ಸಂಬಂಧ

ಸಂಬಂಧ

ಕವನ

ಹುಡುಗಿ, ನಮ್ಮ ಬದುಕಿನಂತೆ ಈ ರೈಲು ಹಳಿ

ಎಂದಿಗೂ ಬರುವುದಿಲ್ಲ ಒಂದು ಮತ್ತೊಂದರ ಬಳಿ

ಅಂತೆಯೇ ಹೋಗುವುದಿಲ್ಲವೆಂದೂ ಬಲುದೂರ

ಸದಾ ಇರುವುದು ನಡುವೆ ಅರ್ಥಪೂರ್ಣ ಅಂತರ

 

ಹುಡುಗಿ, ಅದೆಷ್ಟಿವೆ ನಮ್ಮಿಬ್ಬರಲಿ ಅಂಶ ಸಮಾನ

ಒಬ್ಬರಿಗೊಬ್ಬರು ಕೊಟ್ಟಿಹೆವು ಹೃದಯದಿ ಉನ್ನತ ಸ್ಥಾನ

ಆದರೂ ನಮ್ಮ ಆಲೋಚನೆಗಳೆಷ್ಟು ಭಿನ್ನ

ಅನಿಸುವಂತೆ ಏನಿಲ್ಲ ನಡುವೆ ನನ್ನ ನಿನ್ನ

 

ಹುಡುಗಿ, ಬಿಟ್ಟೂ ಬಿಡದೆ ಕಾಡುವೆ ನೀ ನನ್ನ

ನಾನೇನು ಕಮ್ಮಿ, ಮಾರುತ್ತರ ನೀಡಿ ಸೋಲಿಸುವೆ ನಿನ್ನ

ನಮ್ಮ ಕಲಹ ಕೂಡಾ ಬಹು ವರ್ಣರಂಜಿತ

ಹಾಗೇ ಕ್ಷಮೆ ಕೋರುವ ಪರಿಯೂ ಪ್ರೇಮಮಿಶ್ರಿತ

 

ಹುಡುಗಿ, ಇದು ಯಾವ ಜನುಮದ ಋಣವೋ ತಿಳಿಯದು

ಅದನ್ನರಿಯುವ ಯತ್ನ ನನ್ನಿಂದ ಮಾಡಲಾಗದು

ಇರಲಿ ಈ ಹಳಿಗಳಂತೆ ನಮ್ಮೀ ಸಂಬಂಧ

ಜೀವನದುದ್ದಕ್ಕೂ ಬೆಸೆದಿರಲಿ ನಮ್ಮನ್ನು ಈ ಅವ್ಯಕ್ತ ಬಂಧ

 

ಹುಡುಗಿ, ನೀ ನನ್ನ ಗೆಲ್ಲುವುದು ಅಸಾಧ್ಯ

ನಿನ್ನ ಹೃದಯಕೋಟೆ ನನಗೆ ದುರ್ಬೇಧ್ಯ

ಬರೆವುದು ಬೇಡ ಒಬ್ಬರು ಇನ್ನೊಬ್ಬರ ಪ್ರೇಮ ಕೃತಿ

ಆಗಿಬಿಡೋಣ ಈ ಪಯಣದಿ ಒಂದು ಮಧುರ ಸ್ಮೃತಿ

 

ಇಂತಿ,

ಅಂತರ ಕಾಯ್ದುಕೊಳ್ಳುವ ಅಂತರಾಳದ ಗೆಳೆಯ

Comments