ಸುಭಗರು ಯಾರು?

ಸುಭಗರು ಯಾರು?

 
ಈಚೆಗೆ  ಭಾರೀ ಸುದ್ದಿ ಮಾಡುತ್ತಿರುವುದು – ಮಾಧ್ಯಮ  ಹಾಗೂ ರಾಜಕಾರಣಿಗಳ ಹಗ್ಗ-ಜಗ್ಗಾಟ. ಈರ್ವರದ್ದೂ ತಾವು ಸುಭಗರೆಂಬ ವಾದ-ಪ್ರತಿವಾದ.  ನಿಜ ಹೇಳಬೇಕೆಂದರೆ, ಇಬ್ಬರೂ ಸರಿ ಹಾಗೂ ಇಬ್ಬರೂ ತಪ್ಪು ! ಹೇಗಂತೀರೋ? ಹೇಗೆ ಎಲ್ಲಾ ರಾಜಕಾರಣಿಗಳೂ ಭ್ರಷ್ಟರಲ್ಲವೋ, ಹಾಗೆಯೇ ಮಾಧ್ಯಮದ  ಎಲ್ಲ ಮಂದಿಯೂ ಸುಭಗರಲ್ಲ. ಜನಸಾಮಾನ್ಯರ  ದೃಷ್ಟಿಯಲ್ಲಿ ಹೇಳುವುದಾದಲ್ಲಿ, ರಾಜಕಾರಣಿಗಳಲ್ಲಿ ಭ್ರಷ್ಟರಲ್ಲದವರು 10% ಇದ್ದರೆ, ಮಾಧ್ಯಮದಲ್ಲಿ ಭ್ರಷ್ಟರು 10% ಇದ್ದಾರೆ. 
 
ಮಾಧ್ಯಮದ ಕಾವಲ್ಗಣ್ಣಿಲ್ಲದೇ ಇದ್ದಲ್ಲಿ, ರಾಜಕಾರಣಿಗಳ ಭ್ರಷ್ಟ ಮುಖ ಸಮಾಜಕ್ಕೆ ಸಿಗುತ್ತಿರಲಿಲ್ಲ. ಸುದ್ದಿ ಮಿತ್ರರ ಕಡು-ಕಾವಲ್ಗಣ್ಣಿದ್ದಾಗ್ಯೂ  ಇಷ್ಟು ಭ್ರಷ್ಟಾಚಾರ/ ಅತ್ಯಾಚಾರ/ ಅನಾಚಾರಗಳು ನಡೀತಿರಬೇಕಾದ್ರೆ, ಮಾಧ್ಯಮಗಳ ಅನುಪಸ್ಥಿತಿಯಲ್ಲಿನ  ಪರಿಸ್ಥಿತಿಯನ್ನು ಊಹಿಸಿಕೊಳ್ಳಲೇ  ಭಯವಾಗುತ್ತ‌ದೆ!
 
ಕಡಿವಾಣವೇ ಇಲ್ಲದ ಸುದ್ದಿ-ಮಾಧ್ಯಮಗಳ, ಅದರಲ್ಲೂ, ದೃಶ್ಯ-ಮಾಧ್ಯಮಗಳಿಂದ ಇನ್ನೊಂದು ಮಗ್ಗುಲ ದರ್ಶನ. ಟಿ.ಆರ್.ಪಿ. ಹಪಾಹಪಿಗೆ, ಕೆಲವೊಮ್ಮೆ ವೈಯಕ್ತಿಕ  ಕಾರಣಗಳಿಗೆ, ರಾಜಕಾರಣಿಗಳ ಅನಗತ್ಯ ತೇಜೋವಧೆ- ನ್ಯಾಯಾಂಗಕ್ಕೆ  ಹೋದಲ್ಲಿ 10-15 ವರ್ಷ ತಗಲುವ ಸಂದರ್ಭ ಇರುವುದರಿಂದ, ತಾವೇ ಜಡ್ಜ್ ಆಗಿ, ವೀಕ್ಷಕರ ತಲೆ ಕೆಡಿಸುವುದು ಯಾ ಪೂರ್ವನಿರ್ಧಾರಿತ  ಹವಾ ಸೃಷ್ಟಿ ಮಾಡುವುದು ಈಗೀಗ ಜಾಸ್ತಿ ಆಗಿದೆ.  ಇದಕ್ಕೆ ಕಡಿವಾಣ ಬೇಡವೇ? ನೀವೇ ಹೇಳಿ.
 
ಹಾಗಾದರೆ, ಇದಕ್ಕೆ ಪರಿಹಾರ  ಇಲ್ಲವೇ? ಯಾಕಿಲ್ಲ? ಇದೆ.  ಸುದ್ದಿ-ಮಾಧ್ಯಮಗಳು ರಾಜಕಾರಣಿಗಳ ಭ್ರಷ್ಟಾಚಾರ / ಅನಾಚಾರಗಳನ್ನು ಮುಲಾಜಿಲ್ಲದೇ ಜನರಿಗೆ  ತಲುಪಿಸಲೇ ಬೇಕು.  ಅದು ಅವರ ಆದ್ಯ ಕರ್ತವ್ಯ – ಯಾರೂ  ಅದನ್ನು ಅಲ್ಲಗೆಳೆಯಲಾರರು ಮತ್ತು  ಅಲ್ಲಗೆಳೆಯಬಾರದು.  ಆದರೆ,  ಅದಕ್ಕೆ ಮಸಾಲಾ ಸೇರಿಸಿ, ತಿರುಚಿ, ತಮಗೆ ಇಷ್ಟ ಬಂದಂತೆ  ತೀರ್ಪನ್ನು ಹೊರಡಿಸದಿರಿ. ಇದಕ್ಕೆ ಕಡಿವಾಣ ಬೇಕಿದೆ.
 
ಮತ್ತೆ ಧುತ್ತೆಂದು ಎದಿರಾಗುವ ಪ್ರಶ್ನೆ. ಯಾವ ಸುದ್ದಿ ನಿಖರ, ಮತ್ತಾವುದು ಮಸಾಲಾಯುಕ್ತ – ಇದನ್ನು ನಿರ್ಧರಿಸುವವರು ಯಾರು? ಇದು ಬಹಳ  ಕಷ್ಟಕರ. ಇದನ್ನು ಆಯ್ದ ಅನುಭವೀ ಮಾಧ್ಯಮದವರು ಹಾಗೂ  ರಾಜಕಾರಣಿಗಳನ್ನೊಳಗೊಂಡ ಸಮಿತಿ ತೀರ್ಮಾನಿಸುವುದು ಒಳಿತು.  ಈ ಸಮಿತಿಯನ್ನು  ಆಯ್ಕೆ ಮಾಡುವವರು, ಎರಡೂ ಬಣಕ್ಕೆ  ಸೇರದ ನ್ಯಾಯಾಂಗದ ಮಂದಿಯಾದಲ್ಲಿ ಉತ್ತಮ.  ಆಗ ಈ ಮೇಲಾಟಗಳಿಗೆ ಕಡಿವಾಣ ಬಿದ್ದೀತು ಎಂಬ ಆಶಾವಾದ ನನ್ನದು. 
* * * *