ಹಣ್ಣು ತಿಂದ ಮಂಗ
ಒಂದು ಮಂಗ ಕಲ್ಲಂಗಡಿ ಹೊಲಕ್ಕೆ ಬಂತು. ಅಲ್ಲಿನ ಕಲ್ಲಂಗಡಿ ಹಣ್ಣುಗಳು ಆಕರ್ಷಕವಾಗಿದ್ದವು. ಹಾಗಾಗಿ, ತಿನ್ನಲಿಕ್ಕಾಗಿ ಒಂದು ಕಲ್ಲಂಗಡಿ ಹಣ್ಣನ್ನು ಎತ್ತಿಕೊಂಡಿತು ಮಂಗ.
ಹತ್ತಿರದಲ್ಲಿದ್ದ ಎತ್ತು ಇದನ್ನು ಕಂಡು ಹೇಳಿತು, “ಕಲ್ಲಂಗಡಿ ಹಣ್ಣು ಹೇಗೆ ತಿನ್ನಬೇಕೆಂದು ನಿನಗೆ ಗೊತ್ತಿರಲಿಕ್ಕಿಲ್ಲ. ನಾನು ಹೇಳುತ್ತೇನೆ.”
“ನೀನು ಸುಮ್ಮನಿರು! ನಿನಗ್ಯಾಕೆ ಬೇಡದ ಉಸಾಬರಿ?’ ಎನ್ನುತ್ತಾ ಮಂಗ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಕಚ್ಚಿತು. ತಕ್ಷಣವೇ ಅದು ಹಣ್ಣನ್ನು ನೆಲಕ್ಕೆ ಬಿಸಾಡಿತು. "ಛೇ, ಇದಕ್ಕೆ ರುಚಿಯೇ ಇಲ್ಲ” ಎಂದಿತು ಮಂಗ.
ಆಗ ಕಲ್ಲಂಗಡಿ ಹಣ್ಣಿನ ತಿರುಳನ್ನು ಮಂಗ ತಿನ್ನಬೇಕಾಗಿತ್ತು ಎಂದು ಎತ್ತು ಹೇಳಿತು. “ಗೊತ್ತಿದೆ, ನನಗೆ ಗೊತ್ತಿದೆ. ಹಣ್ಣುಗಳ ಸಿಪ್ಪೆಯ ಬದಲಾಗಿ ತಿರುಳನ್ನು ತಿನ್ನಬೇಕು” ಎಂದಿತು ಮಂಗ.
ಅನಂತರ ಮಂಗ ಕರಬೂಜದ ಹೊಲಕ್ಕೆ ಬಂತು. ಒಂದು ಕರಬೂಜವನ್ನು ಒಡೆದು, ಅದರ ತಿರುಳನ್ನು ತೆಗೆದು, ತನ್ನ ಬಾಯಿಗೆ ಸ್ವಲ್ಪ ಹಾಕಿಕೊಂಡಿತು. ಆಗ ಹತ್ತಿರದಲ್ಲಿದ್ದ ಕತ್ತೆಯೊಂದು ಇದನ್ನು ನೋಡಿ, “ನೀನು ಕರಬೂಜದ ತಿರುಳಿನ ಬದಲಾಗಿ ಸಿಪ್ಪೆಯನ್ನು ತಿನ್ನಬೇಕಾಗಿತ್ತು” ಎಂದು ಹೇಳಿತು.
ಬಾಯಿಯಲ್ಲಿದ್ದ ಕರಬೂಜದ ತಿರುಳು ಮತ್ತು ಬೀಜಗಳನ್ನು ಉಗುಳಿದ ಮಂಗ ಅದರ ಸಿಪ್ಪೆಯನ್ನು ಬಿಸಾಡಿತು. "ಈಗ ನನಗೆ ಗೊತ್ತಾಯಿತು. ಕರಬೂಜದ ತಿರುಳನ್ನಲ್ಲ, ಸಿಪ್ಪೆ ತಿನ್ನಬೇಕು” ಎನ್ನುತ್ತಾ ಮಂಗ ಅಲ್ಲಿಂದ ಹೊರಟಿತು.
ಅನಂತರ, ಹತ್ತಿರದ ವಾಲ್ನಟ್ ಮರವನ್ನು ಹತ್ತಿದ ಮಂಗ ಒಂದು ಹಸುರು ವಾಲ್ನಟ್ ಕಿತ್ತಿತು. ಆಗ ಅಲ್ಲಿದ್ದ ಮ್ಯಾಗ್ಪೈ ಹಕ್ಕಿ ಕೂಗಿತು, “ಏ, ಅದನ್ನು ತಿನ್ನುವಾಗ ಜಾಗ್ರತೆ." ಮಂಗ ಉಡಾಫೆಯಿಂದ ಉತ್ತರಿಸಿತು, “ನಿನ್ನ ಕೆಲಸ ನೀನು ನೋಡಿಕೋ. ನನಗೆ ಗೊತ್ತಿದೆ, ವಾಲ್ನಟ್ಟಿನ ಸಿಪ್ಪೆ ತಿನ್ನಬೇಕು.” ಹಸುರು ಸಿಪ್ಪೆಯನ್ನು ಕಚ್ಚಿತು ಮಂಗ. ಅದು ಕಹಿಕಹಿಯಾಗಿತ್ತು. ಅದು ಎಷ್ಟು ಕಹಿಯಾಗಿತ್ತು ಎಂದರೆ, ಮಂಗ ಹತ್ತಿರದ ನದಿಗೆ ಹೋಗಿ, ನದಿ ನೀರಿನಲ್ಲಿ ಬಾಯಿ ತೊಳೆದುಕೊಳ್ಳ ಬೇಕಾಯಿತು.
ಅಷ್ಟರಲ್ಲಿ ಅಲ್ಲಿಗೆ ಹಾರಿ ಬಂದ ಮ್ಯಾಗ್ಪೈ ಹಕ್ಕಿ ಹೇಳಿತು, "ನಿನಗೆ ಗೊತ್ತಿಲ್ಲವೇನು? ನೀನು ವಾಲ್ನಟ್ಟಿನ ಸಿಪ್ಪೆಯ ಒಳಗಿನ ತಿರುಳು ತಿನ್ನಬೇಕಾಗಿತ್ತು.”
ಈಗ ಮಂಗಕ್ಕೆ ಚೆನ್ನಾಗಿ ಅರ್ಥವಾಯಿತು. ಅಲ್ಲಿಂದ ಮಂಗ ಒಂದು ಪಿಯರ್ ಮರ ಹತ್ತಿ ಒಂದು ಹಣ್ಣು ಕಿತ್ತಿತು. ಅದನ್ನು ಒಡೆದು, ಅದರೊಳಗಿದ್ದ ಬೀಜವನ್ನು ಬಾಯಿಗೆ ಹಾಕಿಕೊಂಡಿತು. ಓ, ಇದು ಕೂಡ ಎಷ್ಟು ಕೆಟ್ಟ ರುಚಿ ಎಂದರೆ ಮಂಗ ಅದನ್ನು ಉಗುಳಬೇಕಾಯಿತು.
ಪಿಯರ್ ಹಣ್ಣನ್ನು ಪಕ್ಕದಲ್ಲಿದ್ದ ಹೊಂಡಕ್ಕೆ ಎಸೆಯಿತು ಮಂಗ. ಅಲ್ಲಿಂದ ಜಿಗಿದು ಹೋಗುತ್ತಾ ಮಂಗ ಕೂಗಿ ಹೇಳಿತು, “ಇವೆಲ್ಲ ಹಣ್ಣುಗಳು ಚೆನ್ನಾಗಿಯೇ ಇಲ್ಲ. ಕಲ್ಲಂಗಡಿ, ಕರಬೂಜ, ವಾಲ್ನಟ್, ಪಿಯರ್ - ಇದು ಯಾವುದರ ರುಚಿಯೂ ಚೆನ್ನಾಗಿಲ್ಲ. ಸಾಕಾಯಿತು ನನಗೆ, ಇನ್ನು ಮುಂದೆ ನಾನು ಯಾವುದೇ ಹಣ್ಣು ತಿನ್ನುವುದಿಲ್ಲ."
ಪುಟ್ಟ ಮಂಗ ಏನು ತಪ್ಪು ಮಾಡಿತೆಂದು ಹೇಳುವಿರಾ?
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ: ರೀಡ್ ಮಿ ಎ ಸ್ಟೋರಿ
ಚಿತ್ರಕಾರ: ವು ಡೈಶೆಂಗ್