ಸುಬ್ಬನು ಬಂದ ರಾಯರ ಮನೆಗೆ !

ಸುಬ್ಬನು ಬಂದ ರಾಯರ ಮನೆಗೆ !

ಅಡುಗೆ ಮನೆಯಲ್ಲಿ ಒಗ್ಗರಣೆ ಹಾಕುತ್ತಿದ್ದ ಸುಂದರಮ್ಮನವರಿಗೆ ಏನೋ ವಾಸನೆ ಬಡಿದಂತಾಯ್ತು .... ಹಜಾರದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಸೊರ ಸೊರ ಕಾಫೀ ಹೀರುತ್ತಿದ್ದ ರಾಯರಿಗೂ ಅದೇ ಅನುಭವ ...



ಗಾಳಿಯಲ್ಲಿ ತೇಲಿಬಂತು ಆ ವಾಸನೆ ... ಇಬ್ಬರೂ ಅವರವರ ಅನುಭವ ಹೇಳಿಕೊಳ್ಳಲು ಒಬ್ಬರತ್ತ ಒಬ್ಬರು, ನಾನೇನೂ ಸ್ಲೋ ಮೋಷನ್’ನಲ್ಲಿ ಓಡುತ್ತ ಬಂದರು ಎನ್ನಲಿಲ್ಲ, ಧಾವಿಸುತ್ತ ಬಂದರು ... ಇನ್ನೇನು ಇಬ್ಬರ ನಡುವೆ ಕೇವಲ ಐದು ಮೀಟರ್ ಅಂತರವಿದೆ ಎನ್ನುವಷ್ಟರಲ್ಲೇ, ಆ ಗ್ಯಾಪ್’ಅನ್ನು ತುಂಬಿದ್ದು ಮಗಳು ರಾಧ .... ಅವಳೂ ಇವರಿಬ್ಬರನ್ನು ಕಂಡು ತನ್ನ ಅನುಭವವನ್ನು ಹೇಳಿಕೊಳ್ಳಲು ಬರುತ್ತಿದ್ದಳು ...



ಬೀದಿಯಿಂದ ಕೈಯಲ್ಲಿ ಬ್ಯಾಟನ್ನು ಹಿಡಿದು ಓಡುತ್ತ ಬಂದ ರಾಮು ಇವರನ್ನು ಸೇರಿದಾಗ ನಾಲ್ಕು ರೋಡುಗಳಿಂದ ಉಂಟಾದ ಬೆಂಗಳೂರು ಟ್ರಾಫಿಕ್ ಜ್ಯಾಮ್’ನಂತಾಯ್ತು ಹಜಾರ ...



ನಾಲ್ವರ ಮುಖದಲ್ಲೂ ಅದೇ ಆತಂಕ ಭಾವ ... ಹೌದು ಗಾಳಿಯಲ್ಲಿನ ಬಂದ ಆ ಟೆಲಿಪತಿಕ್ ವಾಸನೆ ಖಂಡಿತ ಇದರದ್ದೇ ಎಂದು ಸೂಸುವ ಕಣ್ಣುಗಳು ... ಅದೇ ಭಾವ ... ರಾಮುವಿನ ಭಾವ ... ಅರ್ಥಾತ್ ರಾಧಳ ಗಂಡ ... ಅರ್ಥಾತ್ ಸುಂದರಮ್ಮ-ರಾಯರ ’ಏಕಮೇವ ಅದ್ವಿತೀಯ’ ಅಳಿಯ ... ಹಬ್ಬಕ್ಕೆ ಬರುತ್ತಿರುವ ಅಳಿಯದೇವರು ... ಸುಬ್ಬಾಭಟ್ಟ ಆಲಿಯಾಸ್ ಸುಬ್ಬ !!



ಗಂಡ ಬರುತ್ತಿದ್ದಾನೆ ಎಂಬ ಸಂತೋಷ, ಅಳಿಯ ಬರುತ್ತಿರುವನೆಂಬ ಆನಂದ, ಭಾವ ಬರುತ್ತಿರುವನೆಂಬ ಖುಷಿ .... ಯಾರಲ್ಲೂ ಇರಲಿಲ್ಲ !!! ಬದಲಿಗೆ ಒಂದು ರೀತಿ ಆತಂಕ ...



ನಮ್ ಸುಬ್ಬು ಸ್ಟೈಲೇ ಹಾಗೇ ... ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು ನುಡಿಯುವಷ್ಟು ಘನ ಜ್ಞ್ನಾನ ಅವನಿಗೆ ಇಲ್ಲ. ಅವನಾಡುವ ಪರಿ ನೋಡಿ ನೀವು ಹಾಗೆ ಅಂದುಕೊಂಡಲ್ಲಿ ಸಾಕು.



ದೀಪಾವಳಿಗೆ ಮಾವನ ಮನೆಗೆ ಬರುತ್ತಿರುವ ಅಳಿಯ ಬಗ್ಗೆ ಹೀಗೆ ಮಾತನಾಡುವುದೇ? ಸಲ್ಲದು ಅಂದರೆ ನೀವೇ ಒಂದೆರೆಡು ದಿನ ನಮ್ ಸುಬ್ಬನ್ನ ’ಸಾಕಿ’ ... ಆಮೇಲೆ ನೀವೇ ಹೇಳ್ತೀರ ಅವನನ್ನ ’ಬಿಸಾಕಿ’ ಅಂತ !!!



ಒಂದೆರಡು ಪ್ರಸಂಗಗಳನ್ನು ಅಂದರೆ ’ಫ್ಲಾಷ್ ಬ್ಯಾಕ್’ ರೀತಿ ಹೇಳುತ್ತೇನೆ, ಆಮೇಲೆ ನೀವೇ ಊಹಿಸಿಕೊಳ್ಳುವಿರಂತೆ ...



ಸುಬ್ಬ ಆಗಿನ್ನೂ ಬ್ರಹ್ಮಚಾರಿ ... ಬಸ್ಸಿನಲ್ಲಿ ಹತ್ತಿದವನಿಗೆ ಒಂದು ಹುಡುಗಿಯ ಪಕ್ಕದ ಸೀಟು ಬಿಟ್ಟರೆ ಮಿಕ್ಕೆಲ್ಲ ಭರ್ತಿ ಆಗಿತ್ತು ... ಹೀಗೂ ಉಂಟೇ ಅನ್ನಬೇಡಿ ... ಹದಿನಾರರಿಂದ-ಅರವತ್ತರ’ವರೆಗೂ ಸುಬ್ಬನಿಗೆ ಎಲ್ಲರೂ ಹುಡುಗಿಯರ ಹಾಗೇ ಕಾಣೋದು !



ಇರಲಿ, ಸೀದ ಹೋಗಿ ಆಕೆಯ ಪಕ್ಕದಲ್ಲಿ ಕುಳಿತೇ ಬಿಟ್ಟ. ಮುಂದಿನ ಸೀಟಿನಲ್ಲಿ ಅಜ್ಜಿಯ ತೊಡೆಯ ಮೇಲೆ ಕುಳಿತಿದ್ದ ಒಂದು ಹೆಣ್ಣು ಮಗು, ಅಲ್ಲಿಂದ ಎದ್ದು ’ಮಮ್ಮಿ’ ಎನ್ನುತ್ತ ಸುಬ್ಬನ ಪಕ್ಕದ ಹುಡುಗಿಯ (?) ಬಳಿ ಬರೋದೇ ? ಸುಬ್ಬ ಆಶ್ಚರ್ಯದಿಂದ ಆಕೆಯನ್ನು ಕೇಳಿಯೇ ಬಿಟ್ಟ "ಮಗು ನಿಮ್ಮದೇ?" ಅಂತ. ಆಕೆ ನಾಚಿ "ಹೌದು" ಎಂದು "ನಾನು ದಿನವೂ ಸಂತೂರ್ ಸಾಬೂನನ್ನೇ ಬಳಸುವುದು" ಎನ್ನಲಿದ್ದಳು ... ಅಷ್ಟರಲ್ಲೇ ಸುಬ್ಬ "ನಿಮ್ಮನ್ನು ನೋಡಿ ಹುಡುಗಿ ಅಂದುಕೊಂಡೆ ... ವಯಸ್ಸಾದವರು ಅಂತ ಗೊತ್ತಾಗಲಿಲ್ಲ ... ಸಾರಿ" ಎಂದಿದ್ದ !!! ಮುಂದೆ ಏನಾಯ್ತು ಎಂಬೋದು ಇಲ್ಲಿ ಹೇಳಲಾರೆ ... ಅಂದಿನಿಂದ ಅವನು ಬಸ್ ಹತ್ತಿಲ್ಲ ಅಂತ ಮಾತ್ರ ಹೇಳಬಲ್ಲೆ !!!



ಸುಬ್ಬನ ಬಗ್ಗೆ ಒಂದು ಐಡಿಯಾ ಬಂತೇ? ಇಂತಹ ಸುಬ್ಬನಿಗೆ ರಾಯರು ತಮ್ಮ ಮಗಳನ್ನು ಹೇಗೆ ಕೊಟ್ಟರು ಅನ್ನೋ ಅನುಮಾನ ನಿಮಗೆ ಬಂದಿರಲೂ ಬಹುದು. ಕೆಲವೊಮ್ಮೆ ದುರ್ಘಟನೆಗಳು ಹಿತವಾಗೇ ನೆಡೆದು ಅಪಘಾತಗಳು ನೆಡೆಯುವುದುಂಟು. ಅದಕ್ಕೆ ಹಿರಿಯರು ’ಹಣೆಬರಹ’ ಅಥವಾ ’ಬ್ರಹ್ಮಗಂಟು’ ಎಂದೂ ಅನ್ನುತ್ತಾರೆ. ಈಗ ವಿಷಯ ಹೇಳ್ತೀನಿ ಕೇಳಿ ..



ಮದುವೆಗೆ ಮುನ್ನ ಮನೆ ಮಾಡು ಅನ್ನೋದನ್ನ ಯಾರೋ ಸುಬ್ಬನಿಗೆ ಹೇಳಿದ್ದರು. ಅದರಂತೆ ಮನೆ ಹುಡುಕುತ್ತಿದ್ದ. ಒಂದೆರಡು ಮನೆ ನೋಡಿದ ಮೇಲೆ ಸುಬ್ಬನಿಗೆ ದಳ್ಳಾಳಿ ಜೊತೆ ಹೇಗೆ ವ್ಯವಹರಿಸಬೇಕು ಅಂತ ಗೊತ್ತಾಯ್ತು. ನಂತರ ಆ ದಲ್ಲಾಳಿ ಯಾವುದೇ ಮನೆಯ ಬಗ್ಗೆ ಹೇಳುವಾಗ ಸುಬ್ಬ "ಆ ಮನೆಯಲ್ಲಿ ಏನೇನಿದೆ" ಎಂದು ಮುಂಚಿತವಾಗಿಯೇ ತಿಳಿದುಕೊಳ್ಳುತ್ತಿದ್ದ. ಅಂತಹ ಸುಬ್ಬನ ಬಳಿ ಮದುವೆ ದಳ್ಳಾಳಿ, ರಾಯರ ಮಗಳ ವಿವರ ಹೊತ್ತು ಬಂದ.



ಸುಬ್ಬ ಅವರನ್ನು ಕೇಳಿಯೇಬಿಟ್ಟ "ಹುಡುಗೀಗೆ ಏನೇನಿದೆ?" ಅಂತ. ದಲ್ಲಾಳಿಯ ಅದೃಷ್ಟವೋ ಅಥವಾ ದುರಾದೃಷ್ಟವೋ ರಾಯರೂ ಅವನ ಜೊತೆಗೇ ಇದ್ದರು ! ಸುಬ್ಬನಿಗೆ ಸರಿಯಾಗಿ ನಾಲ್ಕು ಬಿತ್ತು ಅಂದುಕೊಳ್ಳುವಷ್ಟರಲ್ಲಿ, ರಾಯರು ಗಟ್ಟಿಯಾಗಿ ನಕ್ಕುಬಿಡೋದೇ? ಒಂದು ಕೆಟ್ಟ ಘಳಿಗೆಯಲ್ಲಿ ರಾಯರಿಗೆ ಸುಬ್ಬ ಮನಸ್ಸಿಗೆ ಬಂದುಬಿಟ್ಟಿದ್ದ. ಸುಬ್ಬನು ರಾಯರ ಅಳಿಯನಾದ. ಇವನಿಗೊಂದು ಹುಡುಗಿ ಹುಡುಕಿಯೇ ತೀರುತ್ತೇನೆ ಎಂದು ದಳ್ಳಾಳಿ ಮಾಡಿದ್ದ ಶಪಥ ಕೂಡ ನೆರವೇರಿತು.



ಹಾಸ್ಯಪ್ರವೃತ್ತಿ ಎಂದುಕೊಂಡಿದ್ದ ರಾಯರಿಗೆ ತಮ್ಮ ಅಳಿಯ ಹಾಸ್ಯಾಸ್ಪದ ಎಂದು ತಿಳಿಯಲು ಹೆಚ್ಚು ದಿನಗಳು ಬೇಕಿರಲಿಲ್ಲ. ಮದುವೆ ದಿನ ಕಳೆದು ಬೆಳಿಗ್ಗೆ ಸೀದ ತನ್ನತ್ತೆಯತ್ತ ನೆಡೆದು "ನೆನ್ನೆ ರಾತ್ರಿ ರಾಧಾ ಹಾಲಿನ ಲೋಟ ಹಿಡಿದುಕೊಂಡು ಬಂದಳು. ಪೂರ್ತಿ ನಾನೇ ಕುಡಿದುಬಿಟ್ಟೆ. ಪಾಪ ಅವಳಿಗೊಂದು ಲೋಟ ಹಾಲು ಬಿಸಿ ಮಾಡಿಕೊಡಿ" ಎಂದು ಹಲ್ಲು ಕಿಸಿಯುತ್ತ ನಿಂತ. ರಾಯರ ಪತ್ನಿಗೆ ಛತ್ರದಲ್ಲೇ ಭೂಮಿ ಬಾಯಿಬಿಡಬಾರದೇ ಅನ್ನಿಸಿದ್ದು ಸುಳ್ಳಳ್ಳ. ಅಳಿಯ ಇನ್ನೇನಾದರೂ ಹೇಳುವ ಮುನ್ನ ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ಮದುವೆಯಾಗಿ ವರ್ಷವೆರಡು ಕಳೆದಿದ್ದರೂ, ಅವರು ಹಾಗೇಕೆ ಜಾಗ ಖಾಲಿ ಮಾಡಿದರು ಎಂದು ಸುಬ್ಬನಿಗೆ ತಿಳಿಯದು.



ಇಂತಹ ಘನಂಧಾರಿ ಸುಬ್ಬ, ಮಾವನ ಮನೆಗೆ ಬರುತ್ತಿರುವ ವಿಷಯ ಟೆಲಿಪತಿಯಂತೆ ಮನೆಯಲ್ಲಿನ ಎಲ್ಲರಿಗೂ ಅರಿವಾಗಿತ್ತು... ಅಳಿಯ ವಾಸನೆ ... ಎರಡನೇ ದೀಪಾವಳಿಗೆ ಬರುತ್ತಿರುವುದೇನೋ ನಿಜ ಆದರೆ ಇನ್ನೂ ಹಬ್ಬ ಎಲ್ಲೋ ಇದೆ, ಈಗಲೇ ಬಂದರೆ ಸುಧಾರಿಸುವುದೆಂತು? ಎಡವಿದ್ದೆಲ್ಲಿ? ತಾಯಿ-ಮಗಳು ರಾಯರ ಕಡೆ ನೋಡಿದರು. ಇವರು ಕಾಗದ ಬರೆಯುತ್ತೇನೆ ಎಂದು ತಿಳಿಸಿದ್ದರು.



ಕಾಗದ ಎಂದ ಮೇಲೆ ನೆನಪಿಗೆ ಬಂತು ನೋಡಿ ಮಾವ-ಅಳಿಯ ಪ್ರಸಂಗ. ಹಿಂದೊಮ್ಮೆ ಕಾಗದದ ಬಗ್ಗೆ ವಿಷಯ ಬಂದಾಗ ಸುಬ್ಬ ಮಾವನಿಗೆ ಹೇಳಿದ್ದ "ನೀವು ಕಾಗದ ಅಂತ ಬರೆದು ಹಾಕಬೇಡಿ. ಸುಮ್ಮನೆ ಯಾರ್ಯಾರೋ ಮುಟ್ಟಿ ಎಂಜಲು ಕೈಯಲ್ಲೇ ತಂದುಕೊಡ್ತಾರೆ. ಯಾರೂ ಕೈಯಿಂದ ಮುಟ್ಟದೆ ಮಡಿ ಮಡಿಯಾಗಿ ನನಗೆ ವಿಷಯ ಈಮೈಲ್ ಮಾಡಿ" ಎಂದಿದ್ದ !!!



ಕೆಲವು ವಿಷಯದಲ್ಲಂತೂ ನಮ್ ಸುಬ್ಬ ಅತೀ ಜಾಣ. ಈಮೈಲ್ ಸಂದೇಶ ಶುದ್ದ ಮಡಿ ಅಂತ ರಾಯರಿಗೆ ಆಗಲೇ ಮನವರಿಕೆಯಾಗಿದ್ದು. ಅದಕ್ಕಿಂತಲೂ, ಸುಬ್ಬನಿಗೆ ಈಮೈಲ್ ಹೇಗೆ ಓದಬೇಕೂ ಅಂತ ಅರಿವಿದೆಯೋ ಇಲ್ಲವೋ ಎಂದೇ ಅವರು ಕಾಗದ ಎಂದು ಅಂದುಕೊಂಡಿದ್ದರು ಎಂಬುದು, ಎಲ್ಲರಿಗೂ ಅರಿವಿದ್ದ ಸಿಕ್ಕಾಪಟ್ಟೆ ರಹಸ್ಯವಾದ ಮಾತು.



ಇಷ್ಟಕ್ಕೂ ಈಮೈಲ್’ನಲ್ಲಿ ಸುಬ್ಬನಿಗೆ ಕನ್ಫ಼್ಯೂಸ್ ಆಗುವಂಥದ್ದೇನಿತ್ತೋ ಗೊತ್ತಿಲ್ಲ, ಇಷ್ಟು ಬೇಗ ಬಂದು ವಕ್ಕರಿಸಲು. ಕಳೆದ ವರ್ಷ ಹೀಗೇ ಆಯ್ತು. ಅಳಿಯ-ಮಗಳನ್ನು ಹಬ್ಬಕ್ಕೆ ಆಹ್ವಾನಿಸುವ ಸಲುವಾಗಿ ರಾಯರು ಮೈಲ್ ಬರೆದು ಕಡೆಯಲ್ಲಿ ’ನಿಮ್ಮಗಳ ಕ್ಷೇಮಕ್ಕೆ ಕರೆ ಅಥವಾ ಈಮೈಲ್ ಮಾಡಿ’ ಎಂದು ಸಾಂಪ್ರದಾಯಿಕವಾಗಿ ಬರೆದಿದ್ದರು.



ದೀಪಾವಳಿಗೆ ಬಂದ ಸುಬ್ಬ "ಮಾವಾ, ನಿಮಗೆ ಇಷ್ಟು ಬೇಗ ಅರುಳು-ಮರಳು ಆದ ಹಾಗಿದೆ. ನಿಮ್ಮಗಳು ಅಂತ ಬರೆದಿದ್ದಿರಿ ಈಮೈಲ್’ನಲ್ಲಿ. ಇವಳು ನನ್ನ ಮಗಳಲ್ಲ, ನನ್ ಹೆಂಡತಿ. ಇವಳು ನಿಮ್ಮ ಮಗಳು" ಅಂತ ಪೆಕರು ಪೆಕರಾಗಿ ನಕ್ಕಿದ್ದ. ರಾಯರಿಗೆ ಆಗ ಅರಿವಾಗಿತ್ತು "ನಿಮ್ಮಗಳ" ಅನ್ನೋದನ್ನು ಸುಬ್ಬ "ನಿಮ್ಮ ಮಗಳ" ಅಂತ ಅರ್ಥೈಸಿಕೊಂಡಿದ್ದ. ಅಂದಿನಿಂದ ರಾಯರು ತಮ್ಮ ಅರ್ಥಕೋಶದಿಂದ ಆ ಪದವನ್ನೇ ತೆಗೆದುಹಾಕಿದ್ದರು ...



ರಾಮುವಿಗೆ ಜೀವನದಲ್ಲೇ ಪ್ರಥಮ ಬಾರಿ ಭಯಂಕರ ಅನುಭವವಾಗಿದ್ದೂ ಕಳೆದ ದೀಪಾವಳಿಯಲ್ಲೇ. ಭಾವನನ್ನು ಸ್ವಾಗತಿಸಲು ಬಾಗಿಲಿಗೆ ಬಂದವನಿಗೆ "ಏನೋ ರಾಮೂ, ಕುಳ್ಳಗಾಗಿ ಬಿಟ್ಟಿದ್ದೀಯಾ" ಅನ್ನೋದೇ? ರಾಮುವಿಗೆ ತಬ್ಬಿಬ್ಬು. ಅದಕ್ಕೆ ರಾಧಾ "ಹಾಗೇನಿಲ್ಲಾರೀ, ನಮ್ ರಾಮೂ ದಪ್ಪ ಆಗಿರೋದ್ರಿಂದ ಎತ್ತರ ಕಡಿಮೆ ಕಾಣ್ತಿದ್ದಾನೆ ಅಷ್ಟೇ ..." ನುಡಿದ್ದಳು. ರಾಮೂ ಸೈಲೆಂಟಾಗಿ ಜಾಗ ಖಾಲೀ ಮಾಡಿದ್ದ ...



ಏನಾದರೇನು ಸುಬ್ಬ ಮನೆ ಮುಂದೆ ಇಳಿದಿದ್ದಾಯ್ತು ... ಒಂದು ಬ್ಯಾಗ್ ಹೆಗಲಿಗೆ ನೇತುಹಾಕಿಕೊಂಡು ಇಳಿದವನ ಕಂಡು ಎಲ್ಲರೂ ಅಂದುಕೊಂಡಿದ್ದು ಕೆಲವೇ ದಿನಗಳ ಅತಿಥಿ ಇರಬೇಕು ಅಂತ ... ಒಳ ನೆಡೆದ ಮೇಲೆ, ತನ್ನ ಬ್ಯಾಗಿನಿಂದ ಒಂದು ಜರಡಿಯನ್ನು ತೆಗೆದು ತನ್ನತ್ತೆಗೆ ಕೊಟ್ಟ. ಅರ್ಥವೇ ಆಗದ ಕೆಲಸ ಮಾಡುವುದರಲ್ಲಿ ಸುಬ್ಬ ನಿಸ್ಸೀಮ ಅಂತ ಎಲ್ಲರಿಗೂ ಗೊತ್ತು. ಈ ವಿಷಯ ಎನು ಅಂತ ಅವನೇ ಬಾಯಿಬಿಡಲಿ ಅಂತ ಕಾದರು.



"ನಮ್ಮೂರಿನ ದಿನಸಿ ಅಂಗಡಿಯಲ್ಲಿ ಕರ್ವಾ ಚೌಥ್ ಹಬ್ಬಕ್ಕೆ ಸಾಮಾನು ಕೊಂಡರೆ ಜರಡಿ ಫ್ರೀ ಅಂತ ಒಳ್ಳೇ ಆಫರ್ ಇತ್ತು. ಆ ಜರಡಿ ಇದು" ಅಂತ ಹಲ್ಲು ಕಿರಿದ ಸುಬ್ಬ. ಧನ್ಯನಾದೆ ಅಂದುಕೊಂಡು ಒಳ ನೆಡೆದರು ಆ ಅತ್ತೆ. "ಕಾಫಿ ಕೊಡಲೇ?" ಅಂದಳು ರಾಧ. ಸುಬ್ಬ ನುಡಿದ "ಇಲ್ಲ ಬೇಡ, ಹಣ್ಣಿನ ರಸ ಇದ್ರೆ ಒಳ್ಳೇದು" ಅಂದ ! ಯಾವಾಗಲೂ ಸ್ಟ್ರಾಂಗ್ ಕಾಫಿ ಹೀರುತ್ತಿದ್ದವನದು, ಇದೇನು ಹೊಸ ಅವತಾರ ಎಂದು ಎಲ್ಲರೂ ಮುಖ ಮುಖ ನೋಡಿಕೊಂಡರು ...



ರಾಮು ಹೊರ ನೆಡೆದು ಒಂದು ಆರಂಜ್ ಜ್ಯೂಸ್ ಕ್ಯಾನ್ ತಂದ ... ಸುಬ್ಬು ಅದರ ಮೇಲೆ ಬರೆದಿದ್ದ Nutrition facts ನೋಡಿ, "ಓಹ್ ಸಕ್ಕರೆ ಇಪ್ಪತ್ತೇಳು ಗ್ರಾಂ ಇದೆ .... ಒಂದು ಕೆಲಸ ಮಾಡು, ಜ್ಯೂಸ್’ಅನ್ನು ಒಂದು ಲೋಟದಲ್ಲಿ ಹಾಕಿ ಕೊಡು, ಲೋಟಕ್ಕೆ ಗೊತ್ತಾಗೋಲ್ಲ ..." ಭಾವನ ವಿದ್ವತ್ತಿಗೆ ತಲೆದೂಗಿ ಸುಮ್ಮನೆ ಒಳ ನೆಡೆದು ಲೋಟ ತಂದು ಕೈಯಲ್ಲಿಟ್ಟ !



ಕಾಲ ನಿಲ್ಲುತ್ತದೆಯೇ? ಹಬ್ಬದ ದಿನ ಬಂದೇ ಬಿಡ್ತು .. ಈ ಬಾರಿ ಏನು ಅವಾಂತರ ಆಗುತ್ತೋ ಎಂಬುದೇ ಎಲ್ಲರಿಗೂ ಯೋಚನೆ. ಹೌದು, ಸರಿಯಾಗಿ ಊಹಿಸಿದಿರಿ. ಮೊದಲ ವರ್ಷ ಅವಾಂತರ ಆಗಿತ್ತು. ಅಲ್ಲಾ, ಸುಬ್ಬ ಇದ್ದೆಡೆ ಅವಾಂತರ ಅಲ್ಲದೇ ಅವತಾರ ಆಗುತ್ಯೇ? ಇಷ್ಟಕ್ಕೂ ಏನಾಯ್ತು?



ಮೊದಲ ದೀಪಾವಳಿ. ಸ್ವಲ್ಪ ಮುಂಚಿತವಾಗೇ ಬಂದಿದ್ದ. ಹೌದು, ಈಗ ಬಂದಿರುವುದಕ್ಕಿಂತ ಮುಂಚಿತವಾಗಿ. ರಾಮೂ ಜೊತೆ ಹೋಗಿ ಅವನಿಗಿಷ್ಟವಾದ ಮತ್ತು ಇವನಿಗಿಷ್ಟವಾದ ಪಟಾಕಿಗಳನ್ನು ಸಾಕಷ್ಟು ತಂದಿದ್ದ. ರಾಮುವಿನ ಆರೆಸ್ಸೆಸ್ ಕೋಲಿಗೆ ದಪ್ಪನೆಯ ಊದಿನ ಕಡ್ಡಿ ಕಟ್ಟಿ ಎರಡು ಲಕ್ಷ್ಮೀ ಪಟಾಕಿ ಹೊಡೆದವನು, ಸಂಜೆ ಮಿಕ್ಕಿದ್ದು ನೋಡೋಣ ಎಂದು ಸುಮ್ಮನಾಗಿದ್ದ. ಇರುಳುಗಣ್ಣಿದ್ದವರಿಗೆ ರಾತ್ರಿ ಕಣ್ಣು ಕಾಣೋಲ್ವಂತೆ. ಸುಬ್ಬನ ವಿಷಯದಲ್ಲಿ ಸ್ವಲ್ಪ ಇದೇ ರೀತಿ ನ್ಯೂನತೆ ಆದರೆ ಉಲ್ಟ. ಸಂಜೆ ಕಳೆದು ರಾತ್ರಿ ಆಗುತ್ತಿದ್ದಂತೆ ಏನೋ ಸಿಕ್ಕಾಪಟ್ಟೆ ಧೈರ್ಯ.



ಒಂದು ತೆಂಗಿನ ಚಿಪ್ಪು ತೆಗೆದುಕೊಂಡು, ಒಳಗಿನಿಂದ ಆಟಂ ಬಾಂಬ್’ನ ಬತ್ತಿ ಹೊರಬರಿಸಿ, ಸ್ವಲ್ಪ ಹತ್ತಿರದಿಂದ, ಚಿಕ್ಕ ಊದಿನ ಕಡ್ಡಿಯಿಂದ ಬತ್ತಿಯನ್ನು ಅಂಟಿಸಿದ್ದ. ಊಹಿಸಿದ್ದಕ್ಕಿಂತ ಬೇಗ ಉರಿದ ಆ ಬಾಂಬ್ ಜೋರಾಗಿ ಸಿಡಿದು ತೆಂಗಿನ ಚಿಪ್ಪನ್ನು ಎಂಟೂ ದಿಕ್ಕಿಗೆ ಸಿಡಿಸಿತ್ತು. ಚಿಪ್ಪಿನ ಜೊತೆ ಎಂಟೂ ದಿಕ್ಕಿಗೆ ಸುಬ್ಬನ ಬಾಯಲ್ಲಿನ ಮುಂದಿನ ಎರಡು ಹಲ್ಲುಗಳೂ ಸೇರಿತ್ತು !!! ಚಿಪ್ಪಿನ ಒಂದು ದೊಡ್ಡ ಚೂರು ಬಾಯಿಗೆ ಬಡಿದು, ಹಲ್ಲು ಮುರಿದು, ಕಿವಿಯಲ್ಲೆಲ್ಲ ಶಬ್ದವೇ ತುಂಬಿ ಸುಬ್ಬ ನಾರ್ಮಲ್’ಗೆ ಬರುವ ಹೊತ್ತಿಗೆ ಘಂಟೆ ಹತ್ತಾಗಿತ್ತು. ಅಲ್ಲಿಗೆ ಮೊದಲ ದೀಪಾವಳಿ ಮುಗಿದಿತ್ತು !!



ಬೆಳಿಗ್ಗೆ ತಲೆಗೆ ಎಣ್ಣೆ ಒತ್ತಿ, ಸೀಗೆಪುಡಿ ತಿಕ್ಕಿ ತಲೆ ಸ್ನಾನ ಮಾಡುವುದು ದೀಪಾವಳಿ ಹಬ್ಬದ ಒಂದು ವಿಶೇಷ. ಕೂದಲಿಗೆ ಎಣ್ಣೆ ಒತ್ತಲು, ತಲೆ ಮೇಲೆ ಕೂದಲು ಇದ್ದರೆ ತಾನೇ? ತಲೆ ಮೇಲಿರೋ ಕೂದಲೆಲ್ಲ ಸೈಡ್ ವಿಂಗ್’ಗೆ ಜರುಗಿತ್ತು. ಅಂತೂ ಬೆಳಗಿನ ಸ್ನಾನ ಆಯ್ತು. ಮನೆಯಲ್ಲಿದ್ದರೆ ಪಟಾಕಿ ಸಿಡಿಸಬೇಕಾಗುತ್ತದೆ ಎಂದುಕೊಂಡು, ಹೆಂಡತಿಯೊಡನೆ ಮಾರುಕಟ್ಟೆ ಸುತ್ತಿ, ತಿಂಗಳ ದಿನಸಿ ತಂದಿಟ್ಟ. ಮನೆಯಲ್ಲಿದ್ದರೆ ಮಗಳು ಅಡುಗೆಯಲ್ಲಿ ಸಹಾಯ ಮಾಡುತ್ತಿದ್ದಳು ಎಂದು ಅತ್ತೆ ಗೊಣಗಿಕೊಂಡರೂ ದಿನಸಿ ನೋಡಿ ಏನೂ ಹೇಳದೆ ಸುಮ್ಮನಾದರು !



ಸೂರ್ಯನಿಳಿದು ಚಂದ್ರನೇರುವ ಸಮಯದಲ್ಲಿ, ಎಲ್ಲರ ಆತಂಕ ಮೇಲೇರುತ್ತಿದ್ದಂತೆ, ಸುಬ್ಬನ ಸಂತಸವೂ ಮೇಲೇರುತ್ತಿತ್ತು. ಲಕ್ಷಣವಾಗಿ ಪ್ಯಾಂಟು-ಶರಟು ಧರಿಸಿ ಸಿದ್ದನಾಗಿದ್ದ. ಜರತಾರಿ ಪಂಚೆಯುಟ್ಟು, ಹೊಸ ಶರ್ಟು ತೊಟ್ಟು, ರೇಷ್ಮೆ ವಲ್ಲಿಯನ್ನು ಹೊದ್ದ ರಾಯರು, ಸಂತಸದಲ್ಲಿ ಪಾಲ್ಗೊಳ್ಳಲು ಸಿದ್ದರಾಗಿದ್ದರು. ಭೂ-ಚಕ್ರ, ಹೂಕುಂಡ ಎಂಬೆಲ್ಲ ಚಿಕ್ಕ ಪುಟ್ಟ ಅಸ್ತ್ರಗಳು ಮುಗಿದ ಮೇಲೆ, ಸುಬ್ಬನ ಬತ್ತಳಿಕೆಯಿಂದ ಹೊರಬಂದಿತ್ತು ಬ್ರಹ್ಮಾಸ್ತ್ರ ! ರಾಕೆಟ್ !



ಸುರುಳಿ ಸುತ್ತುತ್ತ, ಗಂಟೆಗೆ ೩೦ ಕಿಲೋಮೀಟರ್ ವೇಗದಲ್ಲಿ ಸಾಗಿ, ಕೊನೆಯಲ್ಲಿ ಸಿಡುಯುತ್ತದೆ ಎಂಬ ವಿಷಯ ಹೊತ್ತ ಪ್ಯಾಕೆಟ್ ಹೊರತೆಗೆದ ಸುಬ್ಬ. ಮೊದಲ ರಾಕೆಟ್ ಹೊರತೆಗೆದು, ಖಾಲೀ ಕೂಲ್ ಡ್ರಿಂಕ್ ಬಾಟ್ಲಿಯಲ್ಲಿಟ್ಟು ಉದ್ಘಾಟನೆ ಮಾಡಿಯೇಬಿಟ್ಟ. ಶರವೇಗದಲ್ಲಿ ಸುರುಳಿಯಾಕಾರದಿ ಮೇಲಕ್ಕೆ ಸಾಗಿ, ಆಕಾಶದಲ್ಲಿ ಕಿಡಿಗಳ ಹೂ ಚೆಲ್ಲಿ ಢಮ್ ಎಂದಿತು. ಎಲ್ಲರೂ ಸೇರಿ ಚಪ್ಪಾಳೆ ಹೊಡೆದರು. ಸ್ಪೂರ್ತಿ ಉಕ್ಕಿ, ಮತ್ತೊಂದು ಅಸ್ತ್ರ ಹೊರತೆಗೆದ ಸುಬ್ಬ. ಮತ್ತೊಮ್ಮೆ ಬಾಟ್ಲಿಯಲ್ಲಿಟ್ಟು ಬತ್ತಿಯನ್ನು ಅಂಟಿಸಿದ.



ಮೊದಲ ಬಾರಿ ಅದ್ಬುತವಾಗಿ ಸಾಗಿದ್ದ ರಾಕೆಟ್, ಟೇಕ್ ಆಫ್ ಆಗುವ ಮುನ್ನ ಬಾಟ್ಲಿಯನ್ನು ಸ್ವಲ್ಪ ಅಲುಗಿಸಿ ಹೋಗಿತ್ತು. ಅದನ್ನು ನಮ್ ಸುಬ್ಬ ಮತ್ತೆ ಸರಿ ಮಾಡಿರಲಿಲ್ಲ. ಎರಡನೇ ಅಸ್ತ್ರ ಬಾಟ್ಲಿಯನ್ನೂ ಮತ್ತೊಮ್ಮೆ ಅಲ್ಲಾಡಿಸಲು, ಅದು ಕೆಳಕ್ಕೆ ಉರುಳಿತು. ಮೊದಲ ಲಾಂಚ್’ನಿಂದ ಸ್ಪೂರ್ತಿಗೊಂಡ ರಾಯರು ನಾಲ್ಕು ಹೆಜ್ಜೆ ಮುಂದೆ ಬಂದು ನಿಂತಿದ್ದರು. ರಾಕೆಟ್’ಗೆ ಭೇದ-ಭಾವ ಇಲ್ಲ ನೋಡಿ. ಉರುಳಿದ ಬಾಟ್ಲಿಯಿಂದ ಹೊರ ಚಿಮ್ಮಿ, ಪಂಚೆಯೊಳಕ್ಕೆ ಸಿಕ್ಕಿಕೊಂಡು ಸುರುಳಿ ಸುತ್ತುವ ಪ್ರಯತ್ನದಲ್ಲಿ ಸೋತು, ಕಿಡಿ ಹಾರಿಸಿ ಢಂ ಎನ್ನುವಷ್ಟರಲ್ಲಿ ರಾಯರು ಹೆದರಿ ಮೂರ್ಛಿತರಾಗಿದ್ದರು !!!



ಕಿಡಿಯಿಂದ ಸುಟ್ಟ ಪಂಚೆಯನ್ನು ಕಿತ್ತೊಗೆದ ಸುಬ್ಬ, ರಾಯರನ್ನು ಅನಾಮತ್ತಾಗಿ ತನ್ನ ಕೈಗಳಲ್ಲಿ ಹೊತ್ತುಕೊಂಡು, ಪೆಚ್ಚುಮೋರೆ ಹಾಕಿಕೊಂಡು, ಒಳ ನೆಡೆದ. ಅಲ್ಲಿಗೆ ಎರಡನೇ ದೀಪಾವಳಿ ಮುಗಿದಿತ್ತು !



ಅಳಿಯ ಪೆದ್ ಪೆದ್ದಾಗಿ ಮಾತನಾಡಿದರೆ ಏನು? ಮನದಲ್ಲಿ ಶುದ್ದ! ಮಾವನೆಂಬೋ ಗೌರವ ಮತ್ತು ಕಾಳಜಿ! ಸದಾ ಮಡದಿಗೆ ಸಹಾಯ ಮಾಡೊ ಇವನು, ಆ ದಿನ ಅತ್ತೆಗೆಂದು ಜರಡಿ ಕೊಟ್ಟ! ಮನೆಗೆ ದಿನಸಿ ತಂದಿಟ್ಟ. ಅತಿ ವಿದ್ಯಾವಂತರೇ ಸ್ವಂತ ಜನರನ್ನ ದೂರ ತಳ್ಳುವ ಈ ಕಾಲದಲ್ಲಿ ಸುಬ್ಬ ಚಿನ್ನದಲ್ಲಿ ಚಿನ್ನ ! ಚಿನ್ನದ ಬೆಲೆ ಎಷ್ಟೇ ಏರಿದ್ದರೂ ಇವನೆತ್ತರಕ್ಕೆ ಏರೋಲ್ಲ ಬಿಡಿ !!!



ದೂರದಲೆಲ್ಲೋ ಅಣ್ಣಾವ್ರ ಹಾಡು ಕೇಳಿಸುತ್ತಿತ್ತು "ದೀಪಾವಳಿ, ದೀಪಾವಳಿ, ಗೋವಿಂದ ಲೀಲಾವಳಿ, ಅಳಿಯ ಮಗನಾದನು, ಮಾವ ಮಗುವಾದನು"





{ಥಟ್ಸ್ ಕನ್ನಡ ದೀಪಾವಳಿ ವಿಶೇಷಾಂಕ’ದಲ್ಲಿ ಪ್ರಕಟವಾದ ಲೇಖನವಿದು. ಸಕಲ ಸಂಪದಿಗರೆ ’ಭಲ್ಲೆ ಕುಟುಂಬ ಮತ್ತು ’ಸುಬ್ಬು’ವಿನ ಕಡೆಯಿಂದ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು}

 

 

Comments

Submitted by venkatb83 Mon, 11/12/2012 - 18:18

'"ಏನೋ ರಾಮೂ, ಕುಳ್ಳಗಾಗಿ ಬಿಟ್ಟಿದ್ದೀಯಾ" ಅನ್ನೋದೇ? ರಾಮುವಿಗೆ ತಬ್ಬಿಬ್ಬು. ಅದಕ್ಕೆ ರಾಧಾ "ಹಾಗೇನಿಲ್ಲಾರೀ, ನಮ್ ರಾಮೂ ದಪ್ಪ ಆಗಿರೋದ್ರಿಂದ ಎತ್ತರ ಕಡಿಮೆ ಕಾಣ್ತಿದ್ದಾನೆ ಅಷ್ಟೇ ..." ನುಡಿದ್ದಳು. ರಾಮೂ ಸೈಲೆಂಟಾಗಿ ಜಾಗ ಖಾಲೀ ಮಾಡಿದ್ದ ...:" :()))) ಭಲ್ಲೆ ಅವ್ರೆ ಗಣೇಶ್ ಅಣ್ಣ ಅವ್ರು ಈ ಕೊಂಡಿ ಕೊಟ್ಟ ಕಾರಣ ಈ ಬರಹವನ್ನು ಓದುವ ಭಾಗ್ಯ ನನ್ನದಾಯ್ತು..ಇದು ಮೊದಲೇ ದಟ್ಸ್ ಕನ್ನಡದಲ್ಲಿ ಪ್ರಕಟ ಆಗಿ ಮತ್ತೆ ಮೊನ್ನೆ ಸಹಾ ಆಯ್ತೆ? ನನ್ನ ಕಣ್ಣಿಂದ ಈ ಬರಹ ತಪ್ಪಿಸಿಕೊಂಡದ್ದು ಅಚ್ಚರಿ.!! ಎಲ್ಲದಕೂ ಕಾಲ ಕೂಡಿ ಬರಬೇಕು ನೋಡಿ....ಈಗ ಬಂತು.. ಸುಬ್ಬನ ದೀಪಾವಳಿ -ಆ ಸನ್ನಿವೇಶಗಳು ನಗೆ ಉಕ್ಕಿಸಿ ಈ ಮುಸ್ಸಂಜೆಯನ್ನು ಮತ್ತಸ್ತು ಆಹ್ಲಾದಕರಗೊಳಿಸಿದವು .. ಸುಬ್ಬನಿಗೆ ನಿಮಗೆ ನಿಮ್ಮನೆವ್ರಿಗೆಲ್ಲ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.. ಶುಭವಾಗಲಿ.. \|
Submitted by bhalle Mon, 11/12/2012 - 21:56

In reply to by venkatb83

ಧನ್ಯವದಗಳು ಸಪ್ತಗಿರಿವಾಸಿಗಳೆ ... ನಿಮಗೂ ದೀಪಾವಳಿಯ ಶುಭಾಶಯಗಳು ನಮ್ಮ ಹಾಗೂ ಸುಬ್ಬನ ಕಡೆಯಿಂದ ... ಬಹುಶ: ದಟ್ಸ್ ಕನ್ನಡದವರಿಗೆ ಸುಬ್ಬನ ಪುರಾಣ ಬಹಳ ಹಿಡಿಸಿದೆ ಅನ್ನಿಸಿದೆ .. ಹಾಗಾಗಿ ಕಳೆದ ವರ್ಷದ ಲೇಖನದ ಕೊಂಡಿಯನ್ನು ಮತ್ತೊಮ್ಮೆ ಕೊಟ್ಟಿದ್ದಾರೆ ... ಅವರಿಗೂ ಧನ್ಯವಾದಗಳು ಗಣೇಶ್’ಜಿ ಕೊಂಡಿಯನ್ನು ಎಲ್ಲಿ ಪ್ರಸ್ತಾಪ ಮಾಡಿದ್ದರೆ ಎಂದು ಹುಡುಕುತ್ತೇನೆ ... ನನಗೆ ಮಿಸ್ ಆದ ಹಾಗಿದೆ :-(
Submitted by venkatb83 Fri, 11/16/2012 - 18:30

In reply to by bhalle

ತೀರಾ ಇತ್ತೀಛೆಗೆ ಗಣೇಶ್ಹ್ ಅಣ್ಣ ಆರು ಬರೆದ‌ ಬರಹದಲ್ಲಿ ಈ ಬಗ್ಗೆ ( ನಿಮ್ಮ‌ ಆ ಬರಹವನ್ನು ಓದಿದ್ದರ‌ ಬಗ್ಗೆ)..ನೋಡಿ... \|