ಸ್ಟೇಟಸ್ ಕತೆಗಳು (ಭಾಗ ೬೪೯) - ಅಸಮಾನತೆ

ಸ್ಟೇಟಸ್ ಕತೆಗಳು (ಭಾಗ ೬೪೯) - ಅಸಮಾನತೆ

ಸಮಾನತೆಯ ಬಗ್ಗೆ ಪುಸ್ತಕದಲ್ಲಿ ಓದಿರುತ್ತೇವೆ, ಗುರುಗಳ ಬಾಯಲ್ಲಿ ಕೇಳಿರುತ್ತೇವೆ, ನಮ್ಮೆಲ್ಲರಿಗಿಂತಲೂ ಭಗವಂತ ಶ್ರೇಷ್ಠ ಅಂತ ನಾವೆಲ್ಲರೂ ನಂಬಿದ್ದೇವೆ. ಆದರೆ ಭಗವಂತನು ಈಗ ಸಮಾನತೆಯನ್ನು ಅನುಸರಿಸುತ್ತಿಲ್ಲ ಅನ್ನೋದು ನನ್ನ ವಾದ. ಸಾಗುತ್ತಾ ಇರುವಂತಹ ದಾರಿಯಲ್ಲಿ ಒಂದು ದೂರದವರೆಗೆ ಮಳೆಯ ಹನಿ ಬೀಳುತ್ತಾ ಇರುತ್ತೆ, ಇನ್ನೊಂದಷ್ಟು ದೂರ ಮಳೆ ಸ್ವಲ್ಪ ಜೋರಾಗಿ ಸುರಿಯುತ್ತೆ. ಅದರ ಪರಿಧಿ ದಾಟಿದ ಕೂಡಲೇ ಬಿಸಿಲಿನಲ್ಲಿ ನೆಲ ಒಣಗುತ್ತಿರುತ್ತದೆ. ಅಂದ್ರೆ ಈ ಮಳೆಯನ್ನ ಕಳುಹಿಸುವಾಗ ದೇವರು ಒಂದೊಂದು ಸ್ಥಳಕ್ಕೆ ಇಂತಿಷ್ಟು ಮಳೆ ಸುರಿಬೇಕು ಅಂತ ಏನಾದರೂ ತಿಳಿಸಿ ಕಳುಹಿಸುತ್ತಾನಾ ಅಥವಾ ಯಾವ ಸ್ಥಳದಿಂದ ಹೆಚ್ಚು ನೀರು ಸಿಕ್ಕಿದೆ ಅವರಿಗೆ ಹೆಚ್ಚು ಮಳೆ ಕೊಡಿ ಅಂತ ನಿರ್ಧಾರ ಏನಾದರೂ ಮಾಡ್ತಾ ಇದ್ದಾನಾ ಗೊತ್ತಿಲ್ಲ. ಎಲ್ಲರೂ ಭಗವಂತನ ಸೃಷ್ಠಿಗಳೇ, ಅದಕ್ಕೆ ಸಹಕಾರವಾಗುವ ರೀತಿಯಲ್ಲಿ ಭಗವಂತನು ಮಳೆ ಸುರಿಸಬೇಕಲ್ವಾ.. ಮಳೆ ಸುರಿಸದೆ ಅನ್ನವಿಲ್ಲದೆ ಹಸಿವಿನಿಂದ ಬದುಕುತ್ತಾ ಇರುವವರು ಒಂದು ಕಡೆ.. ಹೀಗಿರುವಾಗ ಭಗವಂತ ಯಾರ ನಡುವೆಯೂ ಅಸಮಾನತೆ ತೋರದೆ ಎಲ್ಲರಿಗೂ ಸಮಾನವಾಗಿ ಮಳೆಯನ್ನ ನೀಡಿ ಎಲ್ಲರೂ ನೆಮ್ಮದಿಯಿಂದ ಬದುಕುವ ಹಾಗೆ ಮಾಡಲಿ ಎನ್ನುವುದಷ್ಟೇ ನನ್ನ ಬೇಡಿಕೆ ಇನ್ನಾದರೂ ಭರ್ಜರಿ ಮಳೆಯಾಗಲಿ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ