ಹಾರ್ಡ್‌ಡಿಸ್ಕ್ ಇಲ್ಲದಾಗಲೂ ಕಂಪ್ಯೂಟರ್ ಬಳಸಿ!

ಹಾರ್ಡ್‌ಡಿಸ್ಕ್ ಇಲ್ಲದಾಗಲೂ ಕಂಪ್ಯೂಟರ್ ಬಳಸಿ!

ಬರಹ

mandriva
    ನಿಮ್ಮ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಕೆಟ್ಟಿದೆಯೇ? ಅದನ್ನು ಬದಲಾಯಿಸಲು ಸಮಯ ಸಿಕ್ಕಿಲ್ಲವೇ? ಇಂತಹ ಸಂದರ್ಭದಲ್ಲಿ ಕಂಪ್ಯೂಟರ್ ಬಳಸಲು ಸಾಧ್ಯವೆಂದರೆ ಅಚ್ಚರಿಯಾಯಿತೇ?ತಮಾಷೆಯಲ್ಲ,ಇದು ಸಾಧ್ಯ!ಅದಕ್ಕೆ ಬೇಕಾದುದು, ಲಿನಕ್ಸ್ ಕಂಪ್ಯೂಟರ್ ನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಲೈವ್ ಸಿಡಿ. ಉಬುಂಟು,ಮ್ಯಾಂಡ್ರಿವ,ಫೆಡೋರಾ ಹೀಗೆ ಹಲವು ಲಿನಕ್ಸ್ ವಿತರಣೆಗಳ ಸಿಡಿಗಳಲ್ಲಿ ಲೈವ್ ಸಿಡಿಯಾಗಿ ಬಳಸುವ ಆಯ್ಕೆ ಲಭ್ಯವಿರುತ್ತದೆ.ಆಗ ಸಿಡಿಯಿಂದಲೇ ಕಂಪ್ಯೂಟರ್ ಬೂಟ್ ಆಗುತ್ತದೆ. ಒಮ್ಮೆ ಸಿಡಿಯಿಂದ ಬೂಟ್ ಆದರೆ, ಕಂಪ್ಯೂಟರಿನ ರಾಮ್(RAM) ಸ್ಮರಣಕೋಶದ ಸಹಾಯದಿಂದಲೇ ಕಂಪ್ಯೂಟರ್ ಕೆಲಸ ಮಾಡುತ್ತದೆ. ಹಾರ್ಡ್‌ಡಿಸ್ಕ್ ಸರಿಯಿದ್ದರೆ, ಹಾರ್ಡ್‌ಡಿಸ್ಕ್ ಬಳಸಲೂ ಬಹುದು. ಹಾಗಿಲ್ಲದೆ, ಹಾರ್ಡ್‌ಡಿಸ್ಕ್ ಸರಿಯಿಲ್ಲವೆಂಬ ಕಾರಣಕ್ಕೆ ಲೈವ್ ಸಿಡಿ ಬಳಸುತ್ತಿದ್ದರೆ, ಅಂತರ್ಜಾಲ ಜಾಲಾಟ ಮಾಡಲಡ್ಡಿಯಿಲ್ಲ. ನಿಮ್ಮ ಮೆಚ್ಚಿನ ತಾಣಗಳ ಭೇಟಿ,ಮಿಂಚಂಚೆ ಕಳುಹಿಸುವುದು ಇತ್ಯಾದಿ ಕೆಲಸವನ್ನು ನಿರಾತಂಕವಾಗಿ ಮಾಡಬಹುದು. ಹಾಗೆಯೇ ಗೂಗಲ್ ಮತ್ತಿತರ ಸೇವೆ ಬಳಸಿ, ಆನ್‌ಲೈನಿನಲ್ಲೇ ಪದಸಂಸ್ಕರಣೆ,ಸ್ಪ್ರೆಡ್‌ಶೀಟ್ ಮುಂತಾದ ತಂತ್ರಾಂಶಗಳನ್ನು ಬಳಸಿ,ನಿಮ್ಮ ಬರವಣಿಗೆಯಂತಹ ಕೆಲಸಗಳನ್ನು ಮಾಡಬಹುದು. ಅವನ್ನು ಉಳಿಸಬೇಕಾದರೆ,ಹೇಗೂ ಅಂತರ್ಜಾಲದಲ್ಲಿ ನಿಮ್ಮ ಕಡತಗಳನ್ನುಳಿಸುವ www.mediafire.com ತೆರನ ಸೇವೆಗಳಿವೆ.ಇಲ್ಲವೇ ಪೆನ್‌ಡ್ರೈವ್‌ನಲ್ಲೂ ಉಳಿಸಲು ಅವಕಾಶವಿದೆ.

-------------------------------------------------------------
ಟೆಕ್ ಸಂಪದ ಸಮ್ಪದ

ಸಂಪದ ಎನ್ನುವುದು ಕನ್ನಡದ ಕಂಪನ್ನು ಅಂತರ್ಜಾಲದಲ್ಲಿ ಕಳೆದ ಮೂರು ವರ್ಷಗಳಿಂದಲೂ ಹಬ್ಬುವುದರಲ್ಲಿ ಮುಂಚೂಣಿಯಲ್ಲಿರುವ ಅಂತರ್ಜಾಲ ತಾಣ. ಹರಿಪ್ರಸಾದ್ ನಾಡಿಗ್ ಮತ್ತವರ ಬಳಗದ ಪ್ರಯತ್ನದ ಫಲವಾಗಿ www.sampada.net ಜಾಹೀರಾತಿನ ಹಂಗಿಲ್ಲದೆ ನಡೆಯುತ್ತಿರುವುದು ನಿಜಕ್ಕೂ ಅಚ್ಚರಿ ತರುವ ವಿಷಯ.ಈ ತಾಣವು ಅತ್ಯಂತ ಬಳಕೆದಾರಸ್ನೇಹೀಯಾಗಿದೆ. ಬರೆದು ಸಲ್ಲಿಸಿದೊಡನೆ ನಿಮ್ಮ ಬರಹ ಪ್ರಕಟವಾಗುತ್ತದೆ.ಪ್ರತಿಕ್ರಿಯೆಗಳೂ ಒಡನೆಯೇ ಸಿಗಬಹುದು. ವಿವಿಧ ವಿಷಯಗಳ ಬಗೆಗೆ ಚರ್ಚೆ,ಬ್ಲಾಗ್ ಬರವಣಿಗೆ, ಲೇಖನ,ಚಿತ್ರಪುಟ, ಕವನಗಳು,ಕಾರ್ಯಕ್ರಮಗಳ ಬಗೆಗಿನ ಪ್ರಕಟಣೆ,ಪುಸ್ತಕ ವಿಮರ್ಶೆ ಹೀಗೆ ಹಲವು ಪ್ರಾಕಾರಗಳು ಇಲ್ಲಿವೆ. ಆರೋಗ್ಯ,ಕೃಷಿ,ನೀರಿನ ನಿಶ್ಚಿಂತೆ,ಹರಿದಾಸ ಸಾಹಿತ್ಯ ಇವೆಲ್ಲ ಪ್ರತ್ಯೇಕ ಚಾನೆಲ್‌ಗಳೂ ಸಂಪದದಲ್ಲಿವೆ.
    ಈಗ ತಂತ್ರಜ್ಞಾನದ ಬಗೆಗೆ ಒತ್ತು ನೀಡುವ ಹೊಸ ವಿಭಾಗವನ್ನು ಸಂಪದ ಹೊಂದಲಿದೆ. ತಂತ್ರಜ್ಞಾನದಲ್ಲಿ ಆಗುವ ವಿನೂತನ ಬೆಳವಣಿಗೆಗಳನ್ನು ನಿರಂತರವಾಗಿ ಕನ್ನಡರಿಗೆ ಮುಟ್ಟಿಸುವುದು ಟೆಕ್ ಸಂಪದದ ಗುರಿ.ಕನ್ನಡದಲ್ಲಿ ಕತೆ,ಕವನ,ಬರಹಗಳು ಈಗ ಅಂತರ್ಜಾಲದಲ್ಲಿ ಸಾಕಷ್ಟು ತಾಣಗಳಲ್ಲಿ ಸಿಗುತ್ತವೆ. ಅದರೆ ತಂತ್ರಜ್ಞಾನದ ಕನ್ನಡದಲ್ಲಿ ಜನರಿಗೆ ಅರಿವು ನೀಡುವ ತಾಣಗಳ ಕೊರತೆ ಎದ್ದು ಕಾಣುತ್ತಿದೆ. ಆ ನಿಟ್ಟಿನಲ್ಲಿ ಟೆಕ್ ಸಂಪದವು ಕೆಲಸ ಮಾಡಲಿದೆ. ಸದ್ಯ ತಂತ್ರಜ್ಞಾನದ ಬಗೆಗಿನ ಬರಹಗಳನ್ನು ಕಲೆಹಾಕುವ ಕೆಲಸ ನಡೆಯುತ್ತಿದ್ದು,ಬರಹಗಾರರು ತಮ್ಮ ಬರಹಗಳನ್ನು tech-volunteers@sampada.netಗೆ ಮಿಂಚಂಚೆ ಮೂಲಕ ಕಳುಹಿಸಲು ನಾಡಿಗ್ ವಿನಂತಿಸಿದ್ದಾರೆ. ವಿಭಾಗ ಆರಂಭವಾದ ಬಳಿಕ,ಬರಹಗಳನ್ನು ನೇರವಾಗಿ ಪ್ರಕಟಿಸುವ ಅವಕಾಶ ಪ್ರತಿಯೋರ್ವರಿಗೂ ಸಿಗಲಿದೆ. ವಿವರಗಳಿಗೆ http://sampada.net/article/12052 ನೋಡಿ.

----------------------------------------------------------------------
ಕಳೆದುಹೋದ ವಸ್ತುವನ್ನು ಹುಡುಕಲು ಗೂಗಲ್ ಗೂಗಲ್!ಗ್ಗ್
    ನೀವು ವಸ್ತುಗಳನ್ನು ಎಲ್ಲೋ ಇಟ್ಟು ನಂತರ ಹುಡುಕುವುದರಲ್ಲಿ ಸಮಯ ಹಾಳು ಮಾಡುವ ವ್ಯಕ್ತಿಯಾದಲ್ಲಿ ಗೂಗಲ್ ಗೂಗಲ್ ನಿಮಗೆ ಅಗತ್ಯ ಬೇಕು. ಟೊಕಿಯೋ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಶಾಲೆಯ ಸಂಶೋಧಕರು ಒಂದು ವಿಶೇಷ ಕನ್ನಡಕವನ್ನು ತಯಾರಿಸಿದ್ದಾರೆ. ಇದನ್ನು ನೀವು ಧರಿಸಿಕೊಂಡರೆ,ಅದು ನೀವು ಇತ್ತೀಚೆಗೆ ಬಳಸಿದ, ನೋಡಿದ ವಸ್ತುಗಳ ವಿಡಿಯೋ ಚಿತ್ರೀಕರಣವನ್ನು ನಡೆಸಿಟ್ಟುಕೊಳ್ಳುತ್ತದೆ.ನೀವು ಕೀಲಿ ಕೈಯೋ,ಮೊಬೈಲ್ ಫೊನೋ ಹೀಗೆ ಯಾವುದೇ ವಸ್ತುವನ್ನು ಮರೆತು ಎಲ್ಲೋ ಬಿಟ್ಟು ಮರೆತು ಹುಡುಕಬೇಕಾದ ಸಂದರ್ಭ ಬಂದಾಗ,ಕನ್ನಡಕಕ್ಕೆ ಒಂದು ಶಬ್ದ ಉಸುರಿ,ನೀವು ಕಳಕೊಂಡ ವಸ್ತುವಿನ ಹೆಸರನ್ನು ತಿಳಿಸಿದರೆ,ಅದು ಆ ವಸ್ತುವಿನ ಇತ್ತೀಚಿನ ವಿಡಿಯೋ ಚಿತ್ರೀಕರಣವನ್ನು ಕನ್ನಡಕದ ತೆರೆಯ ಮೇಲೆ ತೋರಿಸುತ್ತದೆ.ಅದನ್ನು ನೋಡಿದಾಗ ನೀವು ಆ ವಸ್ತುವನ್ನು ಎಲ್ಲಿ ಬಿಟ್ಟಿದ್ದಿರಿ ಅನ್ನುವುದು ನಿಮ್ಮ ಜ್ಞಾಪಕಕ್ಕೆ ಬರುತ್ತದೆ ತಾನೇ? ನೀವು ಸುಮ್ಮನೆ ನಿಮ್ಮ ತಲೆ ಕೆರೆಯುತ್ತ ಸಮಯ ವ್ಯರ್ಥ ಮಾಡುವ ಅಗತ್ಯ ಇಲ್ಲ.ಆದರೆ ಬಳಕೆಗೆ ಮೊದಲು ನೀವು ಕನ್ನಡಕ ಧರಿಸಿ, ನಿಮ್ಮ ವಸ್ತುಗಳ ಬಳಿ ಸಾರಿ,ಅದಕ್ಕೆ ನೀವು ಏನೆಂದು ಕರೆಯುತ್ತೀರಿ ಎನ್ನುವುದನ್ನು ಕನ್ನಡಕಕ್ಕೆ ತಿಳಿಯಪಡಿಸ ಬೇಕಾಗುತ್ತದೆ. ತಾನು ಸೆರೆ ಹಿಡಿದಿರುವ ವಿಡಿಯೋ ತುಣುಕುಗಳಲ್ಲಿ ಆಯ್ದ ಕೆಲವನ್ನು ಮತ್ತೆ ನುಡಿಸುವ ಜಾಣ್ಮೆಯನ್ನು ಕನ್ನಡಕ ಪಡೆಯಲು,ಕಂಪ್ಯೂಟರ್ ಕ್ರಮವಿಧಿಯು ಸಹಾಯ ಮಾಡುತ್ತದೆ. ಅಂದ ಹಾಗೆ ಒಂದು ವಿಷಯದಲ್ಲಿ ನೀವು ಅತಿ ಎಚ್ಚರಿಕೆಯಿಂದ ಇದ್ದರೆ ಮಾತ್ರಾ ಇದು ಉಪಯೋಗವಾದೀತು-ಅದೆಂದರೆ ಈ ಕನ್ನಡಕವನ್ನೇ ನೀವು ಧರಿಸದೆ ಮರೆತು ಎಲ್ಲೋ ಇಟ್ಟುಬಿಟ್ಟರೆ ಮಾತ್ರ್‍ಆ ಜ್ಯೋತಿಷ್ಯರ ನೆರವು ನಿಮಗೆ ಬೇಕಾದೀತು!

------------------------------------------------------------
ಡಯಲ್ ಅಪ್ ಅಂತರ್ಜಾಲವೀಗ ಉ಼ಚಿತ!
    ಅಂತರ್ಜಾಲವನ್ನು ಜನಪ್ರಿಯ ಮಾಡಲು ಬಿಎಸೆನೆಲ್ ಶತಾಯ ಗತಾಯ ಪ್ರಯತ್ನಿಸುತ್ತಿದೆ.ಮುಂದಿನ ತಿಂಗಳಿನ ವರೆಗೂ ಡಯಲ್ ಅಪ್ ಅಂತರ್ಜಾಲ ಸಂಪರ್ಕವನ್ನು ಉಚಿತವಾಗಿ ಒದಗಿಸುವ ಕೊಡುಗೆ ಈಗ ಸಿಗುತ್ತಿದೆ. ಅದನ್ನು ಪಡೆಯಲು ಭಾರತ್ ಸಂಚಾರ್ ನಿಗಮ ಲಿಮಿಟೆಡ್‌ನ ಸ್ಥಿರ ದೂರವಾಣಿ ಸಂಪರ್ಕ ನಿಮಲ್ಲಿರಬೇಕು. ನಿಮ್ಮ ಕಂಪ್ಯೂಟರ್ ಅಥವ ಲ್ಯಾಪ್‌ಟಾಪಿನಲ್ಲಿ ಮಾಡೆಮ್ ಸಾಧನವೂ ಇರಬೇಕು. ದೂರವಾಣಿಯ ಸಂಪರ್ಕ ಕೇಬಲನ್ನು ಮಾಡೆಮ್‌ಗೆ ಸಿಕ್ಕಿಸಿ,ಬಳಕೆದಾರನ ಹೆಸರಿನ ಸ್ಥಾನದಲ್ಲಿ ಎಸ್‌ಟಿ‍ಡಿ ಸಂಖ್ಯೆ ಸಹಿತವಾದ ದೂರವಾಣಿ ಸಂಖ್ಯೆಯನ್ನು ನೀಡಿ. ಆದರೆ ಎಸ್‌ಟಿಡಿ ಸಂಖ್ಯೆಯ ಮೊದಲಲ್ಲಿ  ೦ ಇದ್ದರೆ,ಅದನ್ನು ಬಳಸದಿರಿ. ಅದೇ ಸಂಖ್ಯೆಯನ್ನು ಗುಪ್ತಸಂಕೇತವಾಗಿಯೂ ಬಳಸಿ.172222 ಸಂಖ್ಯೆಗೆ ಡಯಲ್ ಮಾಡಿ. ಅಂತರ್ಜಾಲವು ಐವತ್ತಾರು ಕಿಲೋಬಿಟ್ ವೇಗದಲ್ಲಿ ಲಭ್ಯವಾಗುತ್ತದೆ. ಆದರೆ ಒಂದು ವಿಷಯ- ಈ ಸೇವೆ ಪಡೆದಾಗ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅಂತರ್ಜಾಲ ಸಂಪರ್ಕಕ್ಕೆ ಶುಲ್ಕವಿಲ್ಲ. ಆದರೆ, ನೀವು ದೂರವಾಣಿ ಕರೆ ಮಾಡಿದಾಗ ನೀಡುವ ಶುಲ್ಕವನ್ನು ನೀಡಬೇಕಾಗುತ್ತದೆ.

------------------------------------------------------------------

ವಾಹನದ ಮೈಲೇಜ್ ಹೆಚ್ಚಿಸುವ ಸಾಧನ
    ನ್ಯೂಯಾರ್ಕಿನ ಟೆಂಪಲ್ ವಿಶ್ವವಿದ್ಯಾಲಯದ ಸಂಶೋಧಕರು ವಾಹನದ ಮೈಲೇಜ್ ಹೆಚ್ಚಿಸುವ ಸಾಧನವನ್ನು ಸಂಶೋಧಿಸಿದ್ದಾರೆ. ಇದು ವಾಹನದ ವಿದ್ಯುತ್ ವ್ಯವಸ್ಥೆಯಿಂದ ಶಕ್ತಿ ಪಡೆದು ಕೆಲಸ ಮಾಡುತ್ತದೆ. ವಾಹನದ ಇಂಧನ ತೈಲವನ್ನು ತೆಳುವಾಗಿಸಿ,ಅದು ದಹನವಾದಾಗ ದಕ್ಷತೆ ಹೆಚ್ಚಿಸುವುದು ಇಲ್ಲಿ ಬಳಕೆಯಾದ ತಂತ್ರ.ಶೇಕಡಾ ಇಪ್ಪತ್ತರಷ್ಟು ಮೈಲೇಜ್ ಹೆಚ್ಚಿರುವುದು ಸಿದ್ಧವಾಗಿದೆ.
*ಅಶೋಕ್‌ಕುಮಾರ್ ಎ

udayavani

ashokworld

ಇ-ಲೋಕ 94 29/9/2008