ಸುಭಗರು ಯಾರು?
ಈಚೆಗೆ ಭಾರೀ ಸುದ್ದಿ ಮಾಡುತ್ತಿರುವುದು – ಮಾಧ್ಯಮ ಹಾಗೂ ರಾಜಕಾರಣಿಗಳ ಹಗ್ಗ-ಜಗ್ಗಾಟ. ಈರ್ವರದ್ದೂ ತಾವು ಸುಭಗರೆಂಬ ವಾದ-ಪ್ರತಿವಾದ. ನಿಜ ಹೇಳಬೇಕೆಂದರೆ, ಇಬ್ಬರೂ ಸರಿ ಹಾಗೂ ಇಬ್ಬರೂ ತಪ್ಪು ! ಹೇಗಂತೀರೋ? ಹೇಗೆ ಎಲ್ಲಾ ರಾಜಕಾರಣಿಗಳೂ ಭ್ರಷ್ಟರಲ್ಲವೋ, ಹಾಗೆಯೇ ಮಾಧ್ಯಮದ ಎಲ್ಲ ಮಂದಿಯೂ ಸುಭಗರಲ್ಲ. ಜನಸಾಮಾನ್ಯರ ದೃಷ್ಟಿಯಲ್ಲಿ ಹೇಳುವುದಾದಲ್ಲಿ, ರಾಜಕಾರಣಿಗಳಲ್ಲಿ ಭ್ರಷ್ಟರಲ್ಲದವರು 10% ಇದ್ದರೆ, ಮಾಧ್ಯಮದಲ್ಲಿ ಭ್ರಷ್ಟರು 10% ಇದ್ದಾರೆ.
ಮಾಧ್ಯಮದ ಕಾವಲ್ಗಣ್ಣಿಲ್ಲದೇ ಇದ್ದಲ್ಲಿ, ರಾಜಕಾರಣಿಗಳ ಭ್ರಷ್ಟ ಮುಖ ಸಮಾಜಕ್ಕೆ ಸಿಗುತ್ತಿರಲಿಲ್ಲ. ಸುದ್ದಿ ಮಿತ್ರರ ಕಡು-ಕಾವಲ್ಗಣ್ಣಿದ್ದಾಗ್ಯೂ ಇಷ್ಟು ಭ್ರಷ್ಟಾಚಾರ/ ಅತ್ಯಾಚಾರ/ ಅನಾಚಾರಗಳು ನಡೀತಿರಬೇಕಾದ್ರೆ, ಮಾಧ್ಯಮಗಳ ಅನುಪಸ್ಥಿತಿಯಲ್ಲಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೇ ಭಯವಾಗುತ್ತದೆ!
ಕಡಿವಾಣವೇ ಇಲ್ಲದ ಸುದ್ದಿ-ಮಾಧ್ಯಮಗಳ, ಅದರಲ್ಲೂ, ದೃಶ್ಯ-ಮಾಧ್ಯಮಗಳಿಂದ ಇನ್ನೊಂದು ಮಗ್ಗುಲ ದರ್ಶನ. ಟಿ.ಆರ್.ಪಿ. ಹಪಾಹಪಿಗೆ, ಕೆಲವೊಮ್ಮೆ ವೈಯಕ್ತಿಕ ಕಾರಣಗಳಿಗೆ, ರಾಜಕಾರಣಿಗಳ ಅನಗತ್ಯ ತೇಜೋವಧೆ- ನ್ಯಾಯಾಂಗಕ್ಕೆ ಹೋದಲ್ಲಿ 10-15 ವರ್ಷ ತಗಲುವ ಸಂದರ್ಭ ಇರುವುದರಿಂದ, ತಾವೇ ಜಡ್ಜ್ ಆಗಿ, ವೀಕ್ಷಕರ ತಲೆ ಕೆಡಿಸುವುದು ಯಾ ಪೂರ್ವನಿರ್ಧಾರಿತ ಹವಾ ಸೃಷ್ಟಿ ಮಾಡುವುದು ಈಗೀಗ ಜಾಸ್ತಿ ಆಗಿದೆ. ಇದಕ್ಕೆ ಕಡಿವಾಣ ಬೇಡವೇ? ನೀವೇ ಹೇಳಿ.
ಹಾಗಾದರೆ, ಇದಕ್ಕೆ ಪರಿಹಾರ ಇಲ್ಲವೇ? ಯಾಕಿಲ್ಲ? ಇದೆ. ಸುದ್ದಿ-ಮಾಧ್ಯಮಗಳು ರಾಜಕಾರಣಿಗಳ ಭ್ರಷ್ಟಾಚಾರ / ಅನಾಚಾರಗಳನ್ನು ಮುಲಾಜಿಲ್ಲದೇ ಜನರಿಗೆ ತಲುಪಿಸಲೇ ಬೇಕು. ಅದು ಅವರ ಆದ್ಯ ಕರ್ತವ್ಯ – ಯಾರೂ ಅದನ್ನು ಅಲ್ಲಗೆಳೆಯಲಾರರು ಮತ್ತು ಅಲ್ಲಗೆಳೆಯಬಾರದು. ಆದರೆ, ಅದಕ್ಕೆ ಮಸಾಲಾ ಸೇರಿಸಿ, ತಿರುಚಿ, ತಮಗೆ ಇಷ್ಟ ಬಂದಂತೆ ತೀರ್ಪನ್ನು ಹೊರಡಿಸದಿರಿ. ಇದಕ್ಕೆ ಕಡಿವಾಣ ಬೇಕಿದೆ.
ಮತ್ತೆ ಧುತ್ತೆಂದು ಎದಿರಾಗುವ ಪ್ರಶ್ನೆ. ಯಾವ ಸುದ್ದಿ ನಿಖರ, ಮತ್ತಾವುದು ಮಸಾಲಾಯುಕ್ತ – ಇದನ್ನು ನಿರ್ಧರಿಸುವವರು ಯಾರು? ಇದು ಬಹಳ ಕಷ್ಟಕರ. ಇದನ್ನು ಆಯ್ದ ಅನುಭವೀ ಮಾಧ್ಯಮದವರು ಹಾಗೂ ರಾಜಕಾರಣಿಗಳನ್ನೊಳಗೊಂಡ ಸಮಿತಿ ತೀರ್ಮಾನಿಸುವುದು ಒಳಿತು. ಈ ಸಮಿತಿಯನ್ನು ಆಯ್ಕೆ ಮಾಡುವವರು, ಎರಡೂ ಬಣಕ್ಕೆ ಸೇರದ ನ್ಯಾಯಾಂಗದ ಮಂದಿಯಾದಲ್ಲಿ ಉತ್ತಮ. ಆಗ ಈ ಮೇಲಾಟಗಳಿಗೆ ಕಡಿವಾಣ ಬಿದ್ದೀತು ಎಂಬ ಆಶಾವಾದ ನನ್ನದು.
* * * *