ಸ್ಟೇಟಸ್ ಕತೆಗಳು (ಭಾಗ ೨೯೧) - ಜನನ

ಸ್ಟೇಟಸ್ ಕತೆಗಳು (ಭಾಗ ೨೯೧) - ಜನನ

ತೊಟ್ಟಿಲಿನ ಒಳಗೆ ಅವನು ಮಲಗಿದ್ದಾನೆ. ಪುಟ್ಟ ಪುಟ್ಟ ಕೈಗಳು, ಆಗಷ್ಟೇ ಪಿಳಿಪಿಳಿ ಬಿಡುತ್ತಿರುವ ಮುದ್ದು ಕಣ್ಣುಗಳು, ಹಾಲಿನ ಕೆನೆಯಂತಹ ಕೆನ್ನೆ, ಬೆಳಗುತ್ತಿರೋ ಮೃದು ತುಟಿಗಳು, ಅವನ ದೇಹಕ್ಕೆ ಬೆಚ್ಚಗಿನ ಅಪ್ಪುಗೆಯನ್ನ ನೀಡಿರುವ ಬಟ್ಟೆಗಳು. ಆತ ಜಗತ್ತನ್ನು ನೋಡಿ ಕೆಲವು ಗಂಟೆಗಳಷ್ಟೇ ಆಗಿದೆ. ಹಸಿವಾದಾಗ ಅಳುತ್ತಾನೆ ಅಮ್ಮ ಹಾಲು ಕೊಡುತ್ತಾರೆ. ಆಗಾಗ ಮನಸ್ಸು ಬಿಚ್ಚಿ ನಗುತ್ತಾನೆ. ಕುತೂಹಲ ಕಂಡದ್ದನ್ನು ಒಮ್ಮೆ ಕಣ್ಣು ಬಿಟ್ಟು ಗಮನಿಸುತ್ತಾನೆ. ಇದಿಷ್ಟೂ ಆತನ ಕೆಲಸಗಳು. ಈಗ ಅವನ ಬದುಕಿಗೆ ಅಗತ್ಯವಾಗಿರುವುದು ಉಸಿರು ಜೊತೆಗೆ ಅಮ್ಮನ ಆಸರೆ. ಅವನ ಜನನವಾದ ಕೂಡಲೇ ಅಮ್ಮನಲ್ಲಿ ಕನಸುಗಳು, ಅಪ್ಪನಲ್ಲಿ ಜವಾಬ್ದಾರಿಗಳು ಹುಟ್ಟಿಕೊಂಡವು. ಮುಂದಿನ ಖಾಲಿ ಪುಟಗಳನ್ನು ತುಂಬಿಸುವ ಕೆಲಸ ಆತನದ್ದು. ಅದಕ್ಕೆ ಬೇಕಾಗುವ ಎಲ್ಲ ಪರಿಕರಗಳು ಮನೆಯಿಂದ, ಮುಂದೆ ಹೋಗಲಿರುವ ಶಾಲೆಯಿಂದ, ಜನರಿಂದ ಸಿಗ್ತಾ ಹೋಗುತ್ತೆ. ಎಲ್ಲವನ್ನೂ ಬಳಸಿಕೊಂಡು ಅವನ ಜೀವನವನ್ನು ವರ್ಣಮಯವಾಗಿ ತುಂಬಿಸಿಕೊಳ್ಳಬೇಕು. ಈಗ ಪ್ರತಿಯೊಂದು ಕುತೂಹಲವೇ ಕಾಣಸಿಗುತ್ತದೆ. ಮುಗ್ಧತೆಯ ಕುತೂಹಲವಿದ್ದಲ್ಲಿ ಚಂದ. ಬುದ್ದಿವಂತಿಕೆಯ ಪ್ರಶ್ನೆಗಳು ಸಾವಿರವಾದಾಗ ಮುಗ್ಧತೆಯ ಬದುಕು ಕಣ್ಣಮುಂದೆ ಕಾಣೋದೇ ಇಲ್ಲ .ಈಗ ನಾನವನಿಗೆ ಬೇರೆ ಏನು ಹೇಳುವುದಕ್ಕೆ ಸಾಧ್ಯವಿಲ್ಲ. ಬದುಕು ನಿನ್ನದು, ನೀನು ಅಂದುಕೊಂಡಂತೆ ಬದುಕು ಅನ್ನೋದನ್ನ ಬಿಟ್ಟು. ಅಳೋದಕ್ಕೆ ಆರಂಭ ಮಾಡಿದ. ಅಮ್ಮ ಹಾಲು ಕೊಡುವುದಕ್ಕೆ ಅವನನ್ನು ಎತ್ತಿಕೊಂಡರು.

-ಧೀರಜ್ ಬೆಳ್ಳಾರೆ