‘ಬಿಡುಗಡೆಯ ಹಾಡುಗಳು’ (ಭಾಗ ೭) - ಜಿ.ರಾಮರಾವ್ ಹಜೀಬ

‘ಬಿಡುಗಡೆಯ ಹಾಡುಗಳು’ (ಭಾಗ ೭) - ಜಿ.ರಾಮರಾವ್ ಹಜೀಬ

‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಜಿ.ರಾಮರಾವ್ ಹಜೀಬ ಎನ್ನುವ ಕವಿಯ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ದುರಂತದ ಸಂಗತಿ ಎಂದರೆ ಈ ಕವಿಯ ಹೆಸರು ಒಂದನ್ನು ಬಿಟ್ಟರೆ ಅವರ ವಿವರ, ಭಾವಚಿತ್ರ ಯಾವುದೂ ಲಭ್ಯವಿಲ್ಲ. ಇವರು ಧಾರವಾಡ ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಾಗಿದ್ದರೆಂದಷ್ಟೇ ಅಲ್ಪ ಮಾಹಿತಿ ಇದೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಇವರು ಬರೆದ ಕವನ ಮೆಚ್ಚುಗೆಗೆ ಪಾತ್ರವಾಗಿದ್ದಿರಬಹುದು ಎಂಬುದು ನಮ್ಮ ಅಂದಾಜು. 

ಕರ್ನಾಟಕ ವೀರರೇಳಿ

ಕರ್ನಾಟ ವೀರರೇಳಿ ! ರಣಭೇರಿ ಕೊಂಬ ಕೇಳಿ ।

ಸ್ವಾತಂತ್ರ್ಯ ಮಂತ್ರವನು ಹೇಳಿ । ಪರದಾಸ್ಯ ದೇಹ ಸೀಳಿ ॥ಪಲ್ಲವಿ॥

 

ಪರತಂತ್ರ ಕತ್ತಲೆಯ ಹಾರಿ । ಸ್ವಾತಂತ್ರ್ಯ ಸೂರ್ಯ ತೋರಿ ॥

ಭಾರತೀಯ ಜೀವ ಕಳೆಯೇರಿ । ಪರವೈರಿಗಾಯ್ತು ಮಹಾಮಾರಿ ॥೧॥

 

ಧುರಧೀರ ಬುಕ್ಕ ಮಾಧವರು । ಪುಲಕೇಶಿ ವೀರ ವಿಕ್ರಮ ॥

ಸ್ವಾತಂತ್ರ್ಯ ಮಂತ್ರ ಸಾರಿದರು । ಪರರಾಜರನ್ನು ಮೆಟ್ಟಿದರು ॥೨॥

 

ಲಾಲಾಜಿ ಲಾಠಿ ಹೊಡೆತದಲ್ಲಿ । ಕಲಿ ಜತಿನದಾಸ ಬಹುಬಳಲಿ ॥

ನಿಮಗಾಗಿ ಕೊಟ್ಟರಾತ್ಮ ಬಲಿ । ಕುಳಿತಿಹರು ನಗುತ ಸ್ವರ್ಗದಲಿ ॥೩॥

 

ಭಾರತದ ರಕ್ತವನು ಹೀರಿ । ವೀರತೆಯ ಕುಕ್ಕಿ ನೆಲಕೂರಿ ॥

ಭಾರತೀಯ ಮಾನವನು ಮಾರಿ । ಮಾಡಿದರು ನಾಡ ಸೆರೆಸೂರಿ ॥೪॥

 

ಹಿಂದೀಯ ಸರ್ವಭೌಮ । ಆ ಗಾಂಧಿಯೇ ಮಹಾತ್ಮಾ ॥

ಸ್ವಾತಂತ್ರ್ಯಕ್ಕಾಗಿ ಕಲಿಭೀಮ । ಸೇನಾನಿ ನಿಂತ ನಿಸ್ಸೀಮ ॥೫॥

 

ಸ್ವಾತಂತ್ರ್ಯ ಸ್ವಾಭಿಮಾನ । ಹೊಮ್ಮಿಕ್ಕಿ ಕಾದಿರಣ್ಣಾ ॥

ಧುಮ್ಮಿಕ್ಕಿ ರಣದೊಳಿನ್ನಾ । ಹಗೆಯನ್ನು ಮೆಟ್ಟಿರಣ್ಣಾ ॥೬॥

(‘ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಮರ’ ಸಂಗ್ರಹದಿಂದ)