ಸ್ಟೇಟಸ್ ಕತೆಗಳು (ಭಾಗ ೧೦೭೯)- ಹೊರಟನವನು
ಅವನು ಬಂದ ಕಾರ್ಯ ಸಫಲವಾಗಿತ್ತು. ಸಮಯ ನೋಡಿಕೊಂಡು ದಿನ ನಿಗದಿ ಮಾಡಿ ಕೈಲಾಸದಿಂದ ಇಳಿದು ಜನರನ್ನ ನೋಡುವುದಕ್ಕೆ ಅಂತ ಬಂದಿದ್ದ. ಬಂದದ್ದೇನೊ ಅವನಿಗೆ ಖುಷಿ ನೀಡಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವನನ್ನು ಸ್ವಾಗತಿಸಿ ವಾಪಸು ಕಳುಹಿಸಿ ಕೊಟ್ಟಿದ್ದರು. ಕೆಲವರು ಮುದ್ದು ಪ್ರೀತಿ, ಕೆಲವರದು ಆಡಂಬರ, ಇನ್ನೂ ಕೆಲವರದು ತೋರಿಕೆ. ಎಲ್ಲವನ್ನೂ ಖುಷಿಯಿಂದ ಸ್ವೀಕರಿಸಿ ಆತ ಹೊರಡುವುದಕ್ಕೆ ಅಣಿಯಾಗಿದ್ದಾನೆ. ಆಗ ಒಂದಷ್ಟು ಕಿವಿಮಾತನ್ನು ಹೇಳಿದ್ದಾನೆ. ನಿಮ್ಮ ಪ್ರೀತಿಯನ್ನು ನಾನು ಒಪ್ಪಿಕೊಂಡಿದ್ದೇನೆ ಆದರೆ, ಆ ಕಾರಣದಿಂದ ನಿಮ್ಮ ಆಚರಣೆಯಲ್ಲಿ ಒಂದಷ್ಟು ಬದಲಾವಣೆಗಳಾದರೆ ಒಳ್ಳೆಯದಿತ್ತು. ನನ್ನ ಸಂಭ್ರಮದ ಯಾತ್ರೆಯಲ್ಲಿ ಅರ್ಥವಿಲ್ಲದ ಹಾಡಿಗೆ ಮದ್ಯಪಾನ ಮಾಡಿ ಕುಣಿಯುವುದೆಷ್ಟು ಸರಿ? ನಿಮ್ಮ ಸಂಭ್ರಮದಲ್ಲಿ ನನ್ನ ಮರೆತು ಸಾಗುವುದೇನಕೆ? ಒಂದು ಉದ್ದೇಶವನ್ನಿಟ್ಟುಕೊಂಡು ಆರಂಭವಾದದ್ದು ಆಡಂಬರದಲ್ಲಿ ಮುಖವಾಡ ಹೊತ್ತ ಮೆರವಣಿಗೆಯಾಗಬಾರದು. ಮುಂದುವರೆಸಿ ಒಳ್ಳೆಯದಾಗಲಿ... ಅವನು ಮನೆಯನ್ನ ಸೇರಿದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ