ಹುಂಡು ಕೋಳಿಯ ಪ್ರಪಂಚಕ್ಕೆ ಸ್ವಾಗತ !
![](https://saaranga-aws.s3.ap-south-1.amazonaws.com/s3fs-public/styles/article-landing/public/%E0%B2%B9%E0%B3%81%E0%B2%82%E0%B2%A1%E0%B3%81%E0%B2%95%E0%B3%8B%E0%B2%B2%E0%B3%80.jpeg?itok=Z9Ykkd7U)
ಕಳೆದ ವರ್ಷ ನವೆಂಬರ್ ಕೊನೆಯವರೆಗೂ ಬಂದ ಮಳೆಗಾಲದ ನಂತರ ಕೆಲವು ದಿನಗಳಿಂದ ಚಳಿಯ ವಾತಾವರಣ ನಮ್ಮನ್ನು ಆವರಿಸಲು ಪ್ರಾರಂಭಿಸಿತು. ಮಳೆ ನಮ್ಮೆಲ್ಲ ಚಟುವಟಿಕೆಗೆ ಅಗತ್ಯವಾದ ನೀರನ್ನು ಭೂಮಿಯ ಮೇಲೆ ಹೊತ್ತುತರುವ ಪರಿಸರದ ವಿಧಾನ. ಹೀಗೆ ಮಳೆಯ ರೂಪದಲ್ಲಿ ಬಂದ ನೀರು ಭುಮಿಯ ಮೇಲೆ ತಗ್ಗು ಪ್ರದೇಶಗಳಲ್ಲಿ ತುಂಬಿಕೊಳ್ಳುತ್ತದೆ. ಈ ರೀತಿ ತುಂಬಿಕೊಳ್ಳುವ ನೀರನ್ನೇ ನಾವು ಕೆರೆ ಎಂದು ಕರೆಯುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ನಾವು ತೋಟ ಅಥವಾ ಗದ್ದೆಯ ಬದಿಯಲ್ಲಿ ಇರುವ ಸಣ್ಣ ಬಾವಿಗಳನ್ನೂ ಕೆರೆ ಎಂದೇ ಕರೆಯುತ್ತೇವೆ. ಅದೇ ಬಯಲು ಸೀಮೆಗೆ ಹೋದರೆ ಕೆರೆ ಅನ್ನುವುದು ಎಕರೆಗಟ್ಟಲೆ ಪ್ರದೇಶದಲ್ಲಿ ಹರಡಿದ ನೀರಿನ ಮೂಲ. ಕೆಲವು ಕೆರೆಗಳಿಗೆ ಒಂದು ಸುತ್ತು ಬರಬೇಕಾದರೆ ಒಂದೆರಡು ಕಿಲೋಮೀಟರ್ ನಡೆಯಬೇಕು. ಈ ವಾರದ ಹಕ್ಕಿ ಬಗ್ಗೆ ಹೇಳುವುದು ಬಿಟ್ಟು ಕೆರೆಯ ಬಗ್ಗೆ ಯಾಕೆ ಹೇಳ್ತಾ ಇದ್ದಾರೆ ಅಂತ ನೀವೆಲ್ಲ ಯೋಚನೆ ಮಾಡುತ್ತಿರಬಹುದು.
ಈ ವಾರದ ಹಕ್ಕಿಗೂ ನೀರಿಗೂ ಅವಿನಾಭಾವ ಸಂಬಂಧ ಇದೆ. ಈ ಹಕ್ಕಿಗೆ ನೀರಿಲ್ಲದೆ ಬದುಕೇ ಇಲ್ಲ. ನೀರಿನ ಮೂಲಗಳಾದ ಕೆರೆ, ಹಳ್ಳ, ನದಿ, ನೀರು ನಿಲ್ಲುವ ಗದ್ದೆಯ ಬದಿ, ತೋಡಿನ ಬದಿ ಇಲ್ಲೆಲ್ಲ ನೀವು ಈ ಹಕ್ಕಿಯನ್ನು ನೋಡಬಹುದು. ಭಾರತ ಮಾತ್ರವಲ್ಲ ನಮ್ಮ ಆಸುಪಾಸಿನ ಎಲ್ಲ ದೇಶಗಳಲ್ಲೂ ಈ ಹಕ್ಕಿ ಕಾಣಲು ಸಿಗುತ್ತದೆ. ನೀರಿನ ಮೂಲಗಳ ಆಸುಪಾಸಿನಲ್ಲಿ ಕಾಣಸಿಗುತ್ತದೆ ಆದರೆ ಯಾವತ್ತೂ ನೀರಿನಲ್ಲಿ ಈಜುವುದಿಲ್ಲ. ದೇಹದಲ್ಲಿ ಎದ್ದು ಕಾಣುವುದು ಎರಡೇ ಎರಡು ಬಣ್ಣ, ಕಪ್ಪು ಮತ್ತು ಬಿಳುಪು. ದೇಹದ ಮೇಲ್ಭಾಗ ಪೂರ್ತಿ ಕಪ್ಪು, ಅಡಿಭಾಗ ಪೂರ್ತಿ ಬಿಳಿ. ದುಂಡಗಿನ ದೇಹದ ತುದಿಯಲ್ಲೊಂದು ಚೋಟುದ್ದದ ಬಾಲ. ಬಾಲದ ಕೆಳಗೆ ಕಂದು ಮಿಶ್ರಿತ ಕೆಂಪು ಬಣ್ಣ. ದೇಹಕ್ಕೆ ಹೋಲಿಸಿದರೆ ಬಹಳ ತೆಳ್ಳಗಿನ ಉದ್ದವಾದ ಕಾಲುಗಳು. ಜೊತೆಗೆ ಉದ್ದುದ್ದವಾದ ಬೆರಳುಗಳು. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ನೋಡಲು ಒಂದೇರೀತಿ. ಮೋಟುದ್ದ ಬಾಲವನ್ನು ಆಗಾಗ ಎತ್ತುತ್ತಾ ಸದಾ ಎಚ್ಚರವಾಗಿ ಅತ್ತಿತ್ತ ನೋಡುತ್ತಾ ಸಾಗುವ ನಡಿಗೆ. ಸಣ್ಣಗೆ ಅಪಾಯ ಅನಿಸಿದರೂ ಸಾಕು ಪೊದೆಗಳ ಒಳಗೆ ಓಡಿ ಅವಿತುಕೊಳ್ಳುವಷ್ಟು ನಾಚಿಕೆ ಸ್ವಭಾವ.
ಈ ಹಕ್ಕಿಯ ಕನ್ನಡ ಹೆಸರು ಹುಂಡುಕೋಳಿ. ತುಳು ಭಾಷೆಯಲ್ಲಿ ಇದನ್ನು ಕುಂಡಕೋರಿ ಎಂದು ಕರೆಯುತ್ತಾರೆ. ನೀರಿನ ಮೂಲಗಳ ಸುತ್ತ, ಕೆಸರಿನಲ್ಲಿ ಓಡಾಡುತ್ತಾ ಕೀಟ, ಹುಳು, ಕಾಳು, ಹುಲ್ಲು, ನೀರಿನಲ್ಲಿ ಬೆಳೆಯುವ ಸಸ್ಯಗಳು ಮೊದಲಾದವುಗಳನ್ನು ತಿನ್ನುತ್ತಾ ನಿಧಾನವಾಗಿ ಓಡಾಡುತ್ತಿರುತ್ತದೆ.ಇದರ ಉದ್ದವಾದ ಕಾಲುಗಳು ಇದಕ್ಕೆ ಬಹಳ ಅನುಕೂಲಕಾರಿ. ಮಾನ್ಸೂನ್ ನಿಂದ ಮಳೆ ಬರುವ ಜೂನ್ ನಿಂದ ಅಕ್ಟೋಬರ್ ತಿಂಗಳ ನಡುವೆ ನೀರಿನ ಮೂಲಗಳ ಹತ್ತಿರವೇ ಹುಲ್ಲು, ಕಡ್ಡಿ, ಬಳ್ಳಿಗಳನ್ನು ಬಳಸಿ ಗೂಡು ಮಾಡುತ್ತದೆ. ಸದಾ ಮೌನವಾಗಿ ಓಡಾಡುವ ಈ ಹಕ್ಕಿ ತನ್ನ ಸಂತಾನಾಭಿವೃದ್ಧಿ ಕಾಲದಲ್ಲಿ ದೊಡ್ಡದಾಗಿ ಕೂಗುತ್ತದೆ.
ನೀರಿನ ಮೂಲದ ಆಹಾರ ತಿನ್ನುವ ಈ ಹಕ್ಕಿ ನೀರಿನ ಸುತ್ತಮುತ್ತ ಗೂಡು ಕಟ್ಟುತ್ತದೆ ಮತ್ತು ನೀರಿನ ಸುತ್ತಮುತ್ತ ತನ್ನ ಇಡೀ ಜೀವನವನ್ನು ಕಳೆಯುತ್ತದೆ. ಬೇರೆ ಯಾವ ಕಡೆಗೂ ವಲಸೆ ಹೋಗುವುದಿಲ್ಲ ಎಂದು ಪಕ್ಷಿ ತಜ್ಞರು ಹೇಳುತ್ತಾರೆ. ಆದರೆ ಇಂದು ನಗರೀಕರಣ ಮತ್ತು ಬೆಳೆಯುತ್ತಿರುವ ಪೇಟೆ ಪಟ್ಟಣಗಳಿಂದಾಗಿ ನಾವು ನೀರು ನಿಲ್ಲುವ ಕೆರೆಗಳನ್ನು ಮಣ್ಣಿನಿಂದ ಮುಚ್ಚಿ ಆ ಜಾಗದಲ್ಲಿ ಮನೆ, ಕಟ್ಟಡ ಮತ್ತು ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಇದರಿಂದಾಗಿ ಈ ಹಕ್ಕಿ ಇಂದು ಪೇಟೆಗಳಲ್ಲಿ ಚರಂಡಿ ನೀರು ಹರಿಯುವಲ್ಲಿ, ಕಸ ತುಂಬಿ ನೀರು ನಿಲ್ಲುವಲ್ಲಿ ಕೂಡಾ ಕಾಣಲು ಸಿಗುತ್ತದೆ.. ತನ್ನ ಸಹಜ ನೆಲೆಯನ್ನು ಕಳೆದುಕೊಂಡು ಕಲುಷಿತ ವಾತಾವರಣದಲ್ಲಿ ಬದುಕುವಂತಾಗಿದೆ. ಮಾನವನಾಸೆಗೆ ಕೊನೆ ಎಲ್ಲಿ ಅಲ್ಲವೇ?
ನಮ್ಮ ಸುತ್ತಮುತ್ತಲು ಬದುಕುವ ಜೀವಿಗಳನ್ನು ಅವುಗಳ ಸಹಜ ಆವಾಸದಲ್ಲಿ ಬದುಕಲು ಬಿಡಬೇಕಾದರೆ ನಾವೇನು ಮಾಡಬೇಕು ಯೋಚಿಸಿ. ಬರಲಿರುವ ಹೊಸ ವರುಷದಲ್ಲಿ ಅದನ್ನು ಮಾಡುವ ನಿರ್ಧಾರ ಮಾಡೋಣ. ಮತ್ತೆ ಹೊಸ ಹಕ್ಕಿಯ ಕಥೆಯೊಂದಿಗೆ ಸಿಗೋಣ..
ಹಕ್ಕಿಯ ಹೆಸರು: ಹುಂಡು ಕೋಳಿ, ಕುಂಡ ಕೋರಿ
ಇಂಗ್ಲೀಷ್ ಹೆಸರು: White-breasted Waterhen
ವೈಜ್ಞಾನಿಕ ಹೆಸರು: Amaurornis phoenicurus
-ಅರವಿಂದ ಕುಡ್ಲ, ಬಂಟ್ವಾಳ