ಸತ್ತವರ ಸೊಲ್ಲು

ಸತ್ತವರ ಸೊಲ್ಲು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ಅಶುತೋಷ್ ಭಾರದ್ವಾಜ್, ಕನ್ನಡಕ್ಕೆ: ಕಾರ್ತಿಕ್ ಆರ್.
ಪ್ರಕಾಶಕರು
ಛಂದ ಪುಸ್ತಕ, ಬಗ್ಗೇರುಘಟ್ಟ ರಸ್ತೆ, ಬೆಂಗಳೂರು-೫೬೦೦೭೯, ಮೊ: ೯೮೪೪೪೨೨೭೮೨
ಪುಸ್ತಕದ ಬೆಲೆ
ರೂ. ೩೮೦.೦೦, ಮುದ್ರಣ: ೨೦೨೪

ಹೊಸ ಬಗೆಯ, ಹೊಸತನದ ಪುಸ್ತಕಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕಾಯಕವನ್ನಾಗಿ ಮಾಡಿಕೊಂಡ ಛಂದ ಪುಸ್ತಕ ಪ್ರಕಾಶನದವರು ‘ಸತ್ತವರ ಸೊಲ್ಲು' ಎಂಬ ನಕ್ಸಲ್ ನಾಡಿನ ಮರೀಚಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಶುತೋಷ್ ಭಾರದ್ವಾಜ್ ಎನ್ನುವ ಪತ್ರಕರ್ತ ಕಂಡ ನಕ್ಸಲ್ ಬದುಕಿನ ಅನಾವರಣವೇ ಈ ಕೃತಿ. ಹಿಂದಿ ಭಾಷೆಯ ಈ ಕೃತಿಯನ್ನು ನೇರವಾಗಿ ಕನ್ನಡಕ್ಕೆ ತಂದಿದ್ದಾರೆ ಉದಯೋನ್ಮುಖ ಬರಹಗಾರರಾದ ಕಾರ್ತಿಕ್ ಆರ್. ಈ ಕೃತಿಗೆ ಬೆನ್ನುಡಿಯನ್ನು ಬರೆಯುವ ಮೂಲಕ ಪ್ರೋತ್ಸಾಹಿಸಿದ್ದಾರೆ ಪದ್ಮನಾಭ ಭಟ್ ಶೇವ್ಕಾರ. ಇವರು ಬೆನ್ನುಡಿಯಲ್ಲಿ ಬರೆದ ಬರಹದ ಸಾಲುಗಳು ನಿಮಗಾಗಿ…

“ಇದು ಬರೀ ನಕ್ಸಲ್‌ವಾದದ ಕುರಿತಾದ ಕೃತಿಯಲ್ಲ. ಅದರ ಸಮರ್ಥನೆ ಅಥವಾ ನಕ್ಸಲರನ್ನು ಖಳರನ್ನಾಗಿ ಚಿತ್ರಿಸುವ ಉದ್ದೇಶವಿಟ್ಟುಕೊಂಡಿರುವ ಕಥೆಯೂ ಅಲ್ಲ. ಈಗಾಗಲೇ ಗೊತ್ತಿರುವ ಒಂದು ಸಿದ್ಧಾಂತದಿಂದ ಹೊರಟು, ಅದರ ಪ್ರತಿಪಾದನೆಗೆ ಹೊಂದುವ ಘಟನೆಯನ್ನು ಮಾತ್ರ ಜೋಡಿಸುವ ನಕಲಿ ಬುದುವಂತಿಕೆ ಇಲ್ಲಿಲ್ಲ. ಇದು, ಕುತೂಹಲದಿಂದ ಕಾಡಿನೊಳಗೆ ಹೊಕ್ಕು, ದಿಕ್ಕು - ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿರುವವನಿಗೆ ಕಾಡೇ ಉಸುರಿದ ಆತ್ಮಕಥೆ! ಇಲ್ಲಿನ ಹಲಬಗೆಯ ನಿರೂಪಣೆಗಳು, ಕಥನಗಳು, ದೃಷ್ಟಾಂತಗಳು, ತಾನು ಒರೆಯುತ್ತಿರುವ ಕಥೆಯೊಳಗೆ ತಾನೇ ಪಾತ್ರವೂ ಆದಾಗ ಹುಟ್ಟುವ ಅಸಹಾಯಕ ದಿಗ್ಭ್ರಮೆ, ಕ್ರೂರ ವಾಸ್ತವಕ್ಕೆ ಮೂಕಸಾಕ್ಷಿಯಾಗಬೇಕಾದ ಸಂಕಟ, ತನ್ನ ಅನುಭವಕ್ಕೆ ದಕ್ಕಿದ ಸತ್ಯವನ್ನು ಅದರ ಎಲ್ಲ ಸಂಕೀರ್ಣತೆಯೊಂದಿಗೇ ಹೇಳಬೇಕು ಎಂಬ ಒದ್ದಾಟ… ಈ ಎಲ್ಲವೂ ಸೇರಿ ಕಾಡಿಗಿರುವ ಜಟಿಲ ನಿಗೂಢತೆ ಈ ಪುಸ್ತಕಕ್ಕೂ ದಕ್ಕಿದೆ.

ಪತ್ರಕರ್ತನ ವಸ್ತುನಿಷ್ಠತೆ, ಕಥೆಗಾರನ ಕಾಣ್ಕೆ - ಎರಡೂ ಸೇರಿ ಅಪರೂಪದ ಹದದಲ್ಲಿ ರೂಪುಗೊಂಡ ಕೃತಿಯಿದು. ಜನಪ್ರಿಯ ಸಿನಿಮಾಗಳು, ಒಮ್ಮುಖ ಉದ್ದೇಶದಿಂದ ಹುಟ್ಟಿಕೊಂಡ ಪುಸ್ತಕಗಳು, ‘ನ್ಯೂಸ್‌’ಗಳಿಂದ ನಮ್ಮ ಮನಸಲ್ಲಿ ರೂಪುಗೊಂಡ ‘ನಕ್ಸಲ್‌ವ್ಯಾಪಿ ನೆಲ’ದ ಕುರಿತಾದ ಕಪ್ಪು-ಬಿಳುಪು ಇಮೇಜ್‌ಗಳನ್ನು ಒರೆಸಿಹಾಕುವ ಶಕ್ತಿ ಈ ಕಥನಕ್ಕಿದೆ. ಇಲ್ಲಿರುವುದು ಸತ್ತವರ ಸೊಲ್ಲಷ್ಟೇ ಅಲ್ಲ; ಇದು ಕುರುಡು ಸಾವಿನ ಕುಣಿತದ ಸದ್ದು. ಆ ಕುಣಿತದ ತುಳಿತಕ್ಕೆ ಸಿಕ್ಕವರಲ್ಲಿ ಮನುಷ್ಯರಷ್ಟೇ ಇಲ್ಲ; ಅರಣ್ಯದ ಅನನ್ಯ ಸಂಪತ್ತಿದೆ. ಆ ನೆಲದಲ್ಲಿ ಬೇರೂರಿ ನಿಂತ ಆದಿವಾಸಿಗಳ ಜೀವನಕ್ರಮ-ಜ್ಞಾನ-ಸಂಸ್ಕೃತಿಗಳಿವೆ.

ಆಡಳಿತ ವ್ಯವಸ್ಥೆ ಮತ್ತು ಅದರ ವಿರುದ್ಧ ಬಂಡೆದ್ದು ಪರ್ಯಾಯ ವ್ಯವಸ್ಥೆ ಕಟ್ಟಲು ಹೊರಟವರ ನಡುವೆ ಸಿಲುಕಿ ನಜ್ಜುಗುಜ್ಜಾದವರ ಅಸಹಾಯಕ, ಅಷ್ಟೇ ಹೃದಯವಿದ್ರಾವಕ ಕಥನವಿದು. ಇದನ್ನು ನಾವು ನಕ್ಸಲ್‌ಕಥನವಾಗಿಯಲ್ಲ, ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕಾಡಿನ ಮತ್ತು ಅದರೊಂದಿಗೆ ಹೊಕ್ಕುಳಬಳ್ಳಿ ಸಂಬಂಧ ಸ್ಥಾಪಿಸಿಕೊಂಡು ಬದುಕು ಕಟ್ಟಿಕೊಂಡಿರುವ ಆದಿವಾಸಿಗಳ ಅತಂತ್ರಗೊಳ್ಳುತ್ತಿರುವ ಜೀವನಗಾಥೆಯಾಗಿಯೇ ನೋಡಬೇಕು.”