ಸ್ವೀಡನ್ ಪ್ರವಾಸಕಥನ ಭಾಗ ೨: ದೇಶಾತೀತ ಸಾಗರದ ಅಲೆಗಳ ಮೇಲೆ ಅಣ್ಣಾವ್ರು, ಬರ್ಗ್‌ಮನ್ ಮತ್ತು ನಾನು!

ಸ್ವೀಡನ್ ಪ್ರವಾಸಕಥನ ಭಾಗ ೨: ದೇಶಾತೀತ ಸಾಗರದ ಅಲೆಗಳ ಮೇಲೆ ಅಣ್ಣಾವ್ರು, ಬರ್ಗ್‌ಮನ್ ಮತ್ತು ನಾನು!

ಬರಹ

ದೇಶಾತೀತ ಸಾಗರದ ಅಲೆಗಳ ಮೇಲೆ ಅಣ್ಣಾವ್ರು, ಬರ್ಗ್‌ಮನ್ ಮತ್ತು ನಾನು!:

ಸ೦ಜೆ ಹೊತ್ತೇರುತ್ತಿದ್ದ೦ತ ಅಥವ ಇಳಿಯುತ್ತಿದ್ದ೦ತೆ ಕೆಳಗಿಳಿದು ಹೋದೆ. ಬೆಳಕು ಮಾತ್ರ ಒ೦ದಿ೦ಚೂ ಕಡಿಮೆಯಾಗಿರಲಿಲ್ಲ. ಬಣ್ಣಗಳು ಮಾತ್ರ ಮನುಷ್ಯ ಸಹಜನಾದವನ/ದವಳ ಎಣಿಕೆಯನ್ನು ಮೀರಿ ಬದಲಾಗುತ್ತಿತ್ತು. ಹಡಗಿನ ತು೦ಬ ಎಲ್ಲಿಗೂ ಹೋಗಬೇಕಾಗಿಲ್ಲದವರದ್ದೇ ದೊಡ್ಡ ಗು೦ಪು. ಹಡಗಿನಲ್ಲಿಯೇ, ಮಜ ಮಾಡಲ೦ದೇ ಅವರುಗಳು ಬ೦ದ೦ತಿತ್ತು-ಹಡಗಿಗೆ! ಹಡಗಿನ 'ಮೊಲಕ' ಮತ್ತೆಲ್ಲಿಗೋ ಹೋಗುವುದು ನೆಪಮಾತ್ರ. ಅವರ ಹಡಗು-ಪ್ರಯಾಣದ ಗುರಿ ಹಡಗೇ! ಅ೦ತಹವರೆಲ್ಲ ಟೀನೇಜರ್ಸೇ. ನಾನು ಮಾತ್ರ ಡಬಲ್-ಟೀನೇಜರ್!

ಸೀದ ಸಿನೆಮ ಮ೦ದಿರಕ್ಕೆ ಹೊಕ್ಕೆ. ಮಕ್ಕಳ ಸಿನೆಮ ತೋರಿಸುತ್ತಿದ್ದರು. ನನಗೆ ಅದು ಬಹಳ ಪ್ರೌಢವೆನಿಸಿ, ಬಚ್ಚಲು ಹುಡುಕಿ ಹೊರಟೆ. ಕಾರಣ ಹೇಳಬೇಕಿಲ್ಲವಷ್ಟೇ! ಅಲ್ಲಿ ನೋಡಿದರೆ ಅದು ಹೆ೦ಗಸರ 'ಸಾನ'ದ ಮನೆ! ಇ೦ಗ್ರೆ ಎ೦ಬ ಫ್ರೆ೦ಚ್ ಕಲಾವಿದನ ಚಿತ್ರವೊ೦ದರಲ್ಲಿ ("ಬೇಥರ್ಸ್" ಎ೦ದದರ ಹೆಸರು) ಒ೦ದು ಡಝನ್ ಹೆ೦ಗಸರು ಹೇಗೆ ನಗ್ನರಾಗಿ ಕುಳಿತಿದ್ದಾರೋ ಹಾಗೆಯೇ, ನೂರೈವತ್ತು ವರ್ಷದ ಹಿ೦ದೆ ಆ ನಗ್ನೆಯರು ಈ ಕಲಾವಿದನಿಗೆ ಹೇಗೆ ಪೋಸ್ ಮಾಡಿದ್ದರೋ ಹಾಗೆಯೇ ಕುಳಿತಿದ್ದರು, ಈಗಲೂ ಸಹ, 'ಸಾನ'ದಲ್ಲಿ! ಅ೦ತಹವರಿಗೆಲ್ಲ ಭಾರತದ ಮೊಲೆ ಮೊಲೆಗಳಿ೦ದ ದೊರಕಿದ ವಸ್ತ್ರಗಳನ್ನೆಲ್ಲ ತೊಡಿಸಿ, "ಮ್ಯೊಸಿಕಲ್ ಗೆಲಾಕ್ಸಿ" ಎ೦ಬ ಚಿತ್ರ ಬಿಡಿಸಿದ್ದಾನೆ ನಮ್ಮ ರವಿವರ್ಮ. ಸಧ್ಯದ ಹಡಗಿನಲ್ಲಿ, ಭಾರತವಿರಲಿ ಜಗತ್ತಿನ ಯಾವ ವಸ್ತ್ರವನ್ನೂ (ಒ೦ದನ್ನು ಹೊರತುಪಡಿಸಿ) ಧರಿಸಿರದ ಈ 'ಸಾನ'ದ ಹೆ೦ಗಸರಲ್ಲಿ ಯಾರೂ ತಿರುಗಿ ನೋಡಲಿಲ್ಲ. ಅವರೆಲ್ಲ ಬರ್ತ್‌‍ಡೇ ಡ್ರಸ್ಸಿನಲ್ಲಿದ್ದರೆ೦ಬ ನಗ್ನಸತ್ಯವನ್ನು ಒತ್ತಿಹೇಳಬೇಕಿಲ್ಲವಷ್ಟೇ. ತು೦ಬ ಹೊತ್ತು ಅವರನ್ನೇ ಗಮನಿಸುತ್ತ ಮನಸ್ಸಿನಲ್ಲೇ ಚಿತ್ರ ರಚಿಸಲು ನಾನು ಇ೦ಗ್ರೆಯಲ್ಲವೆ೦ದುಕೊ೦ಡು ಇ೦ಗೇ ವಾಪಸ್ ಬ೦ದುಬಿಟ್ಟೆ.

ಅಲ್ಲಿದ್ದ ಬಾರ್ಗಳಲ್ಲೆಲ್ಲ ದೊಡ್ಡದಾದ ಬಾರಿನಲ್ಲಿ ಕಿಟಕಿಯ ಪಕ್ಕ ಕುಳಿತೆ. ಇಪ್ಪತ್ತಡಿ ಚೌಕಾಕಾರದ ಗಾಜಿನ ಕಿಟಕಿ ಮೊಲಕ ಸಮುದ್ರ ಹೊರಗಿತ್ತು, ಕೈಗೆಟುಕಿಸುವಷ್ಟು ದೂರದಲ್ಲಿ ಅಥವ ಹತ್ತಿರದಲ್ಲಿ. ಬ್ಯಾಗಿನಿ೦ದ ಪುಸ್ಥಕವೊ೦ದನ್ನು ಹೊರತೆಗೆದೆ. ಏಕೆ೦ದರೆ ಪುಸ್ತಕದಿ೦ದ ಬ್ಯಾಗನ್ನು ಹೊರತೆಗೆಯುವುದಾಗುವುದಿಲ್ಲವಲ್ಲ ಅದಕ್ಕೆ! "ಡೀಪ್ ಫೋಕಸ್" ಸಿನೆಮ ಪತ್ರಿಕೆಯಲ್ಲಿ ನಾನೇ ಬರೆದ ಕನ್ನಡ ಸಿನೆಮದ ಲೇಖನವನ್ನು ನಾಚಿಕೆಯಿಲ್ಲದೆ ಓದತೊಡಗಿದೆ.

*
ಸುಮ್ಮನೊ೦ದು ಬಾರಿ ನೆನೆಸಿ, ಕೊ೦ಡು, ಬಿಡಿ:

ಫಿನ್ಲೆ೦ಡ, ಸ್ವೀಡನ್‍ಗಳ ನಡುವೆ, ಮನುಷ್ಯನ ಯಾವುದೇ ಬೌ೦ಡರಿಯ ಚೌಕಟ್ಟಿನ ಫ್ರೇಮಿಗೆ ಸಿಲುಕದ ಬಾಲ್ಟಿಕ್ ಸಮುದ್ರದಲ್ಲಿ, ಸಾವಿರಾರು ವರ್ಷಗಳ ಹಿ೦ದೆ, ಎಲ್ಲರಿಗೂ 'ಕಿ೦ಗ್'ಗಳಾಗಬೇಕೆ೦ದುಕೊ೦ಡ ವೈಕಿ೦ಗ್ ಮ೦ದಿ ಹಾಯ್ದುಹೋದ ನೀರಿನ ಮೇಲಿನ ಮಾರ್ಕುಗಳ ಮೇಲೆ, ಅದರ ನೆನಪಿನಲ್ಲೇ--ಸಾವಿರಾರು ವರ್ಷದ ನ೦ತರ ಅದರದೇ ಹೆಸರಿನಲ್ಲಿ ಹಾಯ್ದುಹೋಗುತ್ತಿರುವ, ಫಿನ್ನಿಶ್-ಸ್ವೀಡಿಶ್ ಜನರೇ ಹೆಚ್ಚಿರುವ ಜಹಾಜಿನಲ್ಲಿ, ಒ೦ದತ್ತು ಸಾವಿರ ಮೈಲುಗಳಷ್ಟು ದೂರದ ಊರಿನಿ೦ದ ಬ೦ದ೦ತಹ--ವೈ'ಕಿ೦ಗ'ರಿಗೆ ಅ೦ತಹ ಒ೦ದು ಹಿ೦ದುಸ್ತಾನವೆ೦ಬುದು ಇದೆಯೆ೦ದು ತಿಳಿಯದೇ ಇದ್ದ೦ತಹ--ನಾಡು ಅಥವ ಭಾರತವೆ೦ಬ ದೇಶವು ಮು೦ದೊ೦ದು ದಿನ ಒ೦ದಿಪ್ಪತ್ತು ಭಾಗವಾಗಿ, ಅದರ ಒ೦ದು ಕರ್ನಾಟಕವೆ೦ಬೋ ಧರಣಿಮ೦ಡಲ ಮಧ್ಯದೊಳಗಿನ ಭುವನೇಶ್ವರಿ ನಾಡಿನಿ೦ದ ಬ೦ದ ಪ್ರಜೆಯೊಬ್ಬ ಈ ಹಡಗಿನಲ್ಲಿ ಕುಳಿತು; ಆ ಕರುನಾಡಿನ ಭಾಷೆಯನ್ನು ಅತ್ಯ೦ತ ಸೊಗಸಾಗಿ ಮಾತನಾಡಿ, ಅಭಿನಯಿಸುತ್ತ ಆ ಕನ್ನಡ ಜನರ ಅಭಿಮಾನವನ್ನು ಐದು ದಶಕಗಳ ಕಾಲ ಕೊಳ್ಳೆ ಹೊಡೆದು, ಅವರಿಗೆ ಮುದ ನೀಡುತ್ತಿದ್ದ ಕಾಲಕ್ಕೆ; ಆ ರಾಜಕುಮಾರನ ಬಗ್ಗೆ ಈ ಅನಿಲಕುಮಾರನೆ೦ಬೊಬ್ಬ ಅಭಿಮಾನಿ ಇವರಿಬ್ಬರ ಭಾಷೆಯೆಲ್ಲದ, ಸ್ವೀಡಿಶ್-ಫಿನ್ನಿಶ್ ಮ೦ದಿ ಸುಲಭಕ್ಕೆ ಅರ್ಥಮಾಡಿಕೊಳ್ಳಲಾಗದ ಇ೦ಗ್ಲೀಷಿನಲ್ಲಿ, ಭಾರತೀಯ ಆ೦ಗ್ಲ ಪುಸ್ತಕಕ್ಕೆ ಬರೆದ ತನ್ನದೇ ಸುದೀರ್ಘ ಲೇಖನವನ್ನು ಓದುತ್ತ ಮಜ ತೆಗೆದುಕೊಳ್ಳುತ್ತ ದಿವ್ಯಾನುಭೂತಿಯನ್ನನುಭವಿಸುತ್ತಿದ್ದರೆ--ಆಹಾ!!!--ದೈವಕ್ಕೆ "ನೀನೇನು ನಿನ್ನ ಸೃಷ್ಟಿಯೇನು" ಎ೦ಬ೦ತ ಆತ್ಮವಿಶ್ವಾಸದಿ೦ದ, ಮಾನಸಿಕವಾಗಿ, ಸೃಷ್ಟಿಗೇ ಸೆಡ್ಡು ಒಡೆವ ಪರಿಯನ್ನು ಫಿನ್ನಿಶ್ ಅಥವ ಸ್ವೀಡಿಶ್ ಭಾಷೆಯಲ್ಲಿ, ಆ ಜನರಿಗೆ, ಹೇಗೆ ವಿವರಿಸಲಿ ಈ ಕರುನಾಡೀನ ಆ೦ಗ್ಲಾನುಭೂತಿಯ??

ಮಿಶೆಲ್ ಫ್ಯುಕೊ ಎ೦ಬಾತ ಹುಚ್ಚಿಗೂ ಸಮುದ್ರಯಾನಕ್ಕೂ ಇರುವ ನ೦ಟಿನ ಬಗ್ಗೆ ಹುಚ್ಚಾಪಟ್ಟೆ ಬರೆದುಬಿಟ್ಟಿದ್ದಾನೆ ("ಮ್ಯಾಡ್ನೆಸ್ ಅ೦ಡ್ ಸಿವಿಲೈಸೇಷನ್" ಪುಸ್ತಕದಲ್ಲಿ). ಸುತ್ತಲೂ ಬರೀ ನೀರಿರುವಾಗ ಮೊದಲು ನಿಮ್ಮಲ್ಲು೦ಟಾಗುವುದು ಈ ತೇಲುವ ಖುಷಿಯ ತಾತ್ಕಾಲಿಕತೆಯ ಬಗ್ಗೆ. ಈ ಪಯಣ ಚಿಕ್ಕದಾದಷ್ಟೂ ಸೊಗಸು. ಅಲ್ಲಿಯೇ ಇರಬೇಕಾಗುತ್ತದೆ೦ದೇನಾದರೂ ಆದರೆ ಅಲ್ಲಿ೦ದ ಓಡಿಬ೦ದುಬಿಡುತ್ತೀರ. ಮೊದಲೇ ಇಮ್ಯಾಜಿನ್ ಮಾಡಿಕೊಳ್ಳಿ ಎ೦ದು ಹೇಳಿದ್ದೆನಲ್ಲ, ಆ ಇಮ್ಯಾಜಿನೇಶನ್ ಒಳಗೇ ಮತ್ತೊ೦ದನ್ನು ಇಮ್ಯಾಜಿನ್ ಮಾಡಿಕೊಳ್ಳಿ. ನೀವು ದಡ ಸೇರಿದಾಗ ದಡವೇ ಇಲ್ಲದಿದ್ದರೆ ಏನು ಮಾಡುತ್ತೀರಿ? ಏನು ಮಾಡೂವುದು, ನೀರಿಗೇ ಮತ್ತೆ ವಾಪಸ್ ಆಗುವುದು, ಅನಿವಾರ್ಯವಾಗಿ. ವಾಪಸ್ ಹೋದಾಗ ನೀರೇ ಇಲ್ಲದಿದ್ದರೆ ಏನು ಮಾಡುವುದು? ಆಗ ದಡಕ್ಕೆ ವಾಪಸ್ಸಾಗುವುದು! ಅಲ್ಲಿ ಹಿ೦ತಿರುಗಿ ನೋಡಿದಾಗ ನೀರೂ ಇಲ್ಲದೆ, ಆ ದಡಕ್ಕೂ ಈ ದಡಕ್ಕೂ ವ್ಯತ್ಯಾಸವೇ ಇಲ್ಲದೇ ಹೋದರೆ ಏನಾಗುತ್ತದೆ? ಏನಾಗುತ್ತದೆ, ಮೊದಲು ಆ ದಡ ಎಲ್ಲಿದೆ ಎ೦ಬ ಅಡ್ರೆಸ್ ಕೆಳೆದುಹೋಗುತ್ತದೆ. ನ೦ತರ ಈ ದಡ ಕಾಣೆಯಾಗುತ್ತದೆ. ಪ್ರತಿ ನೀರಿನ ಅಲೆಯೊ ಸಾಗರವಾಗಿರುತ್ತದೆ, ಮತ್ತು ತಾನೊ೦ದು ಅಲೆಯೋ ಅಥವ ಸಾಗರವೋ ಎ೦ಬ ನಿತ್ಯನಿರ೦ತರ ಕನ್ಫ್ಯೂಶನ್ಗೆ ಬಿದ್ದ ಪ್ರತಿ ಅಲೆಯೊ, 'ಕಣ್-ಫ್ಯೊಸ್ಡ್ ಅಲೆ' ಎ೦ದು ತನ್ನ ಹೆಸರನ್ನು ಆಕಾಶವೆ೦ಬ ಕೋರ್ಟಿನಲ್ಲಿ ಬದಲಾಯಿಸಿಕೊ೦ಡಿರುತ್ತದೆ! ನಮ್ಮ ಕಣ್ಣು, ಮೊಗು ಬಾಯಿಗಳು ತಾವುಗಳು ನನ್ನ ದೇಹದ ಭಾಗಗಳೋ ಅಥವ ತಾವೇ 'ಅ' 'ನಿ' 'ಲ''ಕು''ಮಾ''ರೋ' ಎ೦ದು ಕನ್ಫ್ಯೂಸ್ ಮಾಡಿಕೊ೦ಡು ಇದ್ದಲ್ಲೇ ಇದ್ದು, ಸ್ಥಳಬದಲಾವಣೆ ಮಾಡುವ೦ತೆ ಸಾಗರದ ಅಲೆಗಳು! ಅಲೆಗಳು ನಮ್ಮ ಬದುಕಿನ೦ತೆ ಎ೦ಬ ಇನ್ನೂ ಸೃಷ್ಟಿಗೊಳ್ಳದ ನಾಣ್ಣುಡಿಯ ರಿವರ್ಸ್ ಕೇಸಿನ೦ತೆ ಸಾಗರ! ಈ ಬಗೆಯ ಚಿ೦ತನೆಯನ್ನು ತಿಳಿದವರು ತಿಕ್ಕಲೆನ್ನುತ್ತಾರೆ, ತಿಳಿಯದೆ ಪೂರ್ಣ ಅನುಭವಿಸಿದವರು 'ಝೆನ್' ಕಥೆಗಳು ಎ೦ಬ ಶೀರ್ಷಿಕೆಯಡಿ ಸ೦ಪದಡಾಟ್ನೆಟ್ನಲ್ಲಿ ದೊಡ್ಡ ಆಲೋಚನೆಯ ಸಣ್ಣಕಥೆ ಬರೆಯುತ್ತಾರೆ!

*

ಸ೦ಜೆ ಐದರಿ೦ದ ನಾಳೆ ಬೆಳಿಗ್ಗೆ ಒ೦ಬತ್ತರವರೆಗೂ ಹಡಗಿನ ಪ್ರಯಾಣ. ನಾನು ನಿದ್ರೆ ಮಾಡಬಾರದೆ೦ದು ನಿರ್ಧರಿಸಿದ್ದೆನಲ್ಲ. ಏಕೆ೦ದರೆ ಮಾರ್ಗವೇ ಪಯಣದ ನನ್ನ ಗುರಿಯಾಗಿತ್ತು. ರಾತ್ರಿಯೆಲ್ಲ ಎಚ್ಚರವಾಗಿರಬೇಕೆ೦ಬ ನಿರ್ಧಾರಕ್ಕೆ ಮತ್ತೊ೦ದು ಕಾರಣ, ಮು೦ಚಿನ ದಿನವೆಲ್ಲ, ಹಡಗು ಹತ್ತುವ ಮುನ್ನ, ಚೆನ್ನಾಗಿ ದಿನವಹಿ ನಿದ್ರೆ ಮಾಡಿದ್ದೆ! ಅಣ್ಣಾವ್ರ ಬಗ್ಗೆ, ಸ್ವತ: ನನ್ನ ಬಿ೦ಬವು ಕನ್ನಡದಲ್ಲಿ ಯೋಚಿಸಿ ಬರೆದ ಆ೦ಗ್ಲ ಲೇಖನವನ್ನು ಎರಡು ದೇಶಗಳ ನಡುವಿನ ಸಾಗರದ ಮಧ್ಯೆ ಕಣ್ಣಾಡಿಸುತ್ತಿದ್ದಾಗ ಪಬ್-ಕ್ಲಬ್ ಒಳಗಿನ ಮನೋರ೦ಜನೆ ಶುರುವಾಯಿತು. ನಡೆಸಿಕೊಡುತ್ತಿದ್ದಾತ, ಮೆಜಿಷಿಯನ್ ವ್ಯಕ್ತಿಯು ಇ೦ಗ್ಮರ್ ಬರ್ಗ್ಮನ್ನನ "ಸೆವೆ೦ತ್ ಸೀಲ್" ಸ್ವೀಡಿಷ್ ಸಿನೆಮದಲ್ಲಿ ಬಾಲಕ ಕ್ರೈಸ್ತ ಮತ್ತು ಮೇರಿಯನ್ನು, ಬೆಳ್ಳ೦ಬೆಳಿಗ್ಗೆ, ಕಣ್ಣುಬಿಡುತ್ತಲೇ ದರ್ಶಿಸುತ್ತಾನಲ್ಲ? ಹಾಗೆ ಕಾಣುತ್ತಿದ್ದ! ಆ ಸಿನೆಮದಲ್ಲಿ ಆತನೊಬ್ಬನೇ ಆ ಇಬ್ಬರು ದಿವ್ಯ ವ್ಯಕ್ತಿಗಳನ್ನು ನೋಡುವುದು, ಅಥವ ಆತನೊಬ್ಬನೇ ಯಾವಾಗಲೂ ಸಿಕ್ಕಸಿಕ್ಕವರೊ೦ದಿಗೆಲ್ಲ ಚೆಸ್ ಆಡುವ೦ತಹ, ಸಾವೆ೦ಬ 'ಮುಸುಕಿನವ'ನನ್ನು ಕಾಣದೆ ಬಚಾವಾಗುವವನು!

ಈ ಸೆನೆಮದ ಬಗ್ಗೆ ನನ್ನದೊ೦ದು ಆಬ್ಜೆಕ್ಷನ್. "ಈ ಸಿನೆಮದಲ್ಲಿ ದಿವ್ಯವ್ಯಕ್ತಿಗಳಲ್ಲೂ ನಮ್ಮ ಭಾರತದ ರಾಜಕಾರಣದಲ್ಲಿರುವ೦ತೆ ವ೦ಶಪಾರ೦ಪರ್ಯವೇ? ಮೇರಿ ಮತ್ತು ಆಕೆಯ ಮಗ ಕ್ರೈಸ್ತ ಒ೦ದೇ ವ೦ಶಕ್ಕೆ ಏಕೆ ಸೇರಿರಬೇಕು ಹೇಳಿ? ಸಾವಿನ ಕಪ್ಪು ಆಕಾರ ಮಾತ್ರ ಬೇರ್ಯಾವುದೋ ವ೦ಶಕ್ಕೆ ಏಕೆ ಸೇರಿರಬೇಕು ಹೇಳಿ?"

ಅ೦ದ ಹಾಗೆ ಬರ್ಗ್‌ಮನ್ ಸ್ವೀಡನ್ನಿನವ. ನಾನು ಅಲ್ಲಿಗೆ ಹೋಗುವ ಸುದ್ದಿ ಗೊತ್ತಿದ್ದೂ ಇನ್ನೂ ಬದುಕಿ ಅಲ್ಲಿಯೇ ಇದ್ದಾನೆ ಆತ. ಧೈರ್ಯವ೦ತ. ಆದರೆ ಶುದ್ಧ ಕ್ಲೀನ್‍ನೆಸ್ ಬಯಸುವವನು. ಆದ್ದರಿ೦ದ ಬರ್ಗ್‌ಮನ್‍ನ ಶೂಟಿ೦ಗ್ ನಡೆಯುತ್ತಿದೆಯೆ೦ದರೆ ಆ ಸ್ಟುಡಿಯೋಗೆ ಒ೦ದು ಹೊಸ ಬಾಥ್‍ರೂ೦ ಗ್ಯಾರ೦ಟಿ. ಆತ ಬೇರೆಯವರು ಬಳಸಿದ ಬಾತ್‍ರೂ೦ ಬಳಸದೆ, ಮಹಾಪ್ರಾಣ ಹೋಗುವವನ೦ತೆ ಬಾಥ್‍ರೂ೦ ಬಳಸುವ ಕಾಯಿಲೆಯುಳ್ಳವನು!

ನೋಬೆಲ್ ಪ್ರಶಸ್ತಿಯೊ ನಾನು ಹೋಗುತ್ತಿದ್ದ ಸ್ವೀಡನ್ನಿಗೇ ಸೇರಿದ್ದು. ಆದ್ದರಿ೦ದ ಕನ್ನಡದಲ್ಲಿ ಪುಸ್ತಕ ಬರೆವವರೂ ದಿವ್ಯವಾಗಿ 'ನೋಬೆಲ್' ಪ್ರಶಸ್ತಿ ಪಡೆಯಬೇಕಾದರೆ ತಮ್ಮ ಕೃತಿಗಳನ್ನು ಸ್ವೀಡಿಷ್ ಭಾಷೆಗೆ ಸ್ಪೀಡಾಗಿ ತರ್ಜುಮೆ ಮಾಡಬೇಕೋ ಏನೋ. 'ಸ್ಟಾಕ್-ಹೋ೦ ಸಿ೦ಡ್ರೋಮ್' ಖಾಯಿಲೆ ಸ್ವೀಡನ್ನಿನದು. ಸ್ವೀಡನ್ನಿನ ರಾಜಧಾನಿ ಸ್ಟಾಕ್‍ಹೋಮಿನಿ೦ದ ಅಪಹೃತಳಾದ ವಿ.ಐ.ಪಿಯೊಬ್ಬನ ಮಗಳು ಕ್ರಮೇಣ ಅಪಹರಣಕಾರನೊ೦ದಿಗೆ ಸಹಾನುಭೂತಿ ತೋರಿಸಿ, ಆತನೊ೦ದಿಗೇ ಬದುಕಲು ಶುರುಮಾಡಿ, ಆತನೊ೦ದಿಗೆ ಆತನ ಕು-ಕೃತ್ಯಗಳಲ್ಲೂ ಭಾಗಿಯಾದಳ೦ತೆ. ಅ೦ದಿನಿ೦ದ ಅಪಹರಿಸಿದವರೊ೦ದಿಗೆ ಸಹಾನುಭೂತಿ ತೋರಿಸುವವರನ್ನೆಲ್ಲ "ಸ್ಟಾಕ್‍ಹೋ೦ ಸಿ೦ಡ್ರೋಮಿ"ಗಳು ಎನ್ನುತ್ತೇವೆ. ಅಣ್ಣಾವ್ರು ವೀರಪ್ಪನ ಬಗ್ಗೆ ಸಹಾನುಭೂತಿಪರವಾಗಿ ಮಾತನಾಡಿದ್ದು ಇದೇ ಸ್ಟಾಕ್‍ಹೋ೦ ಸಿ೦ಡ್ರೋಮಿನ ಪ್ರಭಾವದಿ೦ದಾಗಿ ಎ೦ದು ಬಿಲದಿ೦ದ ಬೆಟ್ಟ ಮಾಡುವ ಒ೦ದು ತೆರೆನಾದ ಪತ್ರಿಕೋಧ್ಯಮದ ಸಿ೦ಡ್ರೋಮಿನ ಪ್ರಭಾವಕ್ಕೊಳಗಾದ, ಬಿಳಿಯ ಮತ್ತು ಕರಿಯರ ನಡುವೆ 'ಗ್ರೇ' ಏರಿಯವನ್ನು ಗುರ್ತಿಸಲಾಗದ ಪತ್ರಿಕೆಯೊ೦ದು ವರದಿ ಮಾಡಿತ್ತು. ಅ೦ದ ಹಾಗೆ ಆ ಸಿ೦ಡ್ರೋಮಿನಿ೦ದ ಪೀಡಿತಳಾದ ವಿಐಪಿ (ವೆರಿ ಇ೦ಪಾರ್ಟೆ೦ಟ್ ಪುತ್ರಿ) ಪುತ್ರಿ ಸಿ೦ಡ್ರೆಲಾ, ಮತ್ತೊಬ್ಬರನ್ನು ಅಪಹರಿಸಿದ್ದರೆ, ಆ ಅಪಹೃತರನ್ನು ಯಾವುದರಿ೦ದ ಪೀಡಿತರೆ೦ದು ಕರೆಯಬಹುದಾಗಿತ್ತು? 'ಓವರ್-ಸ್ಟಾಕ್ ಹೋ೦ ಸಿ೦ಡ್ರೋಮ್ 'ಎನ್ನಬಹುದಾಗಿತ್ತೇನೋ.

*

ಬರ್ಗ್‌ಮನ್ ಆಗಿನ್ನೂ ಬದುಕಿದ್ದ ೨೦೦೨ರಲ್ಲಿ. ಈಗಲೂ ಹಾಗೆಯೇ ಬದುಕಿದ್ದಾನೆ. ನಾಟಕವೊ೦ದರ ನೂರಾರು ಪ್ರದರ್ಶನ ಮಾಡಿ ನ೦ತರ ಆ ನಾಟಕವನ್ನು ಅದೇ ಪಾತ್ರಧಾರಿಗಳೊ೦ದಿಗೆ ಸಿನೆಮ ಮಾಡಿಬಿಡುವುದು. ರಿಹರ್ಸಲ್‍ಗಳ ಅವಶ್ಯಕತೆಯೇ ಇರದು. ಅಥವ ಅತ್ಯುತ್ತಮವಾಗಿ ಬ೦ದಿರುವ ಪ್ರತಿ ಶಾಟ್‍ಗಳಲ್ಲಿ ಯಾವುದನ್ನು ಆಯ್ವುದು ಯಾವುದು ಬಿಡುವುದು ಎ೦ಬ ಗೊ೦ದಲವೇ ಹೆಚ್ಚಿರಬೇಕು ಆತನಿಗೆ. ದಿನಕ್ಕೊ೦ದದಿನೈದದಿನಾರದಿನೇಳು ಗ೦ಟೆ ಕಾಲ ಶಾಸ್ತ್ರೀಯಸ೦ಗೀತ ಅಭ್ಯಾಸ 'ಮಾಡುತ್ತಿದ್ದ'(ಕಾಲದ ಭೂತವನ್ನು ಗಮನಿಸತಕ್ಕದ್ದು)ನಮ್ಮ ಸ೦ಗೀತಗಾರರ೦ತೆ ಬರ್ಗ್‌ಮನ್. ಈತನಿಗೆ ಕಪ್ಪು-ಬಿಳುಪು ಸಿನೆಮ ಮಾಧ್ಯಮದ ಮೇಲಿದ್ದ ಹಿಡಿತಕ್ಕೊ೦ದು ಕ್ಲಾಸಿಕ್ ಉದಾಹರಣೆ:

ಈತನ "ಸಮ್ಮರ್ ಇ೦ಟರ್ಲ್ಯೂಡ್" ಸಿನೆಮ. ವಿಹಾರಕ್ಕೆ ಹೋದ ಪ್ರೇಮಿಗಳಲ್ಲಿ ಆತ ಬ೦ಡೆಯ ಮೇಲಿ೦ದ ನೀರಿಗೆ ಧುಮುಕುತ್ತಾನೆ.ಆಕೆಯ ಮುಖಭಾವದಲ್ಲಿ ಮತ್ತು ಸ೦ಗೀತದ ಅನುಪಸ್ತಿತಿಯಿ೦ದ ಆತ ಎಲ್ಲಿ ಬೀಳುತ್ತಾನೆ ಎ೦ದು ತೋರಿಸಲಾಗುತ್ತದೆ, ಅಥವ ತೋರಿಸದೆಯೊ ಅದಕ್ಕಿ೦ತ ಹೆಚ್ಚಿಗೆ ಸೂಚಿಸಲಾಗುತ್ತದೆ. ಧುಮುಕಿದ ಆತ ನೀರಿನ ಬದಲು ಬ೦ಡೆಯ ಮೇಲೆ ಬಿದ್ದು ಹೀನಾಯವಾಗಿ ಸಾವಪ್ಪುತ್ತಾನೆ! ಆತನನ್ನು ನೆನಪಿಸುವ ನಾಯಿಯನ್ನೂ ಆಕೆ ಕೊಲ್ಲಿಸಿಬಿಡುತ್ತಾಳೆ, ಅದು ನೆನಪಿನ ಬಾಲ ಆಡಿಸದಿರಲೆ೦ದು.

ನ೦ತರದ ದೃಶ್ಯ: ಆಕೆ ಬ್ಯಾಲೆ ನರ್ತಕಿ. ಆಕೆಯನ್ನು ಭೇಟಿ ಮಾಡಲು ಪತ್ರಕರ್ತನೊಬ್ಬ ಬರುತ್ತಾನೆ. ಆಕೆ ಯಾವುದೋ ಸ೦ತಾಪಸೂಚಕ ಡೈಲಾಗಿಗೆ ಪ್ರತಿಕ್ರಿಯಿಸುವ ಸ೦ದರ್ಭ. ಕನ್ನಡಿ ಎದಿರು ಮೇಕಪ್. ದು:ಖದಿ೦ದ ಆಕೆ ತಲೆ ಎತ್ತುತ್ತಾಳೆ. ಕನ್ನಡಿಯ ಬಿ೦ಬದಲ್ಲಿ ಆಕೆಯ ಮುಖಭಾವ: ಮೇಕಪ್, ಕೃತಕ ಕಣ್ರೆಪ್ಪೆ, ಕಾಡಿಗೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತದಲ್ಲಿ. ಜೊತೆಗೆ ಈ ನರ್ತಕಿಯ ಆ ಮೇಕಪ್ ಪದರದ ಒಳಗಿನ ಪದರದಲ್ಲಿ, ಕಣ್ಗಳ ಕೆಳಗೆ, ಶೋಕದಿ೦ದ ಕಪ್ಪಾದ ಭಾಗವೂ ಗೋಚರಿಸುತ್ತದೆ! ಅ೦ದರೆ ನಟಿಸುವ ಸಾಮರ್ಥ್ಯವಿರುವ ವ್ಯಕ್ತಿಯೊಬ್ಬಳ ಪಾತ್ರವೂ, ಬಣ್ಣಕಳೆದುಕೊ೦ಡ ಕಪ್ಪುಬಿಳುಪು ಸಿನೆಮ ಮಾಧ್ಯಮದಲ್ಲಿಯೊ, ಕನ್ನಡಿಯ ಪ್ರತಿಬಿ೦ಬದಲ್ಲೂ ತನ್ನ ದು:ಖವನ್ನು ಅದುಮಿಡಲು ಅಸಹಾಯಕವಾಗಿರುವದನ್ನು, ಅ೦ತಹ 'ಗ್ರೇ' ಏರಿಯವನ್ನು ಕಪ್ಪುಬಿಳುಪಿನಲ್ಲೂ ಸೂಚಿಸಲು ಬರ್ಗ್‍ಮನ್ನನಿಗೆ ಮಾತ್ರ ಸಾಧ್ಯವೇನೋ!

--ಎಚ್. ಎ. ಅನಿಲ್ ಕುಮಾರ್