ಹಾಳಾದ ನಿಗೂಢತೆ

ಹಾಳಾದ ನಿಗೂಢತೆ

ಬರಹ

ಯಾಣ ಕೇವಲ ಒಂದು ಪಿಕ್‍ನಿಕ್ ತಾಣವಲ್ಲ. ಅದೊಂದು ಕ್ಷೇತ್ರ. ಆದಿಶಂಕರರೂ ಸೇರಿದಂತೆ ಅನೇಕರು ಇಲ್ಲಿ ತಪಸ್ಸು ಮಾಡಿದ್ದಾರಂತೆ. ಶಿವನ ಜಟೆಯಿಂದ ನೀರು ಇಳಿದಂತೆ ಬೆಟ್ಟದ ಮೇಲಿನ ಬಂಡೆಯೊಳಗೆ ನೀರು ಜಿನುಗುತ್ತದೆ. ಅಷ್ಟು ಮೇಲಕ್ಕೆ ನೀರಿನ ಸೆಲೆ ಇಲ್ಲ. ಈಗ ಆ ಜಿನುಗುವ ನೀರಿನ ಸುತ್ತ ನಮ್ಮ ಎಂದಿನ ಸಂಪ್ರದಾಯದಂತೆ ಗುಡಿ ಕಟ್ಟಿದ್ದಾರೆ.

ಆ ಕಲ್ಲು ಬಂಡೆಯೊಳಗೆ ನೀರು ಹೇಗೆ ಜಿನುಗುತ್ತದೆ? ಪ್ರಶ್ನೆಗೆ ನನ್ನ ನಾಸ್ತಿಕ ಸ್ನೇಹಿತ ಪ್ರಕೃತಿಯ ಅದ್ಭುತ ಎಂದ. ಆಸ್ತಿಕ ದೇವರ ಚಿತ್ತ ಎಂದ. ನಾನು ವಿವರಿಸತೊಡಗಿದೆ. " ಯಾಣದ ಸುತ್ತಲೊ ಇರುವುದು ಸದಾಹರಿತ್ತಿನ ಕಾಡು. ಮರಗಳಿಂದ ಸಾಕಷ್ಟು ನೀರು ಆವಿಯಾಗಿ ಹೋಗುತ್ತದೆ. ಹಾಗಾಗಿ ಗಾಳಿಯಲಿ ಸಾಕಷ್ಟು ತೇವಾಂಶ ತುಂಬಿಕೊಂಡಿರುತ್ತದೆ. ತೇವವಿರುವ ಗಾಳಿ ಬಂಡೆಯೊಳಗೆ ನುಗ್ಗಿದಾಗ ಅಲ್ಲಿ ತೇವ ಘನೀಭವಿಸಿ ನೀರಾಗುತ್ತದೆ. ಬಂಡೆಯ ಸಂದಿಯಿಂದ ಜಿನುಗುತ್ತದೆ. ಜಿನುಗಿದ ನೀರು ವಕ್ರವಕ್ರವಾಗಿ ಹರಿಯುವುದರಿಂದ ಶಿವನ ಜಟೆಯಿಂದ ನೀರು ಇಳಿದಂತೆ ಕಾಣುತ್ತದೆ."

"ಅದು ಹೆಂಗೆ ಸಾಧ್ಯ? ಆವಿ ಅ ಥರ ಬಂಡೆಯೊಳಗೆ ಹೆಂಗೆ ನೀರಾಗುತ್ತೆ?"

’ ಜಗತ್ತಿನ ಅತೀ ದೊಡ್ಡ ಜಲಪಾತ ಎಂಜೆಲ್ ಫ಼ಾಲ್ಸ್ ಬಗ್ಗೆ ಕೇಳಿರ್ತೀಯ. ವೆನೆಜುವೆಲಾದಲ್ಲಿದೆ. ಅದು ದೊಡ್ಡ ಶಿಲೆಯ ಮೇಲಿಂದ ಬೀಳುತ್ತದೆ. ಮೇಲೆ ನೀರಿನ ಯಾವ ಸೆಲೆಯೂ ಇಲ್ಲ. ಸಮುದ್ರದಿಂದ ಆವಿಯಾದ ನೀರು ಈ ಶಿಲೆಯೊಳಗೆ ಘನೀಭವಿಸಿ ನೀರಾಗಿ ಬೀಳುತ್ತದೆ. ಇಲ್ಲೂ ಅದೇ ಪ್ರಿನ್ಸಿಪಲ್ಲು"

"ಸರಿ ಮರಗಳಿಂದ ಅಷ್ಟೊಂದು ನೀರು ಅವಿಯಾಗುತ್ತಾ?"

"ನಿತ್ಯ ಹರಿತ್ತಿನ ಕಾಡುಗಳಲ್ಲಿ ಎಕರೆಗೆ ಲಕ್ಷಾಂತರ ಟನ್ ನೀರು ಆವಿಯಾಗುತ್ತೆ ಅಂತ ವಿಜ್ಞಾನಿಗಳು ಹೇಳ್ತಾರೆ"

"ಹಂಗಾದ್ರೆ ಬೇರೆ ಬಂಡೆಗಳಲ್ಲಿ ಯಾಕೆ ಆಗಲ್ಲ. ಇಲ್ಲೇ ಯಾಕೆ ಆಗುತ್ತೆ?"

"ಎಲ್ಲಾದಕ್ಕೂ ಸರಿಯಾದ ಸಂದರ್ಭಗಳಿರಬೆಕಾಗುತ್ತದೆ. ಪ್ರಾಕೃತಿಕವಾಗಿ ನೀರು ಘನೀಭವಿಸಬೇಕಾದ ಸೆಟ್ ಅಪ್ ಇರಬೇಕಾಗುತ್ತದೆ. ಆ ರೀತಿಯ ಸೆಟ್ ಅಪ್ ಈ ಬಂಡೆಯಲ್ಲಿದೆ. ಅಷ್ಟೆ!"

"ಓಹ್! ಅಷ್ಟೇನಾ?" ಎಂದು ಬಿಟ್ಟರು ನನ್ನ ಸ್ನೇಹಿತರು.

ಅದ್ಭುತವನ್ನು ಸವಿಯುವ ಅವರ ಮನಸ್ಸನ್ನು ಹಾಳು ಮಾಡಿಬಿಟ್ಟೆನೇನೊ ಎನ್ನಿಸಿತು ನನಗೆ.

ಜ್ಞಾನದೇವರ "ನಿಗೂಢವಾಗೇ ಇರಲಿ ಬಿಡಿ!!" ಲೇಖನ ಓದುತ್ತಿದ್ದಂತೆ ಏಕೋ ಇದು ನೆನಪಾಯಿತು.

ಯಾಣಕ್ಕೆ ಬರುವವರು ಅಲ್ಲಿ ನದಿ ಇದೆ ಎಂದುಕೊಂಡು ಬರುತ್ತಾರೆ. ಬಂಡೆಗಳ ನಡುವೆ ಕೂಗಿ ಪ್ರತಿಧ್ವನಿಯನ್ನು ನಿರೀಕ್ಷಿಸುತ್ತಾರೆ. ಇದು ಸುನಿಲ್ ಕುಮಾರ್ ದೇಸಾಯಿಯವರ "ನ. ಮಂ. ಹೂವೆ" ಪ್ರಭಾವ. ಅಲ್ಲಿ ನದಿಯೂ ಇಲ್ಲ ಪ್ರತಿಧ್ವನಿಯೂ ಬರಲ್ಲ. ಸುಮ್ಮನೆ ಕೂಗಿ ಶಾಂತಿಯನ್ನು ಹಾಳು ಮಾಡುತ್ತಾರೆ. ಸದ್ದಿಗೆ ಒಮ್ಮೆಮ್ಮೆ ಜೇನು ಎಚ್ಚೆತ್ತುಕೊಳ್ಳುತ್ತವೆ. ಸಿನಿಮಾದಲ್ಲಿ ಬೇರೆ ಬೇರೆ ಜಾಗಗಳನ್ನು ಸಂಕಲಿಸಿ ಧ್ವನಿ ಮುದ್ರಣದೊಂದಿಗೆ ತೋರಿಸಿದ್ದರಿಂದ ಆದ ಅನಾಹುತಗಳು ಇವು.

ಯಾಣ ಚಾರಣಕ್ಕೆ ಒಳ್ಳೆಯ ತಾಣ. ಹೋಗಿ ಪರಿಸರ ಹಾಳು ಮಾಡದೆ ಸಂತಸ ಪಟ್ಟು ಬನ್ನಿ.