ಹಾಗೇ ಸುಮ್ಮನೇ...!

ಹಾಗೇ ಸುಮ್ಮನೇ...!

*ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ. ಅದು ಉಪ್ಪನ್ನು ಹೀರ್ಕೊಳುತ್ತೆ.*

ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ, ಸಾಲದ ಹೊರೆಯೇರಿದಾಗ ತೀರ್ಸೋಕೆ.

 

*ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ.*

ದುಃಖದಿಂದ ಕಣ್ಣೀರು ಬಂದಾಗ, ನೀರು ಕುಡಿದು ಜೋರಾಗಿ ನಕ್ಕರೆ ಕಣ್ಣೀರು ಕಾಣೋಲ್ಲ

 

*ಎಷ್ಟೊತ್ತಾದರೂ ಕುಕ್ಕರ್ ಕೂಗ್ತಾ ಇಲ್ಲ ಅಂದ್ರೆ ಒಳಗೆ ತಳ ಹಿಡೀತಿದೆ ಅಂತ ಅರ್ಥ*

ಏನ್ ಕೇಳಿದ್ರೂ ಹೆಂಡ್ತಿ ಮೌನವಾಗಿದಾಳೆ ಅಂದ್ರೆ ಒಳಗೆ ಉರೀತಿದೆ ಅಂತ ಅರ್ಥ.

 

*ಬೇಳೆ  ಬೇಯೋಕೆ ಚಿಟಿಕೆ ಅರಿಶಿನ, ಮಿಳ್ಳೆ ಎಣ್ಣೆ ಸಹಕಾರಿ.*

ಬದುಕು ಅಂದಗಾಣಿಸೋಕೆ ಹಿಡಿಯಷ್ಟು ಪ್ರೀತಿ, ಮುಷ್ಟಿಯಷ್ಟು ಕಾಳಜಿ ಸಹಕಾರಿ.

 

*ಹಿಟ್ಟು ಚೆನ್ನಾಗಿ ನಾದಿದರೆ ಜೋಳದ ರೊಟ್ಟಿ  ಹರಿಯೋಲ್ಲ ಹೇಗೆ ತಟ್ಟಿದರೂ*

ಸಂಬಂಧಗಳೂ ಹಾಗೇನೆ, ನಾದಿ ಹದವಾಗಿದ್ದರೆ ತಟ್ಟಿದರೂ, ಲಟ್ಟಿಸಿದರೂ, ಬಿಸಿ ಮೇಲೆ ಬೇಯಿಸಿದರೂ ಹರಿಯೋಲ್ಲ .

 

*ಅಲಸಂದೆ, ಹುರುಳಿ, ಹೆಸರಿನಂತಹ ಕಾಳುಗಳನ್ನು ನೀರಿಗೆ ಹಾಕಿದಾಗ ಜೊಳ್ಳು ಕಾಳುಗಳು ತೇಲುತ್ತದೆ*

ಗೆಳೆಯರೂ ಹಾಗೇ ಅಲ್ವಾ, ನಾವು ತಾಪತ್ರಯದ ನೀರಿಗೆ ಬಿದ್ದಾಗ ಜೊಳ್ಯಾರು, ಗಟ್ಟಿ ಯಾರು ಅಂತ ಗೊತ್ತಾಗತ್ತೆ.

 

*ಕಾಫಿ ಬಟ್ಟಲು ಖಾಲಿಯಾಗಿ ಕೊನೇಲಿ ಉಳಿಯೋ ಕಾಫಿ ಬಸಿಯೋಕೆ ತುಂಬ ರುಚಿ*

ಗಳಿಸಿದ್ದ ಗೆಳೆತನ,ಪ್ರೀತಿ,  ಆಸ್ತಿನೂ ಹಾಗೇ ಕಳ್ದೋಗುತ್ತೆ ಅನ್ನೋವಾಗ ನಂಟಿನ ಅಂಟು ಜಾಸ್ತಿಯಾಗುತ್ತೆ.

 

*ಅಗ್ಗಿಷ್ಟಿಕೇಲಿ ಅಡುಗೆ ಮಾಡೋವಾಗ ಪಾತ್ರೆ ತಳಕ್ಕೆ ಬೂದೀನೋ ಅಕ್ಕಿಹಿಟ್ಟೋ ಹಚ್ತೀವಿ ಪಾತ್ರೆ ಮಸಿ  ಹಿಡೀದಿರ್ಲಿ ಅಂತ*

ಅನವಶ್ಯಕ ನಿಂದನೆಗಳಿಗೂ ಹಾಗೇ, ನಿರ್ಲಕ್ಷ್ಯ ದ ಕೋಟಿಂಗ್ ಮಾಡಿಬಿಡಬೇಕು. ನೋವು ಅಂಟೋಲ್ಲ, ಅಂಟಿದರೂ ಕೊಡವಿದರೆ ಉದುರಿಹೋಗುತ್ತೆ..

 

*ಸಾರು ಹುಳಿ ಕುದ್ಯೋವಾಗ  ಚೂರು ಬೆಲ್ಲ  ಹಾಕ್ತೀವಿ ಘಾಟು ಹೋಗೋಕೆ*

ದಾಂಪತ್ಯದಲ್ಲೂ ತುಸು ಸೈರಣೆ ಬೆರೆಸಿ, ಕಲಹದ ಘಾಟು ತಡ್ಯೋಕೆ.

 

*ಹಾಲು ಒಡೆದರೆ ಸಂಸ್ಕರಿಸಿ ಖೋವಾನೋ ಪನೀರನ್ನೋ ಮಾಡಬಹುದು.*

ಸಂಬಂಧ ಒಡೆದರೆ ಹೀಗ್ಮಾಡೋಕಾಗೋಲ್ಲ. ಜೋಪಾನ.. 

 

*ಕಾದ ಎಣ್ಣೆಗೆ ಸಣ್ಣ ಹನಿ ನೀರು ಸಿಡಿದ್ರೂ ಚಟಪಟ ಚಟಪಟ ಅಂತ ಬೈಯುತ್ತೆ...*

ನೊಂದ ಮನಸ್ಸೂ ಹಾಗೇನೆ ಸಣ್ಣ ಸಣ್ಣ ಮಾತಿಗೆಲ್ಲ ಸಿಡಿದೇಳತ್ತೆ.

 

*ಮಾಡಿಟ್ಟ ಅಡುಗೇಲಿ ಪದೇ ಪದೇ ಕೈಯಾಡಿಸ್ತಾ ಇದ್ರೆ, ಬೇಗ ಹಳಸೋಗತ್ತೆ...*

ಹಳೇ ವಿಚಾರಗಳನ್ನು ಪದೇ ಪದೇ ಕೆದಕ್ತಾ ಇದ್ರೂ ಅಷ್ಟೇ, ಸಂಬಂಧ ಹಳಸುತ್ತೆ.

 

*ಫ್ರಿಡ್ಜಲ್ಲಿಟ್ಟ ಹಲಸಿನ ತೊಳೆ, ಅಲ್ಲಿರೋ ಎಲ್ಲ ವಸ್ತುವಿನೊಳಗೂ ತನ್ನ ಸುವಾಸನೆ ಸೇರಿಸಿಬಿಡುತ್ತೆ.*

 ಸಹೃದಯರೂ ಹಾಗೇ ಅಲ್ವಾ, ತಾವಿರೋ ತಾವಿನಲ್ಲೆಲ್ಲ ಸಜ್ಜನಿಕೆ  ಹರಡ್ತಾರೆ..

 

*ಸಿಹಿ ತಿಂಡಿ ಮಧುಮೇಹ ಹೆಚ್ಚು ಮಾಡುತ್ತೆ* *ಕಹಿ ಹಾಗಲ,ಮೆಂತ್ಯ, ಅಮೃತ ಬಳ್ಳಿ ಈ ರೋಗಕ್ಕೆ ಔಷಧಿಯಂತೆ*

ಕೆಲವರ ಮಾತುಗಳೂ ಹಾಗೇನೇ, ಸಿಹಿಯಲ್ಲಿ ಕುಟಿಲತೆ, ಕಹಿಯಲ್ಲಿ ಕಾಳಜಿ.

 

*ಮೊಸರನ್ನ ಉಪ್ಪಿನ ಕಾಯಿ, ಊಟ ಮುಗಿಸಿ ತಟ್ಟೆ ಬಳಿದು ಕೈ ಬೆರಳುಗಳನ್ನು ಸಂಕೋಚವಿಲ್ಲದೇ ನೆಕ್ಕಬೇಕು..*

ಬದುಕನ್ನೂ ಹಾಗೇ,ಸಣ್ಣ ಸಣ್ಣ ಖುಷಿ ಅನುಭವಿಸುತ್ತಾ ಬದುಕಬೇಕು.

 

*ಲೈಫ್ ಈಸ್ ಬ್ಯುಟಿಫುಲ್ BUT ನಾವು ಹೇಗೆ ಸ್ವೀಕಾರ ಮಾಡ್ತೀವಿ ಅನ್ನೋದರ  ಮೇಲೆ ಅವಲಂಬಿಸಿದೆ*

 

-ಹಾ ಮ ಸತೀಶ್ (ಸಂಗ್ರಹ)