ಸ್ಟೇಟಸ್ ಕತೆಗಳು (ಭಾಗ ೯೨೪)- ಬಲಬೇಕು
ಅದ್ಯಾರೋ ದೊಡ್ಡವರೊಂದು ಕಡೆ ಹೇಳಿದ್ರು. ಗುರುತ್ವಾಕರ್ಷಣ ಬಲ ಇದ್ದರೆ ಸಾಕು, ಈ ನೆಲದ ಮೇಲೆ ಗಟ್ಟಿಯಾಗಿ ನಡೆಯಬಹುದು ಅಂತ. ಅದನ್ನೇ ನಂಬಿದ್ದೆ ನಾನು. ಅದು ಒಂದಷ್ಟು ಸಮಯದವರೆಗೆ ಆಗಬಹುದು. ಆದರೆ ಕಾಲಕ್ರಮೇಣ ಹೆಚ್ಚು ಸಮಯದವರೆಗೆ ಗಟ್ಟಿಯಾಗಿ ನಡೆಯಬೇಕು ಅಂತಂದ್ರೆ, ಗುರುತ್ವಾಕರ್ಷಣದ ಬಲವೊಂದು ಸಾಕಾಗುವುದಿಲ್ಲ, ನಮ್ಮ ಜೀವನದ ನೆನಪು ಮತ್ತು ಕನಸುಗಳ ಬಲವು ನಮ್ಮೊಂದಿಗೆ ಸೇರಿದಾಗ ಮಾತ್ರ ಹೆಜ್ಜೆಗಳನ್ನ ಗಟ್ಟಿಯಾಗಿಡಬಹುದು. ತುಂಬಾ ಸಮಯದವರೆಗೆ ಈ ನೆಲದ ಮೇಲೆ ನಿಲ್ಲಬಹುದು, ಸುತ್ತಮುತ್ತ ನಾವು ಕಂಡ ಕನಸುಗಳು ಮುಂದೆ ಸಾಗುವುದಕ್ಕೆ ಬೆನ್ನ ಹಿಂದಿನಿಂದ ತಳ್ಳುತ್ತಿರುವಾಗ, ಹಿಂದೆ ನಮ್ಮ ಜೀವನದಲ್ಲಿ ಆಗ ಎಲ್ಲ ನೆನಪುಗಳು ನಮ್ಮ ಹುಟ್ಟಿಗೊಂದು ಕಾರಣವನ್ನ ಹೇಳುತ್ತಿರುವಾಗ ನನಗೆ ಹೆಜ್ಜೆಯನ್ನು ಇಡಬಹುದು. ಗುರುತ್ವಾಕರ್ಷಣ ಬಲ ಈ ನೆಲದ ಮೇಲೆ ನಿಲ್ಲುವಂತೆ ಮಾಡುತ್ತದೆ ಆದರೆ ಬದುಕನ್ನ ನಿಲ್ಲುವಂತೆ ಮಾಡುವುದಕ್ಕೆ ನೆನಪು ಮತ್ತು ಕನಸುಗಳ ಬಲವು ಸ್ಥಿರವಾಗಿರಬೇಕು. ಆಗ ಈ ನೆಲದ ಮೇಲೆ ನಮ್ಮದು ಅನ್ನುವ ಗುರುತು ಸ್ಥಾಪಿತವಾಗುತ್ತದೆ. ನೀನಿದ್ದನ್ನ ಅರ್ಥ ಮಾಡ್ಕೊಂಡಾಗ ಮಾತ್ರ ನಿನ್ನ ಬದುಕು ಅದ್ಭುತವಾಗಿರುತ್ತದೆ. ಎಷ್ಟು ಸಲ ಹೇಳಿದರೂ ಕೇಳಿಕೊಂಡು ಮುಂದುವರಿಯುವುದನ್ನ ಬಿಟ್ಟು ಒಂದು ದಿನವೂ ನನ್ನ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಎಂದಿನಂತೆ ಇಂದೂ ಕೂಡ ಪಕ್ಕದ ಮನೆಯ ವಿಜ್ಞಾನ ಮೇಷ್ಟ್ರು ತುಂಬ ಜೋರಿನಲ್ಲಿ ಹೇಳಿ ಈ ದಿನ ನಾ ಮಾಡಿದ ಚಹಾವನ್ನು ಕುಡಿಯದೆ ಹಾಗೆ ಹೋಗಿಬಿಟ್ರು. ಇವತ್ತಾದ್ರೂ ಅವರ ಮಾತನ್ನ ಸ್ವಲ್ಪ ವಿಶೇಷವಾಗಿ ತೆಗೆದುಕೊಳ್ಳಬೇಕು ಅಂತ ಅನ್ನಿಸ್ತು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ