ಸ್ಟೇಟಸ್ ಕತೆಗಳು (ಭಾಗ ೧೧೩೯)- ಅನ್ನ
ಆತ ತುಂಬಾ ಸಿಟ್ಟುಗೊಳ್ಳುತ್ತಾನೆ, ಎದುರಿಗೆ ಯಾವುದೇ ವ್ಯಕ್ತಿ ಇದ್ದರೂ ಆ ಕ್ಷಣ ಆತ ಹಿಂದೆ ಮುಂದೆ ನೋಡೋದಿಲ್ಲ, ಎದುರಿನವನ ಜನ್ಮ ಜಾಲಾಡುತ್ತಾನೆ. ಆತನ ಸಿಟ್ಟಿಗೂ ಒಂದು ಕಾರಣವಿದೆ, ಅನ್ನದ ತಟ್ಟೆಯಲ್ಲಿ ಒಂದಗುಳನ್ನ ಒಂದಷ್ಟು ತರಕಾರಿ ತುಂಡುಗಳನ್ನು ಯಾರಾದರೂ ವ್ಯರ್ಥ ಮಾಡುವುದು ಕಂಡ್ರೆ ಆತನಿಗೆ ತುಂಬಾ ಸಿಟ್ಟು ಬರುತ್ತೆ. ಆತನಿಗೆ ಹೆದರಿಯೇ ಹಲವು ವ್ಯಕ್ತಿಗಳು ತಮಗೆ ಬೇಕಾದಷ್ಟುನ್ನೇ ಹಾಕಿಕೊಳ್ಳುತ್ತಾರೆ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಆತ ಭೇಟಿ ನೀಡುತ್ತಾನೆ ಅಲ್ಲಿಯೂ ಕೂಡ ಒಂದಗುಳು ವ್ಯರ್ಥವಾಗದಂತೆ ಕಾಯುತ್ತಾನೆ. ಆತನ ಈ ಬದುಕಿನ ರೀತಿಗೂ ಕಾರಣವಿದೆ, ಆ ದಿನ ಆತನ ಮನೆಯಲ್ಲಿ ಹಸಿವಿನ ಕೂಗು ಜೋರಾಗಿತ್ತು. ಒಂದಗುಳು ಅನ್ನ ಸಿಕ್ಕಿದರು ಮನೆಯವರ ಬದುಕು, ಬದಲಾಗ್ತಾ ಇತ್ತು. ತನ್ನ ಮನೆಯ ನಂದಾದೀಪ ಹಸಿವಿನಿಂದ ಕೊರಗಿ ಕೊರಗಿ ಉಸಿರು ಬಿಟ್ಟಿತ್ತು. ಆ ದಿನ ಆತ ಪ್ರಾಣ ಉಳಿಸುವುದಕ್ಕೆ ಪಟ್ಟ ಪರಿಶ್ರಮ ಬೇರೆ ಯಾರಿಗೂ ಗೊತ್ತಿಲ್ಲ. ಅಂದಿನಿಂದ ಆತ ಮುತ್ತಿನ ಹರಳಾದ ಅನ್ನವನ್ನು ಉಳಿಸುವ ಕಾಯಕಯೋಗಿಯಾಗಿದ್ದಾನೆ. ಆತ ಪ್ರತಿ ಊರುಗಳನ್ನು ದಾಟಿಕೊಂಡು ಎಚ್ಚರಿಸಿಕೊಂಡು ನಮ್ಮೂರಿಗೂ ಬರುವವನಿದ್ದಾನೆ. ನಾವು ಬದಲಾಗಬೇಕು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ