ಸ್ಟೇಟಸ್ ಕತೆಗಳು (ಭಾಗ ೯೦೦)- ಪತ್ರ

ಪತ್ರವೊಂದು ಕಳುಹಿಸಿದ್ದೇನೆ. ನಿನ್ನ ಬಳಿಗೆ ಭಗವಂತ. ಕಳೆದ ಸಲವೂ ನಿನ್ನ ಉತ್ತರ ಸಿಕ್ಕಿತು. ಆದರೆ ನಾನು ಬರೆದ ಪತ್ರಗಳಿಗೆ ನೀನು ಉತ್ತರ ರೂಪದಲ್ಲಿ ಒಮ್ಮೆಯೂ ಪ್ರತಿ ಉತ್ತರ ಬರೆಯಲಿಲ್ಲ. ಆದರೆ ನನ್ನ ಯೋಚನೆ ಸಮಸ್ಯೆಗಳಿಗೆ ಪರಿಹಾರವನ್ನು ಆಗಾಗ ಬೇರೆ ಬೇರೆ ರೂಪದಲ್ಲಿ ನೀಡುತ್ತಾ ಬಂದಿದ್ದೀಯಾ. ಈ ಸಲದ ಪತ್ರದ ಉದ್ದೇಶವೇ ಬೇರೆ. ತುಂಬಾ ಭಯವೆನಿಸಿದೆ ಭಗವಂತ. ನಿನ್ನ ಕನಸಿನ ಊರು ನೀನು ಬಯಸಿದ ಹಾಗೇ ಇಲ್ಲ. ನಿನ್ನ ಮುಂದೆಯೇ ನಾಟಕವಾಡ್ತಾ ನಿನಗೇ ಪರಿಚಯವೇ ಸಿಗದ ಹಾಗೇ ಕೆಲಸ ಮಾಡುತ್ತಿದ್ದಾರೆ. ನೀನು ಅವತರಿಸುತ್ತೀ ಅಂತ ಹೇಳಿದ್ದಿ ತಾನೆ, ಅದು ಯಾವಾಗ ದೇವರೇ. ದಾರಿಯಲ್ಲಿ ಚಲಿಸುವ ತಂಗಿಯ ಮೇಲೆ ಆಸೀಡ್ ಸುರಿಯುತ್ತಿದ್ದಾರೆ, ಮನೆಗೆ ತೆರಳುತ್ತಿದ್ದವಳು ಅತ್ಯಾಚಾರವಾಗಿ ಕೊನೆ ಉಸಿರು ಎಳೆಯುತ್ತಿದ್ದಾಳೆ, ಹಣವಂತನ ಮೋಸ ವಂಚನೆಗಳು ಎಲ್ಲೂ ಯಾರಿಗೂ ತಿಳಿಯುತ್ತಿಲ್ಲ. ಯಾವನೋ ಮೋಸಗಾರ ನೀಡಿದ ಚಿನ್ನ ಕಿರೀಟ ಆಭರಣ ಎಲ್ಲವನ್ನ ನೀನ್ಯಾಕೆ ಧರಿಸಿಕೊಳ್ಳುತ್ತೀಯಾ. ಅನಾಥ ಆಶ್ರಮಗಳು ಹೆಚ್ಚಾಗುತ್ತಿವೆ, ವೃದ್ದಾಶ್ರಮಗಳು ಎತ್ತರ ಎತ್ತರ ಆಗುತ್ತಿವೆ. ನನ್ನ ಅಜ್ಜನ ಕತೆಯಲ್ಲಿದ್ದ ಊರು ಇಲ್ಲೆಲ್ಲೂ ಕಾಣುತ್ತಿಲ್ಲ. ದುಡ್ಡು ಮಾತ್ರ ಬದುಕಿನ ಮುಖ್ಯ ಭಾಗವಾಗಿದೆ. ಅದಕ್ಕೆ ಒಂಥರಾ ಭಯವೆನಿಸಿದೆ. ಪತ್ರ ಕಳುಹಿಸಿದ್ದೇನೆ. ನಿನ್ನ ಉತ್ತರದ ನಿರೀಕ್ಷೆಯಲ್ಲಿ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ