ಸ್ಟೇಟಸ್ ಕತೆಗಳು (ಭಾಗ ೩೫೩) - ವಿನಂತಿ
"ನನಗೆ ಜೀವನವನ್ನು ಎದುರಿಸಲು ಆಗುವುದಿಲ್ಲ, ನಾನು ಸೋತಿದ್ದೇನೆ, ನಾನು ಹೇಡಿ, ನನ್ನಿಂದ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ನಾನು ಬದುಕೋಕೆ ಅರ್ಹನಲ್ಲ, ಹೀಗೆಲ್ಲ ಯೋಚಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಒಂದಷ್ಟು ಜನರಲ್ಲಿ ಒಂದು ವಿನಂತಿ, ಅದು ಮಹಾ ಅಪರಾಧ ಆದರೂ ನಿಮ್ಮ ಹುಟ್ಟಿಗೆ ಅರ್ಥವಿಲ್ಲ ಅನ್ನೋ ಭಾವನೆ ನಿಮ್ಮಲ್ಲಿದ್ದರೆ ಆದಷ್ಟು ಸಾಯುವ ಜಾಗ ನಿಮ್ಮ ಸ್ವಂತದ್ದಾಗಿರಲಿ, ಏಕೆಂದರೆ ಆ ಸ್ಥಳದವನಿಗೆ, ಆ ಹೋಟೆಲ್ ನವನಿಗೆ ,
ದೊಡ್ಡ ಕಟ್ಟಡದ ಯಜಮಾನನಿಗೆ, ಸಮಸ್ಯೆಗಳ ಸುಳಿಯೇ ದೊಡ್ಡದಾಗಿ ಬಿಡುತ್ತದೆ. ವೈಯಕ್ತಿಕವಾಗಿ ಅವನೇ ತುಂಬಾ ಕಷ್ಟದಲ್ಲಿ ನಿಭಾಯಿಸುತ್ತಿರುತ್ತಾನೆ, ಜನರ ಇರುವಿಕೆ, ಹೋಗುವಿಕೆಯು ಹೆಚ್ಚು ಕಡಿಮೆಯಾಗಿರುತ್ತದೆ. ಆ ಸಂದರ್ಭದಲ್ಲಿ ಇಂತಹ ಸಾವುಗಳು ಸಂಭವಿಸಿದರೆ ಅಲ್ಲಿಗೆ ಬರುವ ಸಂಖ್ಯೆಯು ಕಡಿಮೆಯಾಗುತ್ತದೆ, ಜೊತೆಗೆ ಕೋರ್ಟು ವಿಚಾರಣೆ ಪೋಲೀಸು ಇವುಗಳ ಗದ್ದಲದಲ್ಲಿ ಆ ಕಡೆಗೆ ಜನ ಸುಳಿಯುವುದೇ ಇಲ್ಲ. ಅವನ ಬದುಕು ಹೇಗೆ? ಸತ್ತೋರು ಸತ್ತು ಹೋಗಿದ್ದಾರೆ, ಆದರೆ ಈಗ ಇವನು ಬದುಕಿರುವವರೆಗೂ ನೆಮ್ಮದಿಯಾಗಿ ಬದುಕ ಬೇಕಲ್ಲವೇ? ಬದುಕಲಿಕ್ಕೂ ಆಗದೇ ಇರುವಂತಹ ಸ್ಥಿತಿಯನ್ನು ನಿರ್ಮಿಸುವುದು ಯಾಕೆ? ಹೆಣಗಳು ರಾಜಕೀಯಕ್ಕೆ ಸಿಕ್ತಾನೆ ಇರುತ್ತವೆ, ಆದರೆ ಸಣ್ಣ ಹೋಟೆಲಿನ ಬದುಕು ಕಟ್ಟಿಕೊಳ್ಳೊಕೆ ಅವಕಾಶಗಳು ಹೇಗೆ ಸಾಧ್ಯ?
ಆ ಹೋಟೆಲಿನ ಯಜಮಾನ ಮೂಲೆಯಲ್ಲಿ ನಿಂತು ಅಳುತ್ತಿದ್ದ, ಮುಂದಿನ ಸಲದ ಮಗನ ಶಿಕ್ಷಣದ ವೆಚ್ಚ, ತಾನು ಮಾಡಿರುವ ಮನೆ ಸಾಲ, ಅಪ್ಪನ ಮದ್ದಿನ ಖರ್ಚು ಎಲ್ಲದಕ್ಕೂ ದುಡ್ಡು ಹೊಂದಿಸುವುದು ಹೇಗೆ ? ಅದಕ್ಕೆ ಸಾರ್ ಬದುಕಿರುವವರೆಗೂ ಬದುಕಿ. ಸಾವನ್ನು ಕೈಯಾರೆ ತಂದುಕೊಳ್ಳಬೇಡಿ. ಆದರೆ ಬರುವಾಗ ಅದರ ಜೊತೆಗೆ ಹೊರಟುಬಿಡಿ. ಇಲ್ಲದಿದ್ದರೆ ದಾರಿ ಮಧ್ಯೆ ನಿಂತ ವಿಳಾಸ ಇಲ್ಲದವನ ನನ್ನ ಪರಿಸ್ಥಿತಿಯ ಹಾಗಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ