ಸಂಬಂಧಗಳು

ಒಂದು ಕುಟುಂಬದಲ್ಲಿ ಗಂಡ, ಹೆಂಡತಿ ಮಕ್ಕಳು ಬಹಳ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದರು. ಮನೆಯ ಯಜಮಾನ ಒಬ್ಬ ವ್ಯಾಪಾರಿ. ಸಾಕಷ್ಟು ಆದಾಯ ಇತ್ತು. ಒಂದು ದೊಡ್ಡ ಮನೆಯನ್ನು ಕಟ್ಟಿಕೊಂಡು ಸುಖವಾಗಿದ್ದರು. ಈ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು. ಅವರನ್ನು ಚೆನ್ನಾಗಿ ಓದಿಸಿ, ಬೆಳೆಸಿ, ಮೂರು ಮಕ್ಕಳಿಗೂ ಮದುವೆ ಮಾಡಿದರು. ಅವರ ಮೂರು ಜನ ಮಕ್ಕಳೂ, ತಮ್ಮ ತಮ್ಮ, ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರು .
ಕಾಲ ಯಾವಾಗಲೂ ಒಂದೇ ಥರ ಇರುವುದಿಲ್ಲ. ಚೆನ್ನಾಗಿದ್ದ ಹೆಂಡತಿ, ಇದ್ದಕ್ಕಿದ್ದಂತೆ ಹೃದಯಘಾತದಿಂದ ಮರಣ ಹೊಂದಿದಳು. ಈಗ ಯಜಮಾನ ಒಬ್ಬಂಟಿಯಾದ. ಆತ ತಾನಿದ್ದ ಊರು ಬಿಟ್ಟು, ತನ್ನ ಹಿರಿಯ ಮಗನ ಮನೆಯಲ್ಲಿ ಬಂದು ನೆಲೆಸಿದ. ಅವನಿಗೆ ಯಾವ ತೊಂದರೆಯೂ ಆಗದಂತೆ ಮಗ ಸೊಸೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವನಿಗೆ ಇಷ್ಟವಾದ ರುಚಿ, ರುಚಿಯಾದ, ಊಟ ತಿಂಡಿಯನ್ನು ಕಾಲ ಕಾಲಕ್ಕೆ ನೀಡಿ, ಯಾವುದೇ ಕೊರತೆ ಇರದಂತೆ ನೋಡಿಕೊಳ್ಳುತ್ತಿದ್ದರು.
ಒಂದು ಸಲ ಮೂರು ಮಕ್ಕಳೂ ಒಟ್ಟಿಗೆ ಸೇರಿದಾಗ, ಒಬ್ಬ ಮಗ ಅಪ್ಪಾ, ನೀನು ಕಟ್ಟಿಸಿದ ಮನೆ, ಖಾಲಿಯಾಗಿ ಹಾಗೇ ಇದೆ, ಅದಕ್ಕೇನಾದರೂ ವ್ಯವಸ್ಥೆ ಮಾಡಬೇಕಲ್ಲವೇ? ಎಂದು ಕೇಳಿದ.
ಏನು ಮಾಡೋಣ? ಎಂದು ಅಪ್ಪ ಕೇಳಿದ.
ಅದನ್ನು ಖಾಲಿಯಾಗಿ ಹಾಗೆಯೇ ಬಿಟ್ಟರೆ, ಅದು ಹಾಳಾಗಿ ಹೋಗುತ್ತದೆ,ಅದರ ಬದಲು ಅದನ್ನು ಮಾರಿದರೆ ಒಳ್ಳೆಯ ಬೆಲೆ ಸಿಗಬಹುದು ಎಂದು ಹೇಳಿದ ಇನ್ನೊಬ್ಬ ಮಗ.
ತಂದೆಗೆ ಇವನ ಮಾತಿನ ಇಂಗಿತ ಅರ್ಥವಾಯಿತು. ಅವನು ಹೇಳಿದಂತೆಯೇ, ಮನೆಯನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಿದರು. ಬಂದ ಹಣವನ್ನು ಮೂವರು ಮಕ್ಕಳಿಗೂ ಸರಿಯಾಗಿ ಹಂಚಿಬಿಟ್ಟ. ಹಾಗೆಯೇ, ತನ್ನ ಹೆಂಡತಿಯ ಆಭರಣಗಳನ್ನೂ ಮೂವರು ಸೊಸೆಯಂದಿರಿಗೆ ಹಂಚಿಬಿಟ್ಟ. ಮನೆಯಲ್ಲಿದ್ದ, ಬೆಳ್ಳಿ ಸಾಮಾನುಗಳನ್ನೆಲ್ಲಾ ಮಾರಾಟ ಮಾಡಿ ಬಂದ ಹಣವನ್ನೆಲ್ಲಾ ಮೂವರು ಮಕ್ಕಳಿಗೂ ಸರಿಯಾಗಿ ಭಾಗ ಮಾಡಿ ಕೊಟ್ಟ. ಈಗ ಈ ವ್ಯಕ್ತಿಯ ಬಳಿ ಏನೂ ಇರದೇ ಬರಿ ಕೈ ಆಯಿತು.
ಇದೆಲ್ಲಾ ನಡೆದು, ಸ್ವಲ್ಪ ದಿನಗಳ ತನಕ ಅಂತಹ ಯಾವ ಬದಲಾವಣೆಗಳೂ ಕಾಣಲಿಲ್ಲ. ಮನೆಯಲ್ಲಿ ಅವನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಆದರೆ ಬರು ಬರತ್ತಾ ಸಣ್ಣ ಪುಟ್ಟ ವ್ಯತ್ಯಾಸಗಳು ಕಾಣತೊಡಗಿದವು. ಇವರು ಕಾಫಿ ಕೊಡಿ ಎಂದು ಕೇಳುವವರೆಗೂ ಕಾಫಿ ಸಿಗುತ್ತಿರಲಿಲ್ಲ. ದಿನಪತ್ರಿಕೆ ಓದುವ ಅಭ್ಯಾಸವಿದ್ದ ಇವರಿಗೆ, ಎಲ್ಲರೂ ಓದಿಯಾದ ಮೇಲೆ ಮಧ್ಯಾಹ್ನದ ಸಮಯ ಓದಲು ಪತ್ರಿಕೆ ದೊರೆಯುತ್ತಿತ್ತು. ಮನೆಯವರು ಇವರೊಂದಿಗೆ ಕೂತು ಮಾತನಾಡುವುದು ಅಪರೂಪವಾಯಿತು. ಇವರೊಬ್ಬರೇ ಕೊಠಡಿಯಲ್ಲಿ, ಒಬ್ಬಂಟಿಯಾಗಿ ಕಾಲ ಕಳೆಯಬೇಕಾಯಿತು. ಹೋಗಲಿ ಟಿವಿ ಕಾರ್ಯಕ್ರಮ ನೋಡೋಣವೆಂದರೆ, ಮಗ ಸೊಸೆ, ಅವರ ಮಕ್ಕಳು ತಮಗೆ ಬೇಕಾದ ಕಾರ್ಯಕ್ರಮ ನೋಡುತ್ತಿರುತ್ತಿದ್ದರು. ಈಗ ಯಜಮಾನರಿಗೆ ಜೀವನ ಬೇಸರವೆನಿಸತೊಡಗಿ, ತಾವು ಒಬ್ಬಂಟಿ ಎನಿಸತೊಡಗಿ,ಯೋಚಿಸತೊಡಗಿದರು.
ಈತ ಒಂದು ದಿನ ತಮ್ಮ ಎಲ್ಲಾ ಮಕ್ಕಳನ್ನೂ ಬರ ಹೇಳಿ ನನ್ನ ಬಳಿ, ನನ್ನ ಅಜ್ಜಿಯಿಂದ ನನ್ನ ಹೆಂಡತಿಗೆ ಬಂದ ಒಂದಷ್ಟು ವಜ್ರದ ಹಾಗೂ ಚಿನ್ನದ ಒಡವೆಗಳನ್ನು ಇನ್ನೂ ಮಾರದೇ ಅವುಗಳನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ. ಈಗೆಲ್ಲಾ ಬಂಗಾರದ ಆಭರಣಗಳು ಅದೆಷ್ಟೋ ಕೋಟಿ ಗಟ್ಟಲೆ ಬೆಲೆಬಾಳುತ್ತವೆ. ಅದನ್ನೆಲ್ಲಾ ನಾನು ಒಂದು ಪೆಟ್ಟಿಗೆಯಲ್ಲಿ ಹಾಕಿ, ಬ್ಯಾಂಕಿನ ವಿಶೇಷ ಲಾಕರ್ ನಲ್ಲಿ ಇಟ್ಟಿದ್ದೇನೆ, ಅದರ ಒಂದು ಕೀಲಿ, ಕೈ ನನ್ನ ಸ್ನೇಹಿತರಾದ ತಹಶೀಲ್ದಾರ್ ಕೃಷ್ಣಪ್ಪನವರ ಬಳಿಗೆ ಕೊಟ್ಟಿದ್ದೇನೆ, ಇನ್ನೊಂದು ಕೀಲಿ ಕೈಯನ್ನು ಈಗ ನಿಮ್ಮ ಹತ್ತಿರ ಕೊಡುತ್ತೇನೆ ಆದರೆ ಅದನ್ನು ನಾನು ಸಾಯುವವರೆಗೂ ಯಾರೂ ತೆಗೆಯುವಂತಿಲ್ಲ. ನಾನು ಸತ್ತ ನಂತರ, ಬ್ಯಾಂಕಿನಿಂದ ಅದನ್ನು ತೆಗೆದು, ಆಭರಣಗಳನ್ನು ಮೂರು ಜನರು ಸರಿಯಾಗಿ ಹಂಚಿಕೊಳ್ಳಿ ಎಂದು ಹೇಳಿ ಹಿರಿಯ ಮಗನ ಕೈಗೆ ಕೀಲಿಕೈಯನ್ನು ಕೊಟ್ಟರು.
ಈ ಪ್ರಸಂಗ ನೆಡೆದ ನಂತರ, ಯಜಮಾನರಿಗೆ ಪುನಃ ರಾಜೋಪಚಾರ ಶುರುವಾಯಿತು. ಅವರ ಆಯಸ್ಸು ಮುಗಿದು ಒಂದು ದಿನ ತೀರಿಕೊಂಡರು. ಮರುದಿನ ಅವರ ಮಕ್ಕಳು ಮೂರು ಜನರೂ ಬ್ಯಾಂಕಿಗೆ ಅಪ್ಪನ ಸ್ನೇಹಿತ ತಹಸಿಲ್ದಾರ್ ಕೃಷ್ಣಪ್ಪನವರೊಂದಿಗೆ ಹೋಗಿ ಲಾಕರ್ ಬೀಗವನ್ನು ತೆರೆದು ಒಳಗಿದ್ದ ಪೆಟ್ಟಿಗೆಯನ್ನು ತೆಗೆದುಕೊಂಡರು. ಮನೆಗೆ ಬಂದು ಅದನ್ನು ತೆರೆದು ನೋಡಿದಾಗ, ಅದರಲ್ಲಿ ಒಂದು ಸಣ್ಣ ಚೀಟಿ ಮಾತ್ರ ಇತ್ತು. ಅದರಲ್ಲಿ ಹೀಗೆ ಬರೆದಿತ್ತು. "ಒಬ್ಬ ಬುದ್ಧಿ ಇಲ್ಲದ ಮೂರ್ಖ ಮಾತ್ರ, ಏನನ್ನೂ ಇಟ್ಟುಕೊಳ್ಳದೆ, ಎಲ್ಲವನ್ನು ಕೊಟ್ಟುಬಿಡುತ್ತಾನೆ," ಎಂದಿತ್ತು. ಅದನ್ನು ನೋಡಿ, ಮೂರು ಜನ ಮಕ್ಕಳೂ, ಪೆಚ್ಚು ಮೊರೆ ಹಾಕಿಕೊಂಡರು.
ಮನುಷ್ಯನ ಕೈಯಲ್ಲಿ ಕಾಸಿಲ್ಲದೇ ಬರಿಗೈಯಲ್ಲಿದ್ದರೆ, ಯಾವ ಸಂಬಂಧದಲ್ಲೂ ಕೂಡ ಬೆಲೆ ಸಿಗುವುದಿಲ್ಲ. ಇಂದು ಸಾಮಾನ್ಯವಾಗಿ, ಎಲ್ಲೆಡೆ ಕಾಣುವ ವಾಸ್ತವಾಂಶ ಇದು. ಪ್ರೀತಿ ಪ್ರೇಮ, ಭಾಂದವ್ಯ ಎಲ್ಲವೂ ಕೂಡಾ, ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿರುತ್ತದೆ. ಅದಿಲ್ಲದಿದ್ದರೆ, ಮನುಷ್ಯನಿಗೆ ಕಿಲುಬು ಕಾಸಿನ ಬೆಲೆಯೂ ಇರುವುದಿಲ್ಲ. ಇದು ದುಃಖದ ವಿಷಯವಾದರೂ, ಇಂದಿನ ವಾಸ್ತವ ಇದೇ.
ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ
ಚಿತ್ರ ಕೃಪೆ: ಇಂಟರ್ನೆಟ್ ತಾಣ