ಸ್ಟೇಟಸ್ ಕತೆಗಳು (ಭಾಗ ೬೭೦) - ಪುಸ್ತಕ
ಆ ಕಪಾಟುಗಳ ಮಧ್ಯೆ ಕಣ್ಣಿಗೆ ಸೆಳೆದಂತಹ ಪುಸ್ತಕ ಅದು. ನೋಡುವುದಕ್ಕೆ ಏನೋ ಅದ್ಭುತವಾಗಿದೆ ಮುಖಪುಟದ ವಿನ್ಯಾಸ ತುಂಬಾ ಚೆನ್ನಾಗಿದೆ ಎಲ್ಲಕ್ಕಿಂತ ಮನಸ್ಸನ್ನು ಸೆಳೆಯುತ್ತಿದೆ ಅನ್ನುವ ಕಾರಣಕಲ್ಲ ,ಆ ಪುಸ್ತಕ ಎಲ್ಲಾ ಪುಸ್ತಕದ ತರಹ ಇರಲಿಲ್ಲ. ಯಾವುದೋ ಒಂದು ಹಳೆಯ ಡೈರಿಯ ಮಾದರಿ ಇತ್ತು, ಉಳಿದೆಲ್ಲ ಪುಸ್ತಕಗಳಿಗೆ ಚಂದ ಚಂದದ ಹೆಸರುಗಳಿದ್ದರೆ ಅದಕ್ಕೆ ಯಾವುದೇ ಹೆಸರಿರಲಿಲ್ಲ. ಎಲ್ಲ ಪುಸ್ತಕಗಳಿಗಿಂತ ಹಳೆಯ ಪುಸ್ತಕ ಅದು ಎನ್ನುವುದು ನೋಡುವಾಗಲೇ ತಿಳಿಯಿತು. ಹಾಗಾಗಿ ಅದೇನು ಅನ್ನೋ ಕುತೂಹಲದಿಂದ ಪುಟ ತಿರುಗಿಸಿದೆ ಮೊದಲ ಪುಟ ನನಗೆ ಕೆಲಸ ಸಿಕ್ಕಿತು ಅನ್ನುವ ವಾಕ್ಯದಿಂದ ಆರಂಭವಾದದ್ದು ವರ್ಷ 1989. ಮೊದಲ ಕೆಲಸದ ಸಂಭಾವನೆ ತಿಂಗಳಿಗೆ ಒಂದು ಸಾವಿರ. ಪ್ರತಿ ವರ್ಷದ ಸಂಭಾವನೆ ಏರಿಕೆಯ ಬಗ್ಗೆ ಅಲ್ಲಿ ಮಾಹಿತಿ ಸಿಗುತ್ತಾ ಹೋಯಿತು. ವರ್ಷ 10 ದಾಟಿದ್ರು ಸಂಭಾವನೆ 10 ಸಾವಿರ ತಲುಪಿಲಿಲ್ಲ. ಒಂದಷ್ಟು ಕನಸುಗಳ ಪಟ್ಟಿ ಮಾಡಿ ಜಾಗ ಬಂದು ಖರೀದಿಸಬೇಕು,ಮನೆ ಕಟ್ಟಬೇಕು, ಮನಸಿಗಿಷ್ಟವಾದಗಳ ಮದುವೆಯಾಗಬೇಕು. ಸಂಬಳದಲ್ಲಿ ಜಾಗ ಖರೀದಿಯಾಯಿತು, ಮನೆಯಾಯಿತು, ಮನಸ್ಸಿಗೆ ಇಷ್ಟವಾದಗಳನ್ನು ಮನೆಯವರು ಮದುವೆ ಮಾಡಿಸಿದರು. ಆಗ ಮದುವೆಯ ಖರ್ಚು 50 ಸಾವಿರ ಚಿನ್ನ ಗ್ರಾಮಿಗೆ 350 ರೂಪಾಯಿ. ಮುಂದೆ ಮಕ್ಕಳ ಲಾಲನೆ ಪೋಷಣೆ ವಿದ್ಯಾಭ್ಯಾಸಕ್ಕೆ ದುಡ್ಡು ಹೊಂದಾಣಿಕೆ. ಸಂಬಳದಲ್ಲಿ ಸಣ್ಣ ಏರಿಕೆ ಬದುಕು ನೆಮ್ಮದಿಯ ದಾರಿಯಲ್ಲಿ ಸಾಗುತ್ತಿದೆ. ಮುಂದೊಂದು ದೊಡ್ಡ ಕನಸುಗಳನ್ನು ದೊಡ್ಡ ಅಕ್ಷರದಲ್ಲಿ ಬರೆದಿಟ್ಟು ಮತ್ತೆ ಪ್ರಯತ್ನಿಸಿದರೆ ಮಾತ್ರ ಅದು ಸಾಧ್ಯವಾಗುತ್ತದೆ ಅನ್ನೋ ಸಾಲಿನ ಕೆಳಗೆ ಮಗಳ ಮದುವೆ ಮಗನ ಮದುವೆ ನೆಮ್ಮದಿಯ ಬದುಕು, ಈ ಮೂರು ಸಾಲುಗಳನ್ನ ಅಚ್ಚೊತ್ತಿ ಬಿಟ್ಟಿದ್ದರು. ಅದನ್ನ ಸಾಧಿಸಿದ್ದೇನೆ ಅನ್ನುವ ಕೆಂಪು ಅಕ್ಷರದಲ್ಲಿ ಬರೆದ ಸಾಲುಗಳು ಇದ್ದವು. ಮುಂದಿನ ಬದುಕು ಹೊಸ ದಾರಿ, ಹೊಸ ಯೋಚನೆ ಅಲ್ಪವಿರಾಮದೊಂದಿಗೆ ಬರವಣಿಗೆ ನಿಂತಿತ್ತು. ಪುಸ್ತಕದಲ್ಲಿ ಇನ್ನಷ್ಟು ಪುಟಗಳಿವೆ. ಅವರು ತಮ್ಮ ಕನಸುಗಳೆಲ್ಲವನ್ನ ಬರೆದಿಟ್ಟು ಪ್ರತಿ ಹೆಜ್ಜೆಗಳನ್ನ ನೆನಪಿಟ್ಟುಕೊಂಡು ಮುಂದೆ ಸಾಗುವರು. ಕಳೆದ ದಾರಿಯ ಬಗ್ಗೆ ಗೊತ್ತಿತ್ತು ಸಾಗುವ ದಾರಿಯ ಬಗ್ಗೆಯೂ ನಂಬಿಕೆ ಇತ್ತು. ಪುಸ್ತಕವನ್ನು ಮತ್ತೆ ಅದೇ ಕಪಾಟಿಗೆ ಸೇರಿಸಿದೆ. ಬದುಕು ಅಂದಿನಿಂದ ಇಂದಿಗೆ ತಲುಪುವಾಗ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಅನ್ನುವುದು ಒಂದು ಪುಸ್ತಕದಿಂದಲೇ ಅರ್ಥವಾಗಿ ಹೋಯಿತು. ಇಂದಿನಿಂದ ನಾನು ನನ್ನ ಬದುಕಿನ ಕನಸುಗಳನ್ನು ಸಾಗಿದ ದಾರಿಗಳನ್ನ ಬರೆದಿಡುತ್ತೇನೆ. ಮುಂದೊಂದು ದಿನ ಯಾರಿಗಾದರೂ ನನ್ನ ಬದುಕು ಕೂಡ ಅದ್ಬುತ ಅನ್ನಿಸಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ