಾಚರಿಸಿ, ತಲೆ ತಗ್ಗಿಸಿ,
ಕಷ್ಟ ಪಟ್ಟು ಎರಡು ಹನಿ ಕಣ್ಣೀರು ಹರಿಸಿದರು. ಸಾಮ್ರಾಟರು ಭಯೋತ್ಪಾದಕರ ದಾಳಿಯಲ್ಲಿ
ಮಡಿದವರಿಗೋ, ಶ್ರೀಮಂತರ ಕಾರುಗಳಿಗೆ ರಕ್ತ ತರ್ಪಣ ಅರ್ಪಿಸಿದವರಿಗೋ, ದರೋಡೆಕೋರರಿಂದ
ಬದುಕುವ ಹಕ್ಕನ್ನು ಕಳೆದುಕೊಂಡವರಿಗೋ ಗೌರವ ಸೂಚಿಸುವುದಕ್ಕಾಗಿ ಕಂಬನಿ ಮಿಡಿದಿದ್ದಾರೆ
ಎಂದು ತಿಳಿದಿತ್ತು ಜನತೆ. ಆದರೆ ಸಾಮ್ರಾಟರನ್ನು ಪಕ್ಕಕ್ಕೆಳೆದ ಕುಚೇಲ ಅವರ ಕಣ್ಣಲ್ಲಿ
ಬಿದ್ದಿದ್ದ ಧೂಳನ್ನು ಊದಿ ತೆಗೆದು ಅವರ ಹರ್ಷೋದ್ಘಾರದ ಕಣ್ಣೀರ ಧಾರೆಯನ್ನು ಬಂದ್
ಮಾಡಿದ. ಆದರೆ ಮಹಾ ಜನತೆ ಮಾತ್ರ ತಮ್ಮ ಮಾನಸ ಮಂದಿರದಲ್ಲಿ ಪ್ರತಿಷ್ಠಾಪಿಸಿದ ನಗೆ
ಸಾಮ್ರಾಟರ ಕಣ್ಣೀರಿನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಉದ್ಧಟತನಕ್ಕೆ ಕೈ
ಹಾಕಲಿಲ್ಲ. 

ವೇದಿಕೆಯ ಮೇಲಿದ್ದ ಗಣ್ಯರಲ್ಲೇ ಅತಿ ಗಣ್ಯರಾದ ನಾವು ಮೊದಲು ಮಾತಾಡಿ ನಗೆ ನಗಾರಿ
ಡಾಟ್ ಕಾಮ್ ಒಂದು ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಇಂದು ಸರಕಾರಗಳು ನೂರು ದಿನ
ಪೂರೈಸಿದ್ದಕ್ಕೇ ರಾಜ್ಯ ಮಟ್ಟದ ಪತ್ರಿಕೆಗಳಿಂದ ಹಿಡಿದು ಸಂಪಾದಕ, ಪ್ರಕಾಶಕ ಹಾಗೂ
ಮುದ್ರಕರ ನಡುವೆ ಖಾಸಗಿಯಾಗಿ ಪ್ರಸಾರ ಹೊಂದಿರುವ ‘ಜಾಗತಿಕ’ ಪತ್ರಿಕೆಗಳವರೆಗೆ
ಪ್ರತಿಯೊಂದರಲ್ಲೂ ಪುಟಗಟ್ಟಲೆ ಜಾಹೀರಾತು ನೀಡಿ ಬೆನ್ನು ತಟ್ಟಿಸಿಕೊಳ್ಳುತ್ತವೆ. ತಮ್ಮ
ಸರಕಾರದ ಸಾಧನೆಗಳ ವಿಷಯವನ್ನು ಜನರ ಮುಂದಿಡುವಾಗ ನೂರು ದಿನ ಪೂರೈಸಿದ್ದೂ ಬಹುದೊಡ್ಡ
ಸಾಧನೆ ಎಂದು ಹೇಳಲು ಮರೆಯುವುದಿಲ್ಲ. ನೂರು ದಿನ ಪೂರೈಸುವುದು ಸಾಮಾನ್ಯ ಸಂಗತಿಯೇ?
ಯಾಮಾರಿದ್ರೆ ಕುರ್ಚಿ ಎಳೆಯಲು ಕಾದಿರುವ ಪ್ರತಿಪಕ್ಷಗಳು, ಕೈ ಕಾಲು ಮುಂತಾದವನ್ನು ಬಿಸಿ
ಮಾಡುವಲ್ಲಿ ಕೊಂಚ ಆಲಸ್ಯವನ್ನು ತೋರಿದರೆ ಬೆಣ್ಣೆಯಂತೆ ಕರಗಿ ಬೇರೆಯವರ ತಟ್ಟೆಗೆ ಬೀಳುವ
ಸ್ವಂತ ಪಕ್ಷ ಬಾಂಧವರು- ಇವರನ್ನೆಲ್ಲಾ ಸಂಭಾಳಿಸುತ್ತಾ ನೂರು ದಿನ ಪೂರೈಸುವುದು
ಹನ್ನೊಂದು ಮಂದಿ ಎದುರಾಳಿಗಳು ಹಾಗೂ ಇಬ್ಬರು ಅಂಪೈರುಗಳು ಜೊತೆಗೆ ಒಬ್ಬ ತನ್ನದೇ ತಂಡದ
ದಾಂಡಿಗನ ವಿರುದ್ಧ ಹೋರಾಡಿ ಸೆಂಚುರಿ ಹೊಡೆಯುವ ಕ್ರಿಕೆಟ್ ಆಟಗಾರನ ಸಾಧನೆಯಷ್ಟೇ
ಪ್ರಯಾಸದಾಯಕವಾದದ್ದು. ಐದು ದಿನ ಹತ್ತು ದಿನ, ಹದಿನೈದು ದಿನ ಚಿತ್ರ ಮಂದಿರಗಳಲ್ಲಿ
ಪ್ರೇಕ್ಷಕರನ್ನು ಹಿಂಸಿಸುವಲ್ಲಿ ಯಶಸ್ವಿಯಾದ ಸಿನೆಮಾಗಳು ಸಹ ಪತ್ರಿಕೆಗಳಲ್ಲಿ, ಜನರ
ಮೂತ್ರವನ್ನು ಸವಿಯುವ ಗೋಡೆಗಳ ಮೇಲೆ ದೊಡ್ಡ ದೊಡ್ಡ ಜಾಹೀರಾತು, ಪೋಸ್ಟರ್‍ಗಳ ರೂಪದಲ್ಲಿ
ತಮ್ಮ ಸಾಧನೆಯನ್ನು ಡಂಗೂರ ಬಾರಿಸಿ ಸಾರುತ್ತವೆ. ಹೀಗಿರುವಾಗ ಒಂದು ವರ್ಷ ಪೂರೈಸಿದ
ನಮ್ಮ ಸಾಧನೆ ಯಾರಿಗೂ ಕಡಿಮೆಯಾದುದಲ್ಲ.

ಈ ಒಂದು ವರ್ಷದಲ್ಲಿ ನಾವು ಗಳಿಸಿದ ‘ಒದೆತಗಳು’, ನಾವು ಸಂಪಾದಿಸಿದ ಅಭಿಮಾನಿಗಳು,
ಭಕ್ತರು, ಭಕ್ತೆಯರನ್ನು ಒಂದು ಕ್ಷಣ ನೆನೆಸಿಕೊಂಡೆವು. ಆದರೆ ಈ ಒಂದು ವರ್ಷದಲ್ಲಿ ನಾವು
ನಿರೀಕ್ಷಿತ ಮಟ್ಟದಲ್ಲಿ ಶತ್ರುಗಳನ್ನು ಸಂಪಾದಿಸಲು ಸಾಧ್ಯವಾಗಲಿಲ್ಲ. ಆ ಮೂಲಕ ಲೇಖನಿ
ಖಡ್ಗಕ್ಕಿಂತ ಹರಿತ ಎಂಬ ಮಾತನ್ನು ಪರೀಕ್ಷಿಸಿ ನೋಡಲು ತಕ್ಕುದಾದ ಅವಕಾಶದಿಂದ
ವಂಚಿತರಾಗಬೇಕಾಯಿತು. ಆತ್ಮಾವಲೋಕನ ಹಾಗೂ ಸತ್ಯಾನ್ವೇಣೆಗಳೇ ನಮ್ಮ ಜನ್ಮ ಸಿದ್ಧ
ಗುಣಗಳಾಗಿರುವುದರಿಂದ ನಾವು ಮಾಡಿದ ಸಾಧನೆಯ ಜೊತೆಗೆ ನಾವು ಎಡವಿದ್ದೆಲ್ಲಿ ಎಂಬುದೂ
ನಮಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಭಕ್ತ ವೃಂದ, ಭಜನಾ ಮಂಡಳಿಯ ಜೊತೆಗೆ ನಾವು
ಹೆಚ್ಚಿನ ಗಮನವನ್ನು ನಮ್ಮ ಶತ್ರುಪಡೆಯನ್ನು ಸೃಷ್ಟಿಸಿಕೊಳ್ಳುವುದರಲ್ಲೂ
ವಿನಿಯೋಗಿಸಲಿದ್ದೇವೆ. ಇಷ್ಟು ದಿನ ನಾಟಕ ರಂಗದಲ್ಲಿ ಜನರನ್ನು ರಂಜಿಸಲೆಂದು ನಾವು
ನುಡಿಸುತ್ತಿದ್ದ ನಗಾರಿ ಇನ್ನು ಮುಂದೆ ಯುದ್ಧ ಭೂಮಿಯಲ್ಲಿ ಬಾರಿಸುವ ನಗಾರಿಯೂ ಆಗಲಿದೆ.
ಸಾಮ್ರಾಟರು ಪೆನ್ನನ್ನು ಹಿಡಿದು ಯುದ್ಧ ಭೂಮಿಗೆ ಧುಮಕಲಿದ್ದಾರೆ, ಗೆದ್ದರೆ ಜಯ,
ಸತ್ತರೆ ವೀರ ಸ್ವರ್ಗ!

ನಗೆ ನಗಾರಿಯಲ್ಲಿನ ಲೇಖನಗಳನ, ಹರಟೆಗಳ, ಸಂದರ್ಶನಗಳ ಗುಣ ಮಟ್ಟ ಹೇಗಿತ್ತು, ಓದುಗರು
ಇವುಗಳನ್ನು ಹೇಗೆ ಗ್ರಹಿಸಿದರು, ಅವರು ಗುರುತಿಸಿದ ದೋಷಗಳು ಯಾವುವು, ಅವರ ಸಲಹೆಗಳೇನು,
ಮುಂದೆ ಇದು ಹೇಗೆ ನಡೆಯಬೇಕು ಎಂದು ನಿರೀಕ್ಷಿಸುತ್ತಿರುವಿರಿ ಎಂದೆಲ್ಲಾ ನಾವು
ಓದುಗರನ್ನು ಕೇಳಬೇಕೆಂದುಕೊಂಡಿದ್ದೆವು. ಆದರೆ ಈ ಮೊದಲೇ ತಮ್ಮ ಧಾರಾವಾಹಿಗಳಿಗೆ
ಸಂವಾದಗಳನ್ನು ಏರ್ಪಡಿಸಿ ಟಿ.ಆರ್.ಪಿ ಗಗನಕ್ಕೇರಿಸಿಕೊಂಡ ಸೀತಾರಾಂರ ಪದ್ಧತಿಯನ್ನು
ಕಾಪಿ ಮಾಡಿದಂತಾಗುತ್ತದೆಂದು ತಿಳಿದು ಅವರ ಹಾಗೆಯೇ ‘ಇಂದಿನ ಪುಟ್ಟಣ್ಣ ಕಣಗಾಲ್’ ಪಟ್ಟದ
ಆಕಾಂಕ್ಷಿಯಾಗಿರುವ ನಾವು ಅದನ್ನು ಕೈಬಿಟ್ಟೆವು. ಆದರೆ ಆ ಸಂವಾದವನ್ನು ಇಲ್ಲಿ ನಮ್ಮ
ಬ್ಲಾಗಿನಲ್ಲಿ ಮುಂದುವರೆಸಲಡ್ಡಿಯಿಲ್ಲ. ಒಂದು ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ನಮ್ಮ
ಬ್ಲಾಗನ್ನು ಪೂಜಿಸಿದ ಆರಾಧಿಸಿದ, ಪ್ರತಿದಿನ ನಮ್ಮ ನಾಮಸ್ಮರಣೆಯನ್ನು ಮಾಡುತ್ತಾ,
ಇಲ್ಲಿನ ಪುರಾಣ ಪಠಣ-ಶ್ರವಣವನ್ನು ಮಾಡುತ್ತಾ ಲೋಡುಗಟ್ಟಲೆ ಪುಣ್ಯ ಸಂಪಾದಿಸಿದ ಓದುಗರೇ
ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ನಿಮ್ಮ ಸಲಹೆಗಳನ್ನು,
ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಖುದ್ದು ಸಾಮ್ರಾಟರಿಗೆ ತಿಳಿಸಬಹುದು. ನಿಮ್ಮ
ಯಾವುದೇ ಪ್ರತಿಕ್ರಿಯೆಯನ್ನು ಸೆನ್ಸಾರ್ ಮಾಡುವುದಿಲ್ಲ ಎಂಬ ಭರವಸೆಯನ್ನು ನಾವು
ನೀಡುತ್ತಿದ್ದೇವೆ.

ಅಂದ ಹಾಗೆ ವಾರ್ಷಿಕೋತ್ಸವಕ್ಕೆಂದು ನಾವು ವಿಶೇಷ ಸಂಚಿಕೆಯೊಂದನ್ನು ರೂಪಿಸುವ ಯೋಜನೆ
ಹಾಕಿಕೊಂಡಿದ್ದೆವು. ಕನ್ನಡ ನಾಡಿನ ಹೆಸರಾಂತ ಬರಹಗಾರರಿಂದ ಲೇಖನಗಳನ್ನು, ಬರಹಗಳನ್ನು
ಆಹ್ವಾನಿಸಿದ್ದೆವು. ಅವುಗಳು ಒಂದೊಂದಾಗಿ ನಗೆ ನಗಾರಿಯಲ್ಲಿ ಪ್ರಕಟವಾಗಲಿವೆ.
ಪ್ರಕಟಿಸುವ ಖುಶಿ ನಮ್ಮದಾದರೆ ಓದುವ ಕರ್ಮ ನಿಮ್ಮದು!

ಏನೇ ಅನ್ನಿ, ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

- ನಗೆ ಸಾಮ್ರಾಟ್