ಸ್ಟೇಟಸ್ ಕತೆಗಳು (ಭಾಗ ೬೮೨) - ಗಾಯ

ಸ್ಟೇಟಸ್ ಕತೆಗಳು (ಭಾಗ ೬೮೨) - ಗಾಯ

ಈ ಭೂಮಿಯಲ್ಲಿ ಗಾಯಗೊಂಡವರಿಗೆ ನೋವು ಇದ್ದೇ ಇರುತ್ತದೆ. ಕೆಲವೊಂದು ಸಲ ತಾನು ಮಾಡಿದ ತಪ್ಪಿಗೆ ತಾನೇ ಗಾಯವನ್ನ ಮಾಡಿಸಿಕೊಂಡು ನೋವನ್ನು ಅನುಭವಿಸುತ್ತಾನೆ. ಆದರೆ ಕೆಲವೊಂದು ಸಲ ಯಾರದೋ ತಪ್ಪಿಗೆ ಆತ ಗಾಯಗೊಳ್ಳುವ ಹಾಗೆ ಆಗುತ್ತದೆ. ಗಾಯ ಕಣ್ಣಿಗೆ ಕಾಣಬೇಕು ಎಂದೇನೂ ಇಲ್ಲ. ರಕ್ತ ಹರಿಯಬೇಕು ಮೂಳೆ ಮುರಿಯಬೇಕು ಅಂತಾನೂ ಇಲ್ಲ. ಕಣ್ಣಿಗೆ ಕಾಣದೆ ಮನಸಿನ ಒಳಗೆ ಸಣ್ಣ ಪಲ್ಲಟವು ಏರ್ಪಟ್ಟರೆ ಸಾಕು ಅದು ಕಣ್ಣಮುಂದಿನ ಗಾಯಕ್ಕಿಂತ ದೊಡ್ಡದಾಗಿ ಬಿಡುತ್ತದೆ. ಎಲ್ಲಾ ಗಾಯಗಳಿಗೆ ಮುಲಾಮು ಸಿಗೋದಿಲ್ಲ. ಕೆಲವೊಂದು ಗಾಯಗಳಿಗೆ ಅಂಗಡಿಯಲ್ಲಿ ಮದ್ದು ಸಿಕ್ಕರೆ, ಕೆಲವೊಂದು ಗಾಯಗಳಿಗೆ ಮಾತುಗಳೇ ರಾಮಬಾಣವಾಗುತ್ತವೆ. ಗಾಯ ಮಾಡಿದವನಿಗೆ ತಾನು ಮಾಡಿದ ಗಾಯದ ಪರಿಣಾಮ ಅರಿವಾಗಿ ಗಾಯಗೊಂಡವನ ಬಳಿ ಬಂದು ತಪ್ಪನ್ನು ಒಪ್ಪಿ ಕೇಳಿದರೆ ಗಾಯಗೊಂಡವನಿಗೂ ಸಮಾಧಾನ. ಬದುಕಲ್ಲಿ ಕೇಳಬೇಕಾದಿಷ್ಟೇ ನಮ್ಮಿಂದ ತಪ್ಪಿಯೂ ಯಾರಿಗೂ ಗಾಯವಾಗಬಾರದು. ನಮಗೆ ಗಾಯವಾದಾಗ ಅದಕ್ಕೆ ಆದಷ್ಟು ಬೇಗ ಮುಲಾಮನ್ನ ಹಚ್ಚಿ ಮತ್ತೆ ಚೈತನ್ಯದಿಂದ ಏಳುವ ಮನಸ್ಸು ನಮ್ಮದಾಗಬೇಕು. ಅರ್ಥ ಆಯ್ತಾ ಅಂತಂದ ನಿಂಗಪ್ಪ ಮೇಷ್ಟ್ರು ಕಣ್ಣೀರು ಇಳಿಸುತ್ತಾ ತುಟಿಯಲ್ಲಿ ನಗುತ್ತಾ ನನ್ನ ಮುಂದೆ ಹಾಗೆ ಹಾದು ಹೋದರು. ಈ ಮಾತನ್ನ ಅವರು ಅವರಿಗೇ ಹೇಳಿದರೋ? ನನಗೆ ಹೇಳಿದರೋ? ನನ್ನ ಹಿಂದೆ ನಿಂತವರಿಗೆ ಹೇಳಿದರೋ? ಅರ್ಥವಾಗಲಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ