ಸ್ಟೇಟಸ್ ಕತೆಗಳು (ಭಾಗ ೪೬೨) - ಭಯ
ಹರೀಶಣ್ಣ ಮಾತಾಡ್ತಾ ಇದ್ದರು, "ಕರೆಂಟ್ ಕೆಲಸ ಮಾಡೋರು ಕರೆಂಟ್ ವೈಯರ್ ಅನ್ನ ಹಿಡ್ಕೊಂಡ್ರೆ ಅವರಿಗೂ ಕೂಡ ಕರೆಂಟ್ ಹೊಡಿಯುತ್ತೆ. ಕರೆಂಟ್ ಕೆಲಸ ಮಾಡುವವರು ಇವರು ಹಾಗಾಗಿ ನಾನು ಹೊಡಿಬಾರದು ಅಂತಾ ಏನಾದರೂ ಕರೆಂಟ್ ಯೋಚನೆ ಮಾಡುತ್ತಾ ? ಇಲ್ಲ ತಾನೇ, ಹಾಗೆಯೇ ನಾವು ಯಾವುದೋ ಒಂದು ವಿಚಾರದಲ್ಲಿ ಎಷ್ಟೇ ಪ್ರಾವೀಣ್ಯತೆ ಹೊಂದಿದ್ದರೂ ಕೂಡ ಆ ವಿಚಾರದ ಬಗ್ಗೆ ಇನ್ನೂ ತಿಳಿದುಕೊಳ್ಳೋದು ಇದೆ ಅನ್ನುವ ಸೌಜನ್ಯ, ಆ ವಿಚಾರದ ಬಗೆಗೆ ಚೂರು ಭಯ ಇರಲೇಬೇಕು. ಭಯವಿದ್ದಲ್ಲಿ ಜ್ಞಾನ ಹೆಚ್ಚಾಗುತ್ತಾ ಹೋಗುತ್ತದೆ ಅನ್ನೋದು ದೊಡ್ಡವರ ಮಾತು. ಸದಾ ನೀರಲ್ಲೇ ಮೀನು ಹಿಡಿಯುವವನಿಗೆ ನೀರಿನ ಬಗ್ಗೆ ಒಂದು ಚೂರು ಭಯ, ಬೆಂಕಿಯ ಮಧ್ಯದಲ್ಲಿ ಬೇಯುತ್ತಿರುವವನಿಗೆ ಬೆಂಕಿಯ ಬಗೆಗೆ ಚೂರು ಭಯ, ಹೀಗೆ ಎಲ್ಲಾ ವಿಚಾರಗಳಿಗೂ ನಾವದರಲ್ಲಿ ಎಷ್ಟೇ ಪ್ರವೀಣರಾಗಿದ್ದರೂ ನಮಗೆ ಆ ವಿಚಾರದ ಬಗ್ಗೆ ಸ್ವಲ್ಪವಾದರೂ ಭಯ ಇರಲೇಬೇಕು. ಆಗ ಮಾತ್ರ ನಾವಿಡುವ ಹೆಜ್ಜೆಗಳು ಸರಿಯಾದ ದಾರಿಯಲ್ಲಿರುತ್ತವೆ. ಸಾವಿನ ಭಯವೇ ಇಲ್ಲದಿದ್ದಾಗ ವ್ಯಕ್ತಿಯಿಂದ ಕೆಟ್ಟ ಕೆಲಸಗಳು ಹೆಚ್ಚಾಗುವ ಹಾಗೆ, ನಾವು ಮಾಡುವ ಪ್ರತಿಯೊಂದು ಕೆಲಸವೂ ಮುಂದೇನಾಗುತ್ತೆ ಎನ್ನುವ ಸಣ್ಣ ಭಯದ ಜೊತೆಗೆ ನಮ್ಮ ಮೇಲೆ ನಮಗೆ ನಂಬಿಕೆ ಇರಲೇಬೇಕಾಗುತ್ತದೆ. ಆಗಿದ್ದಾಗ ಎಲ್ಲಾ ಕೆಲಸಗಳು ಸಾಂಗವಾಗಿ ನೆರವೇರುತ್ತಾ ಹೋಗುತ್ತದೆ". ಹೀಗ್ಯಾಕೆ ಅವರು ಅಂದರು ಅನ್ನೋದು ನನಗೆ ಅರ್ಥವಾಗಲಿಲ್ಲ ಆದರೆ ನಿನ್ನೆ ತಾನೇ ಅವರ ಒಬ್ಬ ಉತ್ತಮ ಈಜುಪಟು ಗೆಳೆಯ ನೀರಿನಲ್ಲಿ ಮುಳುಗಿ ತನ್ನ ಸಾವನ್ನ ಕಂಡುಕೊಂಡಿದ್ದ, ಅದೇ ನೋವಿನಿಂದ ಈ ಮಾತನಾಡಿರಬೇಕು ಅನಿಸ್ತು. ಭಯ ನಮ್ಮನ್ನು ಮತ್ತೆ ಮತ್ತೆ ಬದುಕುವುದಕ್ಕೆ ಪ್ರೇರೇಪಿಸುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ