‘ಧರಣಿ’ - ಕವನ

‘ಧರಣಿ’ - ಕವನ

ಬರಹ

ಧರಣಿ

ಉದ್ಯಾನವನದ ಕೊನೆಯಲ್ಲಿ
ಶುರುವಾಗಿತ್ತೊಂದು ಧರಣಿ
ಸರಕಾರವನು ಖಂಡಿಸಿ,
ಅವರವರ ಕಷ್ಟಗಳ ಬಣ್ಣಿಸಿ
ಹಸ್ತಾಕ್ಷರಗಳ ಸಂಗ್ರಹಿಸಿ,
ಆರಂಭದ ಮೊದಲೇ
ಕೊನೆ ಕಂಡಿತಲ್ಲಿ
ಬಹು ಜನರ ಕನಸು ಧರಣಿ.

ಬಾವುಟಗಳ ಹಿಡಿದು
ಧರಣಿಕರ್ತರೆಲ್ಲರೂ ಅಣಿ,
ಗುಡುಗು ಸಿಡಿಲಿನ
ಚುರುಕು ಮಾತಿನ ದನಿ,
ಜೊತೆ ನೀಡುವಂತೆ
ತುಂತುರು ಮಳೆಹನಿ.

ಆಗಲೇ ಗುಂಪಿನಿಂದ
ಹೊಳೆದಂತೆ ಮಿಂಚು,
ಘೋಷಣೆ, ಕೂಗಾಟ
"ಎಲ್ಲಿಯವರೆಗೆ ಹೋರಾಟ
ಗೆಲ್ಲುವವರೆಗೂ ಹೋರಾಟ..."
ಅಲ್ಲಿಯವರಿಗಿದೆಲ್ಲಾ ನಿತ್ಯದ ಪರಿಪಾಟ.

ಅಶ್ಟಕ್ಕೆ ಸುಮ್ಮನಿರಲಾರದ ಮಳೆ
ಧೋ..... ಎಂದು ತಣಿಸಿತು ಇಳೆ,
ಉತ್ಸಾಹ ತುಂಬಿ ಹೊಸೆದಂಥ
ಆ ಒಗ್ಗಟ್ಟ ಎಳೆ,
ಬಿಡಲಾರಂಭಿಸಿತು
ಒಂದೊಂದಾಗಿ ಎಳೆ-ಎಳೆ.

ಹಾದಿ ತುಂಬಿ ಓಡುವ ನೀರು
ಮುಂದೆ - ಮುಂದೆ,
ಹೋರಾಟದ ಹೆಜ್ಜೆಗಳೋ
ಹಿಂದೆ - ಹಿಂದೆ,
ಬಹುದಿನದ ಮಳೆ ಕನಸ
ನನಸಿನಲಿ ‘ಧರಣಿ’,
ಬಹುದಿನದ ಕನಸಲ್ಲೇ
ಕೊನೆಯಾಯ್ತು ‘ಧರಣಿ’.

- ನಿಜವಾಗಿ ಕಂಡ ಘಟನೆಯ (ಧರಣಿಯ) ಕೊನೆ...!