ಸ್ಟೇಟಸ್ ಕತೆಗಳು (ಭಾಗ ೬೨೯) - ಆ ವ್ಯಕ್ತಿ

ಸ್ಟೇಟಸ್ ಕತೆಗಳು (ಭಾಗ ೬೨೯) - ಆ ವ್ಯಕ್ತಿ

ಅವರು ಆ ಸ್ಪರ್ಧೆಯಲ್ಲಿ ಸೋತಿದ್ದರು. ಆದ್ರೆ ಸೋತದ್ದಕ್ಕೆ ಅವರು ಯಾವ ನೋವು ಪಡಲಿಲ್ಲ. ಎಲ್ಲರೂ ಒಬ್ಬ ವ್ಯಕ್ತಿಯ ಸುತ್ತ ನಿಂತು ಮಾತುಗಳನ್ನ ಹಂಚಿಕೊಳ್ಳುತ್ತಿದ್ದರು. ಅವರ ಜೊತೆ ಇನ್ನೂ ಹೆಚ್ಚು ಮಾತನಾಡಿ ನಮ್ಮ ತಪ್ಪುಗಳ ಬಗ್ಗೆ ಅವರಲ್ಲಿ ಕೇಳಿ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಅವರನ್ನು ಇನ್ನೊಂದಷ್ಟು ಹೆಚ್ಚು ಸಂಭ್ರಮದಿಂದ ಜೊತೆಗೂಡಿಸಿಕೊಂಡು ಮನೆ ಕಡೆ ಹೊರಟರು. ಗೆಲುವು ಸಿಗದಿದ್ದಕ್ಕೆ ಒಂದಿನಿತೂ ನೋವಾಗದೇ ಹಾಗೇ ಹೊರಟದ್ದು ನನಗೆ ಒಂದು ಅರ್ಥವಾಗಲಿಲ್ಲ. ಇಷ್ಟು ದಿನ ಪರಿಶ್ರಮ ಪಟ್ಟದ್ದಕ್ಕೆ ಗೆಲುವು ಸಿಗಬೇಕಿತ್ತು ಅಥವಾ ಗೆಲುವು ಸಿಗದ್ದಕ್ಕೆ ಬೇಸರವಾಗಬೇಕು ಆದರೆ ಅವರಿಗೆ ಅದು ಯಾವುದು ಆಗಲೇ ಇಲ್ಲ ನನಗೆ ಈ ಭಾವನೆಯನ್ನು ಅರ್ಥಮಾಡಿಕೊಳ್ಳಕ್ಕಾಗದೆ ನೇರವಾಗಿ ಅವರ ಬಳಿಯೇ ಕೇಳಿಬಿಟ್ಟೆ." ನಮಗೆ ಸೋಲಾಗಿರಬಹುದು, ಅಂದರೆ ನಮ್ಮಲ್ಲೇನಾದ್ರು ತಪ್ಪಿರಬಹುದು ಅಥವಾ ನಮ್ಮ ಪರಿಶ್ರಮ ಕಡಿಮೆಯಾಗಿರುತ್ತದೆ .ಆದರೆ ಇಷ್ಟು ದಿನ ನಮ್ಮ ಗೆಲುವಿಗಾಗಿ ನಮ್ಮ ಜೊತೆ ನಿಂತು ಪರಿಶ್ರಮ ಪಟ್ಟರಲ್ಲ ಸತತವಾಗಿ ನಮ್ಮ ಗೆಲುವಿಗೆ ಹಗಲಿರುಳು ದುಡಿದರಲ್ಲ ಅವರ ಆ ದುಡಿಮೆಗೆ ಒಂದು ಅರ್ಥ ಸಿಗಬೇಕು ಅಂತಿದ್ರೆ ನಾವು ಅವರನ್ನು ಇನ್ನು ಹೆಚ್ಚು ಪ್ರೀತಿಸಬೇಕು. ಅವರಿಗೆ ಅಭಿನಂದನೆ ಸಲ್ಲಿಸಬೇಕು ಅವರು ನಮ್ಮನ್ನ ಈ ಮಟ್ಟದವರೆಗೆ ತಂದದ್ದಕ್ಕೆ .ಹಾಗಾಗಿ ನಮಗೆ ನೋವಿಲ್ಲ ಇನ್ನೊಂದು ಮತ್ತೊಂದು ಸಲ ಇನ್ನೂ ಹೆಚ್ಚು ಪ್ರಯತ್ನ ಪಡುತ್ತೇವೆ. ಸಿಗದಿರುವುದನ್ನು ದಕ್ಕಿಸಿಕೊಳ್ಳುತ್ತೇವೆ. ಆದರೆ ನಮ್ಮನ್ನು ಈ ಹಂತಕ್ಕೇರಿಸಿದವರನ್ನ ನಾವ್ಯಾವತ್ತೂ ಕುಗ್ಗುವುದಕ್ಕೆ ಬಿಡುವುದಿಲ್ಲ. ಯಾಕೆಂದರೆ ಅವರು ನಮ್ಮವರು" ನನಗೆ ಈ ಮಾತು ಆ ಸ್ಪರ್ಧೆಯಲ್ಲಿ ನಾನು ಗೆದ್ದ ಬಹುಮಾನಕ್ಕಿಂತಲೂ ದೊಡ್ಡದು ಅನ್ನಿಸುವುದಕ್ಕೆ ಆರಂಭವಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ