ಸೌತೆಕಾಯಿಯ ಸಂರಕ್ಷಿತ ಬೇಸಾಯ (ಭಾಗ ೧)

ಸೌತೆಕಾಯಿಯ ಸಂರಕ್ಷಿತ ಬೇಸಾಯ (ಭಾಗ ೧)

ಹಸಿರು ಮನೆಯಲ್ಲಿ ತರಕಾರಿ ಉತ್ಪಾದನೆ ಮಾಡುವುದರಿಂದ ಹೆಚ್ಚಿನ ಇಳುವರಿ, ಉತ್ತಮ ಗುಣಮಟ್ಟ ಹಾಗೂ ವರ್ಷದ ಎಲ್ಲಾ ಕಾಲದಲ್ಲಿಯೂ ತರಕಾರಿಗಳನ್ನು ಬೆಳೆಯಬಹುದಾಗಿದೆ. ನಿರ್ಮಾಣದ ಅಧಿಕ ಆರಂಭಿಕ ವೆಚ್ಚ, ಮಾರುಕಟ್ಟೆ ದರದಲ್ಲಿ ಅಸ್ಥಿರತೆ ಮತ್ತು ಕೌಶಲ್ಯದ ಅವಶ್ಯಕತೆಗಳಿಂದ ಸಣ್ಣ ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಸೌತೆಕಾಯಿ ಜನಪ್ರಿಯ ತರಕಾರಿಗಳಲ್ಲಿ ಒಂದು. ಇದನ್ನು ಎಳೆಯ ಕಾಯಿ ಇರುವಾಗಲೇ ಕಟಾವು ಮಾಡಿ, ತಾಜಾ ರೂಪದಲ್ಲಿ ತಿನ್ನಲು ಹಾಗೂ ಉಪ್ಪಿನಕಾಯಿ ತಯಾರಿಸಲು ಹೆಚ್ಚು ಬಳಸಲಾಗುತ್ತದೆ. ಬಲಿತ ಸೌತೆಕಾಯಿಯನ್ನು ಅಡುಗೆಯಲ್ಲಿ ಉಪಯೋಗಿಸಲಾಗುವುದು. ಇದು ‘ಎ’ ಮತ್ತು ‘ಸಿ’ ಅನ್ನಾಂಗಗಳನ್ನು ಹೊಂದಿರುತ್ತದೆ. 

ಪ್ರದೇಶ, ಉತ್ಪಾದನೆ ಮತ್ತು ಉತ್ಪಾದಕತೆಯಲ್ಲಿ ಪ್ರಮುಖ ರಾಜ್ಯಗಳು: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ.

ಮಣ್ಣಿನ ಅವಶ್ಯಕತೆ: ಮರಳು ಅಥವಾ ಮರಳು ಮಿಶ್ರಿತ ಗೋಡು ಮಣ್ಣು ತುಂಬಾ ಸೂಕ್ತ. ಚೆನ್ನಾಗಿ ನೀರು ಬಸಿದು ಹೋಗುವಂತಹ ಗೋಡು ಮಣ್ಣು ಅಥವಾ ಜಂಬಿಟ್ಟಿಗೆ ಮಣ್ಣಿನಲ್ಲಿ ಕೂಡ ಇದನ್ನು ಬೆಳೆಯಬಹುದು.

ಹವಾಗುಣ: ಇದು ಮುಖ್ಯವಾಗಿ ಉಷ್ಣವಲಯದ ತರಕಾರಿ ಬೆಳೆಯಾಗಿದ್ದು ಬೇಸಿಗೆ ಕಾಲದಲ್ಲಿ ಚೆನ್ನಾಗಿ ಬೆಳೆಯುವುದು. ಜನವರಿ - ಫೆಬ್ರುವರಿ ಸೌತೆಕಾಯಿ ಬೆಳೆಯಲು ಸೂಕ್ತವಾದ ತಿಂಗಳುಗಳು. ಮುಂಗಾರಿನಲ್ಲಿ ಕೂಡ ಬೆಳೆಯಬಹುದು.

ತಳಿಗಳು: 

ಜಪನೀಸ್ ಲಾಂಗ್ ಗ್ರೀನ್: ಇದು ಅಲ್ಪಾವಧಿಯಲ್ಲಿ ಬೆಳೆಯಲು ಅನುಕೂಲವಾಗಿದ್ದು ಅತ್ಯಧಿಕ ಇಳುವರಿ ಕೊಡುವುದು. ೪೫ ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವುದು. ಕಾಯಿಗಳು ಸುಮಾರು ೩೦ ರಿಂದ ೩೭ ಸೆಂ.ಮೀ. ಉದ್ದವಾಗಿದ್ದು ತಿರುಳು ಮಾತ್ರ ಬಿಳಿ ಹಾಗೂ ಹಸಿರು ಬಣ್ಣದಿಂದ ಕೂಡಿರುತ್ತದೆ.

ಫೈನ್‌ಸೆಟೆಯಾ: ಇದು ಒಂದು ವಿದೇಶಿ ತಳಿ. ಸಿಪ್ಪೆಯು ಹಸಿರು ಬಣ್ಣದಿಂದ ಕೂಡಿರುತ್ತದೆ. ಇದು ಬೂದಿ ರೋಗ, ಬೂಜು ತುಪ್ಪಟ ರೋಗ ಮತ್ತು ಎಲೆ ಚುಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.

ಹಾಸನ ಲೋಕಲ್: ದಕ್ಷಿಣ ಮಧ್ಯ ವಲಯದಲ್ಲಿ ಜನಪ್ರೀಯ ತಳಿಯಾಗಿದ್ದು ಕಾಯಿಗಳು ಅತ್ತುö್ಯತ್ತಮ ಗುಣಮಟ್ಟವನ್ನು ಹೊಂದಿರುತ್ತವೆ. ಕಾಯಿಗಳು ೨೫-೩೦ ಸೆಂ.ಮೀ. ಉದ್ದ ಇದ್ದು ತಿರುಳು ಬಿಳಿ ಬಣ್ಣದಿಂದ ಕೂಡಿರುತ್ತವೆ. ಕಾಯಿಯ ತೊಗಟೆ ತಿಳಿಹಸಿರು ಬಣ್ಣ ಹೊಂದಿರುತ್ತದೆ. ಕಾಯಿಯ ಗಾತ್ರ ೨೫೦-೩೦೦ ಗ್ರಾಂ ನಷ್ಟು ಇರುತ್ತದೆ. 

ಮೈಸೂರ್ ಲೋಕಲ್: ಇದು ಅಲ್ಪಾವಧಿ ತಳಿಯಾಗಿದ್ದು ಹೆಚ್ಚು ಇಳುವರಿಯನ್ನು ಕೊಡುವುದು. ೪೫-೫೦ ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವುದು. ಕಾಯಿಗಳು ಮಧ್ಯಮ ಗಾತ್ರ ಹೊಂದಿದ್ದು, ತಿರುಳು ಬಿಳಿ ಬಣ್ಣದಿಂದ ಕೂಡಿರುತ್ತದೆ. ಇದು ಬೂದಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.

ಬೆಳಗಾವಿ ಲೋಕಲ್: ಇದಕ್ಕೆ ಉತ್ತರ ಕರ್ನಾಟಕದಲ್ಲಿ ಬಹಳ ಬೇಡಿಕೆಯಿದೆ. ೫೫ ದಿವಸಗಳಲ್ಲಿ ಕಟಾವಿಗೆ ಬರುತ್ತದೆ. ಕಾಯಿ ಸುಮಾರು ೨೦-೨೫ ಸೆಂ. ಮೀ. ಉದ್ದವಾಗಿದ್ದು, ಹಸಿರು ಬಣ್ಣದಿದ್ದು ನಡುವೆ ಬಿಳಿ ಗೆರೆಗಳು ಇರುತ್ತವೆ.

ಹಿಮಾಂಗಿ ಲೋಕಲ್: ಇದು ಅಧಿಕ ಇಳುವರಿ ನೀಡುವ ಮಧ್ಯಮಾವಧಿ ತಳಿಯಾಗಿದೆ. ಕಾಯಿಗಳು ೪೫-೬೦ ಸೆಂ.ಮೀ. ಉದ್ದವಿದ್ದು ಕಾಯಿಯ ತೊಗಟೆ ಕಡು ಹಸಿರು ಬಣ್ಣ ಹೊಂದಿರುತ್ತದೆ.

ಕರಾವಳಿ ಪ್ರದೇಶಗಳಿಗೆ: ಜಪನೀಸ್ ಲಾಂಗ್‌ಗ್ರೀನ್, ಮೊಗಿ ಸೌತೆ (ಮುಳ್ಳು ಸೌತೆ), ಸಾಂಬಾರು ಸೌತೆ.

ಗುಡ್ಡಗಾಡು ಪ್ರದೇಶಗಳಿಗೆ: ಜಪನೀಸ್ ಲಾಂಗ್‌ಗ್ರೀನ್, ವೆಸ್ಟ್ ಕೋಸ್ಟ್ ಸ್ಥಳೀಯ ತಳಿ.

ಪಾಲಿಹೌಸ್‌ಗೆ ಸೂಕ್ತವಾದ ತಳಿಗಳು: ಪಾರ್ತನೋಕಾರ್ಪಿಕ್, ಮಲ್ಟಿಪಿಸ್ಟಿಲಟ್, ಗೈನೋಶಿಯಸ್ ಸೌತೆಯ ಸಂಕರಣ ತಳಿಗಳನ್ನು ಸಂರಕ್ಷಿತ ಬೇಸಾಯದಲ್ಲಿ ಬೆಳೆಯಲಾಗುತ್ತದೆ. ಐಸ್ಯಾಟಿಸ್, ಕಿಯಾನ್, ವ್ಯಾಲಿಸ್ಟಾರ್, ಸಿಲ್ಯಾನ್, ಟ್ಯಾಕ್ಸಿ ಇವುಗಳು ವಾಣ ಜ್ಯವಾಗಿ ಬೆಳೆಯುವ ಸಂಕರಣ ತಳಿಗಳಾಗಿವೆ. ಈ ಸಂಕರಣ ತಳಿಗಳಿಗೆ ಪರಾಗಸ್ಪರ್ಷದ ಅಗತ್ಯವಿಲ್ಲ. ಸಾಮಾನ್ಯ ಸಂಕರಣ ತಳಿಗಳಲ್ಲಿ ಹೆಣ್ಣು ಹೂಗಳಿಗೆ ಬೆಳಗಿನ ಸಮಯದಲ್ಲಿ ಕೈ ಪರಾಗಸ್ಪರ್ಷದ ಅವಶ್ಯಕತೆಯಿದೆ.

ನರ್ಸರಿ ಮಾಡುವಿಕೆ: ಹಸಿರು ಮನೆ ಬೇಸಾಯಕ್ಕೆ ಸಸಿಗಳನ್ನು ೯೮ ಗುಣ ಗಳಿರುವ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಬೆಳೆಸಲಾಗುತ್ತದೆ. ಒಂದು ಎಕರೆಗೆ ೯೦೦೦ ಬೀಜಗಳನ್ನು ಬಿತ್ತನೆ ಮಾಡಬೇಕಾಗುತ್ತದೆ.

ಜಮೀನು ತಯಾರಿಕೆ: ಮಣ್ಣನ್ನು ಚೆನ್ನಾಗಿ ಪುಡಿಯಾಗುವಂತೆ ಮಾಡಿ ಸಾವಯವ ಗೊಬ್ಬರವನ್ನು ೨೦ ಟನ್ ಪ್ರತಿ ಎಕರೆಯಂತೆ ಸೇರಿಸಿ ಉಳುಮೆ ಮಾಡಿ ಭೂಮಿಯನ್ನು ಸಿದ್ದವಾಗಿಟ್ಟುಕೊಳ್ಳಬೇಕು. ೧೦೦ ಸೆಂ. ಮೀ. ಅಗಲ ಹಾಗೂ ೧೫ ರಿಂದ ೨೫ ಸೆಂ. ಮೀ. ಎತ್ತರವಿರುವ ಏರುಮಡಿಗಳನ್ನು ಮಾಡಬೇಕು. ಒಂದು ಮಡಿಯಿಂದ ಇನ್ನೊಂದು ಮಡಿಗೆ ೩೦ ಸೆಂ. ಮೀ. ಅಂತರವಿರಬೇಕು.

ದೂಪಿಕರಿಸುವಿಕೆ : ಹಿಂದಿನ ಬೆಳೆಯಲ್ಲಿ ಮಣ ್ಣನಿಂದ ಬರುವ ರೋಗಗಳ ತೀವ್ರತೆ ಹೆಚ್ಚಾಗಿದ್ದರೆ ದೂಪಿಕರಣ ಮಾಡುವುದು ಅವಶ್ಯಕವಾಗಿರುತ್ತದೆ. ದೂಪಿಕರಿಸಲು ಶೇ. ೪ ರ ಫಾರ್ಮಾಲ್‌ಡಿಹೈಡ್‌ನ್ನು ಸಸಿಮಡಿ ನೆನೆಯುವಂತೆ ಸುರಿದು (ಪ್ರತಿ ಚದರ ಮೀಟರ್ ಗೆ ೪ ಮಿ. ಲೀ. ನಂತೆ) ಕಪ್ಪು ಪಾಲೀಥೀನ್ ಹಾಳೆಯಿಂದ ಮುಚ್ಚಬೇಕು. ನಾಲ್ಕು ದಿನಗಳ ನಂತರ ಪಾಲಿಥೀನ್ ಹಾಳೆಯನ್ನು ತೆಗೆದು, ನಾಟಿ ಮಾಡುವುದಕ್ಕೆ ಮೊದಲು ೩ ರಿಂದ ೪ ಬಾರಿ ಮಣ್ಣನ್ನು ಸಡಿಲಗೊಳಿಸಬೇಕು. ಫಾರ್ಮಲಿನ್ ಉಪಚರಿಸುವ ಸಮಯದಲ್ಲಿ ಕೆಲಸಗಾರರ ರಕ್ಷಣೆಗಾಗಿ ಮುಖವಾಡ, ಕೈ ಕವಚ ಮತ್ತು ಎಪ್ರಾನ್‌ನ್ನು ಧರಿಸಬೇಕು. ಫಾರ್ಮಲಿನ್ ಉಪಚರಣೆಯನ್ನು ಮೂರು ಬೆಳೆಗಳ ನಂತರ ಅಥವಾ ಅವಶ್ಯಕತೆ ಇದ್ದಾಗ ಪುನರಾವರ್ತಿಸಬೇಕಾಗುತ್ತದೆ. ಫಾರ್ಮಲಿನ್ ಉಪಚರಣೆ ಮಣ್ಣಿನಿಂದ ಹರಡುವ ರೋಗಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಅಂತರ: ೫೦ ಸೆಂ. ಮೀ. * ೬೦ ಸೆಂ. ಮೀ.

ಹನಿ ನೀರಾವರಿ: ಬೆಳೆಯುವ ಏರುಮಡಿಯ ಮದ್ಯಭಾಗದಲ್ಲಿ ೧೬ ಮಿ. ಮೀ. ಲ್ಯಾಟರಲ್ ಡ್ರಿಪ್ ಪೈಪನ್ನು ಕೂರಿಸಬೇಕು. ಇದರಲ್ಲಿ ಪ್ರತಿ ೩೦ ಸೆಂ. ಮೀ. ಗೆ ಒಂದರಂತೆ ಒಂದು ಗಂಟೆಗೆ ೨ ಲೀಟರ್ ನೀರು ಹೊರಸೂಸುವ ಹನಿಕೆಗಳು ಇರಬೇಕು. ಹನಿ ನೀರಾವರಿಯ ಪೈಪ್‌ನಲ್ಲಿ ನೀರನ್ನು ಹರಿಸಿ, ಎಲ್ಲಾ ಹೊರಸೂಸುವ ಹನಿಕೆಗಳಲ್ಲಿ ಸಮ ಪ್ರಮಾಣದಲ್ಲಿ ನೀರು ಬರುತ್ತಿದೆಯೇ ಎಂದು ಪರೀಕ್ಷಿಸಬೇಕು. 

ಸಸಿ ನಾಟಿ ಮಾಡುವಿಕೆ: ಸಸಿ ನಾಟಿ ಮಾಡುವ ಮೊದಲು ಮಡಿಗಳಿಗೆ ಸಾಕಾಗುವಷ್ಟು ನೀರುಣ ಸಬೇಕು. ನಂತರ ಸಸಿಗಳನ್ನು ಪಾಲಿಥೀನ್ ಶೀಟ್‌ನ ಕತ್ತರಿಸಿದ ರಂಧ್ರದಲ್ಲಿ ೫ ಸೆಂ. ಮೀ. ಆಳದಲ್ಲಿ ನಾಟಿ ಮಾಡಬೇಕು. ನಾಟಿಮಾಡಿದ ಸಸಿಗಳಿಗೆ ಪ್ರತಿ ಲೀಟರ್ ನೀರಿಗೆ ೩ ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಅಥವಾ ಕ್ಯಾಪ್ಟಾನ್ ಅಥವಾ ಪ್ರತಿ ಲೀಟರ್ ನೀರಿನಲ್ಲಿ ೨ ಗ್ರಾಂ ಕಾಪರ್ ಹೈಡ್ರಾಕ್ಸೆöÊಡನ್ನು ಸಸಿಯ ಬುಡಕ್ಕೆ ೨೫ ರಿಂದ ೩೦ ಮಿ. ಲಿ. ರಷ್ಟನ್ನು ಸುರಿಯಬೇಕು. ಆನಂತರ ಗಿಡದ ಬುಡಕ್ಕೆ ನೀರುಣಿಸಬೇಕು. ಹೊದಿಕೆ ಹಾಕಿದ ಮಡಿಗಳಿಗೆ ಪ್ರತಿದಿನ ಮದ್ಯಾಹ್ನ ಪೈಪ್‌ನ ಮುಖಾಂತರ ನೀರನ್ನು ಹಾಕಬೇಕು ಮತ್ತು ಈ ಸಮಯದಲ್ಲಿ ಹನಿ ನೀರಾವರಿ ಮುಖಾಂತರ ನೀರುಣಿಸಬಾರದು.

ನೀರಾವರಿ: ನೀರಿನ ಅವಶ್ಯಕತೆ: ೫೦೦ – ೬೦೦ ಎಮ್. ಎಮ್./ ಹೆಕ್ಟೇರ್, ಹನಿ ನೀರಾವರಿಯಲ್ಲಿ ಪ್ರತಿ ದಿನ ೨ ರಿಂದ ೪ ಲೀಟರ್ ನೀರು ಪ್ರತಿ ಚದರ ಮೀಟರ್ ನೆನೆಯುವಂತೆ ನೀರುಣ ಸಲಾಗುತ್ತದೆ.

(ಇನ್ನೂ ಇದೆ)

ಚಿತ್ರಗಳು ಮತ್ತು ಮಾಹಿತಿ ಸಹಕಾರ: ಮಂಜುನಾಥ್ ಜೆ ಶೆಟ್ಟಿ ಮತ್ತು ಅನಿಲ್‌ಕುಮಾರ್ ಜಿ ಎಸ್, ತೋಟಗಾರಿಕಾ ಮಹಾವಿದ್ಯಾಲಯ, ಬೆಂಗಳೂರು