ಸ್ಟೇಟಸ್ ಕತೆಗಳು (ಭಾಗ ೧೦೨೧)- ಆಕೆ

ಸ್ಟೇಟಸ್ ಕತೆಗಳು (ಭಾಗ ೧೦೨೧)- ಆಕೆ

ಅವಳ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ. ತುಂಬಾ ಸಣ್ಣದು, ಹಲವು ಸಮಯದಿಂದ ಕಾದುಕೊಂಡಿರುವಂತದ್ದು. ಮನಸ್ಸಿನೊಳಗೆ ಗಟ್ಟಿಯಾಗಿ ಅದುಮಿಟ್ಟು ಹೇಳಿಕೊಳ್ಳಲಾಗದ ಮಾತುಗಳೆಲ್ಲವನ್ನು ಅವಳಿಂದು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಮಾತನಾಡುತ್ತಿದ್ದಾಳೆ. ಸರ್ ನಮ್ಮದು ಬಡ ವರ್ಗದ ಕುಟುಂಬ ಒಪ್ಪಿಕೊಳ್ಳುತ್ತೇನೆ. ನನ್ನ ಎಂಟನೇ ತರಗತಿಯ ಶಾಲೆಯಿಂದ ಹಿಡಿದು ಈಗ ನಾನು ಓದುತ್ತಿರುವ ಸ್ನಾತಕೋತ್ತರದವರೆಗೂ ನಾನು ಕೆಲಸ ಮಾಡುತ್ತಾನೆ ನನ್ನ ಶಿಕ್ಷಣವನ್ನು ಮುಗಿಸಿದ್ದು. ಬೆಳಗ್ಗಿನಿಂದ ಸಂಜೆಯವರೆಗೂ ಶಾಲೆಗೆ ಹೋಗಿ ತದನಂತರ ರಾತ್ರಿ ಹತ್ತು ಹನ್ನೊಂದು ಗಂಟೆಯವರೆಗೂ ಕೆಲಸ ನಿರ್ವಹಿಸಿ ಆ ಬಂದ ದುಡ್ಡಿನಲ್ಲಿ ಮನೆಯನ್ನು ನನ್ನ ಶಿಕ್ಷಣವನ್ನು ನಿರ್ವಹಿಸಿದವಳು. ಆ ಶಿಕ್ಷಣದ ಒಂದೊಂದು ಹಂತವನ್ನು ಮುಗಿಸಿ ಇದೀಗ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದೇನೆ. ಕೆಲಸವನ್ನು ಮುಂದುವರಿಸಿದ್ದೇನೆ. ಈಗ ಬೆಳಗ್ಗೆ ಏಳಕ್ಕೆ ಆರಂಭವಾದರೆ ರಾತ್ರಿ 9ರವರೆಗೂ ಕೆಲಸ ನಿರಂತರವಾಗಿ ಸಾಗುತ್ತದೆ. ಮನೆಯ ಜವಾಬ್ದಾರಿಗಳಿಗಾಗಿ ದುಡಿತಾನೇ ಇದ್ದೇನೆ. ಮನೆ ಚೆನ್ನಾಗಿ ನಡಿತಾ ಇದೆ ಅನ್ನುವ ನಂಬಿಕೆ ಇದೆ. ಆದರೆ ನಾನು ಕಳೆದುಕೊಂಡಿರುವುದನ್ನು ಮತ್ತೆ ಯಾರು ನೀಡ್ತಾರೆ. ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಅಮ್ಮನಲ್ಲಿ ಹೇಳಬೇಕು, ಆರೋಗ್ಯ ಕೆಟ್ಟರೆ ಅಮ್ಮನ ತೊಡೆ ಮೇಲೆ ಮಲಗಿಕೊಳ್ಳಬೇಕು ಅಂತ ಆಸೆ, ಜೋರು ಮಳೆಯಲ್ಲಿ ಮನೆಯ ಜಗಲಿಯಲ್ಲಿ ಕುಳಿತು ಬಿಸಿ ಚಹಾ ಕುಡಿಯುವ ಆಸೆ, ಅಮ್ಮನ ಜೊತೆ ಯಾವುದಾದರೂ ವಿಶೇಷ ಕಾರ್ಯಕ್ರಮಕ್ಕೆ ತೆರಳುವ ಆಸೆ, ಒಂದೆರಡು ದಿನ ರಜೆ ಹಾಕಿ ಊರು ಸುತ್ತುವ ಆಸೆ, ಅಮ್ಮನ ಜೊತೆ ಅಡಿಗೆಗೆ ಕೈಜೋಡಿಸುತ್ತಾ ಅವರೊಂದಿಗೆ ಕುಶಲೊಪರಿ ಮಾತನಾಡುವ ಆಸೆ, ನನಗೂ ಪ್ರೀತಿಯಾಗಿದೆ ಅಂತ ಹೇಳುವ ಆಸೆ, ಇದೆಲ್ಲವನ್ನು ಹಾಗೆ ಒತ್ತಿಟ್ಟುಕೊಂಡಿದ್ದೇನೆ. ಇದನ್ನು ಹೇಳುವುದಕ್ಕೂ ಸಮಯವಿಲ್ಲದಾಗಿದೆ. ಹಾಗಾಗಿ ನನಗೊಂದು ಒಂದಷ್ಟು ಸಮಯ ವಿರಾಮ ಬೇಕಿದೆ. ನನ್ನವರೊಂದಿಗೆ ಸಮಯ ಕಳೆದು ನನ್ನ ಬದುಕಿನ ಎಲ್ಲ ಕ್ಷಣಗಳನ್ನು ಅನುಭವಿಸುವ ಹಾಗೆ. ಅದ್ಯಾವಾಗ ಸಿಗುತ್ತೋ ಗೊತ್ತಾಗ್ತಾ ಇಲ್ಲ .ಅಂತಂದು ಸೀರೆ ಮಡಚುವುದಕ್ಕೆ ನಳಿನಿಯಕ್ಕ ಹೋಗೇ ಬಿಟ್ರು....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ