ಸ್ಟೇಟಸ್ ಕತೆಗಳು (ಭಾಗ ೬೯೬) - ಹೆಸರು

ರಸ್ತೆಯ ಮೇಲೆ ಗಾಡಿ ಚಲಾಯಿಸುವ ನಾನು ಯಾವುದೇ ರೀತಿಯ ನೀತಿ ನಿಯಮಗಳನ್ನು ಪಾಲಿಸುವುದಿಲ್ಲ. ಆದರೆ ನನ್ನ ಗಾಡಿಯ ಮೇಲೆ ದೊಡ್ಡ ದೇವರ ಹೆಸರುಗಳನ್ನ ಗಟ್ಟಿಯಾಗಿ ಕೆತ್ತಿಬಿಟ್ಟಿದ್ದೇನೆ ಅಪಘಾತ ಆಗದ ಹಾಗೆ ದೇವರು ನೋಡಿಕೊಳ್ಳುತ್ತಾನೆ ಅಂತ. ಪ್ರತಿದಿನ ಗಾಡಿಗೆ ಕೈ ಮುಗಿದು ಚಲಾಯಿಸುತ್ತೇನೆ. ನಮ್ಮದು ಒಂದು ಅಂಗಡಿ ಇದೆ ಅಂಗಡಿ ಹೆಸರು ದೇವರದ್ದೆ, ಆದ್ರೆ ಒಂದಷ್ಟು ಕಲಬೆರಕೆ ಮೋಸ ಎಲ್ಲವನ್ನು ಮಾಡುತ್ತೇನೆ. ಆದರೆ ದೇವರ ಹೆಸರು ಇರುವ ಕಾರಣ ಅದೇನು ಆಗೋದಿಲ್ಲ ಅನ್ನುವ ಧೈರ್ಯ ನನ್ನಲ್ಲಿದೆ. ಹಾಗೆಯೇ ನನ್ನ ಹುಟ್ಟಿದ ಒಂದಷ್ಟು ಸಮಯದಲ್ಲಿ ನನಗೊಂದು ಹೆಸರಿಟ್ಟಿದ್ದಾರೆ ಆ ಹೆಸರಿಗೂ ತುಂಬಾ ದೊಡ್ಡ ಅರ್ಥ ಇದೆ ನನ್ನ ಕೆಟ್ಟ ಆಲೋಚನೆಗಳು ಕೆಟ್ಟ ನಿರ್ಧಾರಗಳು ಕೆಟ್ಟ ಕೆಲಸಗಳು ಇವೆಲ್ಲವೂ ಆ ಹೆಸರಿಗೆ ಕಳಂಕ ಬರುವುದಿಲ್ಲ ಅಂತ ನಂಬಿದ್ದೇನೆ, ನಾಮ ಹಾಕುತ್ತೇನೆ, ಟೊಪ್ಪಿ ಧರಿಸುತ್ತೇನೆ, ಮಾಲೆ ಧರಿಸುತ್ತೇನೆ ಅದು ನನ್ನನ್ನು ಕಾಯುತ್ತದೆ ಎಂದು ನಂಬಿದ್ದೇನೆ, ಹಾಗೆ ಒಂದಷ್ಟು ಜನರಿಗೆ ನೋವು ಕೊಟ್ಟಿದ್ದೇನೆ. ಬೇಸರ ಮಾಡಿದ್ದೇನೆ. ಮೋಸ ಮಾಡಿದ್ದೇನೆ. ಹಾಗಿದ್ದಾಗ ನನ್ನ ಯೋಚನೆ ಏನು ಅಂತ ಅಂದ್ರೆ ದೇವರು ಕ್ಷಮಿಸ್ತಾನ ನಾನು ಮಾಡಿರುವ ತಪ್ಪುಗಳ ಲೆಕ್ಕಗಳ ಪಟ್ಟಿಯನ್ನು ಇನ್ನೊಂದುಷ್ಟು ದೃಢವಾಗಿ ಗಟ್ಟಿಯಾಗಿರಬಹುದಾ ಅಂತ. ನನಗೆ ಅನಿಸುತ್ತೆ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ ಅಲ್ವಾ ಹಾಗೆ ನನಗೂ ಜವಾಬ್ದಾರಿ ಇದೆ. ಹೆಸರಿಟ್ಟುಕೊಂಡಿದ್ದೇನೆ ಹೆಸರಿಟ್ಟು ಕೆಲಸ ಮಾಡುತ್ತಿದ್ದೇನೆ. ಅಥವಾ ಧರ್ಮದ ಒಳಗೆ ನಾನಿದ್ದೆನೋ, ಧರ್ಮವನ್ನು ನನ್ನೊಳಗೆ ಧರಿಸಿದ್ದೇನೂ. ಹೀಗಿರುವಾಗ ನಾನು ಧರ್ಮದಿಂದಲೇ ನಡೆಯಬೇಕಾದದ್ದು ಮುಖ್ಯ. ಆದರೆ ನಾನು ಹಾಗಿದ್ದೇನಾ ಅನ್ನುವ ಪ್ರಶ್ನೆಯನ್ನು ಮಾತ್ರ ಮತ್ತೆ ಮತ್ತೆ ಕೇಳಿಕೊಳ್ಳಲೇಬೇಕು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ