ಸ್ಟೇಟಸ್ ಕತೆಗಳು (ಭಾಗ ೧೦೭೪)- ಮರ ಹಣ್ಣು
ಹಣ್ಣುಗಳೆಲ್ಲ ಪೇಟೆಯ ಕಡೆಗೆ ಮಾರಾಟವಾಗುತ್ತಿದ್ದಾವೆ. ಎಲ್ಲಾ ಹಣ್ಣುಗಳಿಗೂ ಪೇಟೆಯ ವ್ಯಾಮೋಹ ಜಾಸ್ತಿ. ಊರಲ್ಲಿದ್ದರೆ ಬಿದ್ದು ಕೊಳೆತು ವ್ಯರ್ಥವಾಗುತ್ತೇವೆ ಪೇಟೆಯ ಬೀದಿಗಳಲ್ಲೆಲ್ಲ ಮಿನುಗಿ, ಊರೂರು ತಿರುಗಿ ದೊಡ್ಡವರ ಹೊಟ್ಟೆ ತುಂಬಿಸುವ ತವಕದಿಂದ ಪೇಟೆಗೆ ಹೊರಟಿವೆ. ತಮ್ಮನ್ನು ಸಣ್ಣ ಮೊಗ್ಗಿನಿಂದ ಹಿಡಿದು ಹಣ್ಣಾಗುವವರೆಗೂ ಬೆಳೆಸಿದ ಮರವನ್ನು ತೊರೆದು ಹೊರಟಿವೆ. ಬೇರಿನಾಳದಿಂದ ನೀರನ್ನು, ರಸಗೊಬ್ಬರವನ್ನು ಹೀರಿ ತನ್ನೊಳಗೆ ಇನ್ನಷ್ಟು ಶಕ್ತಿಯನ್ನು ತುಂಬಿದ ಮರವನ್ನು ಕಂಡರೆ ಹಣ್ಣಿಗೊಂಥರಾ ಕಸಿವಿಸಿ. ಮರ ಊರಲ್ಲೇ ಗಟ್ಟಿಯಾಗಿ ನಿಂತು ಮತ್ತೆ ಮತ್ತೆ ಹಣ್ಣುಗಳನ್ನು ಬೆಳೆಯುತ್ತಿದೆ. ತನ್ನ ಬುಡದಲ್ಲಿ ಒಂದು ಹಣ್ಣು ಬೀಳದೆ ಒಂದು ಮರವಾಗದೆ ಇರುವುದನ್ನು ಕಂಡು ಬೇಸರಿಸಿದೆ. ಹಳ್ಳಿ ಸೊರಗುತ್ತಾ ಇದೆ. ಮರ ಒರಗುತ್ತಾ ಇದೆ. ಹಣ್ಣುಗಳೆಲ್ಲಾ ಪೇಟೆಯ ವೈಭೋಗದ ಕಡೆಗೆ ಧಾವಿಸುತ್ತಿದ್ದಾವೆ. ಅಲ್ಲಿ ಕೊಳೆತು ನಾರಿ ಮೋರಿಗೆ ಬಿದ್ದರೂ ಚಿಂತೆ ಇಲ್ಲ ಹಳ್ಳಿ ಜೀವನ ಬೇಡ ಎಂಬುದು ಹಣ್ಣುಗಳಾಸೆ... ಮರ ಹಣ್ಣುಗಳ ಬದುಕು ದೂರವಾಗುತ್ತಾ ಇದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ