ಸ್ಟೇಟಸ್ ಕತೆಗಳು (ಭಾಗ ೮೩೩)- ಪಶ್ಚಾತ್ತಾಪ

ಸ್ಟೇಟಸ್ ಕತೆಗಳು (ಭಾಗ ೮೩೩)- ಪಶ್ಚಾತ್ತಾಪ

ಆಗಾಗ ತಡೆದುಕೊಳ್ಳಲಾರದಷ್ಟು ಹೊಟ್ಟೆ ನೋವು ಕಾಡುತ್ತಿತ್ತು. ವಿಪರೀತ ಯಾತನೆಯಲ್ಲಿ ಬದುಕುವುದೇ ಬೇಡ ಅನಿಸುತ್ತಿತ್ತು. ವೈದ್ಯರ ಬಳಿ ಕೇಳಿದಾಗ ಕಿಡ್ನಿ ಕೆಲಸ ಮಾಡ್ತಾ ಇಲ್ಲ ಅನ್ನೋ ಉತ್ತರ ಸಿಕ್ಕಿತು. ಬದುಕು ಸಾಗಿಸಲೇಬೇಕಿತ್ತು ಆಗ ತನ್ನ ಕಿಡ್ನಿಯನ್ನ ಕೊಟ್ಟು ಜೀವವನ್ನು ಉಳಿಸಿದವಳು ಅವನಮ್ಮ. ದಿನಗಳು ಉರುಳುತ್ತಾ ಹೋದ ಹಾಗೆ ಸುತ್ತಮುತ್ತಲಿನಿಂದ ಒಂದಷ್ಟು ಮಾತುಗಳು ಇವನ ಕಿವಿಯ ಮೂಲಕ ಮನಸ್ಸನ್ನು ತಲುಪಿತು. "ನೀನು ಅವರ ಸ್ವಂತ ಮಗ ಅಲ್ಲ ಎಲ್ಲಿಂದಲೋ ತಂದು ನಿನ್ನನ್ನು ಸಾಕೋದಕ್ಕೆ ಆರಂಭ ಮಾಡಿದ್ದಾಳೆ" 

ಬದುಕು ಕಟ್ಟಿಕೊಟ್ಟ ಅಮ್ಮನ ಮೇಲೆ ಪ್ರೀತಿಯಾಗದೆ ಆಕೆಯ ಮೇಲೆ ದ್ವೇಷ ಬೆಳೆಯುವುದಕ್ಕೆ ಪ್ರಾರಂಭವಾಗಿ ಆಕೆಯನ್ನ ದೂರ ಮಾಡ್ತಾ ಬಂದು ಬಿಟ್ಟ. ಕುಡಿತ ಜೂಜು ಕೆಟ್ಟ ಚಟಗಳಿಗೆ ಬಲಿಯಾಗಿ ಅಮ್ಮನ ಕಣ್ಣೀರಿಗೆ ಕಾರಣನಾದ. ಅಮ್ಮ ಬೇಡಿಕೊಂಡರೂ ಆತ ಬದಲಾಗುವ ಯಾವ ಸೂಚನೆಯನ್ನು ನೀಡಲಿಲ್ಲ. ಮನೆಗೆ ಬರುವುದನ್ನೇ ಮರೆತುಬಿಟ್ಟ. ಅಮ್ಮ ಆರೋಗ್ಯ ತಪ್ಪಿ ಆಸ್ಪತ್ರೆಯ ಒಳಗೆ ನರಳಾಡುತ್ತಿದ್ದರು ಮುಂದೆ  ಹೋಗುತ್ತಿದ್ದಾನೆ ವಿನಃ ಪಕ್ಕದಲ್ಲಿ ಕುಳಿತು ಕೈ ಹಿಡಿದು ಜೊತೆಗಿದ್ದೇನೆ ಅಮ್ಮ ಎಂದು ಹೇಳಲಿಲ್ಲ. ಸುತ್ತಮುತ್ತಲಿನವರ ಬೈಗುಳಗಳನ್ನ ಕೇಳಿ ಕೊನೆಗೆ ಅಮ್ಮನ ಬಳಿ ಬಂದು ಕುಳಿತಾಗ ಅಮ್ಮನ ಕಿಡ್ನಿಯು ಹಾಳಾಗಿ ಹೋಗಿತ್ತು. ಈತನೊಳಗಿನ ಕಿಡ್ಡಿ ತನ್ನಮ್ಮನದೆನ್ನುವ ಸಣ್ಣ ಅರಿವೂ ಆತನಿಗೆ ಇರಲಿಲ್ಲ. ಮಗ ಬರದಿರುವ ಯಾತನೆಯಲ್ಲಿಯೇ ಆಕೆ ಉಸಿರು ನಿಲ್ಲಿಸಿದ್ದಳು. ಜೀವನಪೂರ್ತಿ ಎದೆಯೊಳಗೆ ತಾನು ಮಾಡಿದ ತಪ್ಪಿನ ಪಶ್ಚಾತಾಪದ ಬೇಗ ಆತನನ್ನ ಸುಡುತ್ತಿದೆ. ಆತ ಚಿತೆಗಿಂತ ಮೊದಲೇ ಇಲ್ಲಿ ದಹಿಸುತ್ತಿದ್ದಾನೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ