ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ

ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ

ದೂರದಲ್ಲಿ ನಿಂತ ಆತನ ಕಣ್ಣಾಲಿಗಳು ತುಂಬಿಕೊಂಡಿದ್ದವು. ಆತನಿಗೆ ೧೬ ವರ್ಷಗಳ ಹಿಂದಿನ ಘಟನೆಗಳು ಕಣ್ಣ ಮುಂದೆ ಹಾಗೆಯೇ ಹಾದುಹೋದವು. ಆ ದಿನ ಯಾರೂ ಕೊತೆ ಇರಲಿಲ್ಲ. ನೀನು ನಮ್ಮವನು, ನಿಮಗೆ ನಾವಿದ್ದೇವೆ ಅಂತ ಹೇಳಿಕೊಳ್ಳುವವರು ಯಾರೂ ಇರಲಿಲ್ಲ. ದೇವರು ಮತ್ತು ನಂಬಿದ ಗೆಳೆಯರು ಮಾತ್ರ ಸುತ್ತ ನಿಂತಿದ್ರು. ಆತ ಗಟ್ಟಿಯಾಗಿ ಕೈ ಹಿಡಿದಿದ್ದ, ಆಕೆಯೂ ನಂಬಿದಳು. ವರ್ಷಗಳೊಂದು ಉರುಳಿದ ಹಾಗೆ ಹೆರಿಗೆಯ ನೋವು ಆಕೆಯದು, ದೇವರಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸುವ ಮನಸ್ಸು ಒಂದೇ ಆತನದಾಗಿತ್ತು. ದೇವರು ನಗು ಬೀರಿದ್ದ. ಆಕೆ ಹುಟ್ಟಿದ್ಲು, ಜೀವನ ಬದಲಾಗಬಹುದು ಅಂದುಕೊಂಡರೆ ಅಂತಹ ಬದಲಾವಣೆ ಕಾಣಲೇ ಇಲ್ಲ. ದೂರದಲ್ಲಿದ್ದವರು ಇನ್ನೊಂದೆರಡು ಹೆಜ್ಜೆ ಹಿಂದೆ ಸರಿದರೇ ಹೊರತು ಮುಂದೆ ಹೆಜ್ಜೆ ಊರಲಿಲ್ಲ. ಮಗಳ ಹೆಸರು ಪ್ರಸಿದ್ಧವಾಗುವ ಲಕ್ಷಣಗಳು ಕಂಡು ಬಂದವು. ಆಕೆ ದೊಡ್ಡ ದೊಡ್ಡ ಹೆಜ್ಜೆಗಳ ನೀಡುತ್ತಾ ಹಲವರಿಗೆ ಆಪ್ತಳಾದಳು. ಆಕೆಯ ಸಾಧನೆಗಳು ಮಾತನಾಡಲಾರಂಬಿಸಿದವು. ಪುಟ್ಟ ಗ್ರಾಮದ ಹೆಸರು ಮೂರು ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟಕ್ಕೂ ತಲುಪಿತು. ಹೆಜ್ಜೆ ದೂರ ಇಟ್ಟವರು ದೊಡ್ದ ಹೆಜ್ಜೆಗಳೊಂದಿಗೆ ಹತ್ತಿರವಾದರು. ವರ್ಷ ೧೫ ಆದಾಗ ಜೊತೆ ನಿಂತು ನೀವು ನಮ್ಮವರು ಎಂದು ಅಪ್ಪಿಕೊಂಡರು. ಹಾಗಾಗಿ ಆತನಿಗೆ ಕಣ್ಣೀರು. ಇಷ್ಟು ವರ್ಷಗಳ ಸತತ ಕಾಯುವಿಕೆ ಇದೆಯಲ್ಲ ಅದು ಆತನೊಳಗೆ ಅದುಮಿಟ್ಟ ನೋವು ಕಣ್ಣೀರಾಗಿ ಹೊರಬಂದು ಆತನಿಗೆ ದ್ವೇಷವಿಲ್ಲ. ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎನ್ನುವ ನಂಬಿಕೆ ಮಾತ್ರ ಆತನೊಂದಿಗೆ. ಆತನ ಮೊಗದಲ್ಲಿ ನಗು. ಸುತ್ತ ನಿಂತವರಲ್ಲಿ ನಗು. ದ್ವೇಷವೆಲ್ಲಾ ಮಾಯವಾಗಿ ಪ್ರೀತಿ ಒಂದೇ ಬದುಕುಳಿದಿತ್ತು. ಆತ ಮಾತನಾಡದೇ ಅರ್ಥ ಮಾಡಿಸಿದ್ದ ಜಗತ್ತಿಗೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ