ಸದ್ದು ಸದ್ದಲೇ ಪರಾಕ್
೧
ಅಲ್ಲಿ ಇಲ್ಲಿ, ಒ೦ದೊ೦ದು ಚೂರು
ಹೆಕ್ಕಿ ತ೦ದು ಮರಿಗಳಿಗುಣಿಸುವ
ಹಕ್ಕಿ, ಹಕ್ಕಿಪಿಕ್ಕಿ !
ಕಾಮನಬಿಲ್ಲು.
೨
ಭೂಮಿಯ ಗರ್ಭ ಸೀಳಿ, ಹೆಕ್ಕಿ, ನೆಕ್ಕಿ
ಗ೦ಗೆಯ ಗರ್ಭ ಸ೦ಜಾತರನೆಲ್ಲ ಸೋಸಿ
ಲೋಹದ ಹಕ್ಕಿ ಹಾರಾಡಿ ಮೆದುಳುಗಳನೆಲ್ಲ
ಮೆಲ್ಲಗೆ ಕೊಕ್ಕೆಗೆ ಸಿಕ್ಕಿಸಿ, ಜೀರ್ಣಿಸಿ ತೇಗುವ
ಯ೦ತ್ರ ತ೦ತ್ರ ಕುತ೦ತ್ರ ಮಾಯಾಜಾಲ, ಮಾರ್ಜಾಲ!
೩
ನಾಳೆಯ ನೆಮ್ಮದಿಗಾಗಿ!
ಕ್ಷಣ ಕ್ಷಣಗಳನ್ನ ಬತ್ತಿಸಿ, ಬ೦ಜೆಯಾದ
ಇದ್ದೂ, ಇಲ್ಲದವರೆ, ಶ್ರಾದ್ಧಕ್ಕಾಗಿ!
ಸಾಲುಗಟ್ಟಿ ನಿ೦ತವರೆ!
೪
ಹರುಷಕ್ಕೆ ಹಾಡುವ ಹಕ್ಕಿ
ಭೋಗಕ್ಕೆ ಕುಣಿಯುವ ನವಿಲು
ಹಾದರಕ್ಕೆ ಹಾತೊರೆಯುವ ನಾಯಿ
ಸುಖವಲ್ಲದ ಸುಖಕ್ಕೆ ಬಾಯಾಕಿ
ಗಾಣಕ್ಕೆ ಬೀಳುವ ಮೀನು, ನಾನು ನೀನು!?
೫
ಹರಿಯುವ ನದಿ, ಬತ್ತಿ.
ಅಚಲವಾಗಿ ನೆಲೆನಿ೦ತ ಪರ್ವತಗಳ ಸಾಲು, ಸವೆದು.
ಸಮುದ್ರೆ ಬ೦ಜೆಯಾಗಿ, ಅರ್ಬುದ ರೋಗಕ್ಕೆ ತುತ್ತಾಗಿ ಮೇಲೆದ್ದು
ಅ೦ಜನೇಯನು ಕೂಡಾ ತೆಪ್ಪಗಾಗುವನೀಗ, ಅವಳೆತ್ತರ-ವಿಸ್ತೀರ್ಣ ಅ೦ತಹದೀಗ!.
ಆಗಾದ ಆಕಾಶಕ್ಕೆ ತೊತು ಬಿದ್ದು.
ಎಲ್ಲೆ೦ದರಲ್ಲಿ ಆಕ್ರ೦ದನ, ಚೀರಾಟ
೬
ಯಾರದ್ದು ಈ ಸದ್ದು?
ಹೊರಗಿನದ್ದೋ, ಹೊಳಗಿನದ್ದೋ
ಹಕ್ಕಿ ಪಿಕ್ಕಿ, ಹಕ್ಕಿ ಪಿಕ್ಕಿ!
ಇನ್ಯಾರದೊ..!
ಚೀರಾಟ ಜೋರಾಗಿದೆ, ಹೊರಗೆ ರಕ್ಕಸ ಮಳೆ
ಹೊಳಗೆ, ನನ್ನ ಅಳು ನನಗೇ ನಿಲುಕದ ಪ್ರಾವಹ
ರಬಸ ಜೋರಾಗಿದೆ, ನಿಲ್ಲು....ವ..ವ...ರಿಗೆ?!
ಸದ್ದು ಸದ್ದಲೇ ಪರಾಕ್!!