ಸ್ಟೇಟಸ್ ಕತೆಗಳು (ಭಾಗ ೩೪೯) - ಕಾಲ ಕಳೆಯುವುದು
ಸಮಯ ಕಳೆಯುವುದು ಹೇಗೆ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ನನಗೆ ಯಾಕೆಂದರೆ ನಾನು ಇನ್ನೆರಡು ದಿನ ಬದುಕಬೇಕಾಗಿದ್ದ ಊರು ಹಾಗಿದೆ. ಡಾಂಬಾರು ರಸ್ತೆ ದಾಟಿದ ಕೂಡಲೇ ಸಿಗುವ ಮಣ್ಣಿನ ರಸ್ತೆ ಪ್ರವೇಶ ಮಾಡಿದ ಕೂಡಲೇ ನನ್ನ ಮೊಬೈಲ್ ನೆಟ್ವರ್ಕ್ ನ ಗುರುತುಗಳು ಮಾಯವಾಗಿ ಬಿಟ್ಟವು.
ಅಲ್ಲಿಂದ ಮನೆ ತಲುಪೋಕೆ ಹಲವು ಕಿಲೋಮೀಟರ್. ಅಲ್ಲಿಂದಲೇ ಮೊಬೈಲ್ ಉಪಯೋಗ ಕಳೆದುಕೊಂಡು ಬಿಟ್ಟಿತ್ತು. ಮೊಬೈಲ್ ಇಂದಲೇ ನನ್ನ ಸಮಯ ಸದ್ಭಳಕೆ ಎಂದು ಅರಿತಿದ್ದ ನನಗೆ ಮುಂದೆ ಸಮಯವನ್ನು ಕಳೆಯುವುದು ಹೇಗೆ ಅನ್ನುವ ಪ್ರಶ್ನೆ ಹುಟ್ಟಿತು. ತಲುಪಿದ ಕೆಲ ಕ್ಷಣಗಳಲ್ಲಿ ತುಂಬಾ ಹೊತ್ತು ಕಳೆದಾಯಿತು ಎಂದು ಗಡಿಯಾರ ನೋಡಿದರೆ ಐದು ನಿಮಿಷ ದಾಟಿತ್ತಷ್ಟೆ. ಸಮಯ ಓಡುತ್ತಿಲ್ಲ, ಕಳೆಯುತ್ತಿಲ್ಲ ಇಲ್ಲಿಗೆ ಯಾಕೆ ಬಂದೆನೋ ಯೋಚನೆ ಶುರುವಾಯಿತು. ಕೆಲವೇ ಕ್ಷಣದಲ್ಲಿ ಅಜ್ಜ ಮಾತನಾಡೋಕೆ ಕರೆದ್ರು, ತೋಟದಲ್ಲಿ ತಿರುಗಾಡುತ್ತಾ ಮಾತನಾಡಿದ್ವಿ, ಅವರ ಜೀವನ, ಬಾಲ್ಯ, ಊರು, ಹಾಸ್ಯ, ಕಷ್ಟ ಎಲ್ಲವನ್ನು ತೆರೆದಿಟ್ಟರು. ಆಗಲೇ ಸೂರ್ಯ ನಮ್ಮ ಮಾತನ್ನ ಕೇಳಿ ಮನೆಗೆ ಹೊರಟಿದ್ದ. ರಾತ್ರಿ ಮಲಗುವ ಸಮಯವಾಯಿತು ಮಾತು ಮುಗಿದಿರಲಿಲ್ಲ. ಜೀವನ ಹೀಗೂ ಇರುತ್ತಲ್ಲ ಎನ್ನುವ ಅದ್ಭುತ ಸಂದೇಶ ಕಣ್ಣ ಮುಂದಿತ್ತು. ಆಗಲೇ ಹೊಸ ಸತ್ಯ ತಿಳಿಯಿತು. ಇಷ್ಟರವರೆಗೆ ನಾನು ಸಮಯವನ್ನ ಕಳೆದಿದ್ದೇನೆ. ಇವತ್ತು ಸಮಯದ ಜೊತೆ ಬದುಕಿದ್ದೇನೆ. ನಾನು ಮಾಡಬೇಕಾಗಿದ್ದದ್ದು ಇಷ್ಟೆ. ಸಮಯದೊಂದಿಗೆ ಬದುಕುಬೇಕು. ನನ್ನ ಸದ್ಯದ ಬದುಕಿನ ರೀತಿಗಿಂತಲೂ ಹೊಸತನದ ಬದುಕಿದೆ ಹುಡಕಬೇಕಷ್ಟೆ. ಹಾಗಾಗಿ ಕಾಲ ಕಳೆಯುವುದಲ್ಲ, ಕಾಲದೊಂದಿಗೆ ಬದುಕುವುದು.....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ