ಸಾಮಾಜಿಕ ಸಂದೇಶ ಸಾರುವ ಸಿನಿಮಾ ‘ವಂಶವೃಕ್ಷ’
ಎಪ್ರಿಲ್ ೬, ೨೦೨೩ರ ಸಂಪದ ಪುಟಗಳಲ್ಲಿ ‘ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ “ವಂಶವೃಕ್ಷ' ಎಂಬ ಬರಹವನ್ನು ಓದಿದೆ. ಆ ಲೇಖನದಲ್ಲಿ ಹಲವಾರು ಸ್ವಾರಸ್ಯಕರವಾದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಅದೇ ಗುಂಗಿನಲ್ಲಿ ನಾನು ಎಸ್ ಎಲ್ ಭೈರಪ್ಪನವರ ‘ವಂಶವೃಕ್ಷ’ವನ್ನು ಮತ್ತೊಮ್ಮೆ ಓದಿದೆ. ಆಗ ನನಗೆ ಈ ಚಿತ್ರದ ಬಗ್ಗೆ ಇನ್ನಷ್ಟು ಪೂರಕ ಮಾಹಿತಿಗಳನ್ನು ಬರೆಯಬಹುದೇನೋ ಎನ್ನುವ ಯೋಚನೆ ಬಂತು. ಅದೇ ವಿಷಯಗಳನ್ನು ಒಂದು ಪುಟ್ಟ ಬರಹವಾಗಿಸಿ ನಿಮ್ಮ ಮುಂದೆ ಹರಡಿರುವೆ....
ಸಮಾಜದ ಕಟ್ಟು ಪಾಡುಗಳನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಕಥಾ ಹಂದರವುಳ್ಳ ಸಿನಿಮಾ ‘ವಂಶವೃಕ್ಷ’. ಮೂರು ತಲೆಮಾರುಗಳ ಜೀವನ ಚಕ್ರವನ್ನು ತಿಳಿಸಿ, ಆಧ್ಯಾತ್ಮ, ಮರುಮದುವೆ, ಪ್ರೀತಿ, ಕಟ್ಟು ಪಾಡು ಎಲ್ಲವನ್ನೂ ಸುಸಜ್ಜಿತವಾಗಿ ಈ ಸಿನಿಮಾ ಕಟ್ಟಿಕೊಡುತ್ತದೆ. ಇಲ್ಲಿ ಪ್ರಾದೇಶಿಕತೆಯ ಸೊಗಡನ್ನು ಬಹು ಮುಖ್ಯವಾಗಿ ಕಾಣಬಹುದಾಗಿದ್ದು, ನಂಜನಗೂಡು ಹಾಗೂ ಮೈಸೂರು ಪ್ರಾಂತ್ಯಗಳ ಕುಟುಂಬದ ಕತೆಯನ್ನು ವಿವರಿಸುತ್ತದೆ.
ವಂಶವೃಕ್ಷ ಸಿನಿಮಾದ ಮುಖ್ಯ ಭೂಮಿಕೆ: ಎಸ್.ಎಲ್ ಭೈರಪ್ಪ ಅವರ ಕಾದಂಬರಿ ಆಧಾರಿತ ಸಿನಿಮಾ ‘ವಂಶವೃಕ್ಷ’. ಈ ಸಿನಿಮಾ ಸಾಮಾಜಿಕ ಕಳಕಳಿಯ ಒಂದು ಸಿನಿಮಾವಾಗಿದ್ದು, 1965 ರಲ್ಲಿ ಪ್ರಟಕವಾದ ಈ ಕಾದಂಬರಿ, 1972 ರಲ್ಲಿ ಬಿ. ವಿ ಕಾರಂತ್ ಹಾಗೂ ಗಿರೀಶ್ ಕಾರ್ನಾಡ್ ಅವರ ನಿರ್ದೇಶನದಲ್ಲಿ ಸಿನಿಮಾ ಆಗಿ ಮೂಡಿಬಂದಿದೆ. ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟ ವಿಷ್ಣುವರ್ಧನ್ ಹಾಗೂ ಉಮಾ ಶಿವಕುಮಾರ್ ಅವರು ನಟನೆ ಮಾಡಿದ್ದು, ಬಿ.ವಿ ಕಾರಂತ್, ಗಿರೀಶ್ ಕಾರ್ನಾಡ್ ಹಾಗೂ ಎಲ್. ವಿ ಶಾರದಾ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.
ವಂಶವೃಕ್ಷದ ಒಳ- ಹೊರವು: ‘ವಂಶವೃಕ್ಷ ಸನಾತನ ಮೌಲ್ಯಗಳನ್ನು ಪ್ರತಿಪಾದಿಸುವ ಸಿನಿಮಾ. ಸನಾತನ ಮೌಲ್ಯಗಳನ್ನು ಪ್ರತಿಪಾದಿಸಿ ಕೊನೆಗೆ ಶ್ರೋತ್ರಿಗೆ ಅವರ ಜೀವನದ ಮೂಲ ಸತ್ಯ, ಹುಟ್ಟಿನ ಗುಟ್ಟು ತಿಳಿಸುವುದರ ಮೂಲಕ ಆ ಪಾತ್ರದ ಒಳಶ್ರದ್ಧೆ ಕುಸಿಯುವಂತೆ ಮಾಡುವುದರಿಂದ ಪರಂಪರೆಗೆ ವಿರೋಧಿ ಎಂಬ ಎರಡೂ ನಿಲುವುಗಳು ಬಂದಿವೆ.
‘ವಂಶವೃಕ್ಷ’ದಲ್ಲಿ ಒಂದು ಜೈವಿಕ ಸಂತಾನದ ಸಮಸ್ಯೆಯಾದರೆ, ಇನ್ನೊಂದು ಇತಿಹಾಸದ ದೊಡ್ಡ ವಿದ್ವಾಂಸನಾಗಿ ಬೆಳೆದು, ತನ್ನ ಗ್ರಂಥ ರಚನೆಗೋಸ್ಕರ ಸಹಚರಳಾಗಿ ಈಗಾಗಲೇ ಇರುವ ಧರ್ಮಪತ್ನಿಯಲ್ಲದೆ ಬೇರೆಯವಳನ್ನು ಮದುವೆಯಾಗುವ ಸದಾಶಿವರಾಯನ ಸಮಸ್ಯೆ. ಅವನು ಮತ್ತು ಅವನ ಲಂಕಾ ಮೂಲದ ಸಂಗಾತಿಗೆ ತಾವು ರಚಿಸುತ್ತಿರುವ ಗ್ರಂಥಗಳೇ ಮಕ್ಕಳು ಎಂಬ ಭಾವನೆ ಹುಟ್ಟಿರುತ್ತದೆ.
ಈ ಚಿತ್ರವು 1980 ರಲ್ಲಿ ತೆಲುಗಿಗೆ ರಿಮೇಕ್ ಆಗಿದ್ದು, ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು ಹಾಗೂ 1972 ರಲ್ಲಿ ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದಿದೆ.
ಇನ್ನೂ ಇಲ್ಲಿನ ಕಥೆಯು 1924ರಲ್ಲಿ ಶುರುವಾಗುತ್ತದೆ. ವಿಧವೆ ಕಾತ್ಯಾಯನಿ ತನ್ನ ಮಾವ ಶ್ರೀನಿವಾಸ ಶ್ರೋತ್ರಿ ಮತ್ತು ಅತ್ತೆ ಭಾಗೀರಥಮ್ಮ ಹಾಗೂ ಅವರ ಆಳು ಲಕ್ಷ್ಮಿಯೊಂದಿಗೆ ನಂಜನಗೂಡಿನಲ್ಲಿ ಇರುತ್ತಿರುತ್ತಾಳೆ. ತನ್ನ ಗಂಡನನ್ನು ಕಳೆದುಕೊಂಡ ಮೇಲೆ ಕಾತ್ಯಾಯನಿಯು ಅತ್ತೆ ಬಯಸಿದಂತೆ ವಿಧವೆಯಾಗಿಯೇ ಉಳಿಯಲಿಲ್ಲ. ಅದು ಇಲ್ಲಿ ಪ್ರಧಾನ ಭೂಮಿಕೆಯನ್ನು ಪಡೆದುಕೊಂಡಿದೆ. ಆಕೆಯ ಮಾವ ಭವಿಷ್ಯದ ಕುರಿತು ಚಿಂತನೆ ನಡೆಸುವ ಪರಿಧಿಯಲ್ಲಿ ಇದನ್ನು ಕಾಣಬಹುದು. ವಿಧವೆ ವೇಷ ಒಬ್ಬ ಯುವತಿಗೆ ಹೊರಲು ಬಹಳ ಕಷ್ಟವಾಗುತ್ತದೆಂದು ಅವಳ ಮಾವ ಅಭಿಪ್ರಾಯಪಟ್ಟವರು ಅವರು. ಇನ್ನು ಭಾರತೀಯ ತತ್ತ್ವಶಾಸ್ತ್ರ ಮತ್ತು ಶಾಸ್ತ್ರಗಳಲ್ಲಿ ವಿದ್ವಾಂಸರಾದ ಶ್ರೋತ್ರಿಯವರನ್ನು ಆಗಾಗ ಪೂಜಾರಿಗಳು ಮತ್ತು ಪ್ರಾಧ್ಯಾಪಕರು ಧರ್ಮಗ್ರಂಥಗಳಲ್ಲಿನ ಸಂಕೀರ್ಣವಾದ ಸಮಸ್ಯೆಗಳಿಗೆ ಅವರ ಅಭಿಫ್ರಾಯ ಕೇಳಲು ಭೇಟಿಕೊಡುತ್ತಿದ್ದರು. ಅಂತಹ ಒಂದು ಪ್ರಸಂಗದಲ್ಲಿ, ಮೈಸೂರಿನಲ್ಲಿರುವ ಒಬ್ಬ ಕಾಲೇಜ್ ಪ್ರಾಧ್ಯಾಪಕರಾದ ಸದಾಶಿವ ರಾವ್ ಭಾರತೀಯ ತತ್ತ್ವಶಾಸ್ತ್ರದ ಕೆಲವು ವಿಷಯಗಳನ್ನು ಚರ್ಚಿಸಲು ಶ್ರೋತ್ರಿಯವರನ್ನು ಭೇಟಿಮಾಡುದನ್ನು ನಾವು ಇಲ್ಲಿ ಕಾಣಬಹುದು. ಹೀಗೆ ಇಲ್ಲಿನ ಎಲ್ಲಾ ಪಾತ್ರಗಳು ಸಮಾಜದ ಅಸ್ಮಿತೆಯನ್ನು ಕಾಣಿಸುವಂತಹ ಪಾತ್ರಗಳಾಗಿ ನಿರ್ಮಾಣಗೊಂಡಿವೆ.
- ರಂಜಿತಾ ಸಿದ್ಧಕಟ್ಟೆ
ಚಿತ್ರ ಕೃಪೆ: ಅಂತರ್ಜಾಲ ತಾಣ